ಬೆಳ್ತಂಗಡಿ : ಜನ ವಸತಿ ಇರುವ ಸ್ಥಳದಲ್ಲಿ ಮುಂಡಾಜೆ ಗ್ರಾ. ಪಂ.ನ ಕೋರಿಕೆಯಂತೆ ಕೂಳೂರು- ಕುರುಡ್ಯ ಪ್ರದೇಶದಲ್ಲಿ ತ್ಯಾಜ್ಯ ಘಟಕ ಸ್ಥಾಪನೆಗೆ ಸ್ಥಳೀಯರ ವಿರೋಧವಿದ್ದು, ಈ ವಿಚಾರ ಚರ್ಚೆಗೆ ಕಾರಣವಾಗಿತ್ತು. ಉದ್ದೇಶಿತ ಘಟಕ ಸ್ಥಳಕ್ಕೆ ಶಾಸಕ ಕೆ. ವಸಂತ ಬಂಗೇರ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಕೂಳೂರು – ಕುರುಡ್ಯ ನಾಗರಿಕರು ಈ ಪ್ರದೇಶದಲ್ಲಿ ಜನ ವಸತಿ ಇದ್ದು ತ್ಯಾಜ್ಯ ಘಟ ನಿರ್ಮಾಣದಿಂದ ವಸತಿಗೆ ಅನನುಕೂಲವಾಗುವುದಾಗಿ ಮನವಿ ಮಾಡಿದರು. ಸ್ಥಳವು ಜನವಾಸ ಪ್ರದೇಶಕ್ಕೆ ಬಹಳ ಹತ್ತಿರದಲ್ಲಿದ್ದು ನೂರಕ್ಕೂ ಅಧಿಕ ಮನೆಗಳಿವೆ. ಇಲ್ಲಿನವರು ಕುಡಿಯಲು ಉಪಯೋಗಿಸುವ ನೀರಿನ ಆಶ್ರಯವು ಉದ್ದೇಶಿತ ಸ್ಥಳದ ಬಳಿಯಲ್ಲಿಯೇ ಇದ್ದು ನೀರು ಕಲುಷಿತಗೊಂಡು ಮಾರಕ ರೋಗಗಳು ಹರಡುವ ಭೀತಿಯಿದೆ. ಜಿ.ಪಂ. ರಸ್ತೆಯು ಇದೇ ಪ್ರದೇಶದಲ್ಲಿದ್ದು ವಾಹನ ಸಂಚಾರ ಬಹಳಷ್ಟಿದೆ. ಬಸ್ ತಂಗುದಾಣವೂ ಹತ್ತಿರದಲ್ಲಿಯೇ ಇದ್ದು ಪಕ್ಕದಲ್ಲಿಯೇ ಅರೇಬಿಕ್ ಶಾಲೆ, ಮದರಸ, ದೇವಸ್ಥಾನವೂ ಇದೆ.
ಗ್ರಾ.ಪಂ. ಸ್ಥಳ ಗುರುತಿಸುವ ಮೊದಲು ಪರಿಸರ ವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದಿಲ್ಲ. ವಾರ್ಡ್ಸಭೆ, ಗ್ರಾಮಸಭೆಗಳಲ್ಲಿ ಆಕ್ಷೇಪಣೆ ವ್ಯಕ್ತವಾಗಿದ್ದರೂ ಗ್ರಾ. ಪಂ. ಆಡಳಿತವು ಯೋಜನೆಗೆ ಮುಂದಾಗಿದೆ. ಕಾಮಗಾರಿಗೆ ಟೆಂಡರ್ ಕರೆದಿರುವುದಿಲ್ಲ. ಪ್ರಕಟಣೆ ಮಾಡಿರುವುದಿಲ್ಲ. ಪ್ರಕ್ರಿಯೆ ಪಾರದರ್ಶಕವಾಗಿರುವುದಿಲ್ಲ. ಗ್ರಾ. ಪಂ. ವ್ಯಾಪ್ತಿಯಲ್ಲಿ ಪ್ರಕೃತ ಗುರುತಿಸಿದ ಸ್ಥಳದಿಂದ ಸೂಕ್ತ ಸ್ಥಳ ಬೇರೆ ಇದೆ. ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಆರೋಗ್ಯ ಇಲಾಖೆಯಿಂದ ಸೂಕ್ತ ಪರವಾನಿಗೆ/ ಶಿಫಾರಸ್ಸುಗಳನ್ನು ಪಡೆದಿರುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಬದಲಿ ಜಾಗದ ಪರಿಶೀಲನೆಗಾಗಿ ಶಾಸಕರು ವಲಯ ಅರಣ್ಯ ಅಧಿಕಾರಿ ಸುಂದರ ಶೆಟ್ಟಿ ಹಾಗೂ ಗ್ರಾಮ ಕರಣಿಕ ರಾಘವೇಂದ್ರ ಅವರ ಜತೆಗೆ ದೂಂಬೆಟ್ಟು ಪ್ರದೇಶಕ್ಕೆ ತೆರಳಲಾಯಿತು. ಅಲ್ಲಿ ಡಿಸಿ ಮನ್ನಾ ಭೂಮಿ ಇದ್ದು ಅನೇಕರು ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹಾಗಿದ್ದರೂ ಅಲ್ಲಿ ೭ ಎಕರೆಯಷ್ಟು ಜಾಗ ಇದ್ದು ತ್ಯಾಜ್ಯ ವಿಲೇಗೆ ಜಾಗ ನೀಡಬಹುದು ಎಂದು ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಜಿ. ಪಂ. ಸದಸ್ಯೆ ನಮಿತಾ, ತಾ. ಪಂ. ಸದಸ್ಯ ಸೆಬಾಸ್ಟಿಯನ್, ಗ್ರಾ. ಪಂ. ಅಧ್ಯಕ್ಷೆಶಾಲಿನಿ, ಉಪಾಧ್ಯಕ್ಷೆ ವಸಂತಿ, ಸದಸ್ಯರಾದ ಚಂದ್ರಾವತಿ, ಸುಮನಾ ಗೋಖಲೆ, ಅಶ್ವಿನಿ ಹೆಬ್ಬಾರ್, ನಾರಾಯಣ ಗೌಡ, ಅಬ್ದುಲ್ ಅಜೀಜ್, ಸುರೇಶ್ ಹೆಗ್ಡೆ, ಗಣೇಶ್ ಬಂಗೇರ, ಪಿಡಿಒ ಸಂಜೀವ ನಾಯ್ಕ, ಮಾಜಿ ಉಪಾಧ್ಯಕ್ಷ ನಾಗರಾಜ ನಾಯ್ಕ, ಮುಖಂಡ ಶ್ರೀಧರ ಭಿಡೆ, ಸ್ಥಳೀಯರಾದ ನಾಮದೇವ ರಾವ್, ಎನ್. ಎಸ್. ಗೋಖಲೆ ಮುಂಡಾಜೆ, ಬಾಲಕೃಷ್ಣ ಶೆಟ್ಟಿ, ಕೆ. ಸತ್ಯನಾರಾಯಣ ಹೊಳ್ಳ ಮೊದಲಾದವರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.