
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಅಧ್ಯಕ್ಷತೆಯಲ್ಲಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೀ ಅವರ ಉಪಸ್ಥಿತಿಯಲ್ಲಿ ಫೆ. 26ರಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಕರ್ನಾಟಕದ ಎಲ್ಲ ಜಿಲ್ಲಾ ತಂಡಗಳಿಗೆ ಪ್ರಶಿಕ್ಷಣ ಕಾರ್ಯಾಗಾರ ನಡೆಯಲಿದೆ ಎಂದು ಪ್ರಶಿಕ್ಷಣ ಅಭಿಯಾನದ ರಾಜ್ಯ ಸಂಚಾಲಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದ ಪ್ರತಿ ಪ್ರಶಿಕ್ಷಣ ಜಿಲ್ಲೆಯಿಂದ ತಂಡವನ್ನು ನಿಯೋಜಿಸಲಾಗಿದೆ ಎಂದು ಹೇಳಿದರು. 1,156 ಸ್ಥಳಗಳಲ್ಲಿ ಪ್ರಶಿಕ್ಷಣ ವರ್ಗ ನಡೆಯಲಿದೆ. ಒಂದು ಪ್ರಶಿಕ್ಷಣದಲ್ಲಿ ಸರಾಸರಿ 200 ಪದಾಧಿಕಾರಿಗಳು ಭಾಗವಹಿಸಲಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಪದಾಧಿಕಾರಿಗಳಿಗೆ ಪ್ರಶಿಕ್ಷಣ ನೀಡಲಿದ್ದೇವೆ ಎಂದು ತಿಳಿಸಿದರು.
ಬಿಜೆಪಿ, ಇತರ ರಾಜಕೀಯ ಪಕ್ಷಗಳಿಂದ ಭಿನ್ನವಾಗಿದೆ. ನಮ್ಮ ಪಕ್ಷದಲ್ಲಿ ವ್ಯಕ್ತಿ ನಿರ್ಮಾಣದಿಂದ ಸಂಘಟನೆ ನಿರ್ಮಾಣ ನಡೆಸಲಾಗುತ್ತದೆ. ಸಂಘಟನೆ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವು ಪ್ರಶಿಕ್ಷಣದ ಮುಖ್ಯ ಗುರಿ ಎಂದು ಹೇಳಿದರು. ಕಾರ್ಯಕರ್ತನಲ್ಲಿ ವೈಚಾರಿಕ ಬದ್ಧತೆ ಬೆಳೆಸುವುದು, ಪಕ್ಷದ ಕಾರ್ಯವೈಖರಿ ತಿಳಿಸುವುದು, ಕಾರ್ಯಕರ್ತರ ನಡತೆಯಲ್ಲಿ ಶ್ರೇಷ್ಠತೆ ರೂಪಿಸುವುದು ಮಾತ್ರವಲ್ಲದೇ ಪದಾಧಿಕಾರಿ- ಕಾರ್ಯಕರ್ತನಿಗೆ ಪಕ್ಷದ ವಿಕಾಸ- ಇತಿಹಾಸ ತಿಳಿಸಿ ಕೊಡಲಾಗುವುದು. ಕಾರ್ಯಕರ್ತರಲ್ಲಿ ಸಮರ್ಥ ಮತ್ತು ದಕ್ಷ ವೈಚಾರಿಕ ಬದ್ಧತೆ ಬೆಳೆಸುವುದು, ಸಾಮಾಜಿಕ ಸಂವೇದನೆ, ಜವಾಬ್ದಾರಿ ಮೂಡಿಸುವುದು, ರಾಷ್ಟ್ರೀಯ- ಅಂತರರಾಷ್ಟ್ರೀಯ ನರೇಟಿವ್ಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಪ್ರಶಿಕ್ಷಣದ್ದು ಎಂದು ತಿಳಿಸಿದರು. ಒಟ್ಟು 8 ಅಂಶಗಳ ಮೂಲಕ ಪ್ರಶಿಕ್ಷಣ ನಡೆಸಲಾಗುತ್ತಿದೆ ಎಂದರು.
ಬಿಜೆಪಿ ಸಂಘಟನಾ ಪರ್ವ ಪ್ರಾರಂಭವಾಗಿದೆ. ಸದಸ್ಯತ್ವ ಅಭಿಯಾನ, ಸಕ್ರಿಯ ಸದಸ್ಯರ ಅಭಿಯಾನ, ಬೂತ್, ಮಂಡಲ, ಜಿಲ್ಲಾ ಅಧ್ಯಕ್ಷರಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಸಂಘಟನಾ ಪರ್ವ ನಡೆಯುತ್ತದೆ ಎಂದು ವಿವರಿಸಿದರು. ನಿತಿನ್ ನಬೀನ್ ಜೀ ಅವರು ರಾಷ್ಟ್ರೀಯ ಅಧ್ಯಕ್ಷರಾದ ತಕ್ಷಣ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನಕ್ಕೆ ಫೆ. 5ರಂದು ಚಾಲನೆ ಕೊಟ್ಟಿದ್ದಾರೆ ಎಂದರು. ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಶಿಕ್ಷಣ ಆಯೋಜನೆ ಕುರಿತು ಫೆ.18ರಂದು ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಪಾಂಡಿಚೇರಿ ರಾಜ್ಯಗಳ ಕಾರ್ಯಾಗಾರ ಹೈದರಾಬಾದ್ನಲ್ಲಿ ನಡೆದಿದೆ ಎಂದು ಹೇಳಿದರು.
ಮತಕ್ಷೇತ್ರದ ಪ್ರಶಿಕ್ಷಣದಲ್ಲಿ ವಿಷಯ ತೆಗೆದುಕೊಳ್ಳುವ ರಾಜ್ಯ ಮಟ್ಟದ 7 ಪ್ರಮುಖರಿರುತ್ತಾರೆ ಎಂದ ಅವರು, 4,500 ವಿಷಯ ಪ್ರಮುಖರನ್ನು ಸಿದ್ಧತೆ ಮಾಡಿಕೊಂಡು ತರಬೇತಿ ನೀಡಲಾಗುವುದು. ಇವರು ರಾಜ್ಯದಲ್ಲಿ ನಡೆಯುವ 1156 ವರ್ಗಗಳಿಗೆ ತೆರಳಿ ಪ್ರಶಿಕ್ಷಣ ಕೊಡುತ್ತಾರೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


