ಬೆಳ್ತಂಗಡಿ : ಕುಡಿಯುವ ನೀರಿನ ಯೋಜನೆಗೆ ಹಣದಕೊರತೆಯಿಲ್ಲ. ಸರಕಾರಿ ಬೋರ್ವೆಲ್ಗಳಲ್ಲಿ ನೀರು ಇಲ್ಲವೆಂದಾದರೆ ಖಾಸಗಿಯವರ ಬೋರ್ವೆಲ್ ವಶಕ್ಕೆ ಪಡೆದು ನೀರು ನೀಡುವುದಕ್ಕೆ ಆದ್ಯತೆ ನೀಡಬೇಕು. ನೀರಿನ ಸಮಸ್ಯೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಯಾವೂದೇ ರೀತಿಯಲ್ಲಿ ಉದಾಸೀನ ತೋರಿದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಉಸ್ತುವಾರಿ ಸಚಿವ ಬಿ.ರಮಾನಾಥ ರೈ ಖಡಕ್ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕು ಕುಡಿಯುವ ನೀರಿನ ಸ್ಥಿತಿಗತಿಯ ಪರಶೀಲನಾ ಸಭೆ ನಡೆಸಿದ ಸಚಿವರು, ಸರಕಾರಿ ಬೋರ್ವೆಲ್, ಜಾಕ್ವೆಲ್ ಬಳಿ ಖಾಸಗಿಯವರು ನೀರು ತೆಗೆಯುತ್ತಿದ್ದರೆ ತಕ್ಷಣ ನಿಲ್ಲಿಸಲು ಸೂಚನೆ ನೀಡಿದರು. ಜನರಿಗೆ ಕುಡಿಯುವ ನೀರು ನೀಡಬೇಕಾದ್ದು ತುರ್ತು ಆದ್ಯತೆ. ಬೋರ್ವೆಲ್ ಇಲ್ಲದಿದ್ದರೆ ಯಾವೂದೇ ಮೂಲದಿಂದಾದರೂ ನೀರಿನ ವ್ಯವಸ್ಥೆಯನ್ನು ಮಾಡಬೇಕು. ಕರ್ತವ್ಯಲೋಪ ಮಾಡುವ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಾಸಕ ಕೆ.ವಸಂತ ಬಂಗೇರಅವರು, ತಾಲೂಕಿನಲ್ಲಿರುವ ಹೆಚ್ಚಿನ ಓವರ್ಹೆಡ್ ಟ್ಯಾಂಕಿಗಳಿಗೆ ನೀರು ಹೋಗುತ್ತಿಲ್ಲ. ಹೆಚ್ಚಿನ ಟ್ಯಾಂಕಿಗಳ ಕಾಮಗಾರಿ ಕಳಪೆಯಾಗಿದೆ. ತಾಲೂಕಿನಲ್ಲಿರುವ ಓವರ್ಹೆಡ್ ಟ್ಯಾಂಕಿಗಳ ಕಾಮಗಾರಿಗಳ ಬಗ್ಗೆ ತನಿಖೆಯಾಗಬೇಕು. ಕಳಪೆ ಕಾಮಗಾರಿಗಳಿಗೆ ಸಹಾಯಕ ಇಂಜಿನಿಯರ್ಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಅಂತಹ ಇಂಜಿನಿಯರ್ಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.
ರೆಖ್ಯ ಶಾಲೆಯ ಬಳಿ 7 ವರ್ಷದ ಹಿಂದೆ ನಿರ್ಮಾಣವಾದ ಟ್ಯಾಂಕಿಗೆ ಇಂದಿಗೂ ನೀರು ಹಾಕಲು ಆಗಿಲ್ಲ. ಅದು ಕುಸಿದು ಬೀಳುವ ಸ್ಥಿತಿಯಲ್ಲಿದೆ. ಅದರ ಬಗ್ಗೆ ತನಿಖೆ ಮಾಡಿ ಎಂದು ಶಾಸಕರು ಒತ್ತಾಯಿಸಿದರು. ಕಾಮಗಾರಿಯ ಉಸ್ತುವಾರಿ ವಹಿಸಿದ ಇಂಜಿನಿಯರ್ತಿಪ್ಪೆಸ್ವಾಮಿ ಸಭೆಗೆ ಹಾಜರಾಗದ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.ಅವರಿಗೆ ಇಂದು ರಜೆ ನೀಡಿದವರು ಯಾರು ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಸಭೆಗೆ ಗೈರುಹಾಜರಾದ ಇಂಜಿನಿಯರ್ ತಿಪ್ಪೆಸ್ವಾಮಿ ಅವರನ್ನುಅಮಾನತು ಮಾಡುವಂತೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಸಚಿವರು ಸೂಚಿಸಿದರು.
ರೆಖ್ಯಾ ಗ್ರಾಮದಲ್ಲಿ 53 ಲಕ್ಷ ರು. ವೆಚ್ಚದಲ್ಲಿ 3 ಟ್ಯಾಂಕಿ ನಿರ್ಮಾಣವಾಗಿದೆ. ಪೈಪ್ಲೈನ್ ಕಾಮಗಾರಿ ಆಗಿದ್ದರೂ ಇನ್ನೂ ಪಂಪ್ ಅಳವಡಿಸಿಲ್ಲ. ಪರಿಶಿಷ್ಟ ಜಾತಿ ಕಾಲೋನಿಗೆ ನೀರೇ ಇಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಕ ತಿಳಿಸಿದರು. ಅಂಡಿಂಜೆ ಗಾಂಧಿನಗರದ 600 ಮನೆಗೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ ಆಪಾದಿಸಿದರು.
ಕಣಿಯೂರು, ತಣ್ಣೀರುಪಂತದಲ್ಲಿ ನೀರಿನ ಸಮಸ್ಯೆ ಇದೆ. ಒಂದು ತಿಂಗಳಾದರೂ ಬೋರ್ವೆಲ್ಗೆ ಪಂಪ್ ಅಳವಡಿಸಿಲ್ಲ. ಜನರು ವಾಹನದಲ್ಲಿ ನೀರು ಸಾಗಾಟ ಮಾಡುತ್ತಿದ್ದಾರೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳತ್ತಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಸಾಹುಲ್ ಹಮೀದ್ ಆರೋಪಿಸಿದರು. ಮಡಂತ್ಯಾರು ಗ್ರಾಮದ ಕುಕ್ಕಳಬೆಟ್ಟು ಬಳಿ ಬೋರ್ವೆಲ್ ಇದ್ದರೂ ಪಂಪ್ ಅಳವಡಿಸಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಎಂ.ಶೆಟ್ಟಿ ಆರೋಪಿಸಿದರು.
ಮೆಸ್ಕಾಂ ಇಲಾಖೆಯಿಂದ ಸಂಪರ್ಕಕ್ಕೆ ಬೇಕಾದ ವಸ್ತುಗಳ ಸರಬರಾಜು ಆಗುತ್ತಿಲ್ಲ. ತಾಲೂಕಿನಲ್ಲಿ ಅನೇಕ ಟಿಸಿ ಕೊರತೆಯಿದೆ. ಮೆಟಿರಿಯಲ್ ಏನು ನಿಮ್ಮ ಮನೆಯಿಂದ ನೀಡುವುದಲ್ಲ. ಸರಕಾರದಿಂದ ನೀಡುವುದು ಎಂದು ಶಾಸಕ ಕೆ.ವಸಂತ ಬಂಗೇರ ಮೆಸ್ಕಾಂನ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ಅವರು ಕುಡಿಯುವ ನೀರಿನ ಮಟ್ಟಿಗೆ ಮೆಟಿರಿಯಲ್ ಕೊರತೆಯಿಲ್ಲ ಎಂದು ಸಮಜಾಯಿಸಿ ನೀಡಿದರು. ಈ ಸಂದರ್ಭದಲ್ಲಿ ಅವರ ಪರ ಮಾತನಾಡಿದ ಸಚಿವರು ಬೆಳ್ತಂಗಡಿಯ ಕಾರ್ಯಪಾಲಕ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡು ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಮೆಸ್ಕಾಂ ಇಲಾಖೆಯಲ್ಲಿ ಇಂತಹ ಸಮಸ್ಯೆಇದೆ. ಬೇರೆಲ್ಲೂ ಇಲ್ಲ. ನೀವು ಸರಿಯಾಗಿ ಕರ್ತವ್ಯ ನಿರ್ವಹಿಸಿ. ಬೆಳ್ತಂಗಡಿ ತಾಲೂಕಿನ ಮೆಸ್ಕಾಂ ಇಲಾಖೆಯ ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು, ಇಂಜಿನಿಯರ್ಗಳು, ಗ್ರಾಮ ಪಂಚಾಯತ್ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಕರೆದು ಒಂದು ತಿಂಗಳಿನೊಳಗೆ ಸಮಸ್ಯೆಯನ್ನು ಪರಿಹರಿಸುವಂತೆ ಸಚಿವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಾಬು ಪಾಣಾಜೆ, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣರಾವ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಹಣಾಧಿಕಾರಿ ಶ್ರೀವಿದ್ಯಾ, ಪುತ್ತೂರು ಸಹಾಯಕ ಕಮೀಷನರ್ ಪ್ರಮೀಳಾ ಎಂ.ಕೆ., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಂ.ಆರ್. ಉಮೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ ಭಟ್ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.