
25 ನೇ ಮೇ 1899 ರಂದು, ಚುರುಲಿಯಾ ಎಂಬ ಪ್ರಶಾಂತ ಗ್ರಾಮದಲ್ಲಿ ಮಗುವೊಂದು ಜನಿಸಿತು. ಆ ಮಗು ಒಂದು ದಿನ ಶಸ್ತ್ರಗಳಲ್ಲಿದೆಯೇ, ಪದಗಳ ಮೂಲಕ ರಾಷ್ಟ್ರವನ್ನೇ ಎಚ್ಚರಿಸುವ ಕವಿಯಾಗುತ್ತಾನೆ ಎಂದು ಬಹುಶಃ ಅಂದು ಯಾರೂ ಅಂದುಕೊಂಡಿರಲಿಲ್ಲ. ಅವರೇ ಕಾಜಿ ನಜ್ರುಲ್ ಇಸ್ಲಾಮ್.
ನಜ್ರುಲ್ ಅವರ ಬಾಲ್ಯ ದುಃಖ ಮತ್ತು ಹೋರಾಟಗಳಿಂದ ತುಂಬಿತ್ತು. ಗ್ರಾಮದ ಮಸೀದಿಯಲ್ಲಿ ಕೆಲಸ ಮಾಡುವುದರಿಂದ ಹಿಡಿದು, ಪ್ರವಾಸಿ ನಾಟಕ ತಂಡಗಳಲ್ಲಿ ನಟಿಸುವುದು, ನಂತರ ಮೊದಲನೇ ಜಾಗತಿಕ ಸಮರದಲ್ಲಿ ಬ್ರಿಟಿಷ್ ಭಾರತೀಯ ಸೈನ್ಯದಲ್ಲಿ ಸೇವೆ — ಶಿಸ್ತು ಮತ್ತು ಅನ್ಯಾಯ ಎರಡನ್ನೂ ಅವರು ನಿಕಟವಾಗಿ ಕಂಡರು. ಅನ್ಯಾಯವು ಅವರ ಹೃದಯದಲ್ಲಿ ಗಾಢವಾಗಿ ನೆಲೆಯಾಯಿತು.
ನಜ್ರುಲ್ ಯಾವತ್ತೂ ಒಂದೇ ವಿಧಾನಕ್ಕೆ ಸೀಮಿತರಾಗಿರಲಿಲ್ಲ. ಕವಿತೆ, ಗೀತೆ, ಪ್ರಬಂಧ, ರಾಜಕೀಯ ಲೇಖನಗಳು — ಪ್ರತಿಯೊಂದೂ ವಿಶಿಷ್ಟ ಶಕ್ತಿಯನ್ನು ಹೊಂದಿತ್ತು. ಅವರ ಮಾತುಗಳು ಭಕ್ತಿಪರವಾಗಿದ್ದವು, ಅವರ ಸಾಹಿತ್ಯದ ಮೂಲಕ ಎಲ್ಲಾ ಭಾರತೀಯ ಎಲ್ಲಾ ಸಂಪ್ರದಾಯಗಳನ್ನು ಆಲಿಂಗಿಸಬಹುದಾಗಿತ್ತು. ಅಷ್ಟೇ ಅಲ್ಲ ದಮನ ಮತ್ತು ಅಸಮಾನತೆಯ ವಿರುದ್ಧ ಉಗ್ರವಾಗಿ ಬಂಡಾಯವೇಳುವಂತಹ ಬರಹಗಳೂ ಅವರ ಮೂಲಕ ಮೂಡಿಬಂದಿವೆ.
ನಜ್ರುಲ್ ಬಲು ಅಪರೂಪದ ಕವಿ. ದೇವರ ಹಾಡುಗಳನ್ನು ರಚಿಸಿದಷ್ಟೇ ಉತ್ಸಾಹದಿಂದ ಕಾಳಿ ದೇವಿಗೆ ಗೀತೆಗಳನ್ನು ಬರೆದರು. ನಂಬಿಕೆ ಮತ್ತು ಸ್ವಾತಂತ್ರ್ಯ ಎರಡಕ್ಕೂ ಧ್ವನಿ ನೀಡಿದವರು. ಬಂಡಾಯದ ನಿಜವಾದ ಪರಿಪೂರ್ಣತೆ ದೈವೀಕತೆಯ ಮೂಲಕವೇ ಸಾಧ್ಯ ಎಂದು ಸಾಬೀತುಪಡಿಸಿದವರು. ಆದರೆ ಅವರ ಎಲ್ಲಾ ಪ್ರಬಲ ರಚನೆಗಳ ನಡುವೆ ಒಂದು ಕೃತಿ ತನ್ನ ಕಾಲದ ಅನಿವಾರ್ಯತೆಯನ್ನು ಅತ್ಯಂತ ತೀವ್ರವಾಗಿ ಸೆರೆಹಿಡಿಯಿತು. ಅದುವೇ ಭಂಗಾರ್ ಗಾನ್ (ಭಂಗಾರ್ ಗೀತೆ — ಸಂಕೋಲೆ ಒಡೆಯುವ ಗೀತೆ).
1920 ರ ದಶಕದ ಆರಂಭದಲ್ಲಿ ಭಾರತ ಅಸ್ಥಿರವಾಗಿತ್ತು. ಜನರು ಸ್ವಾತಂತ್ರ್ಯ ಬಯಸುತ್ತಿದ್ದರು, ಆದರೆ ಭಯವು ಅವರ ಕ್ರಿಯೆಗಳನ್ನು ನಿಯಂತ್ರಿಸುತ್ತಿತ್ತು. ಆಗ ನಜ್ರುಲ್ ಅವರು ನಿಜವಾದ ಸಂಕೋಲೆ ದೈಹಿಕವಲ್ಲ, ಮಾನಸಿಕವಾಗಿದೆ ಎಂದು ಗುರುತಿಸಿದರು. ಆದ್ದರಿಂದ ಅವರು ಆ ಭಯವನ್ನು ತೊಡೆದು ಹಾಕುವಂತಹ ಗೀತೆಯನ್ನು ರಚಿಸಿದರು. ಭಂಗಾರ್ ಗಾನ್ನಲ್ಲಿ “ಭಂಗ” (ಒಡೆಯುವುದು) ಎಂದರೆ ಜೀವಗಳನ್ನು ನಾಶಮಾಡುವುದಲ್ಲ, ಭಯ, ಮೌನ ಮತ್ತು ಅಧೀನತೆಯನ್ನು ನಾಶಮಾಡುವುದು. ಅವರ ಪದಗಳು ಬಂಡಾಯದ ಲಯವನ್ನು ಹೊಂದಿದ್ದವು:“ನಾವು ಎಲ್ಲಾ ಸಂಕೋಲೆಗಳನ್ನು ಒಡೆಯುತ್ತೇವೆ, ಎಲ್ಲಾ ತಡೆಗಳನ್ನು ಒಡೆಯುತ್ತೇವೆ, ಭಯದ ಜೈಲನ್ನು ತುಂಡುತುಂಡಾಗಿಸುತ್ತೇವೆ.”
ಈ ಸಾಲುಗಳು ಕೇವಲ ಕವಿತೆಯಾಗಿರಲಿಲ್ಲ — ಅವು ಎಚ್ಚರಿಕೆಯ ಆದೇಶವಾಗಿದ್ದವು. ಗೀತೆ ಬೇಗನೆ ಹರಡಿತು. ವಿದ್ಯಾರ್ಥಿಗಳು ಹಾಸ್ಟೆಲ್ಗಳಲ್ಲಿ ಗುಣುಗುಟ್ಟಿದರು, ಕಾರ್ಮಿಕರು ಸಭೆಗಳಲ್ಲಿ ಪುನರಾವರ್ತಿಸಿದರು. ಯುವ ಮನಸ್ಸುಗಳಲ್ಲಿ ಹೊಸ ಭಾವನೆ ಹುಟ್ಟಿತು- ಅದುವೇ ಧೈರ್ಯ. ಬ್ರಿಟಿಷರು ಈ ಅಪಾಯವನ್ನು ಅರ್ಥಮಾಡಿಕೊಂಡರು. ಇದು ಕೇವಲ ಸಾಹಿತ್ಯವಲ್ಲ, ಧೈರ್ಯದ ಪ್ರಸಾರವಾಗಿತ್ತು. ಬೇಗನೆ ಭಂಗಾರ್ ಗಾನ್ ಮತ್ತು ನಜ್ರುಲ್ ಅವರ ಇತರ ಲೇಖನಗಳ ಮೇಲೆ ನಿಷೇಧ ಹೇರಲಾಯಿತು. ಪ್ರತಿಗಳನ್ನು ವಶಪಡಿಸಿಕೊಳ್ಳಲಾಯಿತು, ಪ್ರಕಟಣೆಗಳನ್ನು ನಿರ್ಬಂಧಿಸಲಾಯಿತು. ನಜ್ರುಲ್ ಅವರನ್ನು ಅಪಾಯಕಾರಿ ವ್ಯಕ್ತಿ ಎಂದು ಗುರುತಿಸಲಾಯಿತು ಮತ್ತು ಬಂಧಿಸಲಾಯಿತು. ಆದರೆ ಜೈಲು ಅವರ ಧ್ವನಿಯನ್ನು ನಿಶ್ಚಲಗೊಳಿಸಲಿಲ್ಲ. ಅಧಿಕಾರಿಗಳು ಅವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದಾಗ, ನಜ್ರುಲ್ ವಾರಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರು. ದೇಹ ಕ್ಷೀಣಿಸಿತು, ಆದರೆ ಸಂಕಲ್ಪ ಕ್ಷೀಣಿಸಲಿಲ್ಲ. ಆ ಸತ್ಯಾಗ್ರಹವು ಬಂಗಾಳವನ್ನೇ ಕಂಪಿಸಿತು. ರವೀಂದ್ರನಾಥ ಟಾಗೋರ್ ಕೂಡ ಅವರನ್ನು ಉಪವಾಸ ಮುಂದುವರಿಸದಂತೆ, ರಾಷ್ಟ್ರಕ್ಕಾಗಿ ಜೀವವನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಿದರು. ನಜ್ರುಲ್ ಕೊನೆಗೆ ಉಪವಾಸ ಅಂತ್ಯಗೊಳಿಸಿದರು — ಆದರೆ ತಮ್ಮ ಸ್ಫೂರ್ತಿಯನ್ನು ಎಂದಿಗೂ ಅಂತ್ಯಗೊಳಿಸಲಿಲ್ಲ. ಏಕೆಂದರೆ ಅವರ ಪದಗಳು ಈಗಾಗಲೇ ಜೈಲಿನಿಂದ ಹೊರಬಂದಿದ್ದವು. ಬ್ರಿಟಿಷರು ಅವರ ಲೇಖನಗಳನ್ನು ನಿಷೇಧಿಸಿದರೂ, ಅವುಗಳನ್ನು ಜನರಿಗೆ ಮರೆಯಲು ಸಾಧ್ಯವಾಗಲಿಲ್ಲ. ಗೀತೆಗಳು ಸ್ಮೃತಿಯಲ್ಲಿ, ಧ್ವನಿಗಳಲ್ಲಿ, ಧೈರ್ಯದಲ್ಲಿ ಜೀವಂತವಾಗಿದ್ದವು.
ನಜ್ರುಲ್ ಕವಿತೆಯನ್ನು ಶಕ್ತಿಯಾಗಿ ಪರಿವರ್ತಿಸಿದ್ದರು .ಅವರ ಜನ್ಮ ದಿನಾಚರಣೆಯಂದು ನಾವು ಕೇವಲ ಒಬ್ಬ ಕವಿಯನ್ನಲ್ಲ, ಒಂದು ಶಕ್ತಿಯನ್ನು ಸ್ಮರಿಸುತ್ತೇವೆ. ಬ್ರಿಟಿಷರು ನಮ್ಮನ್ನು ಜಾತಿ-ಮತಗಳಾಗಿ ಒಡೆಯುತ್ತಿದ್ದಾಗ ರಾಷ್ಟ್ರದ ಬಗ್ಗೆ ಹಾಡು ಕಟ್ಟಿದವರು ಅವರು. ಭಯದ ಕಾಲದಲ್ಲಿ ಧೈರ್ಯದ ಗೀತೆ ಹಾಡಿದವರು, ಒಂದು ಸರಳ ಗೀತೆಯನ್ನು ಮೌನವನ್ನು ತೊರೆಯದ ಚಳುವಳಿಯಾಗಿ ಪರಿವರ್ತಿಸಿದವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



