ಬೆಳ್ತಂಗಡಿ : ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಭಾನುವಾರ ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ನಡೆದ 11 ನೇ ವಾರ್ಷಿಕ ಜಾನಪದ ಸಾಂಸ್ಕೃತಿಕ ಉತ್ಸವದಲ್ಲಿ ರಾಜ್ಯದ 42 ಮಂದಿ ಸಾಧಕರಿಗೆ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಉತ್ಸವವನ್ನು ಉದ್ಘಾಟಿಸಿ ಮಾತಾನಾಡಿದ ಡಾ| ಹೆಗ್ಗಡೆಯವರು, ನಮ್ಮಲ್ಲಿ ಅಹಂಕಾರ ಬಂದರೆ ನಮ್ಮ ಸಾಧನೆಯ ಬೆಳವಣಿಗೆ ನಿಂತು ಹೋಗುತ್ತದೆ. ಸಮಾಜ ಸಾಧಕರನ್ನು ಗುರುತಿಸಿದ ಮೇಲೆ ಅವರಲ್ಲಿ ಧನ್ಯತೆ, ಜವಾಬ್ದಾರಿ ಹೆಚ್ಚುತ್ತದೆ ಎಂಬುದನ್ನು ಸ್ವತಃ ಅನುಭವದಲ್ಲಿ ಕಂಡಿದ್ದೇನೆ. ತಮ್ಮಲ್ಲಿನ ವಿದ್ಯೆ, ಜಾಣ್ಮೆಯಿಂದ ವಿವಿಧ ಕ್ಷೇತ್ರಗಳಲ್ಲಿ ಅವರದೇ ಆದ ಛಾಪು ಮೂಡಿಸುವಲ್ಲಿ ಇಂದಿನ ಪ್ರಶಸ್ತಿ ಪುರಸ್ಕೃತರು ಯಶಸ್ವಿಯಾಗಿದ್ದಾರೆ. ಸಮಾಜ ಅವರ ಸಾಧನೆಯನ್ನು ಕೊಂಡಾಡುತ್ತದೆಯೇ ಹೊರತು ಜಾತಿ,ವರ್ಗದ ಹಿನ್ನಲೆಯನ್ನಲ್ಲ. ಪ್ರಶಂಸೆ, ಪ್ರತಿಷ್ಠೆ, ಪ್ರಚಾರಕ್ಕಾಗಿ ಯಾರೂ ಸಾಧನೆ ಮಾಡುವುದಿಲ್ಲ ಎಂದರು.
ಬದುಕಿನಲ್ಲಿ ನಮಗೆಲ್ಲರಿಗೂ ಭಗವಂತ ಒಂದೊಂದು ಅವಕಾಶವನ್ನು ನೀಡಿದ್ದಾನೆ. ಅದನ್ನು ಸಮಷ್ಟಿಯ ಉಪಯೋಗಕ್ಕಾಗಿ ಮಾಡಿಕೊಳ್ಳುವುದು ಸಾಧನೆಯ ಒಂದು ಅಂಶ. ಸಮಾಜ ನಮ್ಮನ್ನು ಗುರುತಿಸಿದ ಮೇಲೆ ಧನ್ಯತೆ, ಜವಾಬ್ದಾರಿ, ಹುಮ್ಮಸ್ಸು ಇನ್ನಷ್ಟು ವೃದ್ಧಿಸುತ್ತದೆ. ಪ್ರಶಸ್ತಿ ಎಂಬುದು ಸಾಧನೆ ಮಾಡಲು ಇನ್ನೂ ಬೇಕಾದಷ್ಟಿದೆ ಎಂಬುದನ್ನು ನೆನಪಿಸುತ್ತದೆ. ಹೊಣೆಗಾರಿಕೆ ಹೆಚ್ಚಿಸಲು ಪಶಸ್ತಿಗಳು ಸಾಕ್ಷಿ ಎಂದರು.
ಇದಕ್ಕೂ ಮೊದಲು ಡಾ| ಹೆಗ್ಗಡೆ ಅವರು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಸಂಘಟಕ ಡಾ| ಎಂ. ಪಿ. ಶ್ರೀನಾಥ್, ಯಕ್ಷಗಾನ ಕಲಾವಿದ, ಸಂಘಟಕ ಅಶೋಕ ಭಟ್ ಉಜಿರೆ, ಗ್ರಾಮೀಣ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಮಂಜುನಾಥ ರೈ ಸೇರಿದಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈಶ್ವರ್ ರಾಯುಡು, ಮಲ್ಲೇಶಪ್ಪ, ಪುರಷೋತ್ತಮ ಶೆಟ್ಟಿ, ವಿ. ನಾಗರಾಜಪ್ಪ, ಪಿಡ್ಡಪ್ಪ ಎಸ್., ಯಂ. ಮಹಾದೇವು, ವೆಂಕಟರಾಮ್, ಕೆ. ಪಚ್ಚಣ್ಣ, ಆರ್. ಕೃಷ್ಣಪ್ಪ, ಭಾಗ್ಯಮ್ಮ, ಕೆ. ಪಿ. ಗೋವಿಂದ, ಜಿ. ರಮೇಶ್, ಶ್ರೀನಿವಾಸ ರೆಡ್ಡಿ; ಕನ್ನಡ ಚಿಂತಕರಾದ ಲಕ್ಷ್ಮಣ ಕುಮಾರ್, ಜಗದೀಶ್, ಗುರುಪ್ರಸಾದ್; ಸಾಹಿತ್ಯ ಕ್ಷೇತ್ರದ ಶಾರದಾ ಶಂಕರ್, ವಿದ್ಯಾ ಕ್ಷೇತ್ರದ ಶಿವಯ್ಯ, ಬಿ.ಎನ್. ರಾಜೀವ್; ನಿರೂಪಣೆ ಮತ್ತು ಗಾಯಕರಾದ ಕೆ. ನಾಗೇಂದ್ರ, ಜೂನಿಯರ್ ಅಂಬರೀಶ್, ಪದ್ಮಾ ಸುದರ್ಶನ್; ಸಣ್ಣ ಕೈಗಾರಿಕೋದ್ಯಮಿ ಜಗದೀಶ್ ಹೆಗ್ಗಡೆ: ಪೌಂಡೇಶನ್ ಆಫ್ ಪಾತಂಜಲ ಯೋಗ ಕೇಂದ್ರ ಸಂಸ್ಥಾಪಕ ನಿರ್ದೇಶಕ ಎಂ. ಎಸ್. ವಿಶ್ವನಾಥ್; ನಾಟಿ ವೈದ್ಯ ಮಹಮ್ಮದ್ ಎನ್. ಇ.; ವೀರಗಾಸೆ ಕಲಾವಿದರಾದ ಎಸ್. ವಿರೂಪಾಕ್ಷಪ್ಪ, ಜಿ. ಇ. ರಾಜಣ್ಣ, ಶ್ವೇತಾ, ಮಲ್ಲೇ ಗೌಡ; ಡೊಳ್ಳು ಕುಣಿತದ ಟೀಕಪ್ಪ, ನಾಗರಾಜು ಎ.ಬಿ.; ನಿರ್ದೇಶಕ ಕುತುಬ್ ದೀನ್; ಪೂಜಾ ಕುಣಿತದ ಕೆ.ಬಿ.ಸ್ವಾಮಿ; ಭರತನಾಟ್ಯದ ಧನ್ಯಶ್ರೀ; ಭರತನಾಟ್ಯ ಅಂತಾರಾಷ್ಟ್ರೀಯ ಸಾಂಸ್ಕೃತಿಕ ನಿರ್ದೆಶಕಿ ಲಕ್ಷ್ಮೀ ಎನ್. ಮೂರ್ತಿ; ಯೋಗಪಟುಗಳಾದ ಬಿ. ಪೂಜಾ, ಜಿ.ಪಿ. ಉಮಾ; ಆರೋಗ್ಯ ಸೇವೆಯ ಚಂದ್ರಿಕಾ; ಮೆಸ್ಕಾಂ ಸೇವೆಯ ನಾಗರಾಜು ಎಲ್ ಅವರುಗಳಿಗೆ ವಿಶ್ವ ಕನ್ನಡ ಕಣ್ಮನಿ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭ ಪರಿಷತ್ ಅಧ್ಯಕ್ಷರನ್ನು ಅವರು ಸಮ್ಮಾನಿಸಿದರು.
ಅಧ್ಯಕ್ಷತೆಯನ್ನು ಪರಿಷತ್ನ ರಾಜ್ಯಾಧ್ಯಕ್ಷ ಅಗಸನೂರು ತಿಮ್ಮಪ್ಪ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಯುವ ನೇತಾರ ಎನ್. ವೇಣುಗೋಪಾಲ್, ಅಂತರಾಷ್ಟ್ರೀಯ ಯೋಗ ತಜ್ಞ ಡಾ| ನಿರಂಜನಮೂರ್ತಿ, ವೀರಗಾಸೆ ಪ್ರಶಸ್ತಿ ಪುರಸ್ಕೃತ ಎಂ.ಆರ್.ಬಸಪ್ಪ ಇದ್ದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಬಿ.ಪಿ.ಸಂಪತ್ಕುಮಾರ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಪರಿಷತ್ ಕಾರ್ಯದರ್ಶಿ ಡಾ|ಯಲ್ಲಪ್ಪ ಕೆ.ಕೆ.ಪುರ ಸ್ವಾಗತಿಸಿ, ಪ್ರಸ್ತಾವಿಸಿದರು. ಪತ್ರಕರ್ತ ಅಚ್ಚು ಮುಂಡಾಜೆ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.