ಬೆಂಗಳೂರು : ಕಲೆ ಸಮಾಜಕ್ಕೆ ಸಂಸ್ಕಾರ, ಸಮರಸತೆ ನೀಡುತ್ತದೆ. ನಮ್ಮ ಚರಿತ್ರೆಯನ್ನು ಉದಾಹರಣೆ ನೀಡುವುದರ ಮೂಲಕ ಜಗತ್ತಿನ ಜನರಿಗೆ ಜೀವನ ಪಾಠವನ್ನು ಹೇಳಬೇಕಿದೆ. ಅಂತಹ ಮಾನವ ಸಮಾಜವನ್ನು ನಿರ್ಮಿಸುವುದಕ್ಕಾಗಿ ಕಲಾಜಗತ್ತಿನ ಕೆಲವು ಕಲಾವಿದರಿಂದ ಮಾತ್ರ ಸಾಧ್ಯವಿಲ್ಲ. ಇದು ಸಂಪೂರ್ಣ ಕಲಾ ಜಗತ್ತಿನ ಕೆಲಸವಾಗಿದೆ. ಭಾರತೀಯ ಕಲೆಗಳ ಆದರ್ಶ ಸತ್ಯಂ ಶಿವಂ ಸುಂದರಮ್ ಆಧಾರಿತವಾಗಿ ಜಗತ್ತಿನಲ್ಲಿ ಭಾರತೀಯ ಕಲಾ ವಿಮರ್ಶೆಯನ್ನು ಸ್ಥಾಪಿಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದರು.
ಸಂಸ್ಕಾರ ಭಾರತಿ ವತಿಯಿಂದ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ಆಯೋಜಿಸಲಾದ 4 ದಿನಗಳ ಅಖಿಲ ಭಾರತೀಯ ಕಲಾಸಾಧಕ ಸಂಗಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಮಾರೋಪ ಭಾಷಣ ಮಾಡಿದರು.
ಕಲೆಯ ಮೂಲಕ ಕಲ್ಯಾಣ, ಸಮತ್ವ, ಸಮರಸತೆ ಸ್ಥಾಪಿಸುವವರ ವಿಮರ್ಶೆ ಜಗತ್ತಿನಲ್ಲಿ ಪ್ರಭಾವಿಯಾಗುವ ಮೂಲಕ ಭಾರತವನ್ನು ವಿಮರ್ಶೆಯ ಲೋಕದಲ್ಲಿ ಪ್ರಭಾವಿಯನ್ನಾಗಿಸಬೇಕು. ಭಾರತದ ವಿಮರ್ಶೆಯ ಹಿಂದೆ ‘ಸರ್ವಂ ಕಲ್ವಿದಂ ಬ್ರಹ್ಮ’ ಎಂಬ ಸತ್ಯವಿದೆ. ಎಲ್ಲರನ್ನೂ ತನ್ನಂತೆ ಕಾಣಬೇಕೆಂಬುದು ಯಾವ ಸಂಸ್ಕೃತಿಯ ಆಧಾರವಾಗಿದೆಯೋ ಅದನ್ನು ಕಲಾಮಾಧ್ಯಮದಲ್ಲಿ ವ್ಯಕ್ತಪಡಿಸುವ ಪ್ರಭಾವಿ ವಿಮರ್ಶೆಗಳು ಆಗಬೇಕಿದೆ. ನಮ್ಮ ಕಲೆಗಳ ಕರ್ತವ್ಯವನ್ನು ಸಫಲಗೊಳಿಸಲು ಇದು ನಮಗೆ ದೊರೆತಿರುವ ಜವಾಬ್ದಾರಿಯಾಗಿದೆ ಎಂದರು.
ಸಂಸ್ಕಾರ ಭಾರತಿ ಕಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರದ ಪ್ರಮುಖ ಸಂಘಟನೆ. ಪ್ರಾಮಾಣಿಕವಾಗಿ ಕಲೆ, ಸಂಸ್ಕೃತಿಯನ್ನು ಮಾಧ್ಯಮವನ್ನಾಗಿಸಿಕೊಂಡು ದೇಶಹಿತಕ್ಕಾಗಿ ಮತ್ತು ಸಮಾಜವನ್ನು ಒಗ್ಗೂಡಿಸುವುದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ನಾವು ನಮ್ಮ ಕ್ಷೇತ್ರದಲ್ಲಿ ಪ್ರಮುಖರಾಗುತ್ತೇವೆ. ಸಾಮಾಜಿಕ ಜೀವನದಲ್ಲಿ ಕಲೆಯ ಪಾತ್ರವೇನು ಎನ್ನುವ ಭಾವವನ್ನು ಅರಿತು ಎಲ್ಲಾ ಕಲಾವಿದರು ಕಾರ್ಯನಿರ್ವಹಿಸುವುದಿಲ್ಲ. ಕಲಾಸಾಧಕ ಸಂಗಮಕ್ಕೆ ಆಗಮಿಸಿದ ಕಲಾವಿದರಿಗೆ ವಿಚಾರದ ಪರಿಚಯವಾಗಿದೆ, ಆದರೆ ಪ್ರಾಮಾಣಿಕ ವೈಯಕ್ತಿಕ ಸಾದನೆಯ ತೊಡಗಿದ ಜನರಿಗೂ ಸ್ವಕರ್ಮಕ್ಕಾಗಿ ಮಾಡಿದ ಕೆಲಸ ಈಶ್ವರನಿಗೆ ಅರ್ಪಿಸುವಂತೆ ಮಾಡಬೇಕು. ಈ ಸಮಾಜದಲ್ಲಿ ಅವಶ್ಯಕತೆಗಳಿವೆ, ಸಮಸ್ಯೆಗಳಿವೆ, ಅವುಗಳಿಂದ ಬಾಧಿತ ವರ್ಗಗಳಿವೆ, ಕೆಲವು ಪ್ರಶ್ನೆಗಳಿವೆ. ಇವುಗಳೆಲ್ಲವೂ ನಕಾರಾತ್ಮಕವಲ್ಲ. ಅವುಗಳನ್ನು ಕೈಗೆತ್ತಿಕೊಂಡು ನಮ್ಮಿಂದ ಸಾಧ್ಯವಾಗುವುದನ್ನು ಪರಿಹರಿಸಬೇಕು.
ನಿರರ್ಥಕ ವಿವಾದಗಳಲ್ಲಿ ಮುಳುಗಿರುವದರಿಂದ ಕಲೆಯ ವಿಮರ್ಶೆ ಕಲೋನ್ಮುಖವಾಗಿಲ್ಲ. ಜಗತ್ತಿನ 2000 ವರ್ಷಗಳ ವಿಮರ್ಶೆ ಅಸ್ತಿತ್ವಕ್ಕಾಗಿ ನಡೆದ ಸಂಘರ್ಷದಲ್ಲಿ ಶಕ್ತಿಶಾಲಿಗಳು ಗೆಲ್ಲುತ್ತಾರೆ ಎನ್ನುವುದನ್ನು ಸಾರಿದೆ. ಅಂತಹ ವಿಮರ್ಶೆಗಳಲ್ಲಿ ಸಾಗಿದ ಸಮಾಜ ಕೆಲವು ವ್ಯವಸ್ಥೆಗಳನ್ನೂ ರೂಢಿಸಿಕೊಂಡು ಬಂದಿದೆ. ಈ ವಿಮರ್ಶೆಯನ್ನೇ ಹೇಗಾದರೂ ಉಳಿಸಬೇಕೆಂದು ಇರುವ ವರ್ಗ ಸಮಾಜದಲ್ಲಿ ಒಂದಿಲ್ಲೊಂದು ವಿಭಜನೆ ಮಾಡುತ್ತದೆ. ವೋಕಿಸಮ್, ಕಲ್ಚುರಲ್ ಮಾರ್ಕಿಸಂ ಎಂಬಿತ್ಯಾದಿ ಹೆಸರುಗಳಲ್ಲಿ ಇವುಗಳ ಕುರಿತು ಮಾತು ಬರುತ್ತದೆ. ಯಾವುದೇ ಸಿದ್ಧಾಂತಗಳ ಜೊತೆಗೆ ಸಂಬಂಧವಿಲ್ಲದೆ ಬೆರಳೆಣಿಕೆಯಷ್ಟು ಜನ ತಮ್ಮ ಸ್ವಾರ್ಥಕ್ಕಾಗಿ, ಸುಳ್ಳು ಜಾಲಗಳನ್ನು ನಿರ್ಮಿಸುವ ಮೂಲಕ ಇಡೀ ದೇಶವನ್ನು ವಿಘಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಚ್ಚರಿಸಿದರು.
ವೈಚಾರಿಕ ಅಧಿಷ್ಠಾನ, ಕಾರ್ಯಪದ್ಧತಿ, ಕಾರ್ಯಪದ್ಧತಿಯ ಸಫಲತೆಗಾಗಿ ಅನೇಕ ಪ್ರಯತ್ನಗಳ ಅವಶ್ಯಕತೆಗಳಿವೆ. ಆದರೆ ಇವೆಲ್ಲವನ್ನು ಮಾಡುವುದು ಕಾರ್ಯಕರ್ತ. ಕಲಾ ವಿಮರ್ಶೆಯ ಕೆಲಸವನ್ನು ಮಾಡಲೂ ಕಾರ್ಯಕರ್ತರ ಅಗತ್ಯತೆ ಇದೆ. ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯಕರ್ತರು ಶಿವತ್ವದೆಡೆಗೆ ಸಾಗುವಂತ ವಿಮರ್ಶೆಗಳನ್ನು ಸ್ಥಾಪಿಸಬೇಕು. ಕೇವಲ ಶಿವತ್ವ ಅಥವಾ ಸತ್ಯತ್ವದಿಂದ ನಾವು ಕಲೆಯನ್ನು ಕಾಣುವುದಿಲ್ಲ. ಸತ್ಯ ಮತ್ತು ಶಿವ ಒಟ್ಟಿಗೆ ಚಲಿಸುವುದರಿಂದ ಕಲೆ ಸುಂದರವೆನಿಸುತ್ತದೆ. ಹಾಗಾಗಿ ಸತ್ಯಂ, ಶಿವಂ, ಸುಂದರಂ ನಮ್ಮ ಕಲಾದೃಷ್ಟಿಯಾಗಿದೆ ಎಂದರು.
ಇಂದಿನ ದಿನಮಾನಗಳಲ್ಲಿ ಮಾಧ್ಯಮಗಳಲ್ಲಿ ಅದೆಷ್ಟೋ ಕಪೋಲಕಲ್ಪಿತ ಸುದ್ದಿಗಳ ಪ್ರಸಾರವಾಗುತ್ತಿದೆ. ಆದರೆ ಅವುಗಳಿಗೆ ಕಡಿವಾಣ ಹಾಕುವವರು ಯಾರು ಎಂದು ನಿಶ್ಚಯವಾಗಿಲ್ಲ. ಕಡಿವಾಣ ಹಾಕುವ ವ್ಯಕ್ತಿ ನಿಶ್ಚಯವಾಗದೆ ಕೆಲಸವಾಗುವುದಿಲ್ಲ. ಸ್ಥಾನಮಾನದ ಪ್ರತಿಷ್ಠೆ ಇಲ್ಲದೆ ಈ ಕೆಲಸವನ್ನು ಮಾಡುವವನು ಕಾರ್ಯಕರ್ತ. ಹಾಗಾಗಿ ನಮ್ಮ ಕೆಲಸಕ್ಕೆ ಕಾರ್ಯಕರ್ತರ ಅಗತ್ಯತೆ ಇದೆ ಎಂದರು.
ಸಂಸ್ಕಾರ ಭಾರತಿ ಕಲಾಜಗತ್ತಿನಲ್ಲಿ ಸಮರ್ಥವಾದ ಸ್ಥಾನವನ್ನು ಪಡೆದಿದೆ. ಮುಂದಿನ ಆಲೋಚನೆ ಮಾಡಬೇಕಿದೆ. ಕಾರ್ಯಾರಂಭವಾಗುವ ಹಿಂದೆ ಅದಕ್ಕೊಂದು ಉದ್ದೇಶವಿರುತ್ತದೆ. ಈ ಉದ್ದೇಶವನ್ನು ಸಾಧಿಸುವ ಮಾರ್ಗಗಳು ಹಲವು. ಆದರೆ ದಿಕ್ಕು ಬದಲಾಗುವುದಿಲ್ಲ. ಈಶ್ವರನ ವರವಾದ ಕಲೆ ಒಂದು ಪ್ರತಿಭೆ. ಅದನ್ನು ಪ್ರಸ್ತುತಿ ಪಡಿಸುವ ಅಗತ್ಯತೆ ಇದೆ. ಆದರೆ ಕೇವಲ ಸ್ತುತಿಗಾಗಿ ಬಳಕೆಯಾಗಬಾರದು ಎಂಬುದರ ಕುರಿತು ನಾವೆಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ನುಡಿದರು.
ಸ್ವರಾಜ್ಯಕ್ಕಾಗಿ ನಡೆದ ಹೋರಾಟದ ಲಕ್ಷ್ಯ ಸ್ಪಷ್ಟವಾಗಿತ್ತು. ಹಾಗಾಗಿ ಅದರ ಯಶಸ್ವಿಗಾಗಿ ರಚಿಸಿದ ನೀತಿ ಅದಕ್ಕೆ ಪೂರಕವಾಗಿತ್ತು. ಸತ್ಯ ಮತ್ತು ನ್ಯಾಯದ ಪರವಾಗಿ ನಿರ್ಮಿಸಿರುವ ಮಾರ್ಗದಿಂದ ವಿಚಲಿತರಾಗಬಾರದು. ಧೈರ್ಯ ಮತ್ತು ಉತ್ಸಹ ಬೇಕು. ಗುರಿಯು ಯಶಸ್ವಿಯಾಗಲಿ ಬಿಡಲಿ ಪ್ರಯತ್ನ ನಿರಂತರವಾಗಿರಬೇಕು. ಸಂಘಟನೆಯ ಅಸಲಿ ತಾಕತ್ತು ಸಂಖ್ಯೆಯ ಮೇಲಿಲ್ಲ. ಧ್ಯೇಯನಿಷ್ಠಾ, ಶಿಸ್ತು ಮತ್ತು ಆತ್ಮೀಯತೆ ನಮ್ಮ ಬಲ. ಸತ್ಯದಪರ ನಾವಿದ್ದೇವೆ. ಹಾಗಾಗಿ ಇದರ ಆಧಾರದಲ್ಲಿ ನಾವು ಎಲ್ಲರನ್ನೂ ಒಳಗೊಂಡು ಮುನ್ನಡೆದಾಗ ಎಲ್ಲರೂ ನಮ್ಮ ಜೊತೆಗೆ ನಿಲ್ಲುತ್ತಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರವಿಶಂಕರ್ ಗುರೂಜಿ ನಮ್ಮ ಸಂಸ್ಕೃತಿ ಪುರಾತನ ಮತ್ತು ನಿತ್ಯನೂತನವಾದದ್ದು. ಹಾಗಾಗಿ ಅದನ್ನು ಸನಾತನ ಎಂದು ಕರೆಯಲಾಗುತ್ತದೆ. ಆದರೆ ನಾವು ಸಂಘಟಿತರಾಗಿರಲಿಲ್ಲ. ಇಡೀ ದೇಶದಲ್ಲಿ ಪರ್ಯಟನೆಯನ್ನು ಮಾಡಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ದೇಶವನ್ನು ಸಂಘಟಿಸುವ ಪ್ರಯತ್ನವನ್ನು ಆದಿ ಶಂಕರಾಚಾರ್ಯರು ಮಾಡಿದ್ದರು. ಈಗ ಜನಮಾನಸವನ್ನು ಒಗ್ಗೂಡಿಸುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ. ಸಂಘದ ಸ್ವಯಂಸೇವಕರು ದೇಶದ ಆಪತ್ಕಾಲದಲ್ಲಿ ತಕ್ಷಣ ನೆರವಿಗೆ ಬರುವ ಮೂಲಕ ಸಂಘ ಕಲಿಸಿದ ಸಂಸ್ಕಾರದ ಪ್ರತಿಬಿಂಬವಾಗಿದ್ದಾರೆ ಎಂದು ನುಡಿದರು.
ಶಕ್ತಿ, ಭಕ್ತಿ, ಯುಕ್ತಿ ಮತ್ತು ಮುಕ್ತಿ ಜೀವನದಲ್ಲಿ ಅವಶ್ಯವಾಗಿ ಬೇಕಾಗಿದೆ. ಸಂಘಟಿತವಾಗುವುದರಿಂದ ಶಕ್ತಿವಂತರಾಗುತ್ತೇವೆ. ಹಾಗಾಗಿ ಹಲವು ಸಂಘಟನೆಗಳು ಈ ನಿಟ್ಟಿನಲ್ಲಿ ನಿರಂತರವಾಗಿ ಅನುಕರಣೀಯ ಕೆಲಸ ಮಾಡುತ್ತಿದೆ. ಸಾಧನೆಯ ಆತ್ಮಬಲದಿಂದಲೂ ಶಕ್ತಿ ಲಭಿಸುತ್ತದೆ. ಆದರೆ ಈ ಶಕ್ತಿಗಾಗಿ ಭಕ್ತಿಯ ಅಗತ್ಯತೆ ಇದೆ. ರಾಷ್ಟ್ರಭಕ್ತಿ ಮತ್ತು ದೈವಭಕ್ತಿಯನ್ನು ಬೇರೆ ಬೇರೆಯಾಗಿ ಕಾಣುವುದು ದುರಂತವೇ ಸರಿ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವೆರಡಕ್ಕೂ ಬದ್ಧರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ಸಂಸ್ಕಾರಭಾರತಿ ಅಂತಹ ಸಂಘಟನೆಗಳು ಇಡೀ ವಿಶ್ವದ ಜನರನ್ನು ಶ್ರೇಷ್ಠರನ್ನಾಗಿಸುವ ಗುರಿಯೆಡೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿಯ ಅಖಿಲ ಭಾರತಿಯ ಅಧ್ಯಕ್ಷ ವಾಸುದೇವ್ ಕಾಮತ್, ಉಪಾಧ್ಯಕ್ಷ ಮೈಸೂರು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅಶ್ವಿನ್ ದಳ್ವಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಡಾ. ಮನಮೋಹನ್ ವೈದ್ಯ, ಅಯೋಧ್ಯೆ ರಾಮಮಂದಿರದ ರಾಮಲಲಾ ವಿಗ್ರಹವನ್ನು ರೂಪಿಸಿದ ಶಿಲ್ಪಿ ಅರುಣ್ ಯೋಗಿರಾಜ್, ಶಿಲ್ಪಿ ಜಿ.ಎಲ್.ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.