
ಭಾರತದ ಗುಪ್ತಚರ ಸಂಸ್ಥೆಯಾದ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ (ಆರ್&ಎಡಬ್ಲ್ಯೂ) ಸ್ಥಾಪನೆಯಾಗುವ 13 ವರ್ಷಗಳ ಮೊದಲೇ, ಅದರ ಸಂಸ್ಥಾಪಕ ಮತ್ತು ಮಹಾನ್ ಗೂಢಚಾರಿ ಮಾಸ್ಟರ್ ಆರ್.ಎನ್. ಕಾವೊ ಅವರು ‘ಕಾಶ್ಮೀರ್ ಪ್ರಿನ್ಸೆಸ್’ ಘಟನೆಯ ತನಿಖೆಯ ಮೂಲಕ ಒಂದು ಅದ್ಭುತ ಹತ್ಯೆ ಸಂಚನ್ನು ಬಯಲಿಗೆಳೆದು ಜಗತ್ತನ್ನು ನಿಬ್ಬೆರಗಾಗಿಸಿದರು. ಜನವರಿ 20 ರಂದು ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಅವರ ಮಹಾನ್ ಕಾರ್ಯವನ್ನು ಪರಿಚಯಿಸುವ ಒಂದು ಪುಟ್ಟ ಕಾರ್ಯವನ್ನು ನಾವು ಮಾಡಿದ್ದೇವೆ. ಕೇವಲ 37 ವರ್ಷದ ಯುವ ಭಾರತೀಯ ಗುಪ್ತಚರ ಅಧಿಕಾರಿಯೊಬ್ಬ ಹೇಗೆ ಏರ್ ಇಂಡಿಯಾ ವಿಮಾನವನ್ನು ಧ್ವಂಸಗೊಳಿಸಲು ಬಯಸಿದ್ದ ಅತ್ಯಂತ ಸಂಕೀರ್ಣ ವಿಧ್ವಂಸಕ ಕೃತ್ಯವನ್ನು ಭೇದಿಸಿದರು ಎಂಬುದನ್ನು ನಾವು ವಿವರಿಸುತ್ತಿದ್ದೇವೆ. ಈ ಕಥೆಯು ಭೌಗೋಳಿಕ ರಾಜಕೀಯದ ಆಳವನ್ನು ತೆರೆದಿಡುತ್ತದೆ ಮತ್ತು ಕಾವೊ ಅವರ ಬುದ್ಧಿಮತ್ತೆ ಎಂತಹುದು ಎಂಬುದನ್ನು ನಮಗೆ ತೋರಿಸಿಕೊಡುತ್ತದೆ.
1955 ರ ಏಪ್ರಿಲ್ 18 ರಿಂದ 24 ರವರೆಗೆ : ʼಕಾಶ್ಮೀರ್ ಪ್ರಿನ್ಸೆಸ್ʼ ಘಟನೆಯ ಹಿನ್ನೆಲೆ
ಇಂಡೋನೇಷ್ಯಾದ ಬಂಡಂಗ್ನಲ್ಲಿ ನಡೆಯಲಿದ್ದ ಆಫ್ರೋ-ಏಷ್ಯನ್ ಸಮ್ಮೇಳನಕ್ಕಾಗಿ ಏಷ್ಯಾ ಖಂಡವು ಭಾರೀ ಉತ್ಸಾಹದಲ್ಲಿತ್ತು. ಈ ಸಮ್ಮೇಳನಕ್ಕೆ ತನ್ನ ಪ್ರತಿನಿಧಿಗಳನ್ನು ಕರೆದೊಯ್ಯಲು ಚೀನಾ ಏರ್ ಇಂಡಿಯಾ ಫ್ಲೈಟ್ 300 ಅನ್ನು ಚಾರ್ಟರ್ ಮಾಡಿತ್ತು, ಇದನ್ನು ‘ಕಾಶ್ಮೀರ್ ಪ್ರಿನ್ಸೆಸ್’ ಎಂದೇ ಕರೆಯಲಾಗಿತ್ತು. ಚೀನೀ ಪ್ರಧಾನಿ ಝೌ ಎನ್ಲೈ ಸೇರಿದಂತೆ ಪ್ರತಿನಿಧಿಗಳು ವಿಮಾನ ಹತ್ತಿದ್ದರೂ, ಕೊನೆಯ ಕ್ಷಣದಲ್ಲಿ ಝೌ ಅವರು ತಮ್ಮ ಯೋಜನೆಗಳನ್ನು ಬದಲಾಯಿಸಿ ವಿಮಾನವನ್ನು ಹತ್ತಲಿಲ್ಲ. ಕೆಲವೊಂದು ವರದಿಗಳ ಪ್ರಕಾರ, ಝೌಗೆ ಮಹಾನ್ ಸಂಚೊಂದರ ಬಗ್ಗೆ ಮೊದಲೇ ಮಾಹಿತಿ ಇತ್ತು, ಹೀಗಾಗಿಯೇ ಅವರು ತಮ್ಮ ಪ್ರಯಾಣ ಯೋಜನೆಯನ್ನು ರಹಸ್ಯವಾಗಿ ಮಾರ್ಪಡಿಸಿದರು.
ಏಪ್ರಿಲ್ 11, 1955ರಂದು ಬ್ರಿಟಿಷ್ ಆಕ್ರಮಿತ ಹಾಂಗ್ ಕಾಂಗ್ನಿಂದ ಹಾರಾಟ ನಡೆಸಿದ ಐದು ಗಂಟೆಗಳ ನಂತರ, ವಿಮಾನದ ಸ್ಟಾರ್ಬೋರ್ಡ್ ಬದಿಯಲ್ಲಿ ಸ್ಫೋಟ ಸಂಭವಿಸಿ ಕ್ಯಾಬಿನ್ ಹೊಗೆಯಿಂದ ತುಂಬಿತು ಮತ್ತು ಎಂಜಿನ್ ಬೆಂಕಿಗೆ ಆಹುತಿಯಾಯಿತು. ಏರ್ ಇಂಡಿಯಾದ ಅತ್ಯುತ್ತಮ ಪೈಲಟ್ಗಳಲ್ಲಿ ಒಬ್ಬರಾದ ಕ್ಯಾಪ್ಟನ್ ಡಿ.ಕೆ. ಜತಾರ್ ಅವರು ದಕ್ಷಿಣ ಚೀನಾ ಸಮುದ್ರದ ಮೇಲೆ ತುರ್ತು ಲ್ಯಾಂಡಿಂಗ್ ಪ್ರಯತ್ನಿಸಿದರೂ, ವಿಮಾನ ಬೇರ್ಪಟ್ಟು ಹಾರಿ ಹೋಯಿತು. ಕೇವಲ ಮೂವರು ಸಿಬ್ಬಂದಿ ಮಾತ್ರ ಬದುಕುಳಿದರು – ಫ್ಲೈಟ್ ನ್ಯಾವಿಗೇಟರ್ ಜೆ.ಸಿ. ಪಾಠಕ್, ಮೆಕ್ಯಾನಿಕಲ್ ಎಂಜಿನಿಯರ್ ಅನಂತ್ ಕಾರ್ನಿಕ್ ಮತ್ತು ಸಹ-ಪೈಲಟ್ ಎಂ.ಸಿ. ದೀಕ್ಷಿತ್ ಬದುಕುಳಿದರು. ಈ ದುರಂತದ ನಂತರ ಚೀನಾ ತೈವಾನ್ನ ಅಧ್ಯಕ್ಷ ಚಿಯಾಂಗ್ ಕೈ-ಶೇಕ್ ಮತ್ತು ಅವರ ಕುವೊಮಿಂಟಾಂಗ್ (ಕೆಎಂಟಿ) ಪಕ್ಷದ ವಿರುದ್ಧ ಆರೋಪಗಳನ್ನು ಮಾಡಲಾರಂಭಿಸಿತು. ಘಟನೆಗೆ ಅವರೇ ಕಾರಣ ಎಂದು ಜಗತ್ತಿನ ಮುಂದೆ ಹೇಳಲಾರಂಭಿಸಿತು. ಈ ಘಟನೆ ಚೀನಾ ಅಂತರ್ಯುದ್ಧದಲ್ಲಿ ಸೋತ ನಂತರ ತೈವಾನ್ಗೆ ದೊಡ್ಡ ಹಿನ್ನಡೆಯೇ ಆಗಿತ್ತು. ಹಾಂಗ್ ಕಾಂಗ್ನ ಭದ್ರತಾ ಲೋಪಕ್ಕಾಗಿ ಬ್ರಿಟನ್ ಅನ್ನು ಸಹ ಗುರಿಯಾಗಿಸಲಾಯಿತು. ಭಾರತೀಯ ವಿಮಾನವಾಗಿದ್ದರಿಂದ, ಚೀನೀ ಮಾಧ್ಯಮಗಳಲ್ಲಿ ಭಾರತದ ವಿರುದ್ಧ ಸೂಕ್ಷ್ಮ ಸುಳಿವುಗಳು ಹರಡಿದವು.
ಈ ಸಂಕೀರ್ಣ ಭೌಗೋಳಿಕ ರಾಜಕೀಯದ ಗೊಂದಲದ ಮಧ್ಯೆ ಪ್ರಕರಣದ ತನಿಖೆಗಾಗಿ ಆರ್.ಎನ್. ಕಾವೊ ಅವರು ಪ್ರವೇಶಿಸಿದರು.ಆ ಸಮಯದಲ್ಲಿ ಕಾವೊ ಅವರು ಗುಪ್ತಚರ ಬ್ಯೂರೋ (ಐಬಿ)ಯ ಭಾಗವಾಗಿದ್ದರು, ಪ್ರಧಾನಿ ಜವಾಹರಲಾಲ್ ನೆಹರು ಸೇರಿದಂತೆ ವಿಐಪಿಗಳ ಭದ್ರತೆಗೆ ಜವಾಬ್ದಾರರಾಗಿದ್ದರು. ಅವರು ಅದಾಗಲೇ ಹಲವು ಸೂಕ್ಷ್ಮ ಭದ್ರತಾ ವಿಷಯಗಳನ್ನು ನಿರ್ವಹಿಸಿದ್ದರಿಂದ, ಈ ತನಿಖೆಯನ್ನು ನಡೆಸಲು ಸೂಕ್ತ ವ್ಯಕ್ತಿಯಾಗಿದ್ದರು.
ಭಾರತಕ್ಕೆ ಹೆಚ್ಚಿನ ಅಪಾಯವಿದ್ದುದರಿಂದ, ನೆಹರು ಅವರು ಕಾವೊಗೆ ತನಿಖೆಯ ಜವಾಬ್ದಾರಿ ನೀಡಿದರು. ಬಂಡಂಗ್ ಸಮ್ಮೇಳನದಲ್ಲಿ ಝೌ ಎನ್ಲೈ ಅವರೊಂದಿಗೆ ಸಭೆ ಏರ್ಪಡಿಸಿ, ಕಾವೊ ಅವರನ್ನು ಸಹ ಹಾಜರಿರುವಂತೆ ಮಾಡಿದರು. ಕಾವೊ ಅವರು ಝೌ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು.
ಕಾವೊ ಅವರ ತನಿಖೆಯ ಪಯಣ
ಕಾಶ್ಮೀರ್ ಪ್ರಿನ್ಸೆಸ್ನ ವಿಧ್ವಂಸಕ ಕೃತ್ಯದ ತನಿಖೆಯನ್ನು ಪ್ರಾರಂಭಿಸಿದ ಕಾವೊ ಅವರು ಚೀನಾ, ಹಾಂಗ್ ಕಾಂಗ್, ಭಾರತ, ಇಂಡೋನೇಷ್ಯಾ ಮತ್ತು ಅಮೆರಿಕವನ್ನು ಒಳಗೊಂಡ ಮೊದಲ ಪ್ರಮುಖ ಅಂತಾರಾಷ್ಟ್ರೀಯ ತನಿಖೆಯ ನೇತೃತ್ವದ ವಹಿಸಿದರು. ತನಿಖೆಯ ಸಮಯದಲ್ಲಿ ಅವರು ಚೀನೀ ಪ್ರಧಾನಿಯೊಂದಿಗೆ ಹಲವು ಸಭೆಗಳನ್ನು ನಡೆಸಿದರು. ವಿದೇಶಿ ಭೂಮಿಯಲ್ಲಿ ಏಕಾಂಗಿಯಾಗಿದ್ದರೂ ಕೂಡ ಕಾವೊ ಅವರು ಅಸಾಧಾರಣ ತಾಳ್ಮೆ, ತಟಸ್ಥತೆ ಮತ್ತು ನಿಖರತೆಯೊಂದಿಗೆ ಕೆಲಸ ಮಾಡಿದರು. ಅವರು ಬದುಕುಳಿದ ಸಹ-ಪೈಲಟ್ ದೀಕ್ಷಿತ್, ಎಂಜಿನಿಯರ್ ಕಾರ್ನಿಕ್ ಮತ್ತು ನ್ಯಾವಿಗೇಟರ್ ಪಾಠಕ್ ಅವರಿಂದ ಸಾಕ್ಷ್ಯಗಳನ್ನು, ವಿವರಗಳನ್ನು ಪಡೆದರು. ಸ್ಫೋಟದ ಮಾದರಿ, ಸ್ಥಳ ಮತ್ತು ಬೆಂಕಿಯ ಹರಡುವಿಕೆಯನ್ನು ಪುನರ್ನಿರ್ಮಿಸಿದರು. ಸಾಂಸ್ಕೃತಿಕ ಅಡೆತಡೆಗಳು, ರಾಜತಾಂತ್ರಿಕ ಉದ್ವಿಗ್ನತೆಗಳು ಮತ್ತು ಭಾಷಾ ತೊಡಕುಗಳ ಹೊರತಾಗಿಯೂ ಅವರ ತನಿಖೆ ಶರವೇಗದಲ್ಲಿ ಮುಂದುವರಿಯಿತು.
ಮಾಸ್ಟರ್ ಮೈಂಡ್ನ ಬಹಿರಂಗ
ದುರಂತದ ಆರು ತಿಂಗಳ ನಂತರ, ಸೆಪ್ಟೆಂಬರ್ 1955ರಲ್ಲಿ, ಕಾವೊ ಅವರ ಕಠಿಣ ಪರಿಶ್ರಮ ಫಲ ನೀಡಿತು. ಸಂಚಿನ ಮಾದರಿ ಸ್ಪಷ್ಟವಾಗಿ ಹೊರಹೊಮ್ಮಿತು, ಇದು ಭಾರತದ ಮೇಲಿನ ಸಂಶವನ್ನು ದೂರ ಮಾಡಿ ಎಲ್ಲರ ಗಮನ ಹಾಂಗ್ ಕಾಂಗ್ ಮೇಲೆ ಬೀಳುವಂತೆ ಮಾಡಿತು. ಪ್ರಾಥಮಿಕ ಸಂಶೋಧನೆಗಳೊಂದಿಗೆ, ಕಾವೊ ಅವರು ಝೌ ಎನ್ಲೈಗೆ ಸಂದೇಶ ಕಳುಹಿಸಿದರು, ಅವರು ಅವರನ್ನು ಬೀಜಿಂಗ್ಗೆ ಕರೆಸಿ ಸಭೆ ನಡೆಸಿದರು. ಈ ಸಭೆಯಲ್ಲಿ ಝೌ ಅವರು ಬದುಕುಳಿದವರ ಮಾಹಿತಿಯನ್ನು ಕೇಳಿದರು. ಕಾವೊ ಅವರು ಬಾಂಬ್ ವಿವರಗಳು, ಸ್ಥಳ ಮತ್ತು ಎಂಜಿನ್ ಪರಿಣಾಮಗಳನ್ನು ಅತ್ಯಂತ ಸ್ಪಷ್ಟವಾಗಿ ಸಾಕ್ಷ್ಯಗಳೊಂದಿಗೆ ವಿವರಿಸಿದರು. ರೇಖಾಚಿತ್ರಗಳ ಮೂಲಕ ಘಟನೆಯ ಅನುಕ್ರಮವನ್ನು ಬಯಲು ಮಾಡಿದರು.
ಹಾಂಗ್ ಕಾಂಗ್ ವಿಮಾನ ಎಂಜಿನಿಯರಿಂಗ್ ಕಂಪನಿಯ ನೆಲದ ಸಿಬ್ಬಂದಿಯಾಗಿದ್ದ ತೈವಾನೀಸ್ ಪ್ರಜೆ ಚೌ ಚು ವಿಮಾನವನ್ನು ಪ್ರವೇಶಿಸಿ ಟೈಮ್ ಬಾಂಬ್ ಇರಿಸಿದ್ದ ಎಂಬ ಸ್ಪೋಟಕ ಮಾಹಿತಿಯನ್ನು ಕಾವೋ ಬಹಿರಂಗಪಡಿಸಿದರು. ಕಾವೊ ಈ ಕೃತ್ಯವನ್ನು ಹೇಗೆ ನಡೆಸಿದ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದರು. ತೈವಾನೀಸ್ ಗೂಢಚಾರಿ ವು ಯಿ-ಚಿನ್ ಅವರು 6,00,000 ಹಾಂಗ್ ಕಾಂಗ್ ಡಾಲರ್ ಬಹುಮಾನ ಭರವಸೆಯನ್ನು ಆತನಿಗೆ ನೀಡಿದ್ದರು ಮತ್ತು ಕೃತ್ಯದ ಬಳಿಕ ತೈವಾನ್ಗೆ ಪರಾರಿಯಾಗುವಂತೆ ಸೂಚಿಸಿದ್ದರು. ಆದರೆ ಚೌ ಚು ಕೇವಲ ಕೈಗೊಂಬೆ. ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದವನು ಚಿಯಾಂಗ್ ಕೈ-ಶೇಕ್. ಚಿಯಾಂಗ್ ಬಂಡಂಗ್ ಸಮ್ಮೇಳನಕ್ಕೆ ಮುಂಚೆ ಝೌ ಅವರನ್ನು ಹತ್ಯೆ ಮಾಡಲು ಆತ ಯೋಜಿಸಿದ್ದ. ಝೌ ಅವರ ವೇಳಾಪಟ್ಟಿ ಸಾರ್ವಜನಿಕವಾದಾಗ, ಚಿಯಾಂಗ್ನ ಏಜೆಂಟರು ಈ ಅವಕಾಶವನ್ನು ಬಳಸಿಕೊಂಡು ವಿಮಾನವನ್ನು ಸ್ಪೋಟಿಸಲು ಯೋಜನೆ ರೂಪಿಸಿದ್ದರು.
ತನಿಖೆಯ ಪರಿಣಾಮಗಳು ಮತ್ತು ಕಾವೊ ಅವರ ಸಮಗ್ರ ತನಿಖೆ ಚೀನೀ ಮಾಧ್ಯಮಗಳಲ್ಲಿ ಭಾರತದ ವಿರುದ್ಧದ ಅನುಮಾನಗಳನ್ನು ನಿವಾರಿಸಿತು. ಭಾರತದ ನೆಲ, ಸಿಬ್ಬಂದಿ ಅಥವಾ ಏಜೆನ್ಸಿಗಳು ಈ ಸಂಚಿನಲ್ಲಿ ಯಾವುದೇ ಪಾತ್ರ ಹೊಂದಿಲ್ಲ ಎಂದು ಸಾಬೀತಾಯಿತು.
ಬಾಂಬ್ ಅಮೆರಿಕನ್ ನಿರ್ಮಿತ MK-7 ಡಿಟೋನೇಟರ್ ಹೊಂದಿತ್ತು ಮತ್ತು ಹಾಂಗ್ ಕಾಂಗ್ನಲ್ಲಿ ಇದನ್ನು ವಿಮಾನದಲ್ಲಿ ಇರಿಸಲಾಗಿತ್ತು ಎಂಬ ಅಂಶವನ್ನು ಇಂಡೋನೇಷ್ಯಾ ತನಿಖೆಯು ಕೂಡ ದೃಢಪಡಿಸಿತು.
ಈ ಪ್ರಕರಣ ಕಾವೊ ಅವರ ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡಿತು, ಅವರು ವಿದೇಶಿ ರಾಷ್ಟ್ರಗಳಲ್ಲಿ ಗೌರವ ಗಳಿಸಿದರು ಮತ್ತು ಅಂತಿಮವಾಗಿ ಸೆಪ್ಟೆಂಬರ್ 21, 1968ರಂದು ಆರ್&ಎಡಬ್ಲ್ಯೂ ಸ್ಥಾಪನೆಗೆ ಕಾರಣವಾದರು. ಅದರ ಮೊದಲ ಮುಖ್ಯಸ್ಥರಾದರು.
ಕಾವೋ ಅವರ ಯಶೋಗಾಥೆ ಗೂಢಚರ್ಯೆಯ ಜಗತ್ತಿನಲ್ಲಿ ಬುದ್ಧಿಮತ್ತೆ ಮತ್ತು ಧೈರ್ಯದ ಸಂಕೇತವಾಗಿ ನಿಲ್ಲುತ್ತದೆ, ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಕಾವೊ ಅವರ ಅಮರ ಕೊಡುಗೆಯನ್ನು ನೆನಪಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


