ಬೈಂದೂರು : ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದಿ ಪರಶುರಾಮ ಕ್ಷೇತ್ರದ ಶಿಖಿರವಾದ ಕುಂದಾಪುರ ತಾಲೂಕಿನ ಪಂಚಗಂಗಾವಳಿಯ ತಟದಲ್ಲಿ ಪರ್ಯಾಯ ದ್ವೀಪದಂತಿರುವ ಗಂಗೊಳ್ಳಿ ತನ್ನದೇ ಆದ ಪ್ರಾಕೃತಿಕ ಸೌಂದರ್ಯ ವೈಶಿಷ್ಟ್ಯವನ್ನು ಹೊಂದಿರುವ ಮೀನುಗಾರಿಕಾ ಬಂದರು ಪ್ರದೇಶ. ಈ ಊರಿನ ಮಧ್ಯಭಾಗ ಮೇಲ್ಗಂಗೊಳ್ಳಿಯ ಬಾವಿಕಟ್ಟೆ ಬಳಿಯಿರುವ ಶ್ರೀ ಬಸವೇಶ್ವರ ಸಮಾಜ ಮಂದಿರ ರಜತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದೆ.
ಸುಮಾರು 25 ವರ್ಷಗಳ ಹಿಂದೆ ಕೂಡ್ಲಿ ಬಾರಂಗಿ ಮಹಾಸಂಸ್ಥಾನ ಮಠ ತಾಳಗುಪ್ಪ ಶಿಷ್ಯವೃಂದದವರಾದ ಗಂಗೊಳ್ಳಿಯ ಉಪ್ಪಾರಗೌಡ (ಆದಿದ್ರಾವಿಡ) ಜಾತಿಯ ವೀರಶೈವ ಮತಾವಲಂಬಿಗಳಾಗಿರುವವರು ಗಂಗೊಳ್ಳಿಯ ಮುಖ್ಯರಸ್ತೆಯ ಸಮೀಪ ಮಡಲಿನ ಚಪ್ಪರ ನಿರ್ಮಿಸಿಕೊಂಡು ಆರಾಧ್ಯ ದೇವರಾದ ಈಶ್ವರನ ಮತ್ತು ಬಸವೇಶ್ವರ ದೇವರ ಭಾವಚಿತ್ರ ಇಟ್ಟುಕೊಂಡು ಪ್ರತಿ ಸೋಮವಾರ ಭಜನೆ ಮಾಡಲಾರಂಭಿಸಿದರು. ದಿನ ಕಳೆದಾದ ಇದು ಆರಾಧನಾ ರೂಪ ತಾಳಿತು. ಕಲ್ಲಿನ ಗೋಡೆ, ಸಿಮೆಂಟ್ ಸ್ಲ್ಯಾಬ್ನೊಂದಿಗೆ ಪುಟ್ಟ ಶ್ರೀ ಬಸವೇಶ್ವರ ಸಮಾಜ ಮಂದಿರ ನಿರ್ಮಾಣವಾಯಿತು. ಭಜನೆಯ ನಿರಂತರತೆಯಿಂದ ಸಮಾಜ ಸಂಘಟನೆ ಬಲಗೊಂಡಿತು. ಇದೀಗ ಈ ಸುಂದರವಾದ ಭಜನಾ ಮಂದಿರ ಸಮಾಜದ ಜನರಿಗೆ ಮಂದಿರವೆನಿಸಿದೆ.
ಬಸವ ಜಯಂತಿ, ಮಹಾಶಿವರಾತ್ರಿ ಆಚರಣೆ, ನವರಾತ್ರಿ ಪೂಜೆ, ದೀಪಾವಳಿ ಉತ್ಸವ ಇತ್ಯಾದಿ ಉತ್ಸವಗಳು, ಕಾರ್ಯಕ್ರಮಗಳು ನಿಯತ ಕಾರ್ಯಕ್ರಮಗಾದವು. ಈತನ್ಮಧ್ಯೆ ಸುಮಾರು 9 ವರ್ಷಗಳ ಹಿಂದೆ ಶ್ರೀ ಬಸವೇಶ್ವರ ಬಾಲಕರ ಭಜನಾ ತಂಡ ಆರಂಭಗೊಂಡಿತು. ಉಡುಪಿ ಜಿಲ್ಲೆಯ ವಿವಿಧ ಧಾರ್ಮಿಕ, ಶ್ರದ್ಧಾ ಕೇಂದ್ರದ ಭಜನಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಈ ಭಜನಾ ತಡ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಪ್ರತಿ ಸೋಮವಾರ ಭಜನಾ ಮಂದಿರದಲ್ಲಿ ಭಜನೆ, ಭಜನಾ ಮಂದಿರದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಯಾಗಿ ತನ್ನನ್ನು ತಾನು ಧಾರ್ಮಿಕ ಇನ್ನಿತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ.
ಪ್ರಸ್ತುತ ಶ್ರೀ ಬಸವೇಶ್ವರ ಸಮಾಜ ಮಂದಿರ ರಜತ ಮಹೋತ್ಸವ ವರ್ಷ ಹಾಗೂ ಶ್ರೀ ಬಸವೇಶ್ವರ ಬಾಲಕರ ತಂಡ ದಶಮಾನೋತ್ಸವ ವರ್ಷದ ಆಚರಣೆಯ ಸಂಭ್ರಮದಲ್ಲಿದ್ದು, ಎ.21 ರಂದು ಈ ಎರಡೂ ಸಂಸ್ಥೆಗಳ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಸಿದ್ಧತೆಗಳು ನಡೆದಿದೆ. ಬಸವ ಜಯಂತಿ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಚಿಣ್ಣರ ಭಜನಾ ಸ್ಪರ್ಧೆ, ಸಾಧಕರಿಗೆ ಸನ್ಮಾನ ಹಾಗೂ ವಿಶೇಷ ಆಕರ್ಷಣೆಯೊಂದಿಗೆ ದೀಪದ ಹಣತೆ ಸುತ್ತ ಕುಣಿತ ಭಜನೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟಿನಲ್ಲಿ ಅತಿ ಹಿಂದುಳಿದ ಸಮಾಜಕ್ಕೆ ಸೇರಿದ ಗಂಗೊಳ್ಳಿಯ ಮೇಲ್ಗಂಗೊಳ್ಳಿ ಬಾವಿಕಟ್ಟೆಯ ಶ್ರೀ ಬಸವೇಶ್ವರ ಸಮಾಜ ಮಂದಿರದ ರಜತ ಮಹೋತ್ಸವ ಹಾಗೂ ಶ್ರೀ ಬಸವೇಶ್ವರ ಬಾಲಕರ ಭಜನಾ ತಂಡದ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.