
ಅದು ಡಿಸೆಂಬರ್ 25, 1934 ರ ರಾತ್ರಿ, ಸಾಮಾನ್ಯವಾಗಿ ಆರುತ್ತಿದ್ದ ವಾರ್ಧಾದ ಸತ್ಯಾಗ್ರಹ ಆಶ್ರಮದ ದೀಪಗಳು ಅಂದು ಉರಿಯುತ್ತಿದ್ದವು, ಮಹಾತ್ಮ ಗಾಂಧಿಯವರು ತಮ್ಮ ಎಂದಿನ ಸಮಯವನ್ನೂ ಮೀರಿ ಅಂದು ಎಚ್ಚರವಾಗಿದ್ದರು. ಯಾವುದೋ ರಾಜಕೀಯ ತುರ್ತು ಸ್ಥಿತಿ ಅಥವಾ ಸ್ವಾತಂತ್ರ್ಯ ಚಳವಳಿಯ ಬಿಕ್ಕಟ್ಟಿನ ಕಾರಣಕ್ಕಾಗಿ ಅಲ್ಲ, ಬದಲಿಗೆ ತಾನು ಮೊದಲ ಬಾರಿಗೆ ಭೇಟಿಯಾದ ಸಂಘಟನೆಯ ಬಗ್ಗೆ ಅವರ ಮನಸ್ಸು ಶಾಂತಚಿತ್ತವಾಗಿ ಆಳವಾಗಿ ಯೋಚಿಸುತ್ತಿತ್ತು. ಆ ಸಂಘಟನೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ.
ಅದಕ್ಕೂ ಮೊದಲು ಗಾಂಧಿಯವರು ವಾರ್ಧಾ-ಶೆಗಾಂವ್ ರಸ್ತೆಯುದ್ದಕ್ಕೂ ತೆರೆದ ಮೈದಾನದಲ್ಲಿ ಆರ್ಎಸ್ಎಸ್ ನಡೆಸುತ್ತಿದ್ದ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ್ದರು. ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಸುಮಾರು 1,500 ಸ್ವಯಂಸೇವಕರು ಅಲ್ಲಿ ಜಮಾಯಿಸಿದ್ದನ್ನು ಕಂಡು ಬೆರಗಾಗಿದ್ದರು. ಎಲ್ಲರೂ ತಮ್ಮ ಸ್ವಂತ ಖರ್ಚಿನಲ್ಲಿ ಆಗಮಿಸಿ, ತಮ್ಮದೇ ಆದ ಹಾಸಿಗೆ ಮತ್ತು ಸರಬರಾಜುಗಳನ್ನು ಹೊತ್ತುಕೊಂಡು, ಕಠಿಣವಾದ ಪರಿಸ್ಥಿತಿಗಳಲ್ಲಿ ಅಲ್ಲಿ ಒಟ್ಟಿಗೆ ವಾಸಿಸುತ್ತಿದ್ದನ್ನು ಕಂಡು ಪುಳಕಿತರಾಗಿದ್ದರು. ಗಾಂಧೀಜಿಯವರನ್ನು ಆಕರ್ಷಿಸಿದ್ದು ಕೇವಲ ಅಲ್ಲಿ ನೆರೆದಿದ್ದವರ ಸಂಖ್ಯೆಗಳಲ್ಲ, ಬದಲಾಗಿ ಅಲ್ಲಿನ ವಾತಾವರಣ – ಬಲವಂತವಿಲ್ಲದ ಶಿಸ್ತು, ಅವ್ಯವಸ್ಥೆಯಿಲ್ಲದ ಸರಳತೆ ಮತ್ತು ಸಮಾನತೆ. ಅಲ್ಲಿ ವಿವಿಧ ಜಾತಿಗಳ ಯುವಕರು ಯಾವುದೇ ಭೇದವಿಲ್ಲದೆ ಒಟ್ಟಿಗೆ ತಿನ್ನುತ್ತಿದ್ದರು, ಕೆಲಸ ಮಾಡುತ್ತಿದ್ದರು ಮತ್ತು ವಾಸಿಸುತ್ತಿದ್ದರು.
ನೆನಪಿನಲ್ಲಿ ಉಳಿಯುವ ಆ ಸಂವಾದ
ಆರ್ಎಸ್ಎಸ್ ಸಂಸ್ಥಾಪಕ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಜಿ ಅವರು ಒಂದು ಸಂಜೆ ವಾರ್ಧಾಕ್ಕೆ ಬಂದಾಗ, ಗಾಂಧಿಯವರು ಅವರನ್ನು ಖಾಸಗಿ ಸಂಭಾಷಣೆಗಾಗಿ ತಮ್ಮ ಆಶ್ರಮಕ್ಕೆ ಆಹ್ವಾನಿಸಿದ್ದರು. ಈ ವೇಳೆ ಮಹಾದೇವಭಾಯಿ ದೇಸಾಯಿ ಮತ್ತು ಕೆಲವು ಆಪ್ತರು ಕೂಡ ಹಾಜರಿದ್ದರು. ಅವರು ನೆಲದಲ್ಲಿ ಹರಡಿದ ಹಾಸಿಗೆಗಳ ಮೇಲೆ ಕುಳಿತು ಚರ್ಚೆಯಲ್ಲಿ ಜೊತೆಗೂಡಿದರು.
ಆರ್ಎಸ್ಎಸ್ ಶಿಬಿರದಲ್ಲಿ ತಾನು ಕಂಡದ್ದನ್ನು ನೆನಪಿಸಿಕೊಳ್ಳುವ ಮೂಲಕ ಚರ್ಚೆಯನ್ನು ಪ್ರಾರಂಭಿಸಿದ ಗಾಂಧಿಯವರು, ಯುವಕರಲ್ಲಿನ ಶಿಸ್ತು, ಶಾಂತತೆ, ಅಷ್ಟು ದೊಡ್ಡ ಸಂಖ್ಯೆಯ ಸ್ವಯಂಸೇವಕರ ಉಪಸ್ಥಿತಿಯಲ್ಲೂ ಕಾಣದ ಅವ್ಯವಸ್ಥೆ, ತಾರತಮ್ಯಗಳನ್ನು ಮೀರಿ ಹಿಂದೂಗಳು ಸಮಾನರಾಗಿ ಬದುಕುವ ಅಸಾಮಾನ್ಯ ದೃಶ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ನಂತರ ಅವರು ಹೆಡ್ಗೆವಾರ್ ಜಿ ಅವರನ್ನು ಸಂಘದ ಅಡಿಪಾಯ, ಅದರ ಶಿಸ್ತು, ಸಂಘಟನೆ ಮತ್ತು ಅದರ ಹಣಕಾಸಿನ ಬಗ್ಗೆಯೂ ಪ್ರಶ್ನಿಸಿದರು. ಬಾಹ್ಯ ನಿಧಿಯಿಲ್ಲದೆ ಇಷ್ಟು ದೊಡ್ಡ ಸಂಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲವೂ ಅವರಲ್ಲಿತ್ತು. ಸಂಘವು ಸಂಪೂರ್ಣವಾಗಿ ಸ್ವಯಂಪ್ರೇರಿತ ಗುರು ದಕ್ಷಿಣೆಯ ಮೇಲೆ ಅವಲಂಬಿತವಾಗಿದೆ ಮತ್ತು ಪ್ರತಿಯೊಬ್ಬ ಸ್ವಯಂಸೇವಕನು ತನ್ನ ಸ್ವಂತ ಖರ್ಚುಗಳನ್ನು ತಾನೇ ಭರಿಸುತ್ತಾನೆ ಎಂಬ ಹೆಡ್ಗೆವಾರ್ ಮಾತು ಗಾಂಧೀಜಿಯವರನ್ನು ಆಶ್ವರ್ಯಚಕಿತಗೊಳಿಸಿತ್ತು. ಸಂಘವು ಸ್ವಾವಲಂಬನೆಯನ್ನು ಪ್ರಜ್ಞಾಪೂರ್ವಕವಾಗಿ ಆರಿಸಿಕೊಂಡಿದೆ ಎಂಬುದನ್ನು ಹೆಡ್ಗೇವಾರ್ ಅವರು ಗಾಂಧೀಜಿಗೆ ವಿವರಿಸಿದ್ದರು.
ನಂತರ ಅವರ ನಡುವಣ ಸಂಭಾಷಣೆ ರಾಜಕೀಯದ ಕಡೆಗೆ ಹೊರಳಿತ್ತು. ಒಂದೊಮ್ಮೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನೊಂದಿಗೆ ಸಂಬಂಧ ಹೊಂದಿದ್ದ ಹೆಡ್ಗೆವಾರ್ ಜಿ ಪ್ರತ್ಯೇಕ ಸಂಘಟನೆಯನ್ನು ಏಕೆ ರಚಿಸಿದರು ಎಂದು ಗಾಂಧಿ ಅತ್ಯಂತ ಕುತುಹಲದಿಂದ ಕೇಳಿದರು. ಇದಕ್ಕುತ್ತರಿಸಿದ ಹೆಡ್ಗೆವಾರ್ ಜಿ, “ಕಾಂಗ್ರೆಸ್ ರಾಜಕೀಯ ಉದ್ದೇಶಗಳಿಗಾಗಿ ಸ್ವಯಂಸೇವಕರನ್ನು ಸಜ್ಜುಗೊಳಿಸಿದರೆ, ಸಂಘವು ರಾಜಕೀಯ ಗುರಿಗಳನ್ನು ಮೀರಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಸಾಮರ್ಥ್ಯವಿರುವ ವ್ಯಕ್ತಿತ್ವದ ಪುರುಷರನ್ನು ನಿರ್ಮಿಸಲು ಪ್ರಯತ್ನಿಸುತ್ತದೆ” ಎಂದಿದ್ದರಯ.
ಉಭಯ ನಾಯಕರ ಮಾತುಕತೆಗಳ ನಡುವೆ ಗಡಿಯಾರ ರಾತ್ರಿ 9 ಬಾರಿಸಿತ್ತು, ಮೀರಾಬೆನ್ ಅವರು ಗಾಂಧಿಯವರಿಗೆ ವಿಶ್ರಾಂತಿ ಪಡೆಯುವ ಸಮಯ ಆಯಿತು ಎಂದು ನೆನಪಿಸಿದರು. ಹೆಡ್ಗೆವಾರ್ ಜಿ ಎದ್ದರು. ಆದರೆ, ಗಾಂಧಿ ಚರ್ಚೆಯನ್ನು ಮತ್ತಷ್ಟು ಮುಂದುವರೆಸುವ ಆಶಯ ವ್ಯಕ್ತಪಡಿಸಿದರು
“ನಾವು ಸ್ವಲ್ಪ ಹೊತ್ತು ನಮ್ಮ ಸಂಭಾಷಣೆಯನ್ನು ಮುಂದುವರಿಸಬಹುದೇ. ನಾನು ಇನ್ನೊಂದು ಅರ್ಧ ಗಂಟೆ ಎಚ್ಚರವಾಗಿರುತ್ತೇನೆ” ಎಂದರು.
ಆ ಅರ್ಧ ಗಂಟೆಯ ಸಮಯ ಮತ್ತಷ್ಟು ವಿಚಾರಗಳು ವಿನಿಮಯಗೊಂಡವು. ಸ್ವಯಂಸೇವಕ ಎಂದರೆ ನಿಜವಾಗಿಯೂ ಯಾರು, ಬಲವಂತವಿಲ್ಲದೆ ಶಿಸ್ತನ್ನು ಹೇಗೆ ಮೈಗೂಡಿಸಿಕೊಳ್ಳುತ್ತಾನೆ, ಸ್ವಯಂಸೇವಕ ತನ್ನ ನಿತ್ಯ ಜೀವನದಲ್ಲಿ ಸಮಾನತೆಯನ್ನು ಹೇಗೆ ಅಳವಡಿಸಿಕೊಳ್ಳುತ್ತಾನೆ ಎಂಬಿತ್ಯಾದಿ ಕುತೂಹಕಭರಿತ ಪ್ರಶ್ನೆಗಳನ್ನು ಗಾಂಧೀಜಿಯವರು ಹೆಡ್ಗೆವಾರ್ ಜೀ ಮುಂದಿಟ್ಟರು. ಸ್ವಯಂಸೇವಕ ಎಂದರೆ ಅನುಯಾಯಿಯಲ್ಲ, ಬದಲಾಗಿ ದೇಶದ ಸ್ವಯಂ ಪ್ರೇರಿತ ಸೇವಕ, ಆಲೋಚನೆ ಮತ್ತು ಕಾರ್ಯಗಳಲ್ಲಿ ತಾರತಮ್ಯವನ್ನು ತಿರಸ್ಕರಿಸಲು ತರಬೇತಿ ಪಡೆದವನು ಎಂದು ಹೆಡ್ಗೆವಾರ್ ಜಿ ಉತ್ತರಿಸಿದರು.
“ಸ್ವಯಂಸೇವಕ ಎಂದರೆ ರಾಷ್ಟ್ರದ ಸರ್ವತೋಮುಖ ಪ್ರಗತಿಗಾಗಿ ತನ್ನ ಮನಸ್ಸು, ಹೃದಯ, ಆತ್ಮ ಮತ್ತು ತನ್ನ ಎಲ್ಲಾ ಸಂಪನ್ಮೂಲಗಳನ್ನು ತ್ಯಾಗ ಮಾಡಲು ಸಿದ್ಧನಾಗಿರುವ ನಾಯಕ. ಸಂಘದಲ್ಲಿ, ನಾವು ಅಂತಹ ಸ್ವಯಂಸೇವಕರ ಪಾತ್ರವನ್ನು ನಿರ್ಮಿಸುವತ್ತ ಗಮನ ಹರಿಸುತ್ತೇವೆ. ನಾವೆಲ್ಲರೂ ಸ್ವಯಂಸೇವಕರು, ನಾವು ಸಮಾನರು ಮತ್ತು ಎಲ್ಲರನ್ನೂ ಒಂದೇ ಮಟ್ಟದಲ್ಲಿ ಪ್ರೀತಿಸುತ್ತೇವೆ ಎಂಬುದನ್ನು ನಾವು ಸದಾ ನೆನಪಿಸಿಟ್ಟುಕೊಳ್ಳುತ್ತೇವೆ” ಎಂದರು.
“ನಾವು ಯಾವುದೇ ರೀತಿಯ ತಾರತಮ್ಯವನ್ನು ಬೆಂಬಲಿಸುವುದಿಲ್ಲ. ಸಂಘದ ಕೆಲಸದ ತ್ವರಿತ ಬೆಳವಣಿಗೆಯ ರಹಸ್ಯ ಅದು, ಅದು ಕೂಡ ಹಣ ಅಥವಾ ಯಾವುದೇ ಇತರ ಸೌಲಭ್ಯಗಳಿಲ್ಲದೆ” ಎಂದರು.
ಗಾಂಧೀ ಹೆಡ್ಗೇವಾರ್ ಮಾತುಗಳನ್ನು ತದೇಕಚಿತ್ತದಿಂದ ಆಲಿಸಿದರು. ಸಂಘಕ್ಕೆ ಸಂಪೂರ್ಣವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ನಂತರ ವೈದ್ಯಕೀಯ ವೃತ್ತಿ ಮತ್ತು ಕುಟುಂಬ ಜೀವನವನ್ನು ತ್ಯಾಗ ಮಾಡಿದ ಅವರ ನಿಲುವು ಗಾಂಧೀಜಿಯವರಿಗೆ ಹೆಡ್ಗೇವಾರ್ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿತು.
ಇಬ್ಬರ ಸಂವಾದ ಮುಕ್ತಾಯವಾದಾಗ, ಗಾಂಧಿಯವರು ಅವರನ್ನು ಆಶ್ರಮದ ಬಾಗಿಲಿನವರೆಗೂ ಬಂದು ಬೀಳ್ಕೊಟ್ಟರು ಮತ್ತು ವಾರ್ಧಾದ ಆ ರಾತ್ರಿಯ ನಿಶ್ಯಬ್ದತೆಯಲ್ಲಿ ನೆನಪಿನಲ್ಲಿ ಉಳಿಯುವಂತಹ ಮಾತಗಳನ್ನಾಡಿದರು, “ನಿಮ್ಮ ವ್ಯಕ್ತಿತ್ವದ ಬಲ ಮತ್ತು ಕೆಲಸದ ಮೇಲಿನ ಅಚಲ ನಂಬಿಕೆಯಿಂದ ನೀವು ಖಂಡಿತವಾಗಿಯೂ ನಿಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ”.
ಹೀಗೆ ಆ ಸಂಜೆ ಕೊನೆಗೊಂಡಿತು, ಭಾರತದ ಅತ್ಯಂತ ಗೌರವಾನ್ವಿತ ನಾಯಕ ಯಾರದ್ದೋ ಮನವೊಲಿಸಲು ಅಲ್ಲ, ಚರ್ಚೆ ಮಾಡಲು ಅಲ್ಲ, ಆದರೆ ಸಂಘವನ್ನು ಅರ್ಥಮಾಡಿಕೊಳ್ಳಲು ಅಂದು ಎಚ್ಚರವಾಗಿದ್ದರು, ಆ ಸಂಜೆ ಅವರಿಗೆ ಅತಿ ಭಿನ್ನವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



