ಸುಳ್ಯ: ಸುಳ್ಯದ ಹಳೆಗೇಟಿನ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆಯುವ 15ನೇ ವರ್ಷದ ವೇದ, ಯೋಗ ಮತ್ತು ಕಲಾ ಶಿಬಿರವು ಎ. 20ರಿಂದ ಮೇ 25ರ ತನಕ ನಡೆಯಲಿದೆ.
ಬೇರೆ ಬೇರೆ ರಾಜ್ಯದ 10ರಿಂದ 16ವರ್ಷದ ಒಳಗಿನ 100 ಜನ ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಶಿಬಿರದ ಮೇಲ್ವಿಚಾರಕರಾದ ಎಂ.ಎಸ್.ನಾಗರಾಜ್ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರವೇಶ ಪರೀಕ್ಷೆ ನಡೆಸಿ ನೂರು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿ ಋಗ್ವೇದ ಮತ್ತು ಶ್ರೀಕೃಷ್ಣ ಯಜುರ್ವೇದಗಳನ್ನು ಶಿಬಿರಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ ಎಂದು ಅವರು ವಿವರಿಸಿದರು.
ವಾಸ್ತು ತಜ್ಞರಾದ ಗುರೂಜಿ ಉಮೇಶ ಆಚಾರ್ಯ ಮತ್ತು ಆಶಾ ಉಮೇಶ್ ಆಚಾರ್ಯ ದಂಪತಿಗಳು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರು ಚೆನ್ನೇನಹಳ್ಳಿಯ ವೇದ ವಿಜ್ಞಾನ ಶೋಧ ಸಂಸ್ಥಾನಂನ ಗೌರವ ಪ್ರಾಧ್ಯಾಪಕರಾದ ಡಾ.ಜಿ.ಎನ್. ಭಟ್ ದಿಕ್ಸೂಚಿ ಉಪನ್ಯಾಸ ಮಾಡುವರು. ಮುಖ್ಯ ಅತಿಥಿಗಳಾಗಿ ಸುಳ್ಯದ ಅಯ್ಯಶಿಲ್ಪದ ಪತಂಜಲಿ ಭಾರದ್ವಾಜ್ ಭಾಗವಹಿಸಲಿದ್ದಾರೆ. ಇಂಟಿಜರ್ ಸಿಸ್ಟಂ ಬೆಂಗಳೂರು ಇದರ ಆಡಳಿತ ಪಾಲುದಾರ ಉದಯಚಂದ್ರ ಕೆ. ಅಧ್ಯಕ್ಷತೆ ವಹಿಸುವರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್, ಖಜಾಂಜಿ ಕಿರಣ ಕುಮಾರ್, ಶ್ರೀಕೃಷ್ಣ ಉಪಾಧ್ಯಾಯ, ಹಿರಿಯ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷ ಶ್ರೀ ಬಲರಾಮ ಭಟ್ ಕೆ.ಉಪಸ್ಥಿತರಿದ್ದರು.
ಸಾಂಸ್ಕೃತಿಕ ಮೌಲ್ಯಗಳಿಗೆ ವೇದಗಳೇ ಭೂಮಿಕೆ:
ಇಂದಿನ ಮಕ್ಕಳಿಗೆ ನಮ್ಮ ಮಣ್ಣಿನ ಅಂತಃಸತ್ವವನ್ನು ವೇದ, ಯೋಗ ಹಾಗೂ ಕಲೆಯ ಮೂಲಕ ತಿಳಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ವೇದ, ಯೋಗ-ಕಲಾ ಸಂಗಮದ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಹೇಳಿದರು. ಭಾರತದ ಸಾಂಸ್ಕೃತಿಕ ಮೌಲ್ಯಗಳಿಗೆ ವೇದಗಳೇ ಪ್ರಧಾನ ಭೂಮಿಕೆ. ವೇದಾಂತರ್ಗತವಾದ ಜೀವನದ ಆದರ್ಶವನ್ನು ಜನಮಾನಸಕ್ಕೆ ಸಮರ್ಥವಾಗಿ ತಲುಪಿಸಲು ಕಲೆಗಳೇ ಮಾಧ್ಯಮ. ವೇದಗಳ ಒಳನೋಟದ ಆನಂದಕ್ಕಾಗಿ, ಅಧ್ಯಯನದ ಏಕಾಗ್ರತೆಗಾಗಿ ಮನಸ್ಸನ್ನು ಬೆಸೆಯುವ ಶರೀರ ವಿಜ್ಞಾನವೇ ಯೋಗ.
ಆದುದರಿಂದ ಮಕ್ಕಳ ಬೇಸಿಗೆ ರಜೆಯ 35 ದಿನಗಳಲ್ಲಿ ರಾಜ್ಯದ ಪ್ರಸಿದ್ಧವಾದ ವಿದ್ವಾಂಸರ ನಿರ್ದೇಶನದಲ್ಲಿ ನಿರಂತರ ನಡೆಯುವ ವೇದಾಧ್ಯಯನ, ಯೋಗಭ್ಯಾಸದೊಂದಿಗೆ ರಾಜ್ಯದ ಪ್ರಸಿದ್ಧ ಕಲಾ ತಜ್ಞರಿಂದ ಪೇಪರ್ ಕ್ರಾಫ್ಟ್, ಗ್ರೀಟಿಂಗ್ ತಯಾರಿ, ಜಾದೂ, ಮಿಮಿಕ್ರಿ, ಅಭಿನಯ, ಯಕ್ಷಗಾನ, ನಾಟಕ, ಜಾನಪದ ನೃತ್ಯಗಳು, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳು, ಕ್ರೀಡೋತ್ಸವ, ಪ್ರತಿಭೋಜ್ವಲನ ಮುಂತಾದ ಚಟುವಟಿಕೆಗಳ ಮೂಲಕ ಮಕ್ಕಳ ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಈ ಬೇಸಿಗೆ ಶಿಬಿರ ಕಾರಣವಾಗಲಿದೆ ಎಂದು ನಾಗರಾಜ ಭಟ್ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.