ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಡುವ ಉದ್ದೇಶದಿಂದ ಕೇಂದ್ರ ಸರಕಾರದ ಮೇಲೆ ಆರೋಪ ಮಾಡುವುದು ಮತ್ತು ಕೇಂದ್ರದ ವಿರುದ್ಧ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯುಪಿಎ ಸರಕಾರವು 2004ರಿಂದ 2014ರವರೆಗೆ ಅಧಿಕಾರದಲ್ಲಿ ಇದ್ದಾಗ 10 ವರ್ಷದಲ್ಲಿ ಪೆಟ್ರೋಲ್ ದರ ಶೇ 90ರಷ್ಟು ಏರಿಕೆ ಕಂಡಿತ್ತು. ಅದೇರೀತಿ ಡೀಸೆಲ್ ಬೆಲೆಯು ಶೇ 96ರಷ್ಟು ಬೆಲೆ ಏರಿಕೆ ಆಗಿತ್ತು ಎಂದು ಟೀಕಿಸಿದರು.
ಆದರೆ, ನರೇಂದ್ರ ಮೋದಿಜೀ ಅವರ ನೇತೃತ್ವದ ಎನ್ಡಿಎ ಸರಕಾರದಲ್ಲಿ 2014ರಿಂದ 2024ರ ನಡುವೆ ಪೆಟ್ರೋಲ್ ದರ 72 ರೂಪಾಯಿಯಿಂದ 100 ರೂ.ಗೆ ಏರಿದೆ. ಶೇ 38 ಹೆಚ್ಚಳವಾಗಿದೆ. ಡೀಸೆಲ್ ದರ 55 ರೂ. ಇದ್ದುದು 90 ರೂ. ಆಗಿದೆ. ಶೇ 63ರಷ್ಟು ಜಾಸ್ತಿ ಆಗಿದೆ ಎಂದು ತಿಳಿಸಿದರು.
ಹಿಂದೆ ಯುಪಿಎ ಸರಕಾರ ಇದ್ದಾಗ ತೈಲ ಬೆಲೆ ಹೆಚ್ಚಾದರೂ ಸಹ ಹಗರಣಗಳು ನಡೆದವೇ ವಿನಾ ಸ್ಕೀಂಗಳು ಯಾವುವೂ ಬಂದಿರಲಿಲ್ಲ. ಹಿಂದೆ ಡಾ. ಮನಮೋಹನ ಸಿಂಗ್ ಅವರ ಸರಕಾರ ಇದ್ದಾಗ, 2 ಜಿ ಹಗರಣ, ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣ ಸೇರಿ 12 ಲಕ್ಷ ಕೋಟಿ ಮೌಲ್ಯದ ಹಗರಣಗಳು ಆಗಿದ್ದವು ಎಂದು ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು.
ದೇಶದಲ್ಲಿ ಹಿಂದೆಂದೂ ಕೂಡ ಇಷ್ಟು ದೊಡ್ಡ ಹಗರಣಗಳು ನಡೆದಿರಲಿಲ್ಲ. ಆದರೆ ಯಾವುದೇ ಜನಪರ ಯೋಜನೆಗಳನ್ನು ಕೊಡುವುದರಲ್ಲಿ ಅಂದಿನ ಯುಪಿಎ ಸರಕಾರ ಸಂಪೂರ್ಣ ವಿಫಲವಾಗಿತ್ತು ಎಂದು ಗಮನಕ್ಕೆ ತಂದರು.
ಜನಾಕ್ರೋಶ ಯಾತ್ರೆಯು 9 ಜಿಲ್ಲೆಗಳಿಗೆ ಹೋಗಿದೆ. 1,115 ಕಿಮೀನಷ್ಟು ಪ್ರವಾಸ ಮಾಡಿದ್ದೇವೆ. ಈ ಯಾತ್ರೆಯು ರಾಜ್ಯದ ಪಕ್ಷದ ಎಲ್ಲ ಮುಖಂಡರು ಭಾಗವಹಿಸಿದ್ದರು ಎಂದು ವಿವರ ನೀಡಿದರು.
ಮೈಸೂರಿನಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮಂಡ್ಯದಲ್ಲಿ 4 ಸಾವಿರಕ್ಕೂ ಹೆಚ್ಚು, ಹಾಸನ- 5ರಿಂದ 6 ಸಾವಿರ ಜನರು, ಕೊಡಗು- 3.5ರಿಂದ 4 ಸಾವಿರ ಜನರು ಬಂದಿದ್ದರು. ಮಂಗಳೂರಿನಲ್ಲಿ ಮಳೆಯ ವಾತಾವರಣವಿದ್ದರೂ 9 ರಿಂದ 10 ಸಾವಿರ ಜನರು ಪಾಲ್ಗೊಂಡಿದ್ದರು. ಉಡುಪಿ ಜಿಲ್ಲೆಯಲ್ಲಿ 5.5ರಿಂದ 6 ಸಾವಿರ, ಚಿಕ್ಕಮಗಳೂರಿನಲ್ಲಿ 4ರಿಂದ 5 ಸಾವಿರ ಜನರು, ಯಲ್ಲಾಪುರದಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ಹೋರಾಟದಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗದಲ್ಲಿ 6ರಿಂದ 7 ಸಾವಿರ ಜನರು ಭಾಗವಹಿಸಿದ್ದರು. ಒಟ್ಟಾರೆಯಾಗಿ ನಮ್ಮ ಮೊದಲ ಹಂತದ ಜನಾಕ್ರೋಶ ಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು ಎಂದು ವಿವರ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಈ ಯಾತ್ರೆಯನ್ನು 3.50 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಯಾತ್ರೆಯು ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸಿದೆ. ನಮ್ಮ ಹೋರಾಟದ ಪರಿಣಾಮವಾಗಿ ಆಡಳಿತ ಪಕ್ಷದವರು ಆತಂಕಗೊಂಡಿದ್ದಾರೆ; ಗಾಬರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದವರೂ ಸಹ ಏ. 17ರಂದು ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಿದ್ದಾರೆ. ಇದೊಂದು ಕಪಟ ನಾಟಕವಷ್ಟೇ. ರಾಜ್ಯದ ಮುಖ್ಯಮಂತ್ರಿಗಳಿಗೆ ಜ್ಞಾನೋದಯವಾಗುತ್ತಿದೆ. ಗ್ಯಾರಂಟಿಗಳ ಭ್ರಮೆಯಿಂದ ಹೊರಬರಬೇಕಾಗಿದೆ. ಗ್ಯಾರಂಟಿಯಿಂದ ಜನರು ರಾಜ್ಯದಲ್ಲಿ ಸಂತೋಷದಲ್ಲಿದ್ದಾರೆ ಎಂಬ ಭ್ರಮೆಯಲ್ಲಿದ್ದರು; ಅದು ವಾಸ್ತವಿಕ ಸತ್ಯವಲ್ಲ ಎಂಬುದು ನಮ್ಮ ಹೋರಾಟದ ಪರಿಣಾಮವಾಗಿ ಅವರಿಗೆ ಅರ್ಥ ಆಗುತ್ತಿದೆ ಎಂದು ತಿಳಿಸಿದರು.
ಜಾತಿ ಸಮೀಕ್ಷೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು 10 ವರ್ಷ ಕಳೆದ ಹಳೆಯ ವರದಿ. ಮುಖ್ಯಮಂತ್ರಿಗಳು ನೀವೇ ಇದ್ದೀರಿ. ನಿಮ್ಮದೇ ಸರಕಾರ ಇದೆ. ಮತ್ತೊಮ್ಮೆ ಸರ್ವೇ ಮಾಡಿ ಎಂದು ಆಗ್ರಹಿಸಿದರು. ಮರು ಸಮೀಕ್ಷೆ ಮಾಡಿ, ವೈಜ್ಞಾನಿಕವಾಗಿ ಅದನ್ನು ಮಾಡಿ; ಎಲ್ಲರ ಸಭೆ ಕರೆದು ಜಾರಿಗೊಳಿಸಿ ಎಂದರು. ಅವೈಜ್ಞಾನಿಕ ಮತ್ತು ಹಳೆಯ ವರದಿ ಇದು. ಅದನ್ನು ಕಸದ ಬುಟ್ಟಿಗೆ ಹಾಕಬೇಕಿದೆ. ಎಂದು ಒತ್ತಾಯಿಸಿದರು.
ರಾಜ್ಯ ಸರಕಾರವು ತನ್ನ ನಿಲುವನ್ನು ಮೊದಲು ಸ್ಪಷ್ಟಪಡಿಸಲಿ. ಮುಖ್ಯಮಂತ್ರಿ ಒಂದು ಹೇಳಿದರೆ, ಉಪ ಮುಖ್ಯಮಂತ್ರಿ ಇನ್ನೊಂದು ಹೇಳುತ್ತಾರೆ. ಎಂ.ಬಿ.ಪಾಟೀಲ್, ಪರಮೇಶ್ವರ್ ಬೇರೆ ಬೇರೆ ರೀತಿಯ ಹೇಳಿಕೆ ಕೊಡುತ್ತಾರೆ. ಆಡಳಿತ ಪಕ್ಷದಲ್ಲೇ ಗೊಂದಲ ಇದೆ ಎಂದು ತಿಳಿಸಿದರು. ನಿಜವಾದ ಕಳಕಳಿ ಇದ್ದರೆ ಮುಖ್ಯಮಂತ್ರಿಗಳು ವರದಿಯ ಒಳಿತು- ಕೆಡುಕುಗಳ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಿ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ಸಿನವರು ಭಯೋತ್ಪಾದಕರ ರೀತಿ ಬಾಬರ್, ತುಘಲಕ್ ಮಾದರಿಯಲ್ಲಿ ತೆರಿಗೆ ಹಾಕುತ್ತಿದ್ದಾರೆ ಎಂದು ಟೀಕಿಸಿದರು. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.