ಬಂಟ್ವಾಳ: ರಾಜ್ಯದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಬಿ.ಸಿರೋಡ್ನಲ್ಲಿ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಅವಶ್ಯಕತೆ ಇದೆ ಎಂಬುದು ಇಲ್ಲಿನ ಜನರ ಬಹುಕಾಲದ ಬೇಡಿಕೆ.
ಈ ಕೂಗಿಗೆ ಕಾಲ ಕೂಡಿ ಬಂದಿದ್ದು, ಶುಕ್ರವಾರ ಅದರ ಶಿಲಾನ್ಯಾಸಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸಾರಿಗೆ ಸಚಿವ ರಾಮಲಿಂಗರೆಡ್ಡಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸ್ಥಳೀಯ ಶಾಸಕ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಪರಿಶ್ರಮದ ಫಲವಾಗಿ ಕೊನೆಗೂ ಸುಮಾರು ಏಳೂವರೆ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲೆ ಎತ್ತಲಿದೆ. ಮುಂದಿನ 15 ತಿಂಗಳಲ್ಲಿ ಇದರ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಎಲ್ಲಿ ನಿಲ್ದಾಣ: ರಾ.ಹೆ ೭೫ರ ಬಿ.ಸಿ.ರೋಡ್ನ ಸೋಮಯಾಜಿ ಕಾಂಪ್ಲೆಕ್ಸ್ನ ಮುಂಭಾಗ ಮೇಲ್ಸೇತುವೆ ಪಕ್ಕದ ಸರ್ವೀಸ್ ರಸ್ತೆಗೆ ತಾಗಿಕೊಂಡೇ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಈ ಹಿಂದೆ ಇಲ್ಲೊಂದು ಪೆಟ್ರೋಲ್ ಪಂಪ್ ಕಾರ್ಯಾಚರಿಸುತ್ತಿದ್ದು, ಇದನ್ನು ಸಹಿತ ಇದರ ಹಿಂಬದಿಯಲ್ಲಿರುವ ಶ್ರೀ ಚಂಡಿಕಾ ಪರಮೇಶ್ವರೀ ದೇವಸ್ಥಾನದ ಸಮೀಪದ ಖಾಸಗಿ ಜಮೀನನ್ನು ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಖರೀದಿಸಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ.
ಡಿಪೋ ಆಗಿ ಪರಿವರ್ತನೆ: ಶಾಸಕ ರಮಾನಾಥ ರೈಯವರು ಸಾರಿಗೆ ಸಚಿವರಾಗಿದ್ದಾಗ ಬಿ.ಸಿ.ರೋಡ್ನಿಂದ ಅನತಿ ದೂರದಲ್ಲಿದ್ದ ಪೊನ್ನೋಡಿ ಎಂಬಲ್ಲಿ ಬಸ್ ನಿಲ್ದಾಣಕ್ಕೆ ಜಾಗ ಗುರುತಿಸಿ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿತ್ತು.
ಆದರೆ ಬಳಿಕ ನಡೆದ ಚುನಾವಣೆಯಲ್ಲಿ ರಮಾನಾಥ ರೈಯವರು ಸೋಲನ್ನು ಅನುಭವಿಸಿದರು. ನಾಗರಾಜ ಶೆಟ್ಟಿಯವರು ಸಚಿವರಾದರು. ಇತ್ತ ಬಸ್ ನಿಲ್ದಾಣವಾಗಬೇಕಾದಲ್ಲಿ ಕಾರಣಾಂತರಗಳಿಂದ ಕೆ.ಎಸ್.ಆರ್.ಟಿ.ಸಿ ಡಿಪೋ ಆಗಿ ಪರಿವರ್ತನೆಗೊಂಡಿತು. ಬಸ್ ನಿಲ್ದಾಣದ ಪ್ರಸ್ತಾಪವೂ ನೆನೆಗುದಿಗೆ ಬಿತ್ತು. ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸಿದಂತೆ ಬಂಟ್ವಾಳದಲ್ಲಿ ಅಗತ್ಯವಾಗಿ ಬೇಕಾದ ಬಸ್ ನಿಲ್ದಾಣದ ಬದಲು ಕೆ.ಎಸ್.ಆರ್.ಟಿ.ಸಿ.ಯ ಡಿಪೋ ಕಾರ್ಯರೂಪಕ್ಕೆ ಬಂತು.
ಮತ್ತೆ ಚಾಲನೆ: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ಜಿಲ್ಲೆಗಳಿಗೆ ತೆರಳುವ ಎಲ್ಲಾ ಬಸ್ಸುಗಳು ಬಿ.ಸಿ.ರೋಡ್ನ್ನೇ ಹಾದು ಹೋಗಬೇಕಾಗಿದ್ದು, ಆದರೆ ಬಸ್ ನಿಲುಗಡೆಗೆ ಸುಸಜ್ಜಿತ ಬಸ್ ನಿಲ್ದಾಣದ ಕೊರತೆಯನ್ನು ಅಣಕಿಸುವಂತಿತ್ತು. ಈ ಭಾಗದ ಜನ ಸಾಮಾನ್ಯರು , ಪ್ರಯಾಣಿಕರು ಕೂಡಾ ಬಸ್ ನಿಲ್ದಾಣದ ಅಗತ್ಯತೆಯ ಬಗ್ಗೆ ಆಗಾಗ ಸಂಬಂಧಿಸಿದವರಿಗೆ ಮನವಿ ಪತ್ರಗಳನ್ನು ರವಾನಿಸುತ್ತಿದ್ದರು. ಪರಿಣಾಮ ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಎಚ್ಚೆತ್ತು ಮತ್ತೆ ಬಸ್ ನಿಲ್ದಾಣದ ನಿರ್ಮಾಣಕ್ಕೆ ಜಮೀನು ಹುಡುಕಾಟದಲ್ಲಿ ತೊಡಗಿತು. ಬಳಿಕ ಶಾಸಕರಾದ ರಮಾನಾಥ ರೈಯವರೂ ಕೂಡ ಇವರಿಗೆ ಸಾಥ್ ನೀಡಿದರು. ಕೊನೆಗೂ ಬಿ.ಸಿ.ರೋಡ್ನ ಹೆದ್ದಾರಿ ಪಕ್ಕದಲ್ಲೇ 1.60 ಎಕರೆ ವಿಶಾಲ ಜಮೀನು ಗುರುತಿಸಿದ ಸಂಸ್ಥೆ, ಇದಕ್ಕೆ ಇನ್ನೂ ಒಂದಷ್ಟು ಖಾಸಗಿ ಜಮೀನನ್ನು ಖರೀದಿಸಿ ಈಗ ಬಸ್ ನಿಲ್ದಾಣದ ನಿರ್ಮಾಣಕ್ಕೆ ಸಜ್ಜಾಗಿದೆ.
ಖಾಸಗಿಯವರದೇ ಕಾರುಬಾರು: ನಾಲ್ಕೈದು ದಶಕಗಳ ಹಿಂದೆ ಬಿ.ಸಿ.ರೋಡ್ನಲ್ಲಿ ಪುರಸಭೆಯ ಅಧೀನದಲ್ಲಿದ್ದ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಗಳ ಜೊತೆಗೆ ಕೆ.ಎಸ್.ಆರ್.ಟಿ.ಸಿ ಬಸ್ಗಳು ನಿಲುಗಡೆಯಾಗುತ್ತಿತ್ತು. ಪುರಸಭೆ ಈ ಹಿಂದಿನ ಬಸ್ ನಿಲ್ದಾಣವನ್ನು ನೆಲಸಮಗೊಳಿಸಿ ಇದೀಗ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಅಭಿವೃದ್ಧಿ ಪಡಿಸಿದ ಬಳಿಕ ಇಲ್ಲಿ ಮೂಡಬಿದ್ರೆ, ಸರಪಾಡಿ, ಮುಡಿಪು, ಪೊಳಲಿ ಮತ್ತಿತರ ಗ್ರಾಮೀಣ ಭಾಗಗಳಿಗೆ ತೆರಳುವ ಖಾಸಗಿ ಬಸ್ಗಳದ್ದೇ ಕಾರುಬಾರು.
ಕೆ.ಎಸ್.ಆರ್.ಟಿ.ಸಿ. ಬಸ್ಗಳು ಬಸ್ ನಿಲ್ದಾಣದ ಒಳಗೆ ಇಳಿಯಲು ಸಾದ್ಯವಾಗದೆ ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಹತ್ತಿಸಿ, ಇಳಿಸುವಂತಾಗಿದೆ. ಇದರಿಂದಾಗಿ ಸಂಚಾರಕ್ಕೂ ಅಡಚಣೆ ಒಂದೆಡೆಯಾದರೆ ಪ್ರಯಾಣಿಕರಿಗೂ ಕೂಡಾ ನಿಲ್ಲಲು ಸೂಕ್ತ ವ್ಯವಸ್ಥೆಯಿಲ್ಲ. ಮಳೆ, ಬಿಸಿಲು ಏನೇ ಆದರೂ ಪ್ರಯಾಣಿಕರು ರಸ್ತೆಯಲ್ಲೇ ನಿಂತು ಬಸ್ ಕಾಯಬೇಕಾದ ಪರಿಸ್ಥಿತಿ. ಸದ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿ ಎಂಬುದು ಸಾರ್ವಜನಿಕರ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.