
ಕೇವಲ ರೂ 4,000ಕ್ಕಿಂತಲೂ ಕಡಿಮೆ ಮೊತ್ತದ ದರೋಡೆ ಪ್ರಕರಣವೊಂದನ್ನು ಭೇದಿಸಲು ಬ್ರಿಟಿಷರು ಬರೋಬ್ಬರಿ 8 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ ಘಟನೆಯ ಬಗ್ಗೆ ನಿಮಗೆ ಗೊತ್ತೆ? ಅಂದರೆ ದರೋಡೆ ಆದ ಮೊತ್ತಕ್ಕಿಂತ ಸುಮಾರು 200 ಪಟ್ಟು ಹೆಚ್ಚು ಮೊತ್ತವನ್ನು ಬ್ರಿಟಿಷರು ವ್ಯಯಿಸಿದ್ದರು. ಹಾಗಾದರೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಈ ದರೋಡೆ ಮಾಡಿದ್ದೇಕೆ? ಬ್ರಿಟಿಷರು ಆ ಭಾರತೀಯರನ್ನು ವಿಚಾರಣೆಗೊಳಪಡಿಸಲು ಇಷ್ಟೊಂದು ಮೊತ್ತದ ಹಣವನ್ನು ಖರ್ಚು ಮಾಡಿದ್ದಾದರು ಯಾಕೆ ಮತ್ತು ಯಾವಾಗ?
1925 ಆಗಸ್ಟ್ 9ರಂದು ಲಕ್ನೋ ಸಮೀಪದ ಕಾಕೋರಿಯಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್ಆರ್ಎ)ಗೆ ಸೇರಿದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಸಣ್ಣ ತಂಡವೊಂದು ರೈಲನ್ನು ನಿಲ್ಲಿಸಿ ವಶಹತುಶಾಹಿ ಆಡಳಿತಕ್ಕೆ ಸೇರಿದ ಸರ್ಕಾರಿ ಹಣವನ್ನು ವಶಕ್ಕೆ ಪಡೆದುಕೊಂಡಿತ್ತು. ಅವರು ದರೋಡೆ ಮಾಡಿದ ಮೊತ್ತ ಸುಮಾರು 4,000 ರಿಂದ 4,500 ರೂಪಾಯಿಗಳಾಗಿತ್ತು. ಬ್ರಿಟಿಷ್ ಸಾಮ್ರಾಜ್ಯಕ್ಕೆ ಈ ಮೊತ್ತ ಸಾಮಾನ್ಯವಾಗಿತ್ತು. ಬ್ರಿಟಿಷರಿಗೆ ಕಾಕೋರಿಯಕ್ಕು ಕಳೆದುಹೋದ ಹಣದ ಬಗ್ಗೆ ಅಲ್ಲ—ಅದು ಸಾಮ್ರಾಜ್ಯಶಾಹಿ ಅಧಿಕಾರಕ್ಕೆ ಎಸೆದ ಸವಾಲಿನ ಬಗ್ಗೆ ಚಿಂತೆ ಆರಂಭವಾಗಿತ್ತು. ಆದರೆ ಭಾರತೀಯ ಕ್ರಾಂತಿಕಾರಿಗಳು ಅನುಸರಿಸಿದ ವಿಧಾನ ಮಾತ್ರ ಬ್ರಿಟಿಷ್ ಇಂಡಿಯಾದ ಇತಿಹಾಸದಲ್ಲಿಯೇ ಅತಿದೊಡ್ಡ ಮಾನವ ಬೇಟೆಗೆ ಕಾರಣವಾಗಿತ್ತು, ದರೋಡೆಯಲ್ಲಿ ಭಾಗಿಯಾಗಿದ್ದ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಗಲ್ಲುಶಿಕ್ಷೆಗೂ ದಾರಿ ಮಾಡಿ ಕೊಟ್ಟಿತ್ತು. ಕಠೋರ ಶಿಕ್ಷೆಯ ಮೂಲಕ ಬ್ರಿಟಿಷರು ಭಾರತೀಯರಿಗೆ ಸ್ಪಷ್ಟ ಉದಾಹರಣೆಯೊಂದನ್ನು ನೀಡಲು ಬಯಸಿದ್ದರು.
ಈ ದರೋಡೆಯ ತನಿಖೆ ಒಂದು ಸಣ್ಣ ಸುಳಿವು ಬೆಡ್ಶೀಟ್ನೊಂದಿಗೆ ಆರಂಭಗೊಂಡಿತ್ತು. ಕಾಕೋರಿ ಸಮೀಪದ ಸ್ಥಳದಲ್ಲಿ ಕ್ರಾಂತಿಕಾರಿಗಳು ಬಿಟ್ಟುಹೋದ ಒಂದು ಬೆಡ್ಶೀಟ್ ಬ್ರಿಟಿಷರಿಗೆ ದೊಡ್ಡ ಮಟ್ಟದಲ್ಲೇ ಸುಳಿವುಗಳನ್ನು ನೀಡಿತ್ತು. ಕ್ರಾಂತಿಕಾರಿಗಳ ಸಣ್ಣ ನಿರ್ಲಲ್ಷ್ಯ ಅವರ ಜೀವನವನ್ನೇ ದುರಂತಕ್ಕೆ ತಳ್ಳಿತ್ತು. ಆ ಬೆಡ್ಶೀಟ್ನಲ್ಲಿ ಧೋಬಿಯ ಗುರುತಿನ ಚಿಹ್ನೆ ಇತ್ತು, ಲಾಂಡ್ರಿಯನ್ನು ಗುರುತಿಸಲು ಧೋಬಿಗಳು ಬಳಸುವ ಸಾಮಾನ್ಯ ವ್ಯವಸ್ಥೆ ಇದಾಗಿತ್ತು. ಈ ಸುಳಿವಿನ ಬೆನ್ನತ್ತಿದ ತನಿಖಾಧಿಕಾರಿಗಳು ಸ್ಥಳೀಯ ಧೋಬಿಗಳ ಮೂಲಕ ಆ ಚಿಹ್ನೆಯನ್ನು ಪತ್ತೆಹಚ್ಚಿ ಶಾಹಜಹಾನ್ಪುರದ ವ್ಯಾಪಾರಿ ಬನಾರಸೀಲಾಲ್ ಬಳಿ ತಲುಪಿಯೇ ಬಿಟ್ಟರು, ಬನಾರಸೀಲಾಲ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಎಚ್ಆರ್ಎಯ ಇತರ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರು.
ತಕ್ಷಣವೇ ಬನಾರಸೀಲಾಲ್ ಬಂಧನಕ್ಕೊಳಗಾದರು. ನಿರಂತರ ವಿಚಾರಣೆಗೊಳಗಾದರು. ಸಹಚರರಿಂದ ಬೇರ್ಪಟ್ಟು ಕಠಿಣ ಶಿಕ್ಷೆಯ ಬೆದರಿಕೆ ಎದುರಿಸಿದರು. ಅಂತಿಮವಾಗಿ ಕ್ರಾಂತಿಕಾರಿಗಳಿಗೆ ಸಂಬಂಧಿಸಿದ ಹೆಸರುಗಳು, ವಿಳಾಸಗಳು ಮತ್ತು ಸಭೆಯ ಸ್ಥಳಗಳನ್ನು ಬಾಯ್ಬಿಟ್ಟರು. ಕಾರ್ಯಪ್ರವೃತ್ತರಾದ ಬ್ರಿಟಿಷರು ರಾಷ್ಟ್ರವ್ಯಾಪಿಯಾಗಿ ಕ್ರಾಂತಿಕಾರಿಗಳ ಬಂಧನಕ್ಕೆ ಬಲೆ ಬೀಸಿದರು. 1925 ಸೆಪ್ಟೆಂಬರ್ 26ರ ರಾತ್ರಿ ಬ್ರಿಟಿಷ್ ಪೊಲೀಸ್ ಘಟಕಗಳು ಗುಪ್ತವಾಗಿ ತಯಾರಿಸಿದ ವಾರಂಟ್ಗಳನ್ನು ಜಾರಿಗೊಳಿಸಿ ಹಲವು ನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದರು. ಯಾವುದೇ ರೀತಿಯ ವಿರೋಧಗಳು ವ್ಯಕ್ತವಾಗದಂತೆ ಕಾರ್ಯಾಚರಣೆ ನಡೆಸಿದ್ದರು.
ಬೆಳಗ್ಗೆಯೊಳಗೆ ದೇಶದ ವಿವಿಧ ಭಾಗಗಳಿಂದ ಹದಿನಾರು ಕ್ರಾಂತಿಕಾರಿಗಳನ್ನು ಬಂಧಿಸಲಾಗಿತ್ತು. ಈ ದಾಳಿಯ ಮೂಲಕ ಚಳವಳಿಯ ನಾಯಕತ್ವವನ್ನು ಹೆಡೆಮುರಿ ಕಟ್ಟು ಒಂದೇ ಪ್ರಹಾರದಲ್ಲಿ ಅವರ ಮನೋಬಲವನ್ನು ಒಡೆಯುವ ಉದ್ದೇಶ ಹೊಂದಿತ್ತು. ಆದರೆ ಒಬ್ಬ ವ್ಯಕ್ತಿ ಬಂಧನದಿಂದ ತಪ್ಪಿಸಿಕೊಂಡ – ಅವರೇ ಚಂದ್ರಶೇಖರ ಆಜಾದ್. ಬಂಧನದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಆಜಾದ್ ಭೂಗತಗೊಂಡರು. ಬಳಿಕ ಮನೆ ಸೇರಿದಮತೆ ಸಂಪೂರ್ಣ ಸಂಪರ್ಕಗಳನ್ನು ತ್ಯಜಿಸಿ ಹೊಸ ಗುರುತುಗಳನ್ನು ಅಳವಡಿಸಿಕೊಂಡರು. ಅವರು ಬಂಧನದಿಂದ ತಪ್ಪಿಸಿಕೊಂಡಿದ್ದು ಬ್ರಿಟಿಷ್ ಆಡಳಿತವನ್ನು ಕುಪಿತಗೊಳ್ಳುವಂತೆ ಮಾಡಿತ್ತು.
ಬಂಧನಕ್ಕೊಳಪಟ್ಟ ಕ್ರಾಂತಿಕಾರಿಗಳ ವಿಚಾರಣೆಯೇ ಸಾಮ್ರಾಜ್ಯಶಾಹಿ ಶಕ್ತಿಯ ಪ್ರದರ್ಶನವಾಗಿತ್ತು. ಹತ್ತು ತಿಂಗಳ ಕಾಲ ಲಕ್ನೋದಲ್ಲಿ ಹಜ್ರತ್ಗಂಜ್ ಜಿಪಿಒದ ರಿಂಗ್ ಥಿಯೇಟರ್ ಹಾಲ್ನಲ್ಲಿ ಕಾಕೋರಿ ಷಡ್ಯಂತ್ರ ಪ್ರಕರಣದ ವಿಚಾರಣೆ ನಡೆಯಿತು. ಬ್ರಿಟಿಷರು ಪಂಡಿತ್ ಜಗತ್ ನಾರಾಯಣ್ ಮುಲ್ಲಾ ಅವರನ್ನು ಸಾರ್ವಜನಿಕ ಅಭಿಯೋಜಕರಾಗಿ ನೇಮಿಸಿ ಪ್ರತಿ ದಿನ ರೂ500 ವೇತನ ನೀಡಿದರು, ಆ ಕಾಲಕ್ಕೆ ಅತ್ಯಂತ ದೊಡ್ಡ ಮೊತ್ತ ಅದು. ಕೇವಲ ಕಾನೂನು ಕಾರ್ಯವಿಧಾನಗಳಿಗೆ ಬರೋಬ್ಬರಿ ರೂ.3 ಲಕ್ಷ ಖರ್ಚಾಯಿತು. ನ್ಯಾಯಾಧೀಶರು ಅಭಿಯೋಜಕರ ವಾದಗಳನ್ನು ಒಪ್ಪಿ 1927 ಏಪ್ರಿಲ್ 6 ರಂದು ತೀರ್ಪು ಘೋಷಿಸಿದರು. ಆದರೆ ತೀರ್ಪು ನ್ಯಾಯಸಮ್ಮತವಾಗಿರಲಿಲ್ಲ, ಬೆದರಿಕೆಯಲ್ಲಿ ಅಳೆಯಲ್ಪಟಂತೆ ತೋರಿತ್ತು.
1927 ಡಿಸೆಂಬರ್ನಲ್ಲಿ ಶಿಕ್ಷೆಗಳನ್ನು ವಿವರವಾಗಿ ಯೋಜಿಸಿ ಜಾರಿಗೊಳಿಸಲಾಯಿತು. ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಬಹುದು ಎಂಬ ಭಯದಿಂದ ರಾಜೇಂದ್ರ ನಾಥ್ ಲಾಹಿರಿಯನ್ನು 1927 ಡಿಸೆಂಬರ್ 17ರಂದು ಗೊಂಡಾದಲ್ಲಿ ಎರಡು ದಿನ ಮುಂಚಿತವಾಗಿಯೇ ಗಲ್ಲಿಗೇರಿಸಲಾಯಿತು. 1927 ಡಿಸೆಂಬರ್ 19ರಂದು ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಮತ್ತು ಠಾಕೂರ್ ರೋಷನ್ ಸಿಂಗ್ ಅವರನ್ನು ಗೋರಖ್ಪುರ, ಫೈಜಾಬಾದ್ ಮತ್ತು ಅಲಹಾಬಾದ್ಗಳಲ್ಲಿ ಗಲ್ಲಿಗೇರಿಸಲಾಯಿತು. ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯವು ಸಣ್ಣ ಸಾವಿರ ರೂಪಾಯಿಗಳ ದರೋಡೆಗೆ ಸೇಡು ತೀರಿಸಲು ಬರೋಬ್ಬರಿ ರೂ 8 ಲಕ್ಷ ಖರ್ಚು ಮಾಡಿತು. ಈ ಘಟನೆ ಇಂದಿಗೂ ಪ್ರತಿಧ್ವನಿಸುವ ಸತ್ಯವೊಂದನ್ನು ಬಹಿರಂಗಪಡಿಸಿತ್ತು ಅದೇನೆದರೆ “ಭಾರತೀಯರು ಇನ್ನು ಮುಂದೆ ಭಯಪಡುವುದಿಲ್ಲ ಎಂಬ ಆಲೋಚನೆ ಬ್ರಿಟಿಷರನ್ನು ಭಯಬೀಳಿಸಿತ್ತೇ ಹೊರತು ದರೋಡೆಯಾದ ಹಣವಲ್ಲ”.
ಸಶಸ್ತ್ರ ಪ್ರತಿರೋಧವನ್ನು ಕೊನೆಗೊಳಿಸುವ ಉದ್ದೇಶವನ್ನು ಕಾಕೋರಿ ಪ್ರಕರಣದ ತನಿಖೆ ಹೊಂದಿತ್ತು. ಆದರೆ ಬ್ರಿಟಿಷ್ ಸಾಮ್ರಾಜ್ಯದ ಸಂಪೂರ್ಣ ನಿಯಂತ್ರಣಕ್ಕೊಳಪಡದ ಭೂಗತ ಕ್ರಾಂತಿಕಾರಿ ಚಳುವಳಿಯ ಶಾಶ್ವತ ಸಂಕೇತವಾಗಿ ಹೊರಹೊಮ್ಮಿತು. ತಪ್ಪಿಸಿಕೊಂಡ ಕ್ಷಣದಿಂದಲೇ ಚಂದ್ರಶೇಖರ ಆಜಾದ್ ಬ್ರಿಟಿಷ್ ಪೊಲೀಸರಿಗೆ ಶಾಶ್ವತ ಆತಂಕವಾಗಿ ಪರಿಣಮಿಸಿದರು. ವರದಿಗಳು ಅವರ ಚಲನವಲನಗಳು, ಚಟುವಟಿಕೆಗಳು ಮತ್ತು ಶಂಕಿತ ಯೋಜನೆಗಳ ಬಗ್ಗೆ ಪದೇಪದೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಎಚ್ಚರಿಕೆಯನ್ನು ನೀಡುತ್ತಲೇ ಇದ್ದವು. ಆದರೂ ಪ್ರಯೋಜನವಾಗಿರಲಿಲ್ಲ, ಕಾಕೋರಿ ಪ್ರಕರಣದಲ್ಲಿ ನಡೆದ ಬಂಧನಗಳು ಮತ್ತು ವಿಚಾರಣೆಯು ಬ್ರಿಟಿಷರಿಗೆ ನ್ಯಾಯಾಲಯದಲ್ಲಿ ಗೆಲುವು ನೀಡಿದರೂ ಆಜಾದ್ ಭೂಗವಾಗಿದ್ದು ಕ್ರಾಂತಿಕಾರಿ ಚೈತನ್ಯ ಜೀವಂತವಾಗಿ ಉಳಿದಿದೆ ಎಂಬುದನ್ನು ಖಾತರಿಪಡಿಸಿತ್ತು. ಬ್ರಿಟಿಷರಿಗೆ ಇದು ದೊಡ್ಡ ಆತಂಕವನ್ನೇ ಸೃಷ್ಟಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



