ಇಂದು ನಮ್ಮನ್ನು ಅಗಲಿದ ಡಾ. ಗೋವಿಂದ ನರೇಗಲ್ ಹುಬ್ಬಳ್ಳಿಯ ಹಿಂದು ಸಮಾಜಕ್ಕೆ ಒಬ್ಬ ಹಿರಿಯ ಮಾರ್ಗದರ್ಶಕ. ಸಂಕಲ್ಪದ ವಿಷಯಕ್ಕೆ ಕಠೋರ, ಸಮಾಜ ಜೋಡನೆ ವಿಷಯಕ್ಕೆ ಸಮಾಧಾನ ಹಾಗೂ ಹಿಂದುತ್ವದ ವಿಷಯಕ್ಕೆ ತಪಸ್ವಿ ಮನೋಭಾವ ಹೊಂದಿದ ಈ ಹಿರಿಯರ ಸಂಪರ್ಕಕ್ಕೆ ಬರದೇ ಇರುವವರೇ ವಿರಳ.
ನಗರದ ಓರ್ವ ವೈದ್ಯರಾಗಿ, ಆರೆಸ್ಸೆಸ ನ ಹುಬ್ಬಳ್ಳಿ ಮಹಾನಗರ ಸಂಘಚಾಲಕರಾಗಿ, ವಿಶ್ವ ಹಿಂದು ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಾಧ್ಯಕ್ಷ ಸೇರಿದಂತೆ ಹತ್ತು ಹಲವು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ೯೦ ವರ್ಷದ ಇಳಿವಯಸ್ಸಿನಲ್ಲೂ ನಿತ್ಯ ಶಾಖೆಯ ಉಪಸ್ಥಿತಿಯ ಮೂಲಕ ಒಬ್ಬ ಆದರ್ಶ ಸ್ವಯಂಸೇವಕರಾಗಿದ್ದರು.
ದಶಕಗಳ ಹಿಂದೆ ಒಂದು ಪಾನ್ ಅಂಗಡಿಯಲ್ಲಿ ಪಾನ್ ತಿನ್ನಲು ಹೋದಾಗ ಅಲ್ಲಿ ನೇತಾಕ್ಕಿದ್ದ ದಿನಪತ್ರಿಕೆಯಲ್ಲಿ ದೂರದ ತಮೀಳನಾಡಿನ ಮೀನಾಕ್ಷಿಪುರಂನಲ್ಲಿ ಹಿಂದುಗಳು ಸಾಮೂಹಿಕವಾಗಿ ಇಸ್ಲಾಂಗೆ ಮತಾಂತರ ಆದ ಘಟನೆಯ ಸುದ್ದಿ ಅವರಿಗೆ ತಿಳಿದ ತಕ್ಷಣ ಅವರು ಕಾರ್ಯಪ್ರವೃತ್ತರಾಗಿ ಮೀನಾಕ್ಷಿಪುರಂ ಘಟನೆಯ ಬಗ್ಗೆ , ಅಂದಿನ ತುರ್ತು ಸಂಪರ್ಕದ ಮಾರ್ಗವಾಗಿದ್ದ ಟೆಲಿಗ್ರಾಮ ಹಾಗೂ ಟ್ರಂಕ್ ಕಾಲ್ ಮೂಲಕ ಅಂದಿನ ಸಂಘದ ಹಿರಿಯರಾಗಿದ್ದ ದಿ. ಹೋ ವೆ ಶೇಷಾದ್ರಿ ಹಾಗೂ ದಿ. ಕೃ. ಸೂರ್ಯನಾರಾಯಣರಾವ್ ಅವರ ಗಮನಕ್ಕೆ ತಂದರು. ಮುಂದೆ ನಡೆದೆಲ್ಲವೂ ಇತಿಹಾಸ. ಈ ವಿಷಯವಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೂ ಕೂಡ ಸೂಕ್ತ ಕ್ರಮಕ್ಕಾಗಿ ಪತ್ರ ವ್ಯವಹಾರ ಮಾಡಿದ್ದಲ್ಲದ್ದೇ ಸೂಕ್ತ ಕ್ರಮದ ಭರವಸೆಯ ಪತ್ರವನ್ನು ಕೂಡ ಪ್ರಧಾನಿಯಿಂದ ಪಡೆದಿದ್ದರು. ಕೆಲ ವರ್ಷಗಳ ಹಿಂದೆ ನಾನು ಡಾ. ನರೇಗಲ್ ಅವರ ಮನೆಗೆ ಹೋದಾಗ ಅವರು ಈ ಪತ್ರವನ್ನು ನನಗೆ ತೋರಿಸಿದ್ದರು.
ಮೀನಾಕ್ಷಿಪುರಂ ಘಟನೆಯ ನಂತರ ಈ ರೀತಿ ಅನ್ಯಾನ್ಯ ಕಾರಣಾಗಳಿಂದ ಬೇರೆ ಬೇರೆ ಮತಗಳಿಗೆ ಮತಾಂತರ ಹೊಂದುವ ಹಿಂದುಗಳನ್ನು ಮನಪರಿವರ್ತನೆ ಮಾಡಿ ಅವರನ್ನು ವಾಪಸ್ ಮರಳಿ ಮಾತೃ ಧರ್ಮಕ್ಕೆ ಕರೆತರುವ ಸಂಕಲ್ಪ ತೊಟ್ಟರು. ಇದನ್ನೇ ತಮ್ಮ ಜೀವನದ ವೃತವಾಗಿಸಿಕೊಂಡರು. ಈವರೆಗೆ ಸುಮಾರು ೬೦೦೦ಕ್ಕೂ ಹೆಚ್ಚು ಜನರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಕಾರ್ಯವನ್ನು ಏಕಾಂಕಿಯಾಗಿಯೇ ನಡೆಸುತ್ತ ಬಂದಿದ್ದರು. ಕೇವಲ ಪರಾವರ್ತನೆ ಅಷ್ಟೇ ಅಲ್ಲ, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವುದು, ಅವರ ಮದುವೆ ಮುಂತಾದ ಕಾರ್ಯಗಳಾನ್ನು ಸ್ವತಃ ಮುಂದೆ ನಿಂತು ನೆರೆವೇರಿಸುವುದು- ಹೀಗೆ ಆ ಎಲ್ಲಾ ಪಾರಾವರ್ತಿತ ಪರಿವಾರಗಳಿಗೆ ಇವರೊಬ್ಬ ಹಿರಿಯ ಮಾರ್ಗದರ್ಶಕರಂತೆ ಜೀವನ ನಡೆಸಿದರು.
ಹುಬ್ಬಳ್ಳಿಯಲ್ಲಿ ಒಂದು ಪೀಳಿಗೆಯ ಸಂಘದ ಸ್ವಯಂಸೇವಕರು ಇವರ ಮಾರ್ಗದರ್ಶನದಲ್ಲಿ ಬೆಳೆದರು. ಇವರ ಮಾತುಗಳಿಗೆ ಇಡೀ ನಗರದಲ್ಲಿ ಒಂದು ವಿಶೇಷ ತೂಕ ಇರುತ್ತಿತ್ತು. ಕೋಮುಗಲಭೆಯಿಂದ ಪೀಡಿತ ಅಂದಿನ ಹುಬ್ಬಳ್ಳಿ ನಗರದಲ್ಲಿ ಡಾ ನರೇಗಲ್ ಅವರ ಸಲಹೆ, ಮಾರ್ಗದರ್ಶನ ಎಲ್ಲ ಸಮಾಜ ಬಂಧುಗಳಿಗೆ, ಪೊಲೀಸರಿಗೆ ಸರ್ವಾನುಮತದಿಂದ ಮಾನ್ಯವಾಗುತ್ತಿತ್ತು. ಅಷ್ಟು ಪ್ರಬುದ್ಧ ಚಿಂತಕರಾಗಿದ್ದರು ಡಾ ಗೋವಿಂದ ನರೇಗಲ್.
ಇಳಿವಯಸ್ಸಿನಲ್ಲೂ ಸಹಾಯಕರೊಡನೆ ಸಂಜೆಯ ಶಾಖೆಗೆ ಕೇಶವಕುಂಜದಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಾ. ನರೇಗಲ್ ಅಲ್ಲಿ ಬಂದ ಎಲ್ಲ ಹಿರಿ ಕಿರಿ ಸ್ವಯಂಸೇವಕರಿಗೆ ಮಾತನಾಡಿಸಿಯೇ ಮನೆ ಸೇರಿತ್ತಿದ್ದರು. ನನ್ನನ್ನು ಆಗಾಗ ಪೋನ ಮಾಡಿ ಕರೆಸಿಕೊಂಡು ಹಿಂದು ಸಮಾಜದ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು. ಕೊನೆಯಲ್ಲಿ…. ಈ ಮುದುಕ ಏನೇನರೇ ಹೇಳತಾನ ಅಂತ ಅನ್ಕೋಬ್ಯಾಡಪ್ಪಾ… ನನಗ ಅನಸಿದ್ದನ್ನ ಹೇಳೇನಿ… ಹೇಳಬೇಕ ಅಂದಕೊಂಡಿದ್ದನ್ನು ಹೇಳದ ಬಿಡಬಾರದು.. ಅಂತ ಒಂದು ಅವರ ಸಿಗ್ನೇಚರ್ ಸ್ಟೈಲ್ ಆಗಿದ್ದ ಅವರ ಮುಗುಳ್ನೆಗೆ ಬೀರಿ ಬೀಳ್ಕೊಡುತ್ತಿದ್ದರು.
ಡಾ. ಗೋವಿಂದ ನರೇಗಲ್ ಅವರ ನೆನೆಪುಗಳು ಹಾಗೂ ಅವರ ಕಾರ್ಯ ಸದಾ ನಮಗೆ ಪ್ರೇರಣೆ ರೂಪದಲ್ಲಿ ಮಾರ್ಗದರ್ಶನ ನೀಡುತ್ತಿರಲಿ.. ಭಗವಂತ ಅವರಿಗೆ ಸದ್ಗತಿ ದಯಪಾಲಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ..
✍️ಅಮೃತ ಜೋಶಿ
ಹುಬ್ಬಳ್ಳಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.