ಬೆಂಗಳೂರು: ಬಿಡಿಎ ವಿಷಯದಲ್ಲಿ ಬಿ.ಎಸ್.ವೈ ಪ್ರಾಸಿಕ್ಯೂಶನ್ಗೆ ಕೇಳಿದ್ದೀರಿ. ನಿನ್ನೆ ಸಂಪುಟದಲ್ಲಿ ತೀರ್ಮಾನ ಮಾಡಿದ್ದೀರಿ. ಈ ಕೇಸು ಖುಲಾಸೆ ಆಗಿದೆ. ಆದರೂ ನೀವೇನು ಮಾಡಲು ಹೊರಟಿದ್ದೀರಿ? ಇದು ಬಿಜೆಪಿ ನಾಯಕರ ವಿರುದ್ಧದ ಷಡ್ಯಂತ್ರ ಮತ್ತು ಹಗೆತನದ ರಾಜಕೀಯ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ವಿಧಾನಸೌಧದ ಕೊಠಡಿ ಸಂಖ್ಯೆ 155 ರಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಸರಕಾರದ ಅಬಕಾರಿ ಸಚಿವರ ವಿರುದ್ಧ ಆರೋಪಗಳಿವೆ. ವಿಡಿಯೋಗಳು, ಆಡಿಯೋಗಳೂ ಬಂದಿವೆ. ನೀವೇನು ಮಾಡಿದ್ದೀರಿ? ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ಸಂಘಟನೆಗಳು 700 ಕೋಟಿ ಲಂಚ ಸಂಗ್ರಹ ಸಂಬಂಧ ಸಚಿವ ತಿಮ್ಮಾಪುರ ಅವರ ವಿರುದ್ಧ ಆಪಾದನೆ ಮಾಡಿವೆ. 700 ಕೋಟಿ ಲಂಚದ ಹಗರಣ ಇದ್ದರೂ ಕೂಡ ನೀವು ಅವರನ್ನು ರಕ್ಷಿಸುತ್ತೀರಿ. ಅಮಾನತಾದ ಅಧಿಕಾರಿಗಳು ಯಾರ ಏಜೆಂಟರು ಎಂದು ತಿಳಿಸಲು ಆಗ್ರಹಿಸಿದರು.
ಅವರು ಸಚಿವರ ಏಜೆಂಟರೇ? ಅಥವಾ ಮುಖ್ಯಮಂತ್ರಿಗಳ ಏಜೆಂಟರಾಗಿದ್ದರೇ? ಅವರ ತಲೆದಂಡ ಮಾತ್ರ ಯಾಕೆ? ಸಚಿವರ ತಲೆದಂಡ ಯಾಕಾಗಬಾರದು ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಅವರನ್ನು ಸರಕಾರ ಯಾಕೆ ರಕ್ಷಣೆ ಮಾಡುತ್ತಿದೆ ಎಂದು ಕೇಳಿದರು.
ಮುಡಾ ಹಗರಣ ನಡೆದಿದೆ. ನಿಮ್ಮ ಮೇಲೆ ಎಫ್ಐಆರ್ ಆಗಿದೆ; ತನಿಖೆ ನಡೆಯುತ್ತಿದೆ. ಆದರೂ ಏನೂ ನಡೆದಿಲ್ಲ ಎಂಬಂತೆ ನೀವಿದ್ದೀರಿ. ನೀವು ರಾಜೀನಾಮೆ ಕೊಟ್ಟಿಲ್ಲ; ಬೇರೆಯವರನ್ನು ಹೇಗೆ ಬಂಧಿಸಲು ನೋಡುತ್ತೀರಿ? ಎಫ್ಐಆರ್ ಆದೊಡನೆ ಬಂಧಿಸುತ್ತೀರಿ; ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಹಾಕುತ್ತೀರಲ್ಲವೇ? ನಿಮಗೊಂದು ನ್ಯಾಯ, ಇತರರಿಗೆ ಬೇರೆ ನ್ಯಾಯ ಇದೆಯೇ? ನೀವ್ಯಾಕೆ ರಾಜೀನಾಮೆ ಕೊಟ್ಟಿಲ್ಲ? ಕೂಡಲೇ ರಾಜೀನಾಮೆ ಕೊಡಿ. ಯಾಕೆ ಸುಮ್ಮನಿದ್ದೀರಿ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆ. ದಿನೇಶ್ ಗುಂಡೂರಾವ್ ಅವರು ಆರೋಗ್ಯ ಸಚಿವರಾಗಲು ಯೋಗ್ಯರೇ? ಅವರೇನು ವೈದ್ಯರೇ? ಎಂಬಿಬಿಎಸ್ ಓದಿದವರೇ? ಪಿಎಚ್ಡಿ ಆಗಿದೆಯೇ? ಎಂದು ಕೇಳಿದರು. ದನಕರುಗಳಿಗೆ ಕೊಡುವ ಔಷಧಿಗಳು ಆಸ್ಪತ್ರೆಗೆ ಸರಬರಾಜಾದ ಬಗ್ಗೆ ಸದನದಲ್ಲಿ ಕೇಳಿದ್ದೆವು. ಅದು ಮುದ್ರಣದ ತಪ್ಪು ಎಂದಿದ್ದರು. ಬಳಿಕ ವರದಿ ಬಂದಾಗ ಅದಾಗಿದ್ದು ನಿಜ; ವಿಷಯ ತಿಳಿದು ವಾಪಸ್ ಕಳಿಸಿದ್ದಾಗಿ ಹೇಳಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ಅವರು ವಿವರಿಸಿದರು.
ಯಾದಗಿರಿಯಲ್ಲಿ ವೆಟರ್ನರಿ ಔಷಧಿ ಆಸ್ಪತ್ರೆಗೆ ಸರಬರಾಜಾಗಿದೆ. ಬಾಣಂತಿಯರಿಗೆ ಕೊಟ್ಟ ಔಷಧಿ ಕಳಪೆ ಆಗಿದ್ದುದಲ್ಲದೇ, ಕೊಟ್ಟ ದ್ರಾವಣಗಳು ಕಳಪೆ ಎಂದು ವರದಿ ಬರುತ್ತಿದೆ. ಹೀಗಿದ್ದರೂ ಅವರನ್ನು ಬದಲಿಸಿಲ್ಲ; ಇದು ಜೀವಗಳ ಜೊತೆ ಆಟ. ದಿನೇಶ್ ಗುಂಡೂರಾವ್ ಅವರನ್ನು ತಕ್ಷಣ ವಜಾ ಮಾಡಬೇಕೆಂದು ಆಗ್ರಹಿಸಿದರು.
ಒಂದು ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನಕ್ಕೆ ಮುಖ್ಯಮಂತ್ರಿಗಳು ಗೌರವಾನ್ವಿತ ರಾಜ್ಯಪಾಲರಿಗೆ ಕೊಕ್ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ, ನೀವು ಸರ್ವಾಧಿಕಾರಿ ಧೋರಣೆ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು. ನಿಮ್ಮ ಮೇಲೆ ಭ್ರಷ್ಟಾಚಾರದ ಹಲವಾರು ಆರೋಪಗಳಿವೆ. ಕುಲಾಧಿಪತಿ ಸ್ಥಾನಕ್ಕೆ ಗವರ್ನರ್ ಯೋಗ್ಯರೆಂದು ಸಾಂವಿಧಾನಿಕ ಹುದ್ದೆಯಾಗಿ ಕೊಡಲಾಗಿತ್ತು. ಈಗ ಅದನ್ನು ವಾಪಸ್ ಪಡೆಯುವ ಮೂಲಕ ಕುಲಾಧಿಪತಿ ಆಗಲು ಹೊರಟಿದ್ದೀರಿ. ಭ್ರಷ್ಟಾಚಾರದಿಂದ ನಿಮ್ಮ ಸರಕಾರ ಕುಲಗೆಟ್ಟಿದ್ದು, ಕುಲಾಧಿಪತಿ ಸ್ಥಾನಕ್ಕೆ ಮುಖ್ಯಮಂತ್ರಿ ಯೋಗ್ಯರೇ ಎಂದು ಕೇಳಿದರು.
ಸಂವಿಧಾನ ತೆಗೆಯುತ್ತಾರೆಂದು ಮುಖ್ಯಮಂತ್ರಿ, ಪಡ್ಡೆ ಹುಡುಗ ಪ್ರಿಯಾಂಕ್ ಖರ್ಗೆ ಸೇರಿ ಕಾಂಗ್ರೆಸ್ಸಿಗರು ಹೇಳುತ್ತಾರೆ. ನಮ್ಮಿಂದ ಸಂವಿಧಾನದ ವಿರುದ್ಧ ಪ್ರಯತ್ನ ಆಗಿತ್ತೇ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದರು.
ನಿಮ್ಮ ಕಾಲದಲ್ಲಿ ಆಗಿದೆ. 1975-76ರಲ್ಲಿ 2 ವರ್ಷ ಸಂವಿಧಾನವನ್ನು ಅಮಾನತಿನಲ್ಲಿ ಇಡಲಾಗಿತ್ತು. ಕುರ್ಚಿ ಉಳಿಸಿಕೊಳ್ಳಲು ಇಂದಿರಾ ಗಾಂಧಿಯವರು ಕಾಂಗ್ರೆಸ್ಸೇ ದೇಶವೆಂದು ತಿಳಿದುಕೊಂಡು ಸಂವಿಧಾನವನ್ನೇ ಸರ್ವನಾಶ ಮಾಡಿದ್ದರು ಎಂದು ಟೀಕಿಸಿದರು.
ಜಮೀರ್ ಅಹ್ಮದ್ ಆಡಿದ್ದೇ ಮಾತು; ಅವರ ಮೇಲೆ ಯಾಕೆ ಕೇಸು ಹಾಕಿಲ್ಲ ಎಂದು ಕೇಳಿದರು. ತುಮಕೂರಿನ ಶಕುಂತಲಾ ನಟರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುದಕ್ಕೆ 7 ದಿನಗಳ ನೋಟಿಸ್ ಕೊಟ್ಟು ರಾತ್ರೋರಾತ್ರಿ ಬಂಧಿಸಿ ಕರೆತಂದಿದ್ದರು. ಹಾಗಿದ್ದರೆ 7 ದಿನ ಅವಕಾಶ ಕೊಟ್ಟಿದ್ದೇಕೆ? ಅವರನ್ನು ರೌಡಿಶೀಟರ್ ಮಾಡಬಾರದೇಕೆ ಎಂದು ಕೇಳಿದ್ದಾಗಿ ವಿವರಿಸಿದರು. ನಿಮ್ಮ ಸುತ್ತಲಿರುವ ಸಚಿವರು ರೌಡಿಗಳಿಗಿಂತ ಹೆಚ್ಚಾಗಿ ಮಾತನಾಡುತ್ತಾರೆ. ಅವರ ಮೇಲೂ ರೌಡಿಶೀಟರ್ ಹಾಕಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಆ ಹೆಣ್ಮಗಳ ಮೇಲಿನ ಕೇಸು ವಾಪಸ್ ಪಡೆಯಲು ಆಗ್ರಹಿಸಿದರು.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸಾಚಾರ ಮಿತಿ ಮೀರಿದ್ದನ್ನು ತಾವೆಲ್ಲರೂ ಗಮನಿಸಿದ್ದೀರಿ. ಕೇಂದ್ರದಲ್ಲಿರುವ ಮೋದಿಜೀ ಅವರ ಸರಕಾರವು ಈಗಾಗಲೇ ಆ ರೀತಿ ಹಿಂದುಗಳಿಗೆ ಹಿಂಸೆ ಮಾಡಬಾರದು ಮತ್ತು ಬಂಧಿತ ಸನ್ಯಾಸಿ ಚಿನ್ಮಯಿ ಕೃಷ್ಣದಾಸ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದೆ. ಇಸ್ಕಾನ್ ನಿಷೇಧ ಪ್ರಸ್ತಾಪವನ್ನು ಬಾಂಗ್ಲಾದ ಕೋರ್ಟ್ ತಿರಸ್ಕರಿಸಿದೆ. ಅದನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಈ ವಿಷಯದಲ್ಲಿ ರಾಹುಲ್ ಗಾಂಧಿ, ಕರ್ನಾಟಕದ ಕಾಂಗ್ರೆಸ್ ಸರಕಾರದ ನಿಲುವನ್ನು ಸ್ಪಷ್ಟಪಡಿಸಲು ಅವರು ಒತ್ತಾಯಿಸಿದರು. ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸದೆ ಇರುವ ಇಲ್ಲಿನ ಸರಕಾರ ಹಿಂದೂ ವಿರೋಧಿ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು ತಕ್ಷಣವೇ ಹೇಳಿಕೆ ಕೊಟ್ಟು ಕೇಂದ್ರದ ನಿಲುವನ್ನು ಬೆಂಬಲಿಸಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ? ಯಾಕೆ ತಟಸ್ಥವಾಗಿದ್ದೀರಿ ಎಂದ ಅವರು, ಕಾಂಗ್ರೆಸ್ಸಿಗರ ತುಷ್ಟೀಕರಣದ ನಡೆಯಿಂದ ರಾಜ್ಯದಲ್ಲಿ ಬಾಂಗ್ಲಾ ಮತ್ತು ಪಾಕಿಸ್ತಾನದ ಕವಲುಗಳು ಒಡೆಯುತ್ತಿರುವುದನ್ನು ಗಮನಿಸಿದ್ದೇವೆ ಎಂದು ಟೀಕಿಸಿದರು. ಇಂಥ ಘಟನೆಯ ಪ್ರಚೋದನೆ ಉಂಟಾಗದಂತೆ ಕೇಂದ್ರ ಸರಕಾರ ಕಾರ್ಯೋನ್ಮುಖವಾಗಬೇಕು ಮತ್ತು ರಾಜ್ಯಗಳು ಇದಕ್ಕೆ ಮಮತಾ ಬ್ಯಾನರ್ಜಿಯವರ ಮಾದರಿಯಲ್ಲಿ ಬೆಂಬಲ ಕೊಡಬೇಕೆಂದು ಮನವಿ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.