ಬಂಟ್ವಾಳ : ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ಬಯಸಿ ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ವತಿಯಿಂದ ಅರಣ್ಯ ಸಚಿವರೇ, ಸಮರ್ಪಕ ಮಾಹಿತಿ ಕೊಡಿ ಎಂದು ಒತ್ತಾಯಿಸಿ ತಾಲೂಕು ಕಛೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ನೇತ್ರಾವತಿ ನದಿ ತಿರುವು ಯೋಜನೆಯನ್ನು ಜಿಲ್ಲೆಯ ಜನತೆ ತೀವ್ರವಾಗಿ ವಿರೋಧಿಸಿದ್ದರೂ, ಸರಕಾರ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ವಿಫಲವಾಗಿದೆ. ಹಲವಾರು ಸಂಘಟನೆಗಳು ಹಲವಾರು ಪ್ರತಿಭಟನೆ ನಡೆಸಿದ್ದರೂ, ಸರಕಾರ ಸ್ಪಂದನೆ ದೊರೆತಿರಲಿಲ್ಲ.
ಸ್ಥಳೀಯ ಶಾಸಕರಾದಿ ಜನಪ್ರತಿನಿಧಿಗಳ ತಮ್ಮ ನಿಲುವನ್ನು ಸ್ಪಷ್ಟ ಪಡಿಸಲು ಈ ಆಂದೋಲನ ರೂಪಿಸಲಾಗಿದೆ ಎಂದು ಬಂಟ್ವಾಳ ತಾಲೂಕು ನ್ಯಾಯಪರ ಸಮಿತಿ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ ತಿಳಿಸಿದ್ದಾರೆ. ಈಗಾಗಲೇ ಉಸ್ತುವಾರಿ ಸಚಿವರು ದ್ವಂದ್ವ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಹೋರಾಟಗಾರರನ್ನು ಹಲವು ಅನುಮಾನಗಳಿಗ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.
11 ಪ್ರಶ್ನೆಗಳೇನು : ಯೋಜನಾ ಪ್ರದೇಶದಲ್ಲಿ 9.55 ಟಿಎಂಸಿ ಲಭ್ಯವಿದ್ದು, ಪೂರ್ವಕ್ಕೆ1.25 ಟಿಎಂಸಿ ಪೂರ್ವಕ್ಕೆ ಸಾಗಿಸಲು ಲಭ್ಯ ಇರುತ್ತದೆ. ಆದರೆ ಎಲ್ಲಿಂದ24 ಟಿಎಂಸಿ ನೀರು ಪೂರೈಸಲಾಗುತ್ತಿದೆ? 600 ಹೆಕ್ಟೇರ್ ಅರಣ್ಯ ಭೂಮಿ ಮಂಜೂರು ಮಾಡಲಾಗಿದೆಯೇ? ಜಿಲ್ಲೆಯ ಜನಜೀವನದ ಮೇಲೆ ಉಂಟಾಗುವ ಪರಿಣಾಮ ಅಧ್ಯಯನ ಮಾಡಲಾಗಿಯೇ? 370 ಎಂಡಬ್ಲ್ಯೂ ವಿದ್ಯುತ್ ಶಕ್ತಿ ಅವಶ್ಯಕತೆ ಇದ್ದು, ಇದರ ಪೂರೈಕೆ ಹೇಗೆ ಮಾಡಲಾಗುತ್ತದೆ? ಆನೆಕಾರಿಡಾಕ್ ಸಂರಕ್ಷಣಾ ಕ್ರಮಗಳೇನು? ಯೋಜನೆಯ ವಿಫಲವಾದರೆ, 91 ಸಾವಿರ ಕೋಟಿ ನಷ್ಟಕ್ಕೆ ಯಾರು ಹೊಣೆ? ಮೀನುಗಾರಿಕೆಯ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲಾಗಿದೆಯೇ? ಎಂಬ 11ಪ್ರಶ್ನೆಗಳನ್ನು ಅರಣ್ಯ ಸಚಿವರಿಗೆ ನ್ಯಾಯಪರ ಸಮಿತಿ ಸಲ್ಲಿಸಿತ್ತು.
ನಮ್ಮ ನದಿ ನೀರನ್ನು ಬಯಲು ಸೀಮೆಗೆ ಕೊಡುವ ಅಧಿಕಾರ ಕೊಟ್ಟವರು ಯಾರು? ಮತದಾರರ ಋಣ ತೀರಿಸಲಿ. ಶಾಸಕರು, ಸಚಿವರು ಇದ್ದರೂ, ನಮಗೇನು ಪ್ರಯೋಜನ? ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಾಗಿದೆ ನಮ್ಮ ಜನರ ಪರಿಸ್ಥಿತಿ ಎಂದು ಸಾಮಾಜಿಕ ಮುಖಂಡ ಹಾರೂನ್ ರಶೀದ್ ಅವರು ಪ್ರತಿಕ್ರಿಯಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆಯಿಂದಾಗಿ 2 ಸಲ ಈ ಕಾರ್ಯಕ್ರಮ ರದ್ದುಗೊಳಿಸಲಾಗಿದ್ದು, ಇದೀಗ ಮತ್ತೆ ಚಾಲನೆಗೊಳಿಸಲಾಗಿದೆ. ಸಾರ್ವತ್ರಿಕವಾಗಿ ಗಮನ ಸೆಳೆಯುವ ಈ ಆಂದೋಲನ ಎಲ್ಲೆಡೆಯೂ ನಡೆದು, ಸರಕಾರದ ಗಮನ ಸೆಳೆಯಬೇಕಾಗಿದೆ ಎಂದು ಹೋರಾಟಗಾರ ಪ್ರಭಾಕರ ದೈವಗುಡ್ಡೆ ಅವರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿಯ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ, ಬಿ.ಎಂ.ಪ್ರಭಾಕರ ದೈವಗುಡ್ಡೆ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಸುವರ್ಣ ಕಾಯರ್ಮಾರ್, ಕೋಶಾಧಿಕಾರಿ ಅಯ್ಯೂಬ್ ಜಿ.ಕೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ರಜಾಕ್ ಗುಂಪಕಲ್ಲು, ನಾರಾಯಣ ನಾಯ್ಕ್ ಮಾವಿನಕಟ್ಟೆ ಧರಣಿಯಲ್ಲಿ ಪಾಲ್ಗೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.