ಬಂಟ್ವಾಳ: ಇಲ್ಲಿನ ಬಹುದಿನದ ಬೇಡಿಕೆಯಂತೆ ಕಾರ್ಯಾರಂಭಗೊಂಡ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ಮೂಲ ಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ. ವಿಶೇಷವೆಂದರೆ ಬಿಳಿ ಸಮವಸ್ತ್ರದಲ್ಲಿ ಗುರುತಿಸಬೇಕಾದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಇನ್ನೂ ಖಾಕಿ ಭಾಗ್ಯದಲ್ಲೇ ತೃಪ್ತಿಪಟ್ಟಿದ್ದಾರೆ.
ಬಿ.ಸಿರೋಡಿನಿಂದ ಸುಮಾರು 3ಕಿ.ಮೀ ದೂರದ ಮೆಲ್ಕಾರ್ನಲ್ಲಿ ತಾತ್ಕಾಲಿಕವಾಗಿ ಮನೆಯೊಂದನ್ನೇ ಟ್ರಾಫಿಕ್ ಪೊಲೀಸ್ ಠಾಣೆಯನ್ನಾಗಿ ಪರಿವರ್ತಿಸಿ ಎ.10 ರಂದು ಉದ್ಘಾಟಿಸಲಾಗಿತ್ತು. ಆದರೆ ಈ ಠಾಣೆಗೆ ಅತೀ ಮುಖ್ಯವಾಗಿ ಬೇಕಾದ ವಾಹನ, ಸಿಬ್ಬಂದಿಗಳ ನೇಮಕಾತಿಯಿಲ್ಲದೆ ಕೊರಗಲಾರಂಭಿಸಿದೆ.
ಸಚಿವ ರಮಾನಾಥ ರೈಯವರ ಪರಿಶ್ರಮದಿಂದ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾಗಿರುವುದಂತು ಸತ್ಯ. ಆದರೆ ವಾರಕಳೆದರೂ ಇನ್ನೂ ಇಲ್ಲಿ ಮೂಲ ಸೌಲಭ್ಯಗಳನ್ನೇ ಕಲ್ಪಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಇಲ್ಲಿ ನಿಯುಕ್ತಿಗೊಂಡಿರುವ 12 ಮಂದಿ ಸಿಬ್ಬಂದಿಗಳೆಲ್ಲರೂ ಒಒಡಿಯಲ್ಲಿ ಬಂದ ವಲಸಿಗರು. ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗಳ ಎಸ್.ಐ ಚಂದ್ರಶೇಖರಯ್ಯರವರಿಗೆ ಸಂಚಾರಿ ಠಾಣೆಯ ಉಪನಿರೀಕ್ಷಕರನ್ನಾಗಿ ಹೊಣೆ ಹೊರಿಸಲಾಗಿದ್ದು, ಅಪರಾಧ ವಿಭಾಗದಲ್ಲಿ ಮತ್ತೆ ಎಸ್ ಐ ಹುದ್ದೆ ಖಾಲಿಯಾಗಿದೆ, ದ.ಕ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಒಒಡಿ ಮೂಲಕ ಒಟ್ಟು 12 ಮಂದಿ ಸಿಬ್ಬಂದಿಗಳನ್ನು ಇಲ್ಲಿಗೆ ಪೋಸ್ಟಿಂಗ್ ಮಾಡಲಾಗಿದೆ.
ವಾಹನವಿಲ್ಲ : ಟ್ರಾಫಿಕ್ ಠಾಣೆಗೆ ಅತೀ ಜರೂರು ಬೇಕಾಗಿದ್ದು ವಾಹನದ ವ್ಯವಸ್ಥೆ ಆದರೆ ಇಲ್ಲಿಗೂ ಇನ್ನೂ ಅಧಿಕೃತ ವಾಹನದ ವ್ಯವಸ್ಥೆ ಕಲ್ಪಿಸಿಲ್ಲ. ಸದ್ಯಕ್ಕೆ ಬಂಟ್ವಾಳ ನಗರ ಠಾಣೆಯ ಇಂಟರ್ ಸ್ಪೆಕ್ಟರ್ ವಾಹನವನ್ನು ಬಳಸಲಾಗುತ್ತಿದೆ. ದೂರವಾಣಿ ಸಂಪರ್ಕ ದೊರೆತಿದ್ದರೂ. ಅಗತ್ಯ ಪೀಠೋಪಕರಣ, ಇಂಟರ್ ನೆಟ್ ಸಂಪರ್ಕಕ್ಕೆ ಕಂಪ್ಯೂಟರ್, ಕಚೇರಿ ಕೆಲಸಕ್ಕೆ ಬೇಕಾದ ಪ್ರಿಂಟರ್, ಕ್ಯಾಮರಾ ಮೊದಲಾದ ಅಗತ್ಯ ಸೌಲಭ್ಯಗಳು ಇನ್ನು ಒದಗಿಸಲಾಗಿಲ್ಲ.
ಸಮವಸ್ತ್ರವಿಲ್ಲ : ಟ್ರಾಫಿಕ್ ಪೊಲೀಸರು ಸಮವಸ್ತ್ರದಲ್ಲಿ ಗುರುತಿಸುತ್ತಾರೆ. ಆದರೆ ಸಂಚಾರಿ ಪೊಲೀಸ್ ಸಿಬ್ಬಂದಿಗಳಿಗೆ ಇನ್ನೂ ಬಿಳಿ ಸಮವಸ್ತ್ರದ ಭಾಗ್ಯ ಸಿಕ್ಕಿಲ್ಲ. ಇಲ್ಲಿನ ಪ್ರತಿಯೊಬ್ಬ ಸಿಬ್ಬಂದಿಗಳು ಒಒಡಿಯಲ್ಲಿ ವಲಸೆ ಬಂದಿರುವುದರಿಂದ ಸ್ವಂತವಾಗಿ ಬಿಳಿವಸ್ತ್ರ ಹೋಲಿಸಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಬಂಟ್ವಾಳ ಸರಕಾರಿ ಠಾಣೆಯ ಪೊಲೀಸರು ಖಾಕಿಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.
ತಪ್ಪಿಲ್ಲ ಕಿರಿಕಿರಿ : ಟ್ರಾಫಿಕ್ ಠಾಣೆ ಆರಂಭವಾದರೂ ಕಿಷ್ಕಿಂದೆಯಂತಿರುವ ಬಂಟ್ವಾಳ ಪೇಟೆಯಲ್ಲಿ ಇನ್ನೂ ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ. ನಿಗದಿತ ಸಮಯ ಉಲ್ಲಂಘಿಸಿ ಲೋಡಿಂಗ್, ಅನ್ಲೋಡಿಂಗ್ ನಡೆಯುತ್ತಲೇ ಇರುವುದು ಮತ್ತು ರಸ್ತೆ ಅಗಲೀಕರಣ ಪ್ರಸ್ತಾಪ ಪುರಸಭೆಯಲ್ಲಿ ನೆನೆಗುದಿಗೆ ಬಿದ್ದಿರುವುದರಿಂದ ಸದ್ಯಕ್ಕೆ ಇಲ್ಲಿ ಟ್ರಾಫಿಕ್ ಸಮಸ್ಯೆಯೂ ಬಗೆಹರಿಯುವ ಲಕ್ಷಣಗಳಿಲ್ಲ.
ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುವ ಸಂಚಾರಿ ಠಾಣೆಯ ಸ್ವಂತ ಕಟ್ಟಡಕ್ಕೆ ಬಿ.ಸಿರೋಡ್ ಬಂಟ್ವಾಳ ಪರಿಸರದಲ್ಲಿ ಸೂಕ್ತ ಜಮೀನಿನ ಹುಡುಕಾಟ ನಡೆಸಲಾಗುತ್ತಿದೆ. ಅಷ್ಟರವರೆಗಾದರೂ ಕನಿಷ್ಠ ಸೌಲಭ್ಯವನ್ನಾದರೂ ಪೂರೈಸುವ ನಿಟ್ಟಿನಲ್ಲಿ ಸಚಿವ ರಮಾನಾಥ ರೈ ಆಸ್ಥೆ ವಹಿಸಬೇಕೆಂಬ ಕೂಗು ಕೇಳಿ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.