ಕಾಸರಗೋಡು: ಪರಂಪರಾಗತ ಭಾರತೀಯ ಯೋಗ, ಆಯುರ್ವೇದ, ಹೋಮಿಯೋಪತಿಗಳನ್ನು ಅಲೋಪತಿಯ ಜೊತೆ ಸಂಯೋಜಿಸಿದ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಸರಳಗೊಳಿಸಬೇಕಾದ ಕಾಲ ಸನ್ನಿಹಿತವಾಗಿದೆ. ಜಗತ್ತಿನಾದ್ಯಂತ ಇರುವ ಲಿಂಫೇಟಿಕ್ ಫೈಲೇರಿಯಾಸಿಸ್ ಮತ್ತು ಇತರ ಚರ್ಮರೋಗ ಪೀಡಿತರ ಸಮಸ್ಯೆಯನ್ನು ಪರಿಹರಿಸಲು ಈ ಪ್ರಯತ್ನ ಅನಿವಾರ್ಯ. ಚಿಕಿತ್ಸೆಯಲ್ಲಿ ಆಯುರ್ವೇದ ಕಷಾಯಗಳ ಉಪಯೋಗ, ಯೋಗಾಸನಗಳ ಕಡೆಗೆ ಇನ್ನಷ್ಟು ಗಮನಹರಿಸುವ ಪ್ರಯತ್ನಗಳೂ ಆಗಬೇಕಾಗಿದೆ. ಹಾಗೆಯೇ ರೋಗಿಗಳು ತಮ್ಮ ಮನೆಗಳಲ್ಲಿ ಗೃಹೋಪಚಾರವನ್ನು ಮುಂದುವರಿಸುವುದೂ ಅಷ್ಟೇ ಅಗತ್ಯ ಎಂದು ಇಂಗ್ಲೆಂಡ್ನ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಡರ್ಮಟೋಲಜಿ ವಿಭಾಗದ ಗೌರವ ಪ್ರಾಚಾರ್ಯ ಡಾ. ಟೆರೆನ್ಸ್ ಜೆ. ರಯಾನ್ ಅಭಿಪ್ರಾಯಪಟ್ಟರು.
ಅವರು ಆಯುರ್ವೇದ, ಅಲೋಪತಿ, ಹೋಮಿಯೋಪತಿ, ಯೋಗಾಸನಗಳ ಗುಣಾಂಶಗಳನ್ನು ಅಳವಡಿಸಿ ರೂಪಿಸಲಾದ ‘ಸಂಯೋಜಿತ ಚಿಕಿತ್ಸೆ’ಯ ಮೂಲಕ ಔಷಧಿ ಇಲ್ಲದ ಖಾಯಿಲೆ ಎಂದು ಪರಿಗಣಿಸಲ್ಪಡುತ್ತಿದ್ದ ಲಿಂಫೇಟಿಕ್ ಫೈಲೇರಿಯಾಸಿಸ್ (ಆನೆಕಾಲು) ರೋಗದ ಚಿಕಿತ್ಸೆಯಲ್ಲಿ ಅನನ್ಯ ಸಾಧನೆ ಮಾಡಿರುವ ಇನ್ಸ್ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿ (ಐಎಡಿ)ಯು ಕಾಸರಗೋಡಿಗೆ ಸನಿಹದ ಉಳಿಯತ್ತಡ್ಕದ ಕೇಂದ್ರದಲ್ಲಿ ಆಯೋಜಿಸಿರುವ ಏಳನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಎ. 15 ರಂದು ವಿಶೇಷ ಉಪನ್ಯಾಸವನ್ನು ನೀಡುತ್ತಾ ಮಾತನಾಡುತ್ತಿದ್ದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಆಫ್ರಿಕಾದ ಕೇಪ್ಟೌನ್ ವಿಶ್ವವಿದ್ಯಾನಿಲಯದ ಡರ್ಮಟೋಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ| ಗೈಲ್ ಟಾಡ್, ಸಾಮೂಹಿಕ ಚರ್ಮರೋಗ ಚಿಕಿತ್ಸೆಯಲ್ಲಿ ತಜ್ಞ ವೈದ್ಯರ ಪಾತ್ರದ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಮೇರಿಕಾದ ‘ಪ್ರೆಸಿಡೆನ್ಶಿಯಲ್ ಕಮಿಶನ್ ಫೋರ್ ದ ಸ್ಟಡಿ ಓಫ್ ಬಯೋ ಎಥಿಕಲ್ ಇಶ್ಯೂಸ್ ಸಂಸ್ಥೆಯ ಸದಸ್ಯೆ ಡಾ. ನಂದಿನಿ ಕೆ.ಕುಮಾರ್ ಅವರು ಸಾಮಾಜಿಕ ಆರೋಗ್ಯ ಮತ್ತು ಸಂಯೋಜಿತ ಚಿಕಿತ್ಸೆಯ ಅಧ್ಯಯನದಲ್ಲಿ ಒಳಗೊಂಡ ಸಾಮಾಜಿಕ ನೀತಿಯ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ಭಾರತದ ಅಂತಃಸತ್ವವನ್ನು ಬಿಂಬಿಸುವ ಯೋಗಾಸನ ಪದ್ಧತಿಯು ಮಾನವನ ಸುಮಧುರ ಬದುಕಿಗೆ ಉತ್ತಮ ತರಬೇತಿಯನ್ನು ನೀಡುತ್ತದೆ. ಭಾವನೆ ಮತ್ತು ಬುದ್ಧಿವಂತಿಕೆಗಳನ್ನು ಸಮತೋಲನಗೊಳಿಸಿ ಸಮೃದ್ಧ ಬದುಕನ್ನು ಯೋಗವು ರೂಪಿಸುತ್ತದೆ. ಸಮಾಜ ಮತ್ತು ಮಾನವನ ನಡುವಿನ ಉತ್ತಮ ಸಂಬಂಧಕ್ಕೂ ಯೋಗ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನ ಇನ್ಸ್ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿ (ಐಎಡಿ) ಸಂಶೋಧಿಸಿರುವ ಲಿಂಫೇಟಿಕ್ ಫೈಲೇರಿಯಾಸಿಸ್ (ಆನೆಕಾಲು) ರೋಗದ ಸಂಯೋಜಿತ ಚಿಕಿತ್ಸಾ ಪದ್ಧತಿಯಲ್ಲೂ ಯೋಗಾಸನಕ್ಕೆ ಅಪಾರ ಪ್ರಾಧಾನ್ಯತೆಯಿದೆ. ಈ ನಿಟ್ಟಿನಲ್ಲಿ ಐಎಡಿಯು ತನ್ನ ಏಳನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಯೋಗಾಸನದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದು ಹರಿದ್ವಾರದ ಪತಂಜಲಿ ರಿಸರ್ಚ್ ಫೌಂಡೇಶನ್ನ ನಿರ್ದೇಶಕಿ ಡಾ.ಶಿರ್ಲೆ ಟೆಲೆಸ್ ವಿಚಾರ ಸಂಕಿರಣದ ದಿನಗಳಲ್ಲಿ ವಿಶೇಷ ಯೋಗ ತರಬೇತಿ ನೀಡುತ್ತಿದ್ದಾರೆ.
ಅವರ ತರಗತಿಯಲ್ಲಿ ಭಾಗವಹಿಸುವ ಅಪೇಕ್ಷೆ ವ್ಯಕ್ತಪಡಿಸಿ ಈಗಾಗಲೇ ಹಲವರು ತಮ್ಮ ಹೆಸರುಗಳ ನೋಂದಣೆ ಮಾಡಿದ್ದಾರೆ. ಎ. 16ರಂದು ಬೆಳಗ್ಗೆ ಜನಸಾಮಾನ್ಯರಿಗಾಗಿ ಕಾಸರಗೋಡಿನ ಸನಿಹ ಪಾರೆಕಟ್ಟೆಯಲ್ಲಿರುವ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೆರಿಯಲ್ಲಿ ಜನಮೈತ್ರಿ ಪೊಲೀಸ್ ಸಹಭಾಗಿತ್ವದೊಂದಿಗೆ ಯೋಗ ತರಬೇತಿಯನ್ನು ಡಾ.ಶಿರ್ಲೆ ಟೆಲೆಸ್ ನೀಡಲಿದ್ದಾರೆ.
ಕಾಲುಗಳನ್ನು ಪ್ರಧಾನವಾಗಿ ಬಾಧಿಸುವ ಲಿಂಫೇಟಿಕ್ ಫೈಲೇರಿಯಾಸಿಸ್ ಖಾಯಿಲೆಯು ಕಾಲಿನಲ್ಲಿರುವ ರಸವಾಹಕ ನಾಳವು (ಲಿಂಫ್ ಡಕ್ಟ್) ಶಿಥಿಲಗೊಳಿಸಿ ಲಿಂಫ್ ರಸದ ಪ್ರವಾಹವನ್ನು ತಡೆಯುತ್ತದೆ. ಇದರಿಂದಾಗಿ ಕಾಲಿನ ಗಾತ್ರ ಹೆಚ್ಚುತ್ತದೆ ಹಾಗೂ ವಿಪರೀತ ನೋವು, ಆಗಾಗ ಕಾಡುವ ಜ್ವರ, ಕಾಲಿನಿಂದ ಒಸರುವ ಅಸಹನೀಯ ವಾಸನೆಯ ದ್ರವ ಅಪಾರ ತೊಂದರೆಗಳನ್ನು ಉಂಟುಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಿರಸ್ಕರಿಸಲ್ಪಟ್ಟ ಖಾಯಿಲೆಗಳ ಪಟ್ಟಿಯಲ್ಲಿ ಆನೆಕಾಲು ರೋಗಕ್ಕೆ ನಾಲ್ಕನೆಯ ಸ್ಥಾನ. ಜಾಗತಿಕ ಮಟ್ಟದಲ್ಲಿ ವಿಶೇಷ ಸಂಶೋಧನೆಗಳು ನಡೆಯದ, ಚಿಕಿತ್ಸೆಯಿಲ್ಲದ ಖಾಯಿಲೆ ಎಂದೇ ತಿಳಿಯಲಾಗುತ್ತಿದ್ದ ಈ ರೋಗಕ್ಕೆ ಕಾಸರಗೋಡಿನಲ್ಲಿ ಚಿಕಿತ್ಸೆಯನ್ನು ರೂಪಿಸಿರುವುದು ಹೆಮ್ಮೆಯ ವಿಚಾರ ಎಂಬುದು ಬಹುತೇಕ ಎಲ್ಲ ವಿಚಾರ ಮಂಡನೆಗಳ ಸಂದರ್ಭದಲ್ಲೂ ವ್ಯಕ್ತವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.