ಬಂಟ್ವಾಳ : ಹಿಂದೂ ಸಂಘಟನೆಯವರೇ.. ಎಲ್ಲಿದ್ದೀರಿ..? ದಲಿತರು ಮತಾಂತರಗೊಂಡ ಬಳಿಕ ಬೊಬ್ಬೆ ಹೊಡೆಯಬೇಡಿ, ಈಗಲೇ ದಲಿತರಿಗೆ ಶಕ್ತಿ ತುಂಬುವ ಕೆಲಸ ಮಾಡಿ, ಮತಾಂತರಕ್ಕೆ ಮುನ್ನವೇ ಎಚ್ಚೆತ್ತುಕೊಳ್ಳಿ ಎಂದು ಮೈಸೂರು ಬಸವ ಕೇಂದ್ರದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಕಿವಿ ಮಾತು ಹೇಳಿದ್ದಾರೆ.
ನವಚೇತನಾ ಸೇವಾ ಟ್ರಸ್ಟ್(ರಿ.) ಬಂಟ್ವಾಳ, ಕರ್ನಾಟಕ ರಾಜ್ಯ ದಲಿತ್ ಮಹಾಸಭಾ(ಅಂಬೇಡ್ಕರ್ ತತ್ವ) ಇದರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೨೫ ಜನ್ಮ ದಿನಾಚರಣೆ ಪ್ರಯುಕ್ತ ಬಿ.ಸಿ.ರೋಡಿನ ಪದ್ಮನಾಭ ನಗರದಲ್ಲಿ ಭಾನುವಾರ ಸಂಜೆ ಯ ಗೋಧೂಳಿ ಲಗ್ನದಲ್ಲಿ ನಡೆದ 14 ನೇ ವರ್ಷದ ಸಾರ್ವಜನಿಕ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.ತಮಿಳು ನಾಡಿನಲ್ಲಿ, ಕೇರಳದಲ್ಲಿ ದಲಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಇದಕ್ಕೆ ಕಾರಣ ದಲಿತ ಸಮುದಾಯದ ಅತಂತ್ರ ಸ್ಥಿತಿ ಎಂದರು. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ದಲಿತರು ಹಿಂದೂ ಸಂಸ್ಕೃತಿಯಲ್ಲಿ ಮುನ್ನಡೆಯುತ್ತಿರುವ ದಲಿತರಿಗೆ ಈ ಸಮಾಜದಲ್ಲಿ ಸೂಕ್ತ ನೆಲೆಇಲ್ಲ, ಭದ್ರತೆ ಇಲ್ಲದಂತಾ ಸ್ಥಿತಿ ಉಂಟಾಗಿದೆ, ಜೀತಗಾರಿಕೆ ಇನ್ನೂ ಜೀವಂತ ಸ್ಥಿತಿಯಲ್ಲಿದ್ದು, ತ್ರಿಶಂಕು ಸ್ಥಿತಿಯಲ್ಲಿರುವ ದಲಿತರಿಗೆ ಸಾಮಾಜಿಕ ಸ್ಥೈರ್ಯ ಕೊಡುವ ಕಾರ್ಯ ಆಗಬೇಕಾಗಿದೆ ಎಂದರು.
ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ ಸಭಾಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣದ ಕೊರತೆಯಿಂದ ದಲಿತ ಸಮುದಾಯಕ್ಕೆ ಹಿನ್ನಡೆಯಾಗಿದ್ದು, ಈ ಕೊರತೆ ನೀಗಿಸುವುದರ ಜೊತೆಗೆ ದಲಿತ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯ ಆಗಬೇಕಾಗಿದೆ ಎಂದರು,ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ, ದಲಿತರನ್ನು ಹಿಂದೂ ಸಮಾಜ ಯಾವತ್ತೂ ಕೈ ಬಿಟ್ಟಿಲ್ಲ, ಪ್ರತಿಯೊಬ್ಬರೂ ಉತ್ತಮ ಸಂಸ್ಕಾರದ ಜೊತೆಯಲ್ಲಿ ಸಂಸ್ಕೃತಿಯ ಆಳವನ್ನು ಅರಿತು ಮುನ್ನಡೆಯಬೇಕಿದೆ ಎಂದರು.
ನವಚೇತನಾ ಸೇವಾ ಟ್ರಸ್ಟ್ ನ ಅಧ್ಯಕ್ಷ, ಕಾರ್ಯಕ್ರಮದ ರೂವಾರಿ ರಾಜಾಪಲ್ಲಮಜಲು ಮಾತನಾಡಿ, ಮುಂದಿನ ವರ್ಷ 101 ಜೋಡಿಗಳಿಗೆ ಸಾಮೂಹಿಕ ವಿವಾಹ ಹಾಗೂ ರಾಜ್ಯಮಟ್ಟದ ದಲಿತ್ ಸಮಾವೇಶ ನಡೆಸುವ ಯೋಜನೆ ರೂಪಿಸಲಾಗಿದೆ ಎಂದರು.ವೇದಿಕೆಯಲ್ಲಿ ಮುತ್ತೂರು ಶ್ರೀ ಸತ್ಯಸಾರಮಾನಿ ಕ್ಷೇತ್ರದ ಅಧ್ಯಕ್ಷರಾದ ಹರಿಯಪ್ಪ ಮುತ್ತೂರು, ಬಂಟ್ವಾಳ ತಾಲೂಕು ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಅರ್ಬಿಗುಡ್ಡೆ, ಪತ್ರಕರ್ತರಾದ ರಾಜಾ ಬಂಟ್ವಾಳ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಶ್ರೀ ಸತ್ಯಸಾರಮಾನಿ ದೈವಗಳ ದರ್ಶನ ಪಾತ್ರಿ ಸಂಜೀವ ಪಾಂಡೇಶ್ವರ ರನ್ನು ಸನ್ಮಾನಿಸಲಾಯಿತು. ಪದಾಧಿಕಾರಿಗಳಾದ ಸದಾಶಿವ ಕಟ್ಟೆಮಾರು, ವಿಜಯಾ ನಯನಾಡು, ಡೊಂಬಯ್ಯ ಅಮ್ಯಲ, ಸುಧಾರಾಣಿ ಪಲ್ಲಮಜಲು ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಕಡೇಶ್ವಾಲ್ಯ ಸ್ವಾಗತಿಸಿದರು, ಜತ್ತಪ್ಪ ಪೆರ್ನೆ ವಂದಿಸಿದರು.ಕು.ಲಕ್ಷ್ಮೀ ಪಲ್ಲಮಜಲು ವಂದಿಸಿದರು.
ಎರಡು ಜೋಡಿ ಹಸೆ ಮಣೆಗೆ
ಮಂಗಳೂರು ತಾಲೂಕಿನ ತೋಡಾರು ನಿವಾಸಿ ಜಯ- ಬಿಮೂಡ ಗ್ರಾಮದ ಪರಾರಿ ನಿವಾಸಿ ಸುಮಿತ್ರ ಹಾಗೂ ಬಡಗಬೆಳ್ಳೂರು ಗ್ರಾಮದ ಗಣೇಶ್ ಪ್ರಸಾದ್- ಎಲಿಯನಡುಗೋಡು ಗ್ರಾಮದ ಕವಿತ ಪೂಜಾರಿ ಯವರ ವಿವಾಹ ಗೊಧೋಳಿ ಲಗ್ನದಲ್ಲಿ ನಡೆಯಿತು ಸಾಮೂಹಿಕ ವಿವಾಹದಲ್ಲಿ ವರನಿಗೆ ಅಂಗಿ,ಧೋತಿ,ಶಾಲು, ಪೇಟ ಹಾಗೂ ವಧುವಿಗೆ ಸೀರೆ,ರವಿಕೆ ಮತ್ತು ಚಿನ್ನದ ತಾಳಿಯನ್ನು ಸಂಘಟನೆಯ ವತಿಯಿಂದ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.