ಪಾಲ್ತಾಡಿ: ಯಾವ ಸರಕಾರ ಬಂದರೂ ಜನರ ಮೂಲಭೂತ ಸೌಕರ್ಯಗಳನ್ನು ಈಡೇರಿಸಲು ವಿಫಲವಾಗುತ್ತಿದೆ. ಶಾಸಕರು, ಸಂಸದರು ಯಾರೇ ಆದರೂ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇದಕ್ಕೊಂದು ಉತ್ತಮ ನಿದರ್ಶನ ಬೆಳಂದೂರು ಜಿ.ಪಂ.ವ್ಯಾಪ್ತಿಯ ಅಂಕತ್ತಡ್ಕದಲ್ಲಿ ಕಂಡುಬರುತ್ತಿದೆ. ಮಾಡಾವು-ಬೆಳ್ಳಾರೆ ಸಂಪರ್ಕ ರಸ್ತೆಯಿಂದ ಅಂಕತ್ತಡ್ಕದಿಂದ ನಳೀಲು ಸಂಪರ್ಕ ರಸ್ತೆಯ ದುಸ್ಥಿತಿ ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.
ಈ ರಸ್ತೆಯು ಹಲವು ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಜತೆಗೆ ನಳೀಲು ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಸಂಪರ್ಕ ಕಲ್ಪಿಸುತ್ತದೆ. ದಿನನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತ್ತಿವೆ. ಆದರೆ ರಸ್ತೆಯ ಅಭಿವೃದ್ಧಿ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ರಸ್ತೆ ಅಭಿವೃದ್ಧಿಯ ಕುರಿತು ಗ್ರಾಮಸ್ಥರು ಬೊಬ್ಬೆ ಹಾಕಿ ಸೋತು ಹೋಗಿದ್ದಾರೆ.
ಕಚ್ಚಾ ರಸ್ತೆಯಾಗಿದ್ದ ಈ ರಸ್ತೆಯ ಸ್ಥಿತಿ 6 ವರ್ಷಗಳ ಹಿಂದೆ ಚೆನ್ನಾಗಿಯೇ ಇದ್ದ ಈ ರಸ್ತೆಯಲ್ಲಿ ವಾಹನಗಳು, ಪಾದಚಾರಿಗಳು ಸರಾಗವಾಗಿಯೇ ಸಾಗುತ್ತಿದ್ದರು. ಯಾವಾಗ ರಸ್ತೆಗೆ ಜಲ್ಲಿಕಲ್ಲು ಬಿತ್ತೋ ಅಲ್ಲಿಂದ ಗ್ರಹಚಾರ ಕೆಟ್ಟಂತಿದೆ. ಇದೀಗ ಎಲ್ಲಾ ಜಲ್ಲಿಕಲ್ಲುಗಳು ಎದ್ದು ಹೋಗಿದ್ದು, ವಾಹನಗಳ ಚಕ್ರದಡಿ ಸಿಲುಕಿ ರಟ್ಟುತ್ತಿವೆ. ವಾಹನಗಳು ವೇಗವಾಗಿ ತೆರಳುವ ಸಂದರ್ಭದಲ್ಲಿ ಜಲ್ಲಿಕಲ್ಲು ಪಾದಚಾರಿಗಳ ಮುಖಕ್ಕೆ ಬಡಿದ ಘಟನೆಯೂ ನಡೆದಿದೆ. ಹೀಗಾಗಿ ಜನ ರಸ್ತೆಯಲ್ಲಿ ನಡೆದಾಡುವುದಕ್ಕೂ ಹೆದರುತ್ತಾರೆ. ಡಾಮರು ಆಗುತ್ತದೆ ಎಂದು ಜಲ್ಲಿಕಲ್ಲು ಹಾಕಿದ್ದು ಬಿಟ್ಟರೆ ಬೇರೆ ಯಾವ ಕಾಮಗಾರಿಯೂ ನಡೆದಿಲ್ಲ.
ಈ ರಸ್ತೆಯು ಸರಕಾರಿ ಗೇರುತೋಪಿನ ಮಧ್ಯೆ ಹಾದು ಹೋಗುವ ಕಾರಣದಿಂದ ಇಲಾಖೆಯ ಆಕ್ಷೇಪದ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗೊಂಡಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿದೆ. ಹೀಗಾಗಿ ರಸ್ತೆ ದುರಸ್ತಿಯಾಗದೆ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಇನ್ನಾದರೂ ನಮ್ಮ ಹೆಮ್ಮೆಯ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಯತ್ತ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿಯ ನಿವಾಸಿಗಳ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.