ಬೆಳ್ತಂಗಡಿ : ಉತ್ತಮ ವ್ಯಕ್ತಿಗಳನ್ನು ರೂಪಿಸಿ ಆ ಮೂಲಕ ದೇಶವನ್ನು ಕಟ್ಟುವ ಕಾರ್ಯವನ್ನು ಮಾಡುತ್ತಿರುವ ಶಿಕ್ಷಕರ ಬಗ್ಗೆ ಸಮಾಜ ಗೌರವವಿರಿಸಿಕೊಂಡಿದೆ. ಆ ಗೌರವವನ್ನು ಉಳಿಸುವ ರೀತಿಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದರು. ಅವರು ಶನಿವಾರ ಬೆಳ್ತಂಗಡಿಯ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜಿಲ್ಲಾ ಪಂಚಾಯತು ಮಂಗಳೂರು, ತಾಲೂಕು ಪಂಚಾಯತು ಬೆಳ್ತಂಗಡಿ, ನಗರ ಪಂಚಾಯತು ಬೆಳ್ತಂಗಡಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಸರಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಎಂದ ಶಾಸಕರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವ ಗುರಿಯೊಂದಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ತಾಲೂಕಿನಲ್ಲಿ ಶಿಕ್ಷಕರ ಕೊರತೆಯಿರುವ ವಿಚಾರ ತಿಳಿದಿದೆ. ಇದಕ್ಕೆ ಶಾಲೆಗಳಲ್ಲಿನ ಮಕ್ಕಳ ಕೊರತೆಯೂ ಒಂದು ಕಾರಣವಾಗಿದೆ. ಈ ಬಾರಿ ಶಿಕ್ಷಕರ ನೇಮಕಾತಿಯ ಸಂದರ್ಭದಲ್ಲಿ ಕೊರತೆ ನೀಗಿಸುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಶಿಕ್ಷಕರು ತಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಕೆಲಸಗಳನ್ನು ವಹಿಸಲಾಗುತ್ತಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸದ ನಡುವೆಯೂ ಹೆಚ್ಚಿನ ಹೊರೆಯ ಬಗ್ಗೆ ಸಂಬಂಧಿಸಿ ಸಚಿವರ ಗಮನ ಸೆಳೆಯುವುದಾಗಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಪಟ್ಟಣ ಪಂಚಾಯತು ಅಧ್ಯಕ್ಷೆ ನಳಿನಿ ವಿಶ್ವನಧ್ ವಹಿಸಿದ್ದರು. ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಾಧವ ಭಟ್ ಮಾತನಾಡಿ ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ತಾಲೂಕು ಪಂಚಾಯತು ಅಧ್ಯಕ್ಷೆ ಜಯಂತಿ ಪಾಲೇದು, ಉಪಾಧ್ಯಕ್ಷ ವಿಷ್ಣು ಮರಾಠೆ, ಜಿಲ್ಲಾ ಪಂಚಾಯತು ಸದಸ್ಯ ಕೊರಗಪ್ಪ ನಾಯ್ಕ, ಪಟ್ಟಣ ಪಂಚಾಯತು ಉಪಾಧ್ಯಕ್ಷೆ ಮಮತಾ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಿವೃತ್ತರಾಗುವ ೨೮ ಮಂದಿ ಶಿಕ್ಷಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪ್ರಶಸ್ತಿ ವಿಜೇತ ಶಿಕ್ಷಕರ ಪರವಾಗಿ ಸೋಮಶೇಖರ ಶೆಟ್ಟಿ, ನಿವೃತ್ತ ಶಿಕ್ಷಕರ ಪರವಾಗಿ ಎಸ್ ಗಂಗಾಧರ ಹಾಗೂ ಜಗನ್ನಾಥ್ ಸಫಲಿಗ ಮಾತನಾಡಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎನ್. ಮಹಂತೇಶ್, ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ, ಜಿಲ್ಲಾ ಪಂಚಾಯತು ಕಾರ್ಯನಿರ್ವಾಹಕ ಇಂಜಿನಿಯರ್ ಸಿ. ಆರ್. ನರೇಂದ್ರ, ಕ್ಷೇತ್ರ ಸಮನ್ವಯಾಧಿಕಾರಿ ತಾರಕೇಸರಿ, ಅಕ್ಷರ ದಾಸೋಹದ ಪ್ರಭಾರ ಸಹಾಯಕ ನಿರ್ದೇಶಕ ರಾಧಾಕೃಷ್ಣ, ಪ್ರಾಥಮಿಕ ಶಿಕ್ಷಕರ ಸಂಘದ ತಾ| ಅಧ್ಯಕ್ಷ ಪ್ರಭಾಕರ ಹೆಗ್ಡೆ, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ತಾ| ಅಧ್ಯಕ್ಷ ರಾಜಗುರು ಹೆಬ್ಬಾರ್, ಪ್ರೌ. ಶಾಲಾ ಸಹ ಶಿಕ್ಷಕರ ಸಂಘದ ತಾ| ಅಧ್ಯಕ್ಷ ರಮೇಶ್ ಮಯ್ಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾ| ಅಧ್ಯಕ್ಷ ಅಜಿತ್ ಕುಮಾರ್ ಕೊಕ್ರಾಡಿ, ಅನುದಾನಿತ ಶಿಕ್ಷಕರ ಸಂಘದ ತಾ| ಅಧ್ಯಕ್ಷೆ ಶೀಲಾ ಎಸ್. ಹೆಗ್ಡೆ, ದೈಹಿಕ ಶಿಕ್ಷಣ ಪರಿವೀಕ್ಷಕ ಭುವನೇಶ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಳೆದ ಬಾರಿಯ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕರು ದೇಣಿಗೆಯನ್ನು ಸಮರ್ಪಣೆ ಮಾಡಿದರು.
ಮುಖ್ಯಮಂತ್ರಿ ಪರಿಹಾರ ನಿಧಿಗೆ ನಡ ಸರಕಾರಿ ಪ್ರೌಢ ಶಾಲೆಯ ಬೆಳ್ಳಿ ಹಬ್ಬದ ಪರವಾಗಿ ಶಾಲಾ ಅಭಿವೃದ್ದಿ ಸಮಿತಿ ಹಾಗೂ ಶಿಕ್ಷಕ ವೃಂದದವರು ರೂ. 50 ಸಾವಿರವನ್ನು ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಳ ಪಿ ಸ್ವಾಗತಿಸಿದರು. ಶಿಕ್ಷಕ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ರಘುಪತಿ ರಾವ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.