
ಆತ ಬ್ರಿಟಿಷ್ ವೈಸ್ರಾಯ್ ಮೇಲೆ ಬಾಂಬ್ ಎಸೆದ ಕ್ರಾಂತಿಕಾರಿ ಮತ್ತು ನಂತರ, ಜಪಾನ್ನಲ್ಲಿ ಅಡಗಿಕೊಂಡು, ಸ್ಥಳೀಯ ಬೇಕರಿಯಿಂದ ಭಾರತದ ಸ್ವಾತಂತ್ರ್ಯದ ಕಥೆಯನ್ನು ಬರೆದ ಛಲಗಾರ. ಇದು, ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಲೇಬೇಕಿರುವ 22 ವರ್ಷದ ಭಾರತೀಯ ಕ್ರಾಂತಿಕಾರಿ ರಾಶ್ ಬಿಹಾರಿ ಬೋಸ್ ಅವರ ಕಥೆ.
1886 ರಲ್ಲಿ ಬಂಗಾಳದಲ್ಲಿ ಜನಿಸಿದ ರಾಶ್ಬಿಹಾರಿ ಬೋಸ್ ಬಾಲ್ಯದಿಂದಲೂ ಬ್ರಿಟಿಷ್ ಆಳ್ವಿಕೆಯಲ್ಲಿ ಬೆಳೆದರು. ದೊಡ್ಡವರಾದಂತೆ, ಭೂಗತ ಕ್ರಾಂತಿಕಾರಿ ಚಳವಳಿಯ ಭಾಗವಾದರು. ಅವರ ನಂಬಿಕೆ ಏನಾಗಿತ್ತೆಂದರೆ, “ಸ್ವಾತಂತ್ರ್ಯವನ್ನು ಕೇವಲ ಮಾತಿನಿಂದಲ್ಲ, ಧೈರ್ಯ ಮತ್ತು ತ್ಯಾಗದ ಮೂಲಕ ಮಾತ್ರ ಸಾಧಿಸಬಹುದು.”
1912 ರಲ್ಲಿ, ರಾಶ್ಬಿಹಾರಿ ಬೋಸ್ ಬ್ರಿಟಿಷ್ ವೈಸ್ರಾಯ್ ಲಾರ್ಡ್ ಹಾರ್ಡಿಂಜ್ ಮೇಲೆ ಬಾಂಬ್ ದಾಳಿ ನಡೆಸಿದರು.
ನಂತರ, 1915 ರಲ್ಲಿ, ಅವರು ಇಡೀ ದೇಶಾದ್ಯಂತ ದಂಗೆಯನ್ನು ಪ್ರಚೋದಿಸಲು ಒಂದು ಯೋಜನೆಯನ್ನು ರೂಪಿಸಿದರು. ಆದರೆ, ಬ್ರಿಟಿಷ್ ಗುಪ್ತಚರ ಸಂಸ್ಥೆಗಳು ಅದನ್ನು ಕಂಡುಹಿಡಿದವು ಮತ್ತು ಭಾರತದಾದ್ಯಂತ ಬಂಧನಗಳ ಅಲೆಯೇ ಎದ್ದಿತು. ಬೋಸ್ ಕೇವಲ ಕ್ರಾಂತಿಕಾರಿಯಾಗಿರಲಿಲ್ಲ; ಅವರು ಬ್ರಿಟಿಷ್ ರಾಜ್ಗೆ Most Wanted ವ್ಯಕ್ತಿಯಾಗಿದ್ದರು. ಅವರು ತಮ್ಮ ವೇಷಗಳನ್ನು ಬದಲಾಯಿಸುತ್ತಾ ನಗರಗಳನ್ನು ಬದಲಾಯಿಸುತ್ತಿದ್ದರು ಮತ್ತು ಅಂತಿಮವಾಗಿ, ಅವರು ಭಾರತದಿಂದ ತಪ್ಪಿಸಿಕೊಂಡು ಜಪಾನ್ ತಲುಪಿದರು.
ಆದರೆ ಅಲ್ಲಿಗೂ ಅಪಾಯ ಕೊನೆಗೊಂಡಿರಲಿಲ್ಲ. ಅವರನ್ನು ಬಂಧಿಸಿ ವಾಪಸ್ ಕಳುಹಿಸುವಂತೆ ಬ್ರಿಟಿಷ್ ರಾಜತಾಂತ್ರಿಕರು ಜಪಾನ್ ಮೇಲೆ ಒತ್ತಡ ಹೇರುತ್ತಿದ್ದರು. ಪೊಲೀಸರು, ಗೂಢಚಾರರು – ಎಲ್ಲರೂ ಅವರ ಜಾಡು ಹಿಡಿದಿದ್ದರು; ಮತ್ತು ನಂತರ, ಎಲ್ಲ ದಾರಿಯೂ ಮುಚ್ಚಿಹೋದಂತೆ ತೋರಿದಾಗ, ಒಂದು ಅಜ್ಞಾತ ಬಾಗಿಲು ತೆರೆಯಿತು.
ಟೋಕಿಯೊದಲ್ಲಿ ವಾಸಿಸುತ್ತಿದ್ದ Aizo Soma ಮತ್ತು Kokko Soma ಎಂಬವರು ಪತ್ರಿಕೆಯಲ್ಲಿ ಅವರ ಕಥೆಯನ್ನು ಓದಿ, ಅವರು ಅಪರಾಧಿಯಲ್ಲ, ಬದಲಾಗಿ ಸ್ವಾತಂತ್ರ್ಯ ಹೋರಾಟದ ಸಿಪಾಯಿ ಎಂದು ನಿರ್ಧರಿಸಿದರು. ರಹಸ್ಯ ಯೋಜನೆಯಡಿಯಲ್ಲಿ, ಒಂದು ಪಾರ್ಟಿಯ ಸಂದರ್ಭದಲ್ಲಿ, ಬೋಸ್ರನ್ನು ಪೊಲೀಸ್ ಕಣ್ಗಾವಲಿನಿಂದ ತಪ್ಪಿಸಿ, ನಾಕಾಮುರಾಯ ಎಂಬ ಬೇಕರಿಯೊಳಗೆ ಸದ್ದಿಲ್ಲದೆ ಮರೆಮಾಡಲಾಯಿತು. ಹೊರಗೆ, ಇಡೀ ಟೋಕಿಯೊ ಪೊಲೀಸ್ ಪಡೆ ಅವರನ್ನು ಹುಡುಕುತ್ತಿತ್ತು, ಆದರೆ ಅವರು ಒಳಗೆ ಸದ್ದಿಲ್ಲದೆ ಕುಳಿತಿದ್ದರು.
ಹಾಗೆಂದು ಅವರು ಸುಮ್ಮನೆ ಅಡಗಿಕೊಂಡು ಕೂತಿದ್ದಲ್ಲ; ಅವರು ತಮ್ಮ ತಾಯ್ನಾಡಿಗಾಗಿ ಜೀವಿಸುತ್ತಿದ್ದರು. ಬೇಕರಿಯೊಳಗೆ ಇರುವಾಗ, ಅವರು ಒಮ್ಮೊಮ್ಮೆ ಅಡುಗೆ ಮಾಡುತ್ತಿದ್ದರು. ಆ ಸಮಯದಲ್ಲಿ, ಜಪಾನ್ನಲ್ಲಿ ‘British Curry’ ಜನಪ್ರಿಯವಾಗಿತ್ತು. ಆದರೆ ಬೋಸ್, ಭಾರತೀಯ ಮಸಾಲೆಗಳು ಮತ್ತು ಭಾರತೀಯ ವಿಧಾನದೊಂದಿಗೆ ಅದಕ್ಕೆ ಭಾರತೀಯ ಆತ್ಮವನ್ನು ತುಂಬಿದರು ಮತ್ತು ಅಲ್ಲಿಯೇ, Nakamuraya Indo Curry ಹುಟ್ಟಿಕೊಂಡಿತು.
ಜನರು ಅದರ ರುಚಿ ನೋಡಿ ಬೆರಗಾದರು ಮತ್ತು ಕ್ರಮೇಣ, ಈ ಖಾದ್ಯವು ಬೇಕರಿಯ ಗುರುತಾಯಿತು. ಒಂದು ಕಾಲದಲ್ಲಿ ಕ್ರಾಂತಿಕಾರಿಗಳ ಊಟವಾಗಿದ್ದ ಇದು ಬಳಿಕ ಸಾಂಸ್ಕೃತಿಕ ಪರಂಪರೆಯಾಯಿತು.
ಆದರೆ, ಈ ಘಮದ ಹಿಂದೆ ಅಡಗಿದ್ದ ವ್ಯಕ್ತಿ ತನ್ನ ನಿಜವಾದ ಉದ್ದೇಶವನ್ನು ಮರೆಯಲಿಲ್ಲ. ಮೊದಲ ಮಹಾಯುದ್ಧದ ಸಮಯದಲ್ಲಿ ಟೋಕಿಯೊದಲ್ಲಿ ವಾಸಿಸುತ್ತಿದ್ದಾಗಲೂ, ಬೋಸ್ ಏಷ್ಯಾದ ನಾಯಕರೊಂದಿಗೆ ಸಂಪರ್ಕ ಸಾಧಿಸಿದರು. ಅವರು ಸ್ವಾತಂತ್ರ್ಯಕ್ಕಾಗಿ ಬೆಂಬಲವನ್ನು ಕ್ರೋಢೀಕರಿಸಿದರು ಮತ್ತು ಜಪಾನಿನ ಯುವಕರಿಗೆ ಸ್ಫೂರ್ತಿ ನೀಡಿದರು. ಅಲ್ಲದೆ, ಅವರನ್ನು ಗೌರವದಿಂದ ‘ಸೆನ್ಸೈ’ ಎಂದು ಸಂಬೋಧಿಸಿದರು. ನಂತರ, ಎರಡನೇ ಮಹಾಯುದ್ಧದ ಸಮಯದಲ್ಲಿ, ಇದೇ ರಾಶ್ ಬಿಹಾರಿ ಬೋಸ್ ಭಾರತೀಯ ರಾಷ್ಟ್ರೀಯ ಸೇನೆಯ ಸ್ಥಾಪಕರಲ್ಲಿ ಒಬ್ಬರಾದರು.
ಇಂದಿಗೂ, ಟೋಕಿಯೋದ ಆ ಬೇಕರಿಯಲ್ಲಿ ‘Indo Curry’ಯ ಸುವಾಸನೆ ಹರಡಿದಾಗ, ಅದು ಕೇವಲ ಒಂದು ಖಾದ್ಯವಲ್ಲ; ಬದಲಾಗಿ, ಧೈರ್ಯ, ತ್ಯಾಗ ಮತ್ತು ಎಂದಿಗೂ ತಲೆಬಾಗದ ಭಾರತದ ಕಥೆಯನ್ನು ಹೇಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



