ಬಂಟ್ವಾಳ : ಮಂಗಳೂರು-ಧರ್ಮಸ್ಥಳ ರೂಟಿನಲ್ಲಿ ತಾಸುಗಟ್ಟಲೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಸುಳಿವು ಇಲ್ಲದಿದ್ದುದರಿಂದ ಕಾದು, ಕಾದು ಸುಸ್ತಾದ ಪ್ರಯಾಣಿಕರು ಬಸ್ಸೊಂದನ್ನು ಕೆಲವು ಹೊತ್ತುಗಳ ಕಾಲ ತಡೆಹಿಡಿದು ಹಠಾತ್ ಪ್ರತಿಭಟಿಸಿದ ಘಟನೆ ಗುರುವಾರ ರಾತ್ರಿ ಬಿ.ಸಿರೋಡು ಬಸ್ಸು ನಿಲ್ದಾಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕನಿಷ್ಠ ಸೌಜನ್ಯಕ್ಕಾದರೂ ಸ್ಪಂದಿಸದೆ ಬೇಜಾವಾಬ್ದಾರಿಯುತವಾಗಿ ವರ್ತಿಸಿದ ಇಲ್ಲಿನ ಡಿ.ಸಿ ಪಾಯಿಂಟ್ನ ನಿಯಂತ್ರಣಾಧಿಕಾರಿಯನ್ನು ಆಕ್ರೋಶಿತ ಪ್ರಯಾಣಿಕರು ವಾಚಮಾಗೋಚರವಾಗಿ ಬೈದು ನೇರ ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು.
ಸುದ್ಧಿ ತಿಳಿದು ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಠಾಣೆಯ ಹೆಡ್ಕಾನ್ಸ್ಟೇಬಲೊಬ್ಬರು ಪ್ರತಿಭಟನಾಕಾರರನ್ನು ಬಲವಂತವಾಗಿ ಬದಿಗೆ ಸರಿಸಿ ತಡೆ ಹಿಡಿಯಲ್ಪಟ್ಟ ಧರ್ಮಸ್ಥಳ ರೂಟಿನ ಬಸ್ಸನ್ನು ತೆರಳಲು ಅನುವು ಮಾಡಿ ಕೊಟ್ಟರು. ಇದೇ ಹೆಡ್ಕಾನ್ಸ್ಟೇಬಲ್ ಕೆಎಸ್ ಆರ್ ಟಿ ಸಿ ನಿಯಂತ್ರಣಾಧಿಕಾರಿಯ ಜತೆ ಮಾತುಕತೆ ನಡೆಸಿ ಪ್ರಯಾಣಿಕರಿಗೆ ತೆರಳಲು ಸ್ಥಳೀಯ ಡಿಪೋದಿಂದ ಬಸ್ಸಿನ ವ್ಯವಸ್ಥೆ ಕಲ್ಪಿಸುವ ಬದಲು ಪುಕ್ಕಟೆ ಸಲಹೆ ನೀಡಿ ಬಂದಪುಟ್ಟ.. ಹೋದಪುಟ್ಟನಂತೆ ವರ್ತಿಸಿದ್ದು ಪ್ರಯಾಣಿಕರನ್ನು ಮತ್ತಷ್ಟು ಕೆರಳಿಸಿತು.
ಸುಮಾರು 7-30ರ ಹೊತ್ತಿಗೆ ಮಂಗಳೂರು ಕಡೆಯಿಂದ ಬಂದ ಧರ್ಮಸ್ಥಳ ರೂಟಿನ ಬಸ್ಸಿನಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರು ತುಂಬಿದ್ದರಿಂದ ಇದರಲ್ಲಿ ಸಂಚರಿಸಲು ಸಾದ್ಯವಾಗದೆ ಬಹುತೇಕ ಮಂದಿ ಬಿಸಿರೋಡಿನಲ್ಲೇ ಉಳಿಯಬೇಕಾಯಿತು. ಆದರೆ ನಂತರ ಬರಬೇಕಾದ ಈ ರೂಟಿನ ಮೂರ್ನಾಲ್ಕು ಬಸ್ಸುಗಳು ಬಾರದೆ ಕೈಕೊಟ್ಟಿತು. ಸುಮಾರು 9-30ರ ಹೊತ್ತಿಗೆ ಬಂದ ಧರ್ಮಸ್ಥಳ ಬಸ್ಸಿನಲ್ಲೂ ಪ್ರಯಾಣಿಕರು ತುಂಬಿತುಳುಕಿದ್ದರು. ಇದರಲ್ಲೂ ತೆರಳಲು ಸಾದ್ಯವಾಗದೆ ಉಳಿದಿದ್ದ ಸುಮಾರು ಒಂದು ಬಸ್ಸಿನಷ್ಟು ಪ್ರಯಾಣಿಕರು ಸಂಸ್ಥೆಯ ಅವ್ಯವಸ್ಥೆಗೆ ಛೀಮಾರಿ ಹಾಕಿ ಈ ಬಸ್ಸು ತಡೆದು ಹಠಾತ್ತನೆ ಪ್ರತಿಭಟನೆ ನಡೆಸಿದರು.
ಇಷ್ಟಾದರೂ ಸ್ಥಳೀಯ ನಿಯಂತ್ರಣಾಧಿಕಾರಿ ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿರ್ವಹಿಸದೆ ಪಕ್ಕದ ವಾಣಿಜ್ಯ ಸಂಕೀರ್ಣದ ಅಂಗಡಿ ಮಾಲಕರೊಂದಿಗೆ ಹರಟೆ ಹೊಡೆಯಲು ನಿಂತಿದ್ದು ಪ್ರಯಾಣಿಕರನ್ನು ಇನ್ನಷ್ಟು ರೇಗಿಸಿತು.
ಇದೇ ಮೊದಲಲ್ಲ
ಕೆಎಸ್ ಆರ್ ಟಿ ಸಿಗೆ ಅತೀ ಹೆಚ್ಚು ಆದಾಯ ಬರುವ ಧರ್ಮಸ್ಥಳ ರೂಟಿನಲ್ಲಿ ಚಿನ್ನದ ಮೊಟ್ಟೆ ಪಡೆಯಬಹುದು. ಆದರೆ ಅಧಿಕಾರಿಗಳಿಗೆ ಇದು ಬೇಕಾಗಿಲ್ಲ. ಈ ರೂಟಿನಲ್ಲಿ ಬೆಳಗ್ಗೆ ಹಾಗೂ ಸಂಜೆಯ ಪೀಕ್ ಅವರ್ ನಲ್ಲಿ ಹೆಚ್ಚುವರಿ ಬಸ್ಸು ಓಡಿಸುವಂತೆ ಈ ರೂಟಿನ ಪ್ರಯಾಣಿಕರು ಸಾಕಷ್ಟು ಮನವಿಯನ್ನು ಸಲ್ಲಿಸಿದ್ದರೂ ಅಧಿಕಾರಿಗಳು ಮಾತ್ರ ಜಪ್ಪಯ್ಯ ಅನ್ನಲಿಲ್ಲ. ಬೆಳಿಗ್ಗೆ ಮಂಗಳೂರಿಗೆ ಸಂಜೆ ಧರ್ಮಸ್ಥಳ ರೂಟಿನಲ್ಲಿ ಬೆರಳೆಣಿಕೆಯ ಬಸ್ಸುಗಳು ಮಾತ್ರ ಓಡುತ್ತಿರುವುದರಿಂದ ಈ ರೂಟಿನ ಪ್ರಯಾಣಿಕರು ಸಂಕಷ್ಟಕ್ಕೊಳಗಾಗಿದ್ದಾರೆ.
ಈ ಹಿಂದೆ ಸಿಸಿ ಬಸ್ಸುಗಳು ಓಡಾಡುತ್ತಿದ್ದಾಗ ಕೆಎಸ್ ಆರ್ ಟಿಸಿ ಪೈಪೋಟಿಗೆ ನಿಂತ್ತಂತೆ ಸಂಚರಿಸುತ್ತಿತ್ತು. ಈಗ ಸಿಸಿ ಬಸ್ಸುಗಳು ಈರೂಟಿನಲ್ಲಿ ಓಡುತ್ತಿಲ್ಲ. ಕೆಎಸ್ ಆರ್ ಟಿಸಿಯನ್ನು ನಂಬಿದಾತನಿಗೆ ಬೀದಿಯ ಬದಿಯೇ ಗತಿಯೆಂಬ ಪರಿಸ್ಥಿತಿಯಿದೆ. ಈ ಸಮಸ್ಯೆ ಅಧಿಕಾರಿಗಳಿಗೆ ಗಮನದಲ್ಲಿದ್ದರೂ ಅವರದು ಮಾತ್ರ ಜಾಣ ಮೌನ. ವಾರದ ನಾಲ್ಕೈದು ದಿನಗಳು ಈ ರೂಟಿನಲ್ಲಿ ಬೆಳಿಗ್ಗೆ, ಸಂಜೆ ಬಸ್ಸುಗಳ ಅಸಮರ್ಪಕ ಓಡಾಟದಿಂದ ಪ್ರಯಾಣಿಕರು ತಾಸುಗಟ್ಟಲೆ ಕಾದು ಸುಸ್ತಾಗಿ ಬಳಿಕ ಇನ್ಯಾವುದೋ ವಾಹನಗಳಿಗೆ ಮೊರೆಹೋಗ ಬೇಕಾಗುತ್ತದೆ.
ಈ ಹಿಂದೆಯು ಮೂರ್ನಾಲ್ಕು ಬಾರಿ ಇದೇ ರೀತಿ ಬಸ್ಸ್ ತಡೆದು ಪ್ರತಿಭಟನೆ ನಡೆಸಿದರೂ ಕೆಎಸ್ ಆರ್ ಟಿ ಸಿ ಅಧಿಕಾರಿಗಳು ಈ ರೂಟಿನ ಪ್ರಯಾಣಿಕರ ಸಹನೆಯನ್ನು ಪರೀಕ್ಷಿಸುತ್ತಿದ್ದಾರೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನಾದರೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿದ್ದರೆ ಹೆದ್ದಾರಿಯಲ್ಲಿ ಬಸ್ಸು ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಈ ಮೂಲಕ ಪ್ರಯಾಣಿಕರು ನೀಡಿದ್ದಾರೆ.
ಸಿಬ್ಬಂದಿ ಕೊರತೆ : ಧರ್ಮಸ್ಥಳ ರೂಟಿನ ಬಸ್ಸಿನಲ್ಲಿ ಚಾಲಕ, ನಿರ್ವಾಹಕರ ಕೊರತೆಯನ್ನು ಎದುರಿಸುತ್ತಿದೆ. ಹೊರಜಿಲ್ಲೆಯ ಚಾಲಕ, ನಿರ್ವಾಹಕರೇ ಇಲ್ಲಿ ಕಾರ್ಯನಿರ್ವಹಿಸುವುದರಿಂದ ಇವರು ಒಮ್ಮೆ ರಜೆ ಹಾಕಿ ತೆರಳಿದ್ದರಿಂದ ವಾರಗಳ ಕಾಲ ಇತ್ತ ಸುಳಿಯುತ್ತಿಲ್ಲ. ಪರಿಣಾಮ ಇಲ್ಲಿ ಬಸ್ಸು ಓಡಾಟದ ಸಮಸ್ಯೆ ಉಂಟಾಗುತ್ತಿದೆಯೆಂದು ಕೆಎಸ್ ಆರ್ ಟಿಸಿ ಅಧಿಕಾರಿಗಳ ಸಮರ್ಥನೆಯಾಗಿದೆ.
ಸಿಸಿ ಬಸ್ಸಿಗೆ ಬೇಡಿಕೆ : ಧರ್ಮಸ್ಥಳ ರೂಟಿನಲ್ಲಿ ಕೆಎಸ್ ಆರ್ ಟಿಸಿಯ ಅಸಮರ್ಪಕ ಸೇವೆಯಿಂದ ಬೇಸತ್ತ ಪ್ರಯಾಣಿಕರು ಈ ರೂಟಿನಲ್ಲಿ ಸಿಸಿ ಬಸ್ಸುಗಳ ಓಡಾಟಕ್ಕೆ ಬೇಡಿಕೆ ಇಟ್ಟಿದ್ದಾರೆ.ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ, ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡುವಂತೆ ಈ ರೂಟಿನ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.