ಸುಳ್ಯ : ಕತ್ತಲನ್ನೂ, ಅಸತ್ಯವನ್ನೂ ಹೋಗಲಾಡಿಸಿ ಧರ್ಮ ಸಾಮ್ರಾಜ್ಯದ ಸ್ಥಾಪನೆ ಇಂದಿನ ಅನಿವಾರ್ಯತೆಯಾಗಿದೆ. ಆದುದರಿಂದ ಹಿಂದೂ ಸಮಾಜದ ಮೇಲೆ ಆಗುತ್ತಿರುವ ದಾಳಿಗಳನ್ನು ಎದುರಿಸಿ ಹಿಂದು ಧರ್ಮಕ್ಕೆ ಎದುರಾಗುತ್ತಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಹಿಂದು ಸಮಾಜದ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಕೇರಳ ಹಿಂದೂ ಐಕ್ಯ ವೇದಿಯ ರಾಜ್ಯ ಉಪಾಧ್ಯಕ್ಷ ಕುಂಟಾರು ರವೀಶ ತಂತ್ರಿ ಹೇಳಿದ್ದಾರೆ.
ಗಡಿ ಗ್ರಾಮವಾದ ಕಲ್ಲಪಳ್ಳಿಯ ಹಿಂದು ಧರ್ಮ ರಕ್ಷಾ ಸಮಿತಿಯ ಆಶ್ರಯದಲ್ಲಿ ಕಲ್ಲಪಳ್ಳಿ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಹಿಂದು ಸೌಹಾರ್ದ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಲ ಬದಲಾಗಲಿಲ್ಲ ಆದರೆ ನಾವು ಬದಲಾಗಿದ್ದೇವೆ ನಮ್ಮ ದೇಶ, ಸಂಸ್ಕಾರ, ಜನರು, ಆಚಾರ ವಿಚಾರಗಳು ಉಳಿಯಬೇಕಾದರೆ ನಮ್ಮ ಸ್ವಾರ್ಥವನ್ನು ಬಿಟ್ಟು ಭಾರತಾಂಬೆಯ ಮಕ್ಕಳಾಗಿ ಬುದುಕಬೇಕಾಗಿದೆ. ದೇಶ ರಕ್ಷಣೆಗೆ, ಆತ್ಮ ರಕ್ಷಣೆಗೆ ಎಲ್ಲರೂ ಒಟ್ಟಾಗಬೇಕು. ಆ ನಿಟ್ಟಿನಲ್ಲಿ ಈ ರೀತಿಯ ಹಿಂದು ಸೌಹಾರ್ದ ಸಂಗಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಇಂಗೀಷ್ ಭಾಷೆಯನ್ನು ಕಲಿಯುವುದರ ಜೊತೆಗೆ ನಾವು ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗುವುದು ಹಿಂದೂ ಸಮಾಜ ಮತ್ತು ಸಂಸ್ಕೃತಿ ಎದುರಿಸುತ್ತಿರುವ ಬಲು ದೊಡ್ಡ ಸವಾಲು. ಅದರ ಜೊತೆಗೆ ಮತಾಂತರ, ಭಯೋತ್ಪಾದನೆ, ಲವ್ ಜಿಹಾದ್ ನಂತಹಾ ಪಿಡುಗುಗಳನ್ನೂ ಎದುರಿಸಬೇಕಾಗಿದೆ. ನಮ್ಮ ಮನೆಗಳಲ್ಲಿ ನಡೆಯುತ್ತಿದ್ದ ಭಜನೆಗಳು ಮರೆತು ಹೋಗಿದೆ. ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತಿದೆ ಎಂದು ಹೇಳಿದ ಅವರು ಧರ್ಮದ ರಕ್ಷಣೆಗಾಗಿ ಧೈರ್ಯವಂತರಾಗಿ, ಸಂಸ್ಕಾರದ ಉಳಿವಿಗಾಗಿ ಪಣ ತೊಡಿ ಕರೆ ನೀಡಿದರು.
ಹಿಂದು ಧರ್ಮಕ್ಕೆ ಸಾವಿಲ್ಲ : ಹುಟ್ಟಿದ ದಿನಾಂಕ ಇರುವ ಎಲ್ಲರಿಗೂ ಸಾಯುವ ದಿನಾಂಕವೂ ಇರುತ್ತದೆ. ಆದರೆ ಹಿಂದೂ ಧರ್ಮಕ್ಕೆ ಹುಟ್ಟಿದ ದಿನಾಂಕ ಇಲ್ಲ, ಆದುದರಿಂದ ಹಿಂದೂ ಧರ್ಮಕ್ಕೆ ಸಾವಿಲ್ಲ. ಹಿಂದೂಗಳಾದ ಪ್ರತಿಯೊಬ್ಬರೂ ಸನಾತನ ಹಿಂದೂ ಧರ್ಮದ ಆಂತರ್ಯವನ್ನೂ, ಪರಂಪರೆಯನ್ನೂ ತಿಳಿದು ಬದುಕಬೇಕಾಗಿದೆ. ಜಗತ್ತಿಗೆ ಶ್ರೇಷ್ಟ ಪರಂಪರೆಯನ್ನು ಕೊಟ್ಟ ಹಿರಿಮೆ ಹಿಂದು ಧರ್ಮಕ್ಕಿದೆ ಎಂದು ಪ್ರಧಾನ ಭಾಷಣ ಮಾಡಿದ ಸಂಸ್ಕಾರ ಭಾರತಿಯ ಮಂಗಳೂರು ವಿಭಾಗ ಸಂಚಾಲಕ ಆದರ್ಶ ಗೋಖಲೆ ಹೇಳಿದರು. ಹಿಂದು ವಿರೋಧಿ ವೈರಸ್ಗಳು ಸಮಾಜದಲ್ಲಿ ಎಲ್ಲೆಡೆ ಹರಡುತಿದೆ. ಪ್ರಚಾರಕ್ಕಾಗಿ, ಸ್ವಾರ್ಥ ಲಾಭಕ್ಕಾಗಿ ಹಿಂದೂ ಧರ್ಮವನ್ನು ವಿರೋಧಿಸುತ್ತಿರುವವರ ಸಂಖ್ಯೆ ಹೆಚ್ಚುತಿರುವುದು ವಿಪರ್ಯಾಸ ಎಂದರು.
120 ವರ್ಷಗಳ ಹಿಂದೆ ಕಾಶ್ಮೀರದ ಜನತೆ ನಿಶ್ಚಿಂತೆಯಿಂದ ಬದುಕಿದ್ದರು. ಆದರೆ ಇಂದು ಕಾಶ್ಮೀರದ ಹಿಂದು ಸಮಾಜಕ್ಕೆ ಉಂಟಾಗಿರುವ ದುರಂತ ಬದುಕನ್ನು ಎಲ್ಲರೂ ಅರಿಯಬೇಕು ಎಂದು ಬೊಟ್ಟು ಮಾಡಿದ ಅವರು ನಮಗೆ ಅಪಾಯವಿಲ್ಲ ಎಂದು ಯೋಚಿಸಬಾರದು. ಹಿಂದು ಸಮಾಜದ ಮೇಲೆ ನಿರಂತರ ದಾಳಿಗಳು ನಡೆಯುತ್ತಲೇ ಇರುತ್ತದೆ. ಆದರ ಬಗ್ಗೆ ಸದಾ ಎಚ್ಚರದಿಂದ ಇರಬೇಕಾಗಿದೆ ಎಂದರು. ಹಿಂದೂ ಧರ್ಮ ಸಂಸ್ಥಾಪನೆ ಮಾಡುವ ಕೆಲಸವನ್ನು ಶಿವಾಜಿ ಕಾಡು ಮೇಡುಗಳಲ್ಲಿ ಮಾಡುತ್ತಿದ್ದರು. ಅದರಂತೆ ಹಿಂದು ಸಮಾಜಕ್ಕೆ ಶಕ್ತಿ ತುಂಬಲು ಪ್ರತಿ ಗ್ರಾಮ ಗ್ರಾಮಗಳಲ್ಲಿ ಹಿಂದೂ ಸಂಗಮಗಳು ನಡೆಯಬೇಕು ಎಂದು ಅವರು ಹೇಳಿದರು.
ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕಿ ವೇದಾವತಿ ಅನಂತ ಅಧ್ಯಕ್ಷತೆ ವಹಿಸಿದ್ದರು. ಹಿಂದು ಧರ್ಮರಕ್ಷಾ ಸಮಿತಿಯ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಮಾಸ್ತರ್ ಕುದ್ಕುಳಿ, ಪದ್ಮಯ್ಯ ಗೌಡ ಆಲುಗುಂಜ, ಪಿ.ಕೆ.ಬಾಲಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷ್ಣಪ್ಪ ಗೌಡ, ಎಂ.ಟಿ.ಮಲ್ಲಪ್ಪ ಗೌಡ, ಪೊನ್ನಪ್ಪ ಗೌಡ ಆಲುಗುಂಜ, ವೇದಾವತಿ ಅನಂತ ಬಡ್ಡಡ್ಕ, ದೇವಿಪ್ರಸಾದ್ ಬಡ್ಡಡ್ಕ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಧರ್ಮರಕ್ಷಾ ಸಮಿತಿಯ ಸಂಚಾಲಕ ಜಯಪ್ರಕಾಶ್ ಪೆರುಮುಂಡ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಗೋಳ್ವಲ್ಕರ್ ವಂದಿಸಿದರು. ಗಿರೀಶ್ ಕುಂಟಿನಿ ನಿರೂಪಿಸದರು. ಸಮಾರಂಭಕ್ಕೆ ಮುನ್ನ ಆಕರ್ಷಕ ಶೋಭಾಯಾತ್ರೆ ನಡೆಯಿತು. ಎರಡು ಭಾಗಗಳಿಂದ ಆಗಮಿಸಿದ ಶೋಭಾಯಾತ್ರೆ ಕಲ್ಲಪಳ್ಳಿ ಶಾಲಾ ಮೈದಾನದಲ್ಲಿ ಸಂಗಮಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.