ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಇದರ ವತಿಯಿಂದ ನಿರ್ಮಿಸಿರುವ ‘ಜಾಗೃತಿ ಸೌಧ’ ಕಟ್ಟಡ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಜೂ. 11 ರಂದು ಉದ್ಘಾಟಿಸಲಿದ್ದಾರೆ ಎಂದು ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ್ ಪೂವಣಿ ತಿಳಿಸಿದರು.
ಅವರು ಬುಧವಾರ ಪತ್ರಿಕೋಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದರು. ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮದ್ಯಪಾನ ವಿರೋದಿ ಕಾರ್ಯಕ್ರಮಗಳು ಜನಸಮುದಾಯದ ಸಹಭಾಗಿತ್ವದೊಂದಿಗೆ ಕಳೆದ 20 ವರ್ಷಗಳಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಬಹುತೇಕ ಜನರಿಗೆ ವ್ಯಸನ ಮುಕ್ತರಾಗಲು ಬಯಕೆಯಿದ್ದರೂ ಸಮುದಾಯದ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಲು ಮುಜುಗರವಾಗುತ್ತಿರುವುದನ್ನು ಗಮನಿಸಿದ ಹೆಗ್ಗಡೆಯವರು ಇಂತಹ ಜನರಿಗೆ ಅಥವಾ ಯಾವುದೇ ಪ್ರಚಾರವಿಲ್ಲದೆ ಗೌಪ್ಯವಾಗಿ ಕುಡಿತ ಬಿಡಲು ಇಚ್ಛಿಸುವವರಿಗೆ ಹೊಸದೊಂದು ಜಾಗೃತಿ ಸೌಧ ಕಟ್ಟಡವನ್ನು ಶ್ರೀ ಧರ್ಮಸ್ಥಳ ಮೆಡಿಕಲ್ ಟ್ರಸ್ಟ್ ವತಿಯಿಂದ ಶ್ರೀ ಮಂಜುನಾಥೇಶ್ವರ ಕ್ಷಯ ತಪಾಸಣಾ ಆಸ್ಪತ್ರೆ ಲಾಯಿಲಾ ಇಲ್ಲಿ ನಿರ್ಮಿಸಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ನಡೆಸಲು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಗೆ ನೀಡಿರುತ್ತಾರೆ ಎಂದರು.
ಸುಮಾರು ರೂ. 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕಟ್ಟಡದಲ್ಲಿ ೯೦ ಹಾಸಿಗೆಗಳು, ಸಭಾ ಭವನ, ಅತ್ಯಾಧುನಿಕ ಸೌಲಭ್ಯಗಳು, ವಿಶೇಷ ಚಿಕಿತ್ಸಾ ವಿಧಾನಗಳನ್ನೊಳಗೊಂಡಿದೆ. ಈ ಕೇಂದ್ರದಲ್ಲಿ ಮನೋರೋಗತಜ್ಞರ ನೇತೃತ್ವದಲ್ಲಿ ಶ್ರೀ.ಧ. ಮ.ಆಸ್ಪತ್ರೆಯ ಸಹಕಾರದೊಂದಿಗೆ ವಿಶ್ವಆರೋಗ್ಯ ಸಂಸ್ಥೆಯ ಮಾರ್ಗದರ್ಶನದಂತೆ ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗುವುದು. ಇದರ ಉದ್ಘಾಟನೆಯನ್ನು ಜೂ.11 ರಂದು ಬೆಳಿಗ್ಗೆ 11.00 ಘಂಟೆಗೆ ಭಾರತ ಸರಕಾರದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ನೆರವೇರಿಸಲಿದ್ದಾರೆ. ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಭವನದ ಉದ್ಘಾಟನೆಯನ್ನು ರಾಜ್ಯದ ಆರೋಗ್ಯ ಸಚಿವ ಯು. ಟಿ. ಖಾದರ್ ಮಾಡಲಿದ್ದಾರೆ. ಸ್ವಾಸ್ಥ್ಯ ಸಂಕಲ್ಪದ ಮಾಹಿತಿ ನೀಡುವ ಕಿರುಚಿತ್ರ ಬಿಡುಗಡೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ಶಾಸಕಕೆ.ವಸಂತ ಬಂಗೇರ ಅವರು ರಜತ ಸಂಭ್ರಮ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಮ್.ಆರ್.ರಂಗಶ್ಯಾಮಯ್ಯ, ಡಿ. ಧ. ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರಕುಮಾರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ಧ.ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ.ಸದಸ್ಯ ಸುಧಾಕರ ಬಿ.ಎಲ್. ಲಾಯಿಲ ಗ್ರಾ.ಪಂ. ಅಧ್ಯಕ್ಷೆ ವೀಣಾರಾವ್ ಉಪಸ್ಥಿತರಿರುತ್ತಾರೆ ಎಂದರು.
ಪೂರಕ ಮಾಹಿತಿ ನೀಡಿದ ವೇದಿಕೆ ನಿರ್ದೇಶಕ ವಿನ್ಸೆಂಟ್ ಪಾಯಸ್ ಅವರು, ಮದ್ಯಪಾನ ನಮ್ಮ ಸಮಾಜವನ್ನು, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಬಡಜನತೆ ಹಾಗೂ ಕೂಲಿ ಕಾರ್ಮಿಕರನ್ನು ಬಾಧಿಸುವ ಅತೀ ಭೀಕರ ಸಮಸ್ಯೆಯಾಗಿದೆ. ಈ ಪಿಡುಗಿನಿಂದಾಗಿ ಬಡಜನರ ಕಲ್ಯಾಣಕ್ಕಾಗಿ ಹಮ್ಮಿಕೊಳ್ಳುತ್ತಿರುವ ಯಾವುದೇ ಕಾರ್ಯಕ್ರಮಗಳು ನಿರೀಕ್ಷಿತ ಫಲ ನೀಡುವುದಿಲ್ಲವಾದುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಈ ವಿಚಾರವನ್ನು ಅರಿತುಕೊಂಡು ಮದ್ಯಪಾನದ ವಿರುದ್ದಜನಜಾಗೃತಿ ಮೂಡಿಸುವ ಉದ್ದೇಶದಿಂದ ಜನಜಾಗೃತಿ ಅಭಿಯಾನ ಎಂಬ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ರಾಜ್ಯಾದ್ಯಂತ 25 ಜಿಲ್ಲೆಗಳಲ್ಲಿ 28 ಜಿಲ್ಲಾವೇದಿಕೆ, 9 ತಾಲೂಕು ವೇದಿಕೆ, 80 ವಲಯ ವೇದಿಕೆ, 148 ಗ್ರಾಮ ಸಮಿತಿಗಳನ್ನು ರಚಿಸಲಾಗಿದೆ. ಸುಮಾರು 9000 ಸ್ವಯಂ ಸೇವಕರು, 880 ಪದಾಧಿಕಾರಿಗಳು ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ನೀಡುತ್ತಿದ್ದಾರೆ. ಈ ವೇದಿಕೆಗಳ ಮೂಲಕ ಮದ್ಯಪಾನದಿ ದುಶ್ಚಟಗಳ ಕೆಟ್ಟ ಪರಿಣಾಮಗಳನ್ನು ಜನತೆಗೆ ತಿಳಿಯಪಡಿಸುವ ಉದ್ದೇಶದಿಂದ ಮಾಹಿತಿ ಶಿಬಿರಗಳು, ವಿಚಾರ ಸಂಕಿರಣಗಳು, ಸಮಾವೇಶ, ಜಾಥಾ, ಮನೆಭೇಟಿ ಕಾರ್ಯಕ್ರಮ, ಗ್ರಾಮಸುಭಿಕ್ಷ ಕಾರ್ಯಕ್ರಮ, ಸ್ವಾಸ್ಥ್ಯ ಸಂಕಲ್ಪ, ಗ್ರಾಮ ಸ್ವಾಸ್ಥ್ಯ ಮುಂತಾದ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ, ಹಳ್ಳಿ ಪಟ್ಟಣಗಳಲ್ಲಿ ನಡೆಸಲಾಗುತ್ತಿದೆ.ಇದುವರೆಗೆ 935 ಸಮುದಾಯ ಮದ್ಯವರ್ಜನ ಶಿಬಿರಗಳನ್ನು ಏರ್ಪಡಿಸಿ 65 ಸಾವಿರಕ್ಕೂ ಮಿಕ್ಕಿದಜನರಿಗೆ ವ್ಯಸನಮುಕ್ತರಾಗು ವಚಿಕಿತ್ಸೆ ನೀಡಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳ ಪರಿಣಾಮವಾಗಿ ಪ್ರತ್ಯಕ್ಷ ಪರೋಕ್ಷವಾಗಿ ಎರಡು ಲಕ್ಷಕ್ಕೂ ಮಿಕ್ಕಿದ ಜನರು ದುಶ್ಚಟಗಳನ್ನು ತ್ಯಜಿಸಿ ಆದರ್ಶಜೀವನ ನಡೆಸುತ್ತಿದ್ದಾರೆ. ಮದ್ಯವರ್ಜಿತರನ್ನು ನವಜೀವನ ಸಮಿತಿಗಳಲ್ಲಿ ಸಂಘಟಿಸಿ ಮತ್ತೊಮ್ಮೆ ಮದ್ಯಪಾನದ ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇಂತಹ 3107 ನವಜೀವನ ಸಮಿತಿಗಳು ಕಾರ್ಯೋನ್ಮುಕವಾಗಿವೆ. ಶಾಲಾ ಕಾಲೇಜುಗಳಲ್ಲಿ ಪ್ರತಿ ವರ್ಷ 2 ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ದುಶ್ಚಟಗಳಿಗೆ ಒಳಗಾಗದಂತೆ ಪ್ರೇರೇಪಿಸುವ ಸ್ವಾಸ್ಥ್ಯ ಸಂಕಲ್ಪದ ಪಾಠವನ್ನು ೬೩೨ ಸಂಪನ್ಮೂಲ ವ್ಯಕ್ತಿಗಳ ಮೂಲಕ ಬೋಧಿಸಲಾಗುತ್ತದೆ ಎಂದರು.
ಜನಜಾಗೃತಿ ವೇದಿಕೆಯು ಸಾರ್ವಜನಿಕಕ್ಷೇತ್ರದಲ್ಲಿ ಕಳಕಳಿಯುಳ್ಳ ನಾಗರಿಕರಿಂದ ರೂಪಿಸಲ್ಪಟ್ಟಿದ್ದು ಇದು ಒಂದು ಸ್ವಯಂ ಸೇವಾ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ವೇದಿಕೆಯ ಕಾರ್ಯಕರ್ತರು ಹೆಚ್ಚಾಗಿ ಗೌರವ ಕಾರ್ಯಕರ್ತರಾಗಿದ್ದು ತಮ್ಮ ಕಾರ್ಯಕ್ಷೇತ್ರದಲ್ಲಿ ಮದ್ಯವರ್ಜನೆಯ ಕುರಿತಂತೆ ಮಾರ್ಗದರ್ಶನ, ಸಲಹೆ-ಸೂಚನೆಗಳನ್ನು ನೀಡುವವರಾಗಿದ್ದಾರೆ. ಜನಜಾಗೃತಿ ವೇದಿಕೆಯು ಪ್ರತೀ ವರ್ಷ ತನ್ನ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವವರಿಗೆ ಮತ್ತು ಮದ್ಯವರ್ಜಿತರಿಗೆ ಪ್ರೇರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ ಎಂದರು.
ಈ ಬಾರಿ ಅಖಿಲ ಕರ್ನಾಟಕಜನಜಾಗೃತಿ ವೇದಿಕೆಗೆ ರಜತ ಸಂಭ್ರಮದ ವರ್ಷವಾಗಿದೆ.ಕಳೆದ ೨೫ ವರ್ಷಗಳಲ್ಲಿ ವೇದಿಕೆಯು ನಡೆದು ಬಂದದಾರಿ ಬಹಳ ಕಠಿಣವಾದದ್ದು. ಬೆಳ್ತಂಗಡಿ ತಾಲೂಕಿನಲ್ಲಿ ಹೋರಾಟ ನಡೆಸಿ ಮಾಡಿದ ಪಾನ ನಿಷೇಧ, ಮದ್ಯವರ್ಜನ ಶಿಬಿರಗಳನ್ನು ನಡೆಸಲು ಎದುರಾದ ಸವಾಲುಗಳು, ಮದ್ಯ ಮಾರಾಟಗಾರರಿಂದ ಬೆದರಿಕೆಗಳು, ಪ್ರತಿಭಟನೆ, ಹೋರಾಟ, ಹಕ್ಕೊತ್ತಾಯ ಮಂಡನೆಗಳು, ಹೀಗೆ ಹಲವಾರು ಕಠಿಣ ಮಜಲುಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದರು. ಗೋಷ್ಠಿಯಲ್ಲಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.