ಮಂಗಳೂರು : ದ.ಕ. ಜಿಲ್ಲೆಯ ತೋಕೂರಿನಿಂದ ಉಡುಪಿ ಜಿಲ್ಲೆಯ ಪಾದೂರುವರೆಗಿನ ೨೪ ಗ್ರಾಮಗಳ ಮೂಲಕ ಹಾದು ಹೋಗುವ ಸುಮಾರು 50 ಕಿಲೋಮೀಟರ್ ಉದ್ದದ 60 ಅಡಿ ಅಗಲದ, 36 ಇಂಚಿನ ಪೈಪ್ ಲೈನ್ ಕಾಮಗಾರಿಯ ಬಾಧಿತರು ಸಾಮಾಜಿಕ ಹೋರಾಟಗಾರ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ರನ್ನು ನಗರದ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೈಪ್ಲೈನ್ ಭಾದಿತರು ಈ ಹಿಂದೆ 2013ರಲ್ಲಿ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದ ಬಗ್ಗೆ ಮಾಹಿತಿ ನೀಡಲಾಯಿತು. ಆದರೂ ಈ ಬಗ್ಗೆ ಕೆಎಐಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಬಾಧಿತರಿಗೆ ಈ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡಿರಲಿಲ್ಲ. ಐಎಸ್ಪಿಆರ್ಎಲ್ ಅಧಿಕಾರಿಗಳ ವಶೀಲಿಗೆ ಅನುಗುಣವಾಗಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಅವೈಜ್ಞಾನಿಕವಾಗಿ ಪೈಪ್ಲೈನ್ ಮಾರ್ಗ ನಕ್ಷೆಯನ್ನು ಮಾಡಿರುವುದು, ಜೆಎಂಸಿ ನಡೆಸಿ ಮಹಜರು ಕ್ರಮ ಕೈಗೊಳ್ಳದಿರುವುದು, ಸಂಬಂಧಿತ ಜಮೀನಿನಲ್ಲಿ ಪೈಪ್ ಲೈನ್ ಬಗ್ಗೆ ಗಡಿಗುರುತು ಹಾಕದಿರುವುದು,2006 ರಿಂದ 2015 ರವರೆಗೆ ನಡೆಸಿದ ಭೂಸ್ವಾಧೀನ ಅಧಿಸೂಚನೆ ಮತ್ತು ಪ್ರಕ್ರಿಯೆಗಳಲ್ಲಿ ಅಸಮಂಜಸತೆ ಹೊಂದಿರುವುದು.
ಐಎಸ್ಆರ್ಪಿಎ ಸಂಸ್ಥೆಯು ಜಿಲ್ಲೆಯ ಬಗ್ಗೆ ಮಾಹಿತಿ ಇಲ್ಲದ ದೂರದ ಕಲ್ಕತ್ತಾ ಮೂಲದ ಜನರಿಂದ ಸರ್ವೆ ಕಾರ್ಯ ನಡೆಸಿದ್ದು, ಭೂ ಸ್ವಾಧೀನತೆಯ ಬಗೆಗಿನ ನೋಟೀಸುಗಳು ರೈತರಿಗೆ ತಲುಪಿರದಿರುವುದು, ಸರಕಾರಿ ನೊಂದಣಿ ಕಾಯ್ದೆಯ ಕೈಪಿಡಿಯಲ್ಲಿ ಸೂಚಿಸಿದಂತೆ ವಿಶೇಷ ಸೂಚನೆಗಳನ್ನು ಪಾಲಿಸದೇ ಬಾಧಿತರಿಗೆ ಪರಿಹಾರ ನೀಡುವಲ್ಲಿ ಐಎಸ್ಪಿಆರ್ಎಲ್ ಕಂಪೆನಿಯ ಕೈಗೊಂಬೆಯಂತೆ ವರ್ತಿಸಿರುವುದು, ಭೂ ಸ್ವಾಧೀನ ಅಧಿಸೂಚನೆಯ ನೋಟೀಸಿನಲ್ಲಿ ಕಾನೂನುಬಾಹಿರವಾಗಿ ಜನವಾಸದ ಪ್ರದೇಶಗಳು, ಕಟ್ಟಡ ಸಂಬಂಧಿ ಹಕ್ಕುಗಳಿರುವ ಜಮೀನನ್ನು ಸೇರಿಸಿ ನೋಟೀಸು ಹಂಚಿರುವುದು, ಸಾವಿರಾರು ಜನರು ಸೇರುವ ಪುನನಿರ್ವಸಿತರ ಕ್ಷೇತ್ರದ ಬಸ್ನಿಲ್ದಾಣ, ರಿಕ್ಷಾಪಾರ್ಕ್, ದೇವಸ್ಥಾನದ ರಥಬೀದಿಯಲ್ಲಿ ಪೈಪ್ ಲೈನ್ ಹಾದು ಹೋಗುವುದು, ಪೈಪ್ಲೈನ್ ಹಾದುಹೋಗುವ ಜಮೀನಿನ ಸಮರ್ಪಕವಾದ ನಕ್ಷೆ ತಯಾರಿಸಿದೇ ಇರುವುದು, ಮರಮಟ್ಟುಗಳ ಮೌಲ್ಯಮಾಪನ ಸಮರ್ಪಕವಾಗಿ ಮಾಡದೇ ಇರುವುದು ಇತ್ಯಾದಿ ವಿಚಾರಗಳ ಬಗ್ಗೆ ಸಂಸದರ ಗಮನ ಸೆಳೆಯಲಾಯಿತು.
ಪೈಪ್ ಲೈನ್ ಹಾದು ಹೋಗುವ ಜಮೀನಿನ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪುನಃ ಸಮರ್ಪಕವಾಗಿ, ವೈಜ್ಞಾನಿಕವಾಗಿ ಸರ್ವೆ ನಡೆಸಬೇಕು ಮತ್ತು ಕೇಂದ್ರ ಸರಕಾರ ಜಾರಿಗೆ ತಂದಿರುವ 2014-15ರ ಭೂ ಸ್ವಾಧೀನ ಅಧಿನಿಯಮದಂತೆ ಪರಿಹಾರ ಮೊತ್ತವನ್ನು ನಿರ್ಧರಿಸಬೇಕೆಂದು ಈ ಸಂದರ್ಭದಲ್ಲಿ ಸಂಸದರನ್ನು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ತೋಕೂರು ಪಾದೂರು ಪೈಪ್ ಲೈನ್ ಜನಜಾಗೃತಿ ಸಮಿತಿಯ ಚಿತ್ತರಂಜನ್ ಭಂಡಾರಿ, ಜಗದೀಶ್ ಪಿ, ವಿನಯ್ ಎಲ್ ಶೆಟ್ಟಿ, ಚೇಳಾರು ಪಂಚಾಯತ್ ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಕುತ್ತೆತ್ತೂರು, ರವೀಂದ್ರ ಶೆಟ್ಟಿ ಕುತ್ತೆತ್ತೂರು ಜನಜಾಗೃತಿ ಸಮಿತಿ ಕಳತ್ತೂರಿನ ಶಿವರಾಂ ಶೆಟ್ಟಿ, ನಿತ್ಯಾನಂದ ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.