ಮಂಗಳೂರು: ರಥ ಸಪ್ತಮಿಯ ಶುಭಾವಸರದಲ್ಲಿ ಸಂಜೆ ಗೋಧೂಳಿಯ ಸಮಯದಲ್ಲಿ ರಥಬೀದಿಯಲ್ಲಿ ರಂಗೇರಿದ ವಾತಾವರಣದಲ್ಲಿ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಸಂಭ್ರಮದ ’ಕೊಡಿಯಾಲ್ ತೇರು’ ರವಿವಾರ ಸಂಜೆ ಜರಗಿತು.
ರಥಬೀದಿಯ ತುಂಬೆಲ್ಲ ಜನಸಾಗರವೇ ಕಿಕ್ಕಿರಿದು ತುಂಬಿದಂತೆ ಉಕ್ಕಿ ಹರಿದ ಭಕ್ತ ಜನಸಾಗರದಲ್ಲಿ ಭಕ್ತರು ತಮ್ಮೊಡೆಯ ವೀರ ವೆಂಕಟೇಶನ ವೈಭವದ ರಥಾರೋಹಣ, ಮಹಾಪೂಜೆ ಸಹಿತ ರಥೋತ್ಸವ ವೈಭವಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಭಾವಾವೇಶಕ್ಕೆ ಒಳಗಾದ ಭಜಕರು ವೀರವೆಂಕಟೇಶಾ ವೇದವ್ಯಾಸಾ ಗೋವಿಂದೋ’ ಎಂದು ಜಯಘೋಷಗೈದರು. ಶ್ರೀ ಕಾಶೀಮಠಾಧೀಶ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು ಈ ಸಂದರ್ಭದಲ್ಲಿ ರಥಕ್ಕೆ ಚಿತ್ತೈಸಿ ರಥಾರೂಢ ವೀರ ವೆಂಕಟೇಶನಿಗೆ ಮಹಾಮಂಗಳಾರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ಸಂಜೆ 5.30ರ ವೇಳೆಗೆ ಚಿನ್ನದ ಪಲ್ಲಕ್ಕಿಯೇರಿ ದೇವಳದಿಂದ ರಥದೆಡೆಗೆ ವೀರ ವೆಂಕಟೇಶ ದೇವರ ಆಗಮನದ ಬಳಿಕ ಸಾಂಪ್ರದಾಯಿಕ ರಥ ಪ್ರದಕ್ಷಿಣೆ ನಡೆಯಿತು. ಪಲ್ಲಕ್ಕಿಯನ್ನು ಏಕ ಹಸ್ತದಿಂದ ಏರಿಸಿ ಸಂಭ್ರಮಿಸಲಾಯಿತು. ಬ್ಯಾಂಡ್ ವಾದ್ಯಗಳ ಅಬ್ಬರ, ಮಂಗಲ ವಾದ್ಯಗಳ ನಿನಾದ, ತಾಳ ಸಂಕೀರ್ತನೆಯ ಹಿನ್ನೆಲೆಯಲ್ಲಿ ಸೇರಿದ ಸಹಸ್ರಾರು ಭಜಕರ ಹರ್ಷೋದ್ಗಾರಗಳ ನಡುವೆ ಸಂಜೆ 6.05 ರ ವೇಳೆಗೆ ಶ್ರೀದೇವರ ರಥಾರೋಹಣ ನಡೆಯಿತು.
ಸಮಾಜದ ಪರವಾಗಿ ಶ್ರೀ ದೇವಳದ ಆಡಳಿತ ಮೊಕ್ತೇಸರ ಎಂ.ಪದ್ಮನಾಭ ಪೈ ಸಹಿತ ಮೊಕ್ತೇಸರರು ಶ್ರೀಗಳವರಿಂದ ಮಹಾಪ್ರಸಾದ ವನ್ನು ಸ್ವೀಕರಿಸಿದರು. ದಾನಿ ಮುಂಡ್ಕೂರು ರಾಮದಾಸ ಕಾಮತ್ ಸಹಿತ ಗಣ್ಯರಿಗೆ ಈ ಸಂದರ್ಭದಲ್ಲಿ ಪ್ರಸಾದ ನೀಡಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ವಿಧಾನಸಭಾ ಮಾಜಿ ಉಪಸಭಾಪತಿ ಎನ್.ಯೋಗೀಶ್ ಭಟ್ ಮತ್ತಿತರ ಗಣ್ಯರು ಈ ಸಂಧರ್ಭದಲ್ಲಿ ಹಾಜರಿದ್ದರು.
ಮಹೋತ್ಸವದ ಅಂಗವಾಗಿ ಶ್ರೀದೇವರಿಗೆ ದೇವಳದಲ್ಲಿ ವಿಶೇಷ ಗಂಗಾಭಿಷೇಕ, ಪುಳಕಾಭಿಷೇಕ ಸಹಿತ ಸಹಸ್ರಧಾರಾ ಸೇವೆ ಸಹಿತ ಧಾರ್ಮಿಕ ವಿದಿವಿಧಾನಗಳು ನಡೆದವು. ಸಂಜೆ ಮಹಾಯಜ್ಞ ಮಂಟಪದಲ್ಲಿ ಪೂರ್ಣಾಹುತಿ ಶ್ರೀಗಳವರ ಉಪಸ್ಥಿತಿಯಲ್ಲಿ ನಡೆಯಿತು.
ಸಂಜೆ ರಥದಲ್ಲಿ ಸಮಾಜ ಬಾಂಧವರು ಮಹಾಪ್ರಸಾದ ಸ್ವೀಕರಿಸಿದರು. ಇದಕ್ಕೂ ಮೊದಲು ರಥದ ಚಕ್ರಕ್ಕೆ ಕಾಯಿಗಳನ್ನು ಒಡೆಯುವ, ಸೇರಿದವರು ರಥವನ್ನು ಕರ ಸೇವೆಯ ಮೂಲಕ ಒಂದಿಷ್ಟು ಮುಂದಿಡುವ ಕ್ರಿಯೆಗಳು ನಡೆದವು.
ದೇಶ-ವಿದೇಶಗಳಿಂದ ರಥೋತ್ಸವ ಸಂಭ್ರಮಕ್ಕೆಂದೇ ಆಗಮಿಸಿದ್ದ ಜನತೆ ಕೊಡಿಯಾಲ್ ತೇರಿನ ವೈಭವವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಮಹಾ ಸಮಾರಾಧನೆಯಲ್ಲಿ 35 ಸಹಸ್ರಕ್ಕೂ ಅಧಿಕ ಭಜಕರು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ರಥೋತ್ಸವ ಕಾರ್ಯಕ್ರಮಗಳು ಜರಗಿದವು.
ಚಿತ್ರ : ಮಂಜು ನೀರೆಶ್ವಾಲ್ಲ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.