ಸುಬ್ರಹ್ಮಣ್ಯ : ಕೃಷಿ ಉಳಿವು ಹಾಗೂ ಬೆಳವಣಿಗೆಯಾಗಬೇಕಿದೆ.ಇದಕ್ಕಾಗಿ ಯುವಕೃಷಿಕರು ತೊಡಗಿಸಿಕೊಳ್ಳಬೇಕು.ಇದಕ್ಕಾಗಿ ಕೃಷಿಯಿಂದ ಯುವಕರ ವಲಸೆ ತಡೆಯುವ ನಿಟ್ಟಿನಲ್ಲಿ ಗ್ರಾಮಮಟ್ಟಗಳಲ್ಲಿ ಕೈಗಾರಿಕೆಗಳು ಬೆಳೆಯಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಹೈನುಗಾರ ರಾಘವ ಗೌಡ ಹೇಳಿದರು.
ಅವರು ಭಾನುವಾರ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಭಾರತೀಯ ಕಿಸಾನ್ ಸಂಘ ಗುತ್ತಿಗಾರು ನಾಲ್ಕೂರು ಇದರ ಆಶ್ರಯದಲ್ಲಿ ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು, ಎಣ್ಮೂರು ವಲಯ ಹಾಗೂ ಬಾಳಿಲ ಮುಪ್ಪೇರ್ಯ ಮತ್ತು ಲಯನ್ಸ್ ಕ್ಲಬ್ ಸಹಕಾರದೊಂದಿಗೆ ನಡೆದ ಬಲರಾಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೃಷಿಯ ಜೊತೆಗೆ ಯುವಕರು ಸಣ್ಣಪುಟ್ಟ ಉದ್ಯೋಗ ಮಾಡುವ ಅವಕಾಶ ದೊರೆಯಬೇಕು, ಆಗ ಗ್ರಾಮೀಣ ಭಾಗದಲ್ಲೇ ಇದ್ದುಕೊಂಡು ಕೃಷಿ ಕ್ಷೇತ್ರ ಕೂಡಾ ಅಭಿವೃದ್ಧಿ ಕಾಣಲು ಸಾಧ್ಯವಿದೆ.ಕೃಷಿ ಕುಟುಂಬದ ಮಂದಿ ಕೃಷಿ ಆದಾಯವನ್ನೇ ಬಳಸಿ ಮಕ್ಕಳಿಗೆ ವಿಧ್ಯಾಭ್ಯಾಸ ನೀಡಿ ಆ ಬಳಿಕ ಕೃಷಿ ಕಡೆಗೆ ಮರಳದಂತೆ ದೂರದ ಊರಿಗೆ ಕಳುಹಿಸುವ ಕೆಲಸ ಮಾಡಬಾರದು ಎಂದರು.
ಹಿಂದೆಲ್ಲಾ ಸಾಪ್ಟ್ವೇರ್ ಉದ್ಯೋಗವೇ ಶ್ರೇಷ್ಟ ಎಂಬ ನಂಬಿಕೆ ಇತ್ತು, ಆದರೆ ಈಗ ಆ ಕಾಲ ಬದಲಾಗಿದೆ. ಕೃಷಿ ಕೂಡಾ ಅಗತ್ಯ ಎಂಬ ಮನೋಭಾವ ಬೆಳೆಯುತ್ತಿದೆ.ಕೃಷಿಯಲ್ಲಿ ಸಮಸ್ಯೆಗಳು ಇದೆ ನಿಜ, ಆದರೆ ಅದಕ್ಕೆ ಬೇಕಾದ ಪರಿಹಾರ ಮಾರ್ಗಗಳೂ ಈಗ ಇದೆ. ಯಂತ್ರಗಳ ಬಳಕೆ ಮಾಡಿಕೊಂಡಾಗ ಕೃಷಿ ಕೂಡಾ ಸುಲಭವಾಗುತ್ತದೆ.ಬದುಕಿಗೆ ಕೃಷಿಯೇ ಅವಲಂಬನೆಯಾಗಬೇಕು, ಹಣವೇ ಮುಖ್ಯ ಎಂಬ ಮನೋಭಾವ ಬೆಳೆಸಿಕೊಳ್ಳದೆ, ಮಾನಸಿಕ ನೆಮ್ಮದಿಯೂ ಮುಖ್ಯ ಎಂಬ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸಬೇಕು, ಆಗ ಕೃಷಿ ಕಷ್ಟವಾಗುವುದಿಲ್ಲ ಎಂದರು.
ಮುಖ್ಯಅತಿಥಿಯಾಗಿದ್ದ ಮಲೆನಾಡು ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ,ಕೃಷಿಕರು ರಾಜಕೀಯ ಪಕ್ಷಗಳ ದಾಸರಾಗದೆ, ತಮ್ಮ ಸಮಸ್ಯೆಗಳ ಬಗ್ಗೆ ಧೈರ್ಯವಾಗಿ ಮಾತನಾಡುವಂತಾಗಬೇಕು.ವಿವಿಧ ಯೋಜನೆಗಳ ಹೆಸರಿನಲ್ಲಿ ಕೃಷಿಕರನ್ನು ಶೋಷಿಸುವ ಕೆಲಸವಾಗುತ್ತಿದೆ, ಹೀಗಿದ್ದರೂ ಧ್ವನಿ ಎತ್ತದೇ ಇರಲೇಬಾರದು.ಕೃಷಿಕರು ಎಂದಿಗೂ ಅರಣ್ಯ ನಾಶ ಮಾಡಿಲ್ಲ, ಮಾಡುವುದೂ ಇಲ್ಲ.ಕುಮ್ಕಿ, ಕಾನ ಇತ್ಯಾದಿಗಳ ಕೃಷಿಕರದ್ದು, ಅಲ್ಲಿ ಅರಣ್ಯ ಬೆಳೆಸುವ ಕೆಲಸ ಕೃಷಿಕರೇ ಮಾಡಿದ್ದಾರೆ ಎಂದರು.ಹಸಿರು ಕ್ರಾಂತಿ ಹೆಸರಲ್ಲಿ ರಾಸಾಯನಿಕವನ್ನು ಕೃಷಿಕರ ಮೂಲಕ ಭೂಮಿಗೆ ಸುರಿದು ಈಗ ಕೃಷಿಕರು ಮಣ್ಣಿನ ಫಲವತ್ತತೆ ಹಾಳು ಮಾಡಿದ್ದಾರೆ ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು,ಕಾನೂನುಗಳ ಮೂಲಕಕೃಷಿಕರನ್ನು ಭಯಗೊಳಿಸುವ ಕೆಲಸ ಈಗಿನ ಸರ್ಕಾರಗಳು ಮಾಡುತ್ತಿವೆ, ಆದರೆ ಅದಕ್ಕೆ ಮಣಿಯಬಾರದು, ಧೈರ್ಯವಾಗಿ ಕೃಷಿಕರು ಮಾತನಾಡುವಂತಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಕೃಷಿಕರ ಸಂಘಟನೆಗಳು ಬಲಗೊಳ್ಳಬೇಕು, ಕೃಷಿ ಉತ್ಪನ್ನಗಳಿಗೆ ಬೆಲೆ ಹಾಗೂ ಮಾರುಕಟ್ಟೆ ಸಮಸ್ಯೆ ಹಾಗೂ ಇತರ ಸಮಸ್ಯೆಗಳು ಬಂದಾಗ ಒಟ್ಟಾಗಿ ಹೋರಾಟ ನಡೆಸಬೇಕಿದೆ ಎಂದರು.
ಭಾರತೀಯ ಕಿಸಾನ್ ಸಂಘ ವಿಭಾಗ ಕಾರ್ಯದರ್ಶಿ ಮೂಲಚಂದ್ರ ಮಾತನಾಡಿ, ಕೃಷಿಕರೆಲ್ಲರೂ ಗ್ರಾಮಸಭೆಗಳಲ್ಲಿ, ಸಹಕಾರಿ ಸಂಘಗಳ ಮಹಾಸಭೆಯಲ್ಲಿ ಭಾಗವಹಿಸಿ ಸಮಸ್ಯೆಗ ಬಗ್ಗೆ ಮಾತನಾಡಬೇಕು, ಜಾಗೃತಿ ಹಾಗೂ ಸಂಘಟನೆ ಈ ಮೂಲಕ ಆರಂಭವಾಗಬೇಕು ಚಿಂತನೆ ಕೃಷಿಕರಿಂದಲೇ ಆರಂಭವಾಗಬೇಕು ಎಂದರು.
ಇದೇ ವೇಳೆ ಕೃಷಿಕ ಹಾಗೂ ಗುತ್ತಿಗಾರಿನಲ್ಲಿ ಸುಮಾರು ೩೦ ವರ್ಷಗಳಿಂದ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸಿದ ಡಾ.ಜಿ.ತಿರುಮಲೇಶ್ವರಯ್ಯ ಗಬ್ಲಡ್ಕ ಮತ್ತು ಗೌರಮ್ಮ ದಂಪತಿಗಳನ್ನು ಸನ್ಮಾನಿಸಲಾಯಿತು.ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚಂದುಕೂಡ್ಲು ನಾರಾಯಣ ಭಟ್ ಸನ್ಮಾನ ನೆರವೇರಿಸಿದರು.ಗುತ್ತಿಗಾರು ಭಾರತೀಯ ಕಿಸಾನ್ ಸಂಘದ ಕೋಶಾಧಿಕಾರಿ ಜತ್ತಪ್ಪ ಗೌಡ ಚಿಲ್ತಡ್ಕ ಅಭಿನಂದನಾ ಭಾಷಣ ಮಾಡಿದರು,ಸನ್ಮಾನಿತರ ಬಗ್ಗೆ ಕೇಶವ ಜೋಯಿಸ ಕರುವಜೆ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಭಾರತೀಯ ಕಿಸಾನ್ ಸಂಘದ ಎಣ್ಮೂರು ವಲಯದ ಅಧ್ಯಕ್ಷ ರಮೇಶ್ ಕೋಟೆ ವಹಿಸಿದ್ದರು.ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ,ಲಯನ್ಸ್ ಕ್ಲಬ್ ಅಧ್ಯಕ್ಷ ಬಿಟ್ಟಿ ಬಿ ನೆಡುನೀಲಂ ಮಾತನಾಡಿದರು.
ವೇದಿಕೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚಂದುಕೂಡ್ಲು ನಾರಾಯಣ ಭಟ್, ಸುಳ್ಯ ತಾಲೂಕು ಅಧ್ಯಕ್ಷ ಎನ್.ಜಿ.ಪ್ರಭಾಕರ ರೈ, ಬಾಳಿಲ ಮುಪ್ಪೇರ್ಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕರುವಂಕಲ್ಲು,ಗುತ್ತಿಗಾರು-ನಾಲ್ಕೂರು ವಲಯ ಅಧ್ಯಕ್ಷ ಪಿ.ಎಸ್.ಗಂಗಾಧರ ಭಟ್ ಪುಚ್ಚಪ್ಪಾಡಿ ಉಪಸ್ಥಿತರಿದ್ದರು.
ಭಾರತೀಯ ಕಿಸಾನ್ ಸಂಘದ ಗುತ್ತಿಗಾರು-ನಾಲ್ಕೂರು ವಲಯ ಅಧ್ಯಕ್ಷ ಪಿ.ಎಸ್.ಗಂಗಾಧರ ಭಟ್ ಪುಚ್ಚಪ್ಪಾಡಿ ಸ್ವಾಗತಿಸಿ ನೆಟ್ಟಾರು ಗೋಪಾಲಕೃಷ್ಣ ಭಟ್, ರಾಜಾರಾಂ ಸಿವಿ, ಎಂ.ಜಿ.ಲೋಕನಾಥ ರೈ, ಕುಮಾರಸ್ವಾಮಿ ಮೇಲ್ತೋಟ ವರದಿ ವಾಚಿಸಿದರು.ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಎನ್.ಜಿ.ಪ್ರಭಾಕರ ರೈ ವಂದಿಸಿದರು. ಮಹೇಶ್ ಪುಚ್ಚಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.