
ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ್ದು, ಬರೋಬ್ಬರಿ 35 ವರ್ಷಗಳ ನಂತರ ಕಾಶ್ಮೀರವು ಭಾರತದಲ್ಲಿ ಹುಟ್ಟಿದ ಭಯೋತ್ಪಾದಕರಿಂದ ಮುಕ್ತವಾಗಿದೆ.
ಭಾರತದ ಸಾಧನೆಯನ್ನು ಶ್ಲಾಘಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದ ಭಯೋತ್ಪಾದನಾ ನಿಗ್ರಹ ನೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದಿದ್ದಾರೆ.
ಭಯೋತ್ಪಾದನಾ ನಿಗ್ರಹ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ಭಯೋತ್ಪಾದಕ ಜಾಲದ ಬಗ್ಗೆ ತನಿಖೆ ನಡೆಸಬೇಕು ಮತ್ತು ಅದರ ಸಾಮರ್ಥ್ಯಗಳನ್ನು ಸಮನ್ವಯಯುತವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದರು.
“ನಾವು ಇಡೀ ಭಯೋತ್ಪಾದಕ ಜಾಲದ ಮೇಲೆ ಸಮನ್ವಯಯುತ ಹಾಗೂ ಸಮಗ್ರ ರೀತಿಯಲ್ಲಿ ದಾಳಿ ನಡೆಸದ ಹೊರತು ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ” ಎಂದು ಸಚಿವರು ತಿಳಿಸಿದರು.
ಭಯೋತ್ಪಾದನೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಅನುಸರಿಸುತ್ತಿರುವ ‘ಶೂನ್ಯ ಸಹಿಷ್ಣುತೆ’ ನೀತಿಯು ವಾಸ್ತವ ನೆಲೆಯಲ್ಲಿ ನಿರ್ಣಾಯಕ ಫಲಿತಾಂಶಗಳನ್ನು ನೀಡಿದೆ ಎಂದು ಅಮಿತ್ ಶಾ ಹೇಳಿದರು.
“ಲಷ್ಕರ್ (ಲಷ್ಕರ್-ಎ-ತೈಬಾ) ಭಯೋತ್ಪಾದಕ ಲತೀಫ್ ಭಟ್ನ ನಿರ್ಮೂಲನೆಯೊಂದಿಗೆ, ಇಡೀ ಕಾಶ್ಮೀರವು ಭಾರತದಲ್ಲಿ ಹುಟ್ಟಿದ ಭಯೋತ್ಪಾದಕರಿಂದ ಮುಕ್ತವಾಗಿದೆ” ಎಂದು ಹೇಳಿದ ಅವರು, “35 ವರ್ಷಗಳ ನಂತರ ಈ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ತಿಳಿಸಿದರು.
15 ಲಕ್ಷ ರೂಪಾಯಿ ಬಹುಮಾನ ಘೋಷಿಸಲ್ಪಟ್ಟಿದ್ದ ಲತೀಫ್ ಭಟ್, ನವೆಂಬರ್ 11 ರಂದು ಸಿಆರ್ಪಿಎಫ್ ನೆಲೆ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ. ಈ ದಾಳಿಯಲ್ಲಿ ಮೂವರು ಅರೆಸೇನಾ ಸಿಬ್ಬಂದಿ ಗಾಯಗೊಂಡಿದ್ದರು. ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಈತನನ್ನು ಹತ್ಯೆಗೈದವು.
ಭಯೋತ್ಪಾದನೆ, ಸಂಘಟಿತ ಅಪರಾಧ ಮತ್ತು ಮಾದಕವಸ್ತುಗಳ ಹಾವಳಿ ಎಂಬ ಮೂರು ಪಿಡುಗುಗಳನ್ನು ನಿರ್ಮೂಲನೆ ಮಾಡಲು, ವಿದೇಶಗಳಲ್ಲಿ ಆಶ್ರಯ ಪಡೆದಿರುವ ಅಪರಾಧಿಗಳು ಮತ್ತು ಈ ಕೃತ್ಯಗಳ ಹಿಂದಿರುವ ಸೂತ್ರಧಾರಿಗಳನ್ನು ಭಾರತೀಯ ನ್ಯಾಯಾಲಯಗಳ ಮುಂದೆ ತರುವುದು ಅತ್ಯಗತ್ಯ ಎಂದು ಅಮಿತ್ ಶಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



