ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕನಕಮಜಲು ಯುವಕ ಮಂಡಲದ ಸಹಕಾರದಲ್ಲಿ ಕನಕಮಜಲಿನಲ್ಲಿ ನಡೆದ ಅರೆಭಾಷೆ-ಸಂಸ್ಕೃತಿ ಕುರಿತಾದ ಚಿತ್ರಕಲಾ ಶಿಬಿರ `ಸು-ಯೋಗ’ವು ಸಮಾರೋಪಗೊಂಡಿತು. ಶಿಬಿರದ ಮೂಲಕ ಅರೆ ಭಾಷೆ ಮಾತನಾಡುವ ಜನರ ಜೀವನ ಮತ್ತು ಸಂಸ್ಕೃತಿಯನ್ನು ಚಿತ್ರಗಳ ಮೂಲಕ ಅರಳಿಸುವ ಪ್ರಯತ್ನವನ್ನು ನಡೆಸಲಾಗಿದೆ. ಜನರ ಬದುಕು, ಜೀವನ, ಸಂಸ್ಕೃತಿ, ವಿಚಾರಗಳನ್ನು ಚಿತ್ರಗಳ ಮೂಲಕ ಇಲ್ಲಿ ಅನಾವರಣಗೊಳಿಸಲಾಗಿದೆ.
ಒಂದು ವಾರಗಳ ಕಾಲ ನಡೆದ ಶಿಬಿರದಲ್ಲಿ 16 ಮಂದಿ ಕಲಾವಿದರು ಗ್ರಾಮದ ವಿವಿಧ ಮನೆಗಳಲ್ಲಿ ವಾಸ್ತವ್ಯ ಹೂಡಿ ಜನರ ಬದುಕನ್ನು ನೋಡಿ, ಹಿರಿಯರಿಂದ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ತಿಳಿದು ಜೀವಂತ ಬದುಕನ್ನು ಚಿತ್ರದ ಮೂಲಕ ಕ್ಯಾನ್ವಾಸ್ನಲ್ಲಿ ಅರಳಿಸಿದ್ದಾರೆ.ಒಂದು ವಾರಗಳ ಕಾಲ ಗ್ರಾಮದ ಮನೆಗಳಲ್ಲಿಯೇ ಉಳಿದ ಕಲಾವಿದರು ಮನೆ ಮಂದಿಯ ಬದುಕು, ಆಚಾರ ವಿಚಾರಗಳನ್ನು ತಿಳಿದು ಅದನ್ನು ಕುಂಚದಲ್ಲಿ ಅರಳಿಸಿದ್ದಾರೆ. ಅರೆಭಾಷೆ ಸಂಸ್ಕೃತಿ ಮತ್ತು ಆಚಾರಗಳು ದಾಖಲೀಕರಣಗೊಳ್ಳಬೇಕು ಎಂಬ ಉದ್ದೇಶದಿಂದ ಅಕಾಡೆಮಿಯ ವತಿಯಿಂದ ಈ ನೂತನ ಪ್ರಯೋಗವನ್ನು ನಡೆಸಲಾಗಿದೆ.
ಶಿಬಿರದ ಸಂಚಾಲಕರಾದ ಹಿರಿಯ ಕಲಾವಿದ ಮೋಹನ್ ಸೋನ ನಿರ್ದೇಶನದಲ್ಲಿ ಚಿತ್ರ ಕಲಾ ಶಿಬಿರ ನಡೆಯಿತು. ಹಿರಿಯ ಕಲಾವಿದರಾದ ಎಂ.ಜಿ.ಕಜೆ, ನಳಿನಿ ಕಜೆ, ಓಬಯ್ಯ ಪುತ್ತೂರು, ಆನಂದ್ ಬೆದ್ರಾಳ, ಚೇತನ್ ಪುತ್ತೂರು, ಪ್ರಜ್ಞಾ ಪುತ್ತೂರು, ಕೆ.ಆರ್.ಮಂಜುನಾಥ್ ಮಡಿಕೇರಿ, ಯುವ ಕಲಾವಿದರಾದ ಪುನಿತ್, ನಿತೀಶ್, ಪಿ.ವಿ.ಸಂತೋಷ್, ದೀಪಕ್.ಕೆ., ದೀಪಕ್ ಎಂ.ಎಸ್., ನಿತಿನ್.ಯು.ಡಿ., ನಯನ್ರಾಜ್, ಉದಯ್ ಆರ್., ಪ್ರತಾಪ್ ಎ.ಎಂ., ಗಣೇಶ್ ಹೆಗ್ಡೆ ಶಿಬಿರದಲ್ಲಿ ಕಲಾವಿದರಾಗಿ ಭಾಗವಹಿಸಿ ಚಿತ್ರಗಳಿಗೆ ಜೀವ ತುಂಬಿದ್ದಾರೆ.ಮುಖ್ಯವಾಗಿ ದೈವಗಳ ಆರಾದನೆ, ಭೂತಾರಾಧನೆ, ಸಾಂಸ್ಕೃತಿಕ ಆಚರಣೆಗಳು, ಜೀವನ ಪದ್ದತಿಗಳು, ಕೃಷಿ ಬದುಕು, ಮದುವೆ ಮತ್ತಿತರ ಕಾರ್ಯಕ್ರಮಗಳು, ಹಬ್ಬ-ಹರಿದಿನಗಳ ಆಚರಣೆ, ಆಚರಣೆಗಳ ಸಂದರ್ಭದ ಕುಣಿತಗಳು, ಹಳೆಯ ಕಾಲದಲ್ಲಿ ಉಪಯೋಗದಲ್ಲಿದ್ದ ವಸ್ತುಗಳು, ದೈವಸ್ಥಾನ, ಐನ್ಮನೆಗಳು ಹೀಗೆ ಜನರ ಬದುಕನ್ನು ಬಲು ಸುಂದರವಾಗಿ ಅರಳಿಸಲಾಗಿದೆ.
ಒಂದು ವಾರಗಳ ಕಾಲ ನಡೆದ ಶಿಬಿರದ ಆರಂಭದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಆಚಾರಗಳ ಬಗ್ಗೆ ಹಿರಿಯರು ಕಲಾವಿದರಿಗೆ ವಿವರಿಸಿದ್ದರು. ಬಳಿಕ ಆಯ್ಕೆ ಮಾಡಲಾದ ಮನೆಗಳಲ್ಲಿ ವಾಸ್ತವ್ಯ ಹೂಡಿದ ಕಲಾವಿದರು ಒಂದೊಂದು ವಿಷಯಗಳನ್ನು ಆರಿಸಿ ಚಿತ್ರಗಳನ್ನು ರಚಿಸಿದ್ದಾರೆ. ಅಡಕೆ ಸುಲಿಯುವುದು, ಮನೆಯ ದೇವರ ಕೋಣೆ, ಅಡುಗೆ ಕೋಣೆ, ಕೃಷಿ ಮಾಡುವುದು, ಹೈನುಗಾರಿಕೆಗೆ ಸಂಬಂಧಪಟ್ಟು ಹಸುಗಳು, ಹಟ್ಟಿ, ಕೋಳಿಗಳು, ವಿಷು ಕಣಿ ಇಟ್ಟಿರುವುದು, ಶಬರಿಮಲೆ ಯಾತ್ರೆ, ಹಳ್ಳಿಯ ವಿವಿಧ ಚಿತ್ರಣಗಳು ಹೀಗೆ ಕಲಾವಿದರು ಜನ ಜೀವನವನ್ನು ಕುಂಚದ ಮೂಲಕ ಅರಳಿಸಿದ್ದಾರೆ.
ಅರೆಭಾಷೆ ಸಂಸ್ಕೃತಿ ಮತ್ತು ಜೀವನ ಕ್ರಮ ದಾಖಲೀಕರಣಗೊಳ್ಳಬೇಕು ಎಂಬ ಉದ್ದೇಶದಿಂದ ಚಿತ್ರ ಕಲಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಚಿತ್ರ ಕಲಾ ಶಿಬಿರದಲ್ಲಿ ಅನಾವರಣಗೊಂಡ ಚಿತ್ರಗಳನ್ನು ಮುಂದಿನ ದಿನಗಳಲ್ಲಿ ಪುಸ್ತಕ ರೂಪದಲ್ಲಿ ದಾಖಲೀಕರಣ ಮಾಡುವ ಉದ್ದೇಶ ಇದೆ ಎನ್ನುತ್ತಾರೆ ಶಿಬಿರದ ಸಂಚಾಲಕರಾದ ಮೋಹನ್ ಸೋನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.