ಬಂಟ್ವಾಳ : ರಾಜ್ಯದ ಎಲ್ಲಾ ನಗರ ಮತ್ತು ಗ್ರಾಮಾಂತರ ಪ್ರದೇಶಕ್ಕೆ ಸಾರಿಗೆ ಸಂಚಾರದ ವಿಸ್ತರಣೆಯ ಜೊತೆಗೆ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಅಭ್ಯರ್ಥಿಗಳ ನೇಮಕಾತಿ ನಡೆಸಲಾಗುತ್ತಿದೆ ರಾಜ್ಯ ಸಾರಿಗೆ ಸಚಿವ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದರು.ಅವರು ಶುಕ್ರವಾರ ಬಿ.ಸಿ.ರೋಡ್ ನೂತನ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ ನೆರೆವೇರಿಸಿ ಮಾತನಾಡಿದರು.
ದ.ಕ.ಜಿಲ್ಲೆಯ ಮಳೆ, ಬೇಸಿಗೆಯ ಬಿಸಿಲಿನಲ್ಲಿ ಇತರ ಜಿಲ್ಲೆಗಳಿಂದ ಬಂದು ಸೇವೆ ನೀಡುವ ಸಿಬಂದಿಗಳು ವರ್ಗಾವಣೆ ಬಯಸುತ್ತಾರೆ. ಇದರಿಂದಾಗಿ ಅವರು ಇಲ್ಲಿ ನಿಲ್ಲಲಾಗದೆ ಸಂಸ್ಥೆಗೆ ಸರಿಯಾದ ಸೇವೆ ನೀಡಲಾಗದ ಸ್ಥಿತಿ ಹೊಂದುವುದರಿಂದ ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರು, ಚಾಮರಾಜನಗರ ವಿಭಾಗಗಳಿಗೆ ಸಿಬಂದಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿರುವುದಾಗಿ ಅವರು ತಿಳಿಸಿದರು.
ಸಂಚಾರ ವ್ಯವಸ್ಥೆಯ ಉತ್ತಮ ನಿರ್ವಹಣೆಗೆ ನೀಡುವ ಕೇಂದ್ರ ಸರಕಾರದ ಎಲ್ಲಾ ಮೂರು ಬಹುಮಾನಗಳು ರಾಜ್ಯದ ಕೆಎಸ್ಆರ್ಟಿಸಿಗೆ ಸಂದಿದೆ. ಕೇಂದ್ರವು ನೀಡುವ 2 ಸಾವಿರ ಬಸ್ಗಳ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡದ್ದು ಕರ್ನಾಟಕ ಸಾರಿಗೆ ನಿಗಮ ಮಾತ್ರ ಎಂದರು.ರಾಜ್ಯದಲ್ಲಿ ಶೇ. 18 ಬಸ್ರೂಟ್ಗಳಲ್ಲಿ ಲಾಭವಿದೆ. ಶೇ. 45 ರೂಟ್ ಬಸ್ಗಳಲ್ಲಿ ಲಾಭ-ನಷ್ಟ ಇಲ್ಲದ ರೀತಿಯಲ್ಲಿದೆ. ಉಳಿದಂತೆ ಉಳಿದಂತೆ ಶೇ. 37 ರೂಟ್ಗಳಲ್ಲಿ ನಷ್ಟವಿದೆ. ಲಾಭ ನಷ್ಟಕ್ಕಿಂತಲೂ ಮುಖ್ಯವಾಗಿ ಗ್ರಾಮಾಂತರ ಪ್ರದೇಶದ ಜನರಿಗೆ ಉತ್ತಮ ಸಂಚಾರ ಸೌಲಭ್ಯ ಕಲ್ಪಿಸುವ ಉದ್ದೇಶ ಸರ್ಕಾರದ್ದು ಎಂದರು.7.5 ಕೋಟಿ ರೂ ವೆಚ್ಚದ ಬಿ.ಸಿ.ರೋಡು ಬಸ್ ನಿಲ್ದಾಣ ನಿರ್ಮಾಣಕ್ಕೆ ಒಂದೂವರೆ ವರ್ಷದ ಅವಧಿ ಇದ್ದರೂ, ಮುಂದಿನ ಒಂದು ವರ್ಷದಲ್ಲಿ ನಿರ್ಮಿಸುವ ಗುರಿ ಇರಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದವರು ತಿಳಿಸಿದರು.
ಬಂಟ್ವಾಳಕ್ಕೆ ಯೋಗ: ರೈ
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ, ತಾನು ಸಾರಿಗೆ ಸಚಿವನಾಗಿದ್ದ ಕಾಲದಲ್ಲಿ ಪೊನ್ನೋಡಿಯಲ್ಲಿ ಜಮೀನು ಮಂಜೂರಾತಿ ಆಗಿತ್ತು. ನಂತರದ ಬೆಳವಣಿಗೆಯಲ್ಲಿ ಕಾರಣಾಂತರಗಳಿಂದ ಅದನ್ನು ಡಿಪೋ ಆಗಿ ಪರಿವರ್ತಿಸಲಾಯಿತು, ಇದೀಗ ಬಂಟ್ವಾಳಕ್ಕೆ ಸುಸಜ್ಜಿತ ಬಸ್ ನಿಲ್ದಾಣದ ಯೋಗ ಒದಗಿಬಂದಿದೆ ಎಂದರು. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬೆಂಜನಪದವಿನಲ್ಲಿ 8 ಎಕ್ರೆ ಜಾಗ ಕ್ರೀಡಾಂಗಣಕ್ಕೆ ಜಮೀನು ಮಂಜೂರಾತಿ ಆಗಿದ್ದು, ಮಿನಿವಿದಾನ ಸೌಧಕ್ಕೆ ಶೀಘ್ರವೇ ಶಿಲಾನ್ಯಾಸ ನೆರವೇರಿಸಲಾಗುವುದು . ಕ್ಷೇತ್ರದಲ್ಲಿ ಪ್ರಮುಖವಾದ ಐದು ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಎರಡು ಕಾಮಗಾರಿಗೆ ಚಾಲನೆದೊರೆತು ಪ್ರಗತಿಯಲ್ಲಿದೆ. 61 ಕೋಟಿ ರೂ ವೆಚ್ಚದ ಒಳಚರಂಡಿ ಯೋಜನೆ ಮಂಜೂರಾತಿ ಅಂತಿಮ ಹಂತದಲ್ಲಿದೆ ಎಂದರು.
ಬಂಟ್ವಾಳ ತಾ.ಪಂ.ಅಧ್ಯಕ್ಷ ಯಶವಂತ ಡಿ., ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ, ಉಪಾಧ್ಯಕ್ಷೆ ಯಾಸ್ಮಿನ್, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ಪುರಸಭಾ ಸದಸ್ಯ ಮಹಮ್ಮದ್ ನಂದರಬೆಟ್ಟು, ಜಿ.ಪಂ. ಸದಸ್ಯರಾದ ಮಮತಾ ಡಿ.ಎಸ್.ಗಟ್ಟಿ, ನಳಿನಿ ಶೆಟ್ಟಿ, ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಚೀಫ್ ಇಂಜಿನಿಯರ್ ಜಗದೀಶಚಂದ್ರ, ಉಪ ಸಾರಿಗೆ ಅಧಿಕಾರಿ ಅಹ್ಮದ್ಖಾನ್, ತಹಶೀಲ್ದಾರ್ ಪುರಂದರ ಹೆಗ್ಡೆ, ಎಂಆರ್ಪಿಎಲ್ ಎಂ.ಡಿ. ಲಕ್ಷ್ಮೀನಾರಾಯಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಉಪಸ್ಥಿತರಿದ್ದರು.ಕೆಎಸ್ಆರ್ಟಿಸಿ ಕರ್ನಾಟಕ ವಿಭಾಗ ನಿಯಂತ್ರಣಾಧಿಕಾರಿ ಪಿ. ರಾಜಶೇಖರ ಮೂರ್ತಿ ಸ್ವಾಗತಿಸಿ, ಕಾನೂನು ಅಧಿಕಾರಿ ನರಸಿಂಹ ವರ್ಮ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರರಾವ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಸ್ತಾವಿತ ಬಸ್ಸು ನಿಲ್ದಾಣವು 4878.12 ಚ.ಮೀ ವಿಸ್ತಾರ ಹೊಂದಿದ್ದು, ನೆಲಅಂತಸ್ತು ಕಟ್ಟಡ , ಮೊದಲನೇ ಅಂತಸ್ತು, ಎರಡನೇ ಅಂತಸ್ತು ಕಟ್ಟಡ, ಬಸ್ಸುಗಳ ನಿಲುಗಡೆಗೆ 12 ಫ್ಲ್ಯಾಟ್ ಫಾರಂ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಶೌಚಾಲಯ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಲಗೇಜು ಕೊಠಡಿ, ಉಪಹಾರ ಗೃಹ, ವಾಣಿಜ್ಯ ಮಳಿಗೆ, ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ, ಕೆಳ ಅಂತಸ್ತಿನಲ್ಲಿ ವಾಹನಪಾರ್ಕಿಂಗ್ ಸೌಲಭ್ಯ, ಮಹಿಳಾ ವಿಶ್ರಾಂತಿ ಕೊಠಡಿಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.