ಬಂಟ್ವಾಳ: ಶಿಕ್ಷಣಕ್ಕೆ ಪೂರಕವಾಗಿ ರಂಗಭೂಮಿಯ ಚಟುವಟಿಕೆಗಳು ಅಳವಡಿಸುವ ನಿಟ್ಟಿನಲ್ಲಿ ವ್ಯಾಪಕವಾದ ಚರ್ಚೆ ನಡೆಯಬೇಕಾಗಿದೆ ಎಂದು ಪುತ್ತೂರಿನ ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಅಭಿಪ್ರಾಯಪಟ್ಟಿದ್ದಾರೆ.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ರಜತ ವರ್ಷಾಚರಣೆಯ ಪ್ರಯುಕ್ತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ಕ್ಲಬ್ ಇದರ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಶಿಕ್ಷಕರಿಗಾಗಿ ಬಿ.ಸಿ.ರೋಡಿನ ಶಿಕ್ಷಣಾಧಿಕಾರಿ ಕಚೇರಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಆರಂಭಗೊಂಡ ಶಾಲಾ ಪಠ್ಯದಲ್ಲಿ ಭಾಷೆ-ಭಾವ-ಅಭಿವ್ಯಕ್ತಿ, ಶಿಕ್ಷಣದಲ್ಲಿ ರಂಗಕಲೆ, ಆಟ, ಪಾಠ ಕುರಿತ ಕಾರ್ಯಗಾರವನ್ನು ಅವರು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನವರೇ ಆಗಿದ್ದ ಹಿರಿಯ ಸಾಹಿತಿ ಪಂಜೆ ಮಂಗೇಶರಾಯರು ಒರ್ವ ಉತ್ತಮ ಶಿಕ್ಷಕರಾಗಿ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದವರು. ಹಾಗೆಯೇ ನಾಟಕಕಾರರಾಗಿದ್ದ ಬಿ.ವಿ.ಕಾರಂತರವರು ರಂಗಾಯಣದ ಮೂಲಕ ರಂಗಭೂಮಿಗೆ ಭಾರತದಲ್ಲಿ ಹೊಸ ತಿರುವು ನೀಡಿರುವುದನ್ನು ಈ ಸಂದರ್ಭ ನೆನೆಪಿಸಿಕೊಂಡ ಐ.ಕೆ. ಬೊಳುವಾರು ಅವರು ಪಂಜೆ ಹಾಗೂ ಕಾರಂತರು ಹಾಕಿಕೊಟ್ಟ ಮಕ್ಕಳ ಸಾಹಿತ್ಯ ಹಾಗೂ ರಂಗಭೂಮಿಯನ್ನು ಶಿಕ್ಷಕರು ತಮ್ಮ ಭೋದನಾ ಕ್ರಮದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಅತಿಥಿಗಳಾಗಿದ್ದ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಮಾತನಾಡಿ ರಂಗಭೂಮಿಯ ಕುರಿತಾಗಿ ಆಸಕ್ತಿ ಹೊಂದಿರುವ ಶಿಕ್ಷಕರು ಒರ್ವ ಉತ್ತಮ ಶಿಕ್ಷಕನಾಗಿ ಮೂಡಿಬರಲು ಸಾಧ್ಯವಾಗತ್ತದೆ ಎಂದರು. ಪುತ್ತೂರು ತಾಲೂಕಿನಲ್ಲಿ ಈಗಾಗಲೇ ಕೆಲವು ಶಾಲೆಗಳಲ್ಲಿ ತುಳು ಪಠ್ಯವನ್ನು ಜಾರಿಗೆ ತರಲಾಗಿದ್ದು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಪ್ರೌಢಶಾಲೆಗಳಲ್ಲೂ ಜಾರಿಗೆ ತರಲು ಉದ್ದೇಶಿಸಲಾಗಿದು ಶಿಕ್ಷಕರು ಈ ನಿಟ್ಟಿನಲ್ಲಿ ಮಾನಸಿಕವಾಗಿ ಸಿದ್ದತೆ ಮಾಡಿಕೊಳ್ಳುವಂತೆ ಮನವಿ ಮಾಡಿದ ಅವರು ಅಂತಹ ಶಾಲೆಗಳಿಗೆ ಮಾಸಿಕವಾಗಿ ಮೂರು ಸಾವಿರ ರುಪಾಯಿಯ ನೆರವನ್ನು ನೀಡಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಅವರು ಮಾತನಾಡಿ ಶಿಕ್ಷಕರು ಯಾಂತ್ರೀಕೃತ ಶಿಕ್ಷಣದಿಂದ ಹೊರಬಂದು ಮಕ್ಕಳ ಸೃಜನಶೀಲತೆಗೆ ಪೂರಕವಾದ ವಾತವರಣವನ್ನು ಸೃಷ್ಟಿಸುವಂತೆ ಕರೆ ನೀಡಿದರು.
ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಿ.ಎಂ.ಕುಲಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನಲ್ಲಿ ತುಳು ಲಿಪಿ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ. ತುಳುವಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲು ಯಾವುದೇ ಸಂಸ್ಥೆಗಳು ಮುಂದೆ ಬಂದಲ್ಲಿ ಅದಕ್ಕೆ ಅಕಾಡೆಮಿಯ ವತಿಯಿಂದ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ, ಬಂಟ್ವಾಳ ಪ್ರೆಸ್ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ವೇದಿಕೆಯಲ್ಲಿದ್ದರು.
ರಜತ ವರ್ಷಾಚರಣೆ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಡ್ಕಸ್ಥಳ ಸ್ವಾಗತಿಸಿದರು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಪ್ರಸ್ತಾವಿಸಿದರು, ಸಂಚಾಲಕ ವೆಂಕಟೇಶ್ ಬಂಟ್ವಾಳ ವಂದಿಸಿದರು. ಶಿಬಿರಾಧಿಕಾರಿ ಸಂದೀಪ್ ಸಾಲ್ಯಾನ್ ನಿರೂಪಿಸಿದರು.
ಕಾರ್ಯಗಾರ:
ಬಳಿಕ ನಡೆದ ಕಾರ್ಯಗಾರದಲ್ಲಿ ಪಠ್ಯದ ವಿವಿಧ ಸಾಧ್ಯತೆಗಳ ಬಗ್ಗೆ ರಂಗಕರ್ಮಿ ಐ.ಕೆ. ಬೊಳುವಾರು ಹಾಗೂ ಚಟುವಟಿಕೆಯಾಧರಿತ ಕಲಿಕೆ, ವಿವಿಧ ನೋಟಗಳು, ಕಲಿಕೆಯ ವಿವಿಧ ಹಂತಗಳು ಕುರಿತಾಗಿ ಮೌನೇಶ್ ವಿಶ್ವಕರ್ಮ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.