ಸುಳ್ಯ: ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ನೂತನ ಯೋಜನೆ ‘ಚಿಣ್ಣರ ವನ್ಯ ದರ್ಶನ’ ಕಾರ್ಯಕ್ರಮದ ಅಂಗವಾಗಿ ಗಡಿಪ್ರದೇಶವಾದ ಪಂಜಿಕಲ್ಲಿನ ಪುತ್ತೂರು ವಲಯ ಅರಣ್ಯ ಇಲಾಖೆಯ ಸಸ್ಯಕಾಶಿಯಲ್ಲಿ ಪ್ರಥಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರಣ್ಯ ಸಚಿವ ಬಿ.ರಮಾನಾಥ ರೈ ‘ಉಸಿರಾಟಕ್ಕೆ ಶುದ್ಧ ವಾಯು ದೊರೆಯಲು ಅರಣ್ಯ ಬೇಕು. ಶುದ್ಧ ನೀರು ಕುಡಿಯಲು, ಭೂಮಿಯಲ್ಲಿನ ಜೀವ ಸಂಕುಲವನ್ನು ಉಳಿಸಲು ಪರಿಸರವನ್ನು ಸಂರಕ್ಷಿಸುವುದು ಅನಿವಾರ್ಯ. ನಮ್ಮ ಪರಿಸರ ಉಳಿಸಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಟ ಐದು ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಹೇಳಿದರು.
ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಚಿಣ್ಣರ ವನ್ಯದರ್ಶನದ ಅಂಗವಾಗಿ ಕಾಡಿನ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಾಯಿತು. ಬಳಿಕ ಸಚಿವರೊಂದಿಗೆ ಮತ್ತು ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಮಕ್ಕಳು ಸಂವಾದ ನಡೆಸಿದರು. ವಿದ್ಯಾರ್ಥಿಗಳು ಮುಂದಿರಿಸಿದ ಹಲವು ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.
ಕಾಡನ್ನು ಮತ್ತು ವನ್ಯ ಜೀವಿಗಳನ್ನು ಸಂರಕ್ಷಿಸುವುದಕ್ಕಾಗಿ, ಅಭಿವೃದ್ಧಿಪಡಿಸುವುದಕ್ಕಾಗಿ ಹಮ್ಮಿಕೊಂಡ ಕ್ರಮಗಳ ಬಗ್ಗೆ, ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯುವುದು ಸೇರಿದಂತೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಚಿವ ರಮಾನಾಥ ರೈ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ್ ಬಿಜೂರ್ ಉತ್ತರಿಸಿದರು. ನಮ್ಮ ಪರಿಸರ ಸಮತೋಲನಕ್ಕೆ ಎಷ್ಟು ಶೇಖಡಾ ಅರಣ್ಯ ಬೇಕು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದಾಗ ಶೇ.33 ರಷ್ಟು ಬೇಕು, ಆದರೆ ಈಗ ಶೇ.22ರಷ್ಟು ಮಾತ್ರ ಉಳಿದಿದೆ. ಕೊರತೆಯನ್ನು ನೀಗಿಸಲು ಹೆಚ್ಚೆಚ್ಚು ಮರ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಸಚಿವರು ಸಲಹೆ ನೀಡಿದರು.
ರಸ್ತೆ ಅಭಿವೃದ್ಧಿ ಮಾಡುವಾಗ ಒಂದು ಬದಿಯ ಮರಗಳನ್ನು ಮಾತ್ರ ಕಡಿಯಬೇಕು. ಮರಗಳನ್ನು ಕಡಿದರೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿದ್ಯಾರ್ಥಿಗಳು ಸಚಿವರಲ್ಲಿ ವಿನಂತಿಸಿದರು. ಮಕ್ಕಳಲ್ಲಿ ಪರಿಸರ ಸಂರಕ್ಷಣೆ, ಕಾಡಿನ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಡೆಸುವ ಈ ಯೋಜನೆಯನ್ನು ಈ ವರ್ಷದಿಂದ ರಾಜ್ಯದಾದ್ಯಂತ ಜಾರಿಗೆ ತರಲಾಗುತ್ತದೆ ಎಂದು ಸಚಿವರು ಹೇಳಿದರು.
ಚಿಣ್ಣರ ವನ್ಯದರ್ಶನ: ನೂತನ ಯೋಜನೆ: ಎಳೆಯ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಹೊಸ ಯೋಜನೆ ಚಿಣ್ಣರ ವನ್ಯದರ್ಶನ. ಇದರ ಪ್ರಕಾರ ಸರಕಾರಿ, ಅನುದಾನಿತ ಮತ್ತು ಇತರ ಶಾಲೆಗಳ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಅರಣ್ಯಕ್ಕೆ ಕರೆದೊಕೊಂಡು ಹೋಗಿ ಅರಣ್ಯದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡುವುದು ಇದರ ಯೋಜನೆ.
ಮಕ್ಕಳಿಗೆ ಪರಿಸರದ ಮಾಹಿತಿ ನೀಡಿ ಜಾಗೃತಿ ಮೂಡಿಸಿ, ಮರ ಗಿಡಗಳನ್ನು ನೆಟ್ಟು ಬೆಳೆಸಲು ಪ್ರೇರೇಪಣೆ ನೀಡುವುದು ಯೋಜನೆಯ ಉದ್ದೇಶ. ಯೋಜನೆಯನ್ವಯ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಒಂದು ದಿನದ ಅಧ್ಯಯನ ಶಿಬಿರವನ್ನು ಕಾಡಿನಲ್ಲಿ ನಡೆಸುವುದು, ಅಲ್ಲದೆ ಪರಿಸರದ ಬಗ್ಗೆ ಪ್ರಬಂಧ, ಭಾಷಣ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಅರಣ್ಯದಂಚಿನಲ್ಲಿರುವ ಶಾಲೆಗಳ ಮಕ್ಕಳಿಗೆ ಪ್ರಥಮ ಹಂತದಲ್ಲಿ ಅರಣ್ಯದ ಬಗ್ಗೆ ಮಾಹಿತಿ ನೀಡುಲಾಗುವುದು.
ಸೋಮವಾರ ನಡೆದ ಪ್ರಥಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅರಣ್ಯದಲ್ಲಿ ಬೆಳೆಯುವ ಮರಗಳ ಬಗ್ಗೆ, ಅರಣ್ಯದಲ್ಲಿರುವ ಸಸ್ಯ ಸಂಪತ್ತು, ಪ್ರಾಣಿ ಸಂಕುಲಗಳ ಬಗ್ಗೆ, ಮರ, ಗಿಡಗಳ ಬಗ್ಗೆ, ಅರಣ್ಯ ಇಲಾಖೆಯ ಕಚೇರಿಯ ಕಾರ್ಯಗಳ ಬಗ್ಗೆ, ನಾಟಾ ಸಂಗ್ರಹಾಲಯ ಮತ್ತಿತರ ಅರಣ್ಯ ಇಲಾಖೆಯ ಸಂಬಂಧಪಟ್ಟ ವ್ಯವಸ್ಥೆಗಳ ಪರಿಚಯ, ಅರಣ್ಯ ಇಲಾಖೆಯ ಆಡಳಿತ ವ್ಯವಸ್ಥೆಯ ಬಗ್ಗೆ ಅರಣ್ಯ ಸಂರಕ್ಷಣೆಯ ಬಗ್ಗೆ ವಿವರಗಳನ್ನು ನೀಡಲಾಯಿತು. ಸಸ್ಯಕಾಶಿಯಲ್ಲಿ ಬೆಳೆಯುವ 40 ಕ್ಕೂ ಹೆಚ್ಚು ಗಿಡಗಳ ಬಗ್ಗೆ ಮತ್ತು ಅವುಗಳ ಬೆಳವಣಿಗೆಯ ಹಂತಗಳ ಬಗ್ಗೆ ವಿವರಿಸಲಾಯಿತು.
ಮಂಗಳೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ್ ಬಿಜೂರ್, ಉಪ ಅರಣ್ಯ ಸಂರಕ್ಷಾಣಾಧಿಕಾರಿ ಡಾ.ಹನುಮಂತಪ್ಪ, ಸುಳ್ಯ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ಕುಮಾರ್, ಪುತ್ತೂರು ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ಪುತ್ತೂರು ವಯಲ ಅರಣ್ಯಾಧಿಕಾರಿ ಶ್ರೀಧರ್, ಸುಳ್ಯ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷೆ ತಿರುಮಲೇಶ್ವರಿ, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಮಜೀದ್ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.