ಉಡುಪಿ : ಕಡೆಗೋಲು ಶ್ರೀಕೃಷ್ಣನ ನಾಡಿನಲ್ಲಿ ಕೃಷ್ಣ ಜನ್ಮಾಷ್ಟಮಿಯ ತಯಾರಿ ಭರದಿಂದ ನಡೆಯುತ್ತಿದೆ. ಕೃಷ್ಣ ಮಠದ ಒಳಗೆ ಹಾಗೂ ಹೊರಗೆ ಎಲ್ಲಾ ಸಿದ್ಧತೆಯಲ್ಲಿ ಮಠದ ಸಿಬ್ಬಂದಿಗಳು ತೊಡಗಿಕೊಂಡಿದ್ದಾರೆ. ಸೆ.5ರ ಮಧ್ಯರಾತ್ರಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡುವ ಮೂಲಕ ಕೃಷ್ಣ ಜನ್ಮಾಷ್ಟಮಿ ಆರಂಭವಾಗಲಿದ್ದು, ಮರುದಿನ ಸಂಭ್ರಮದ ವಿಟ್ಲಪಿಂಡಿ ಮೊಸರು ಕುಡಿಕೆಗಾಗಿ ಈಗಾಗಲೇ ರಥಬೀದಿಯ ಸುತ್ತ ಅಟ್ಟಣಿಗೆಗಳನ್ನು ಹಾಕಿ ಸಿದ್ಧಗೊಳಿಸಲಾಗಿದೆ.
ವಿಟ್ಲಪಿಂಡಿಯಂದು ಗೊಲ್ಲರು ಇಲ್ಲಿ ನೇತು ಹಾಕಿರುವ ಮೊಸರು ಕುಡಿಕೆಗಳನ್ನು ಒಡೆಯುವ ಮೂಲಕ ಕೃಷ್ಣನ ಜನ್ಮ ದಿನವನ್ನು ಸಂಭ್ರಮಿಸಲಿದ್ದಾರೆ. ಕೃಷ್ಣ ಮಠದಲ್ಲಿ ಈಗಾಗಲೇ ಕೃಷ್ಣ ಜನ್ಮಾಷ್ಟಮಿಯ ಸಂಬ್ರಮ ಕಳೆಗಟ್ಟುತ್ತಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿವೆ. ಇನ್ನು ಸೆ.5 ರಂದು ಮುದ್ದುಕೃಷ್ಣ ಸ್ಪರ್ಧೆ, ಗೀತೆ ಕಂಠಪಾಟ, ಭಕ್ತಿ ಗೀತೆ ಹೀಗೆ ಹಲವು ಸ್ಪರ್ಧೆಗಳು ನಡೆಯಲಿದೆ.
ವಿವಿಧೆಡೆ ಮುದ್ದುಕೃಷ್ಣ ಸ್ಪರ್ಧೆ : ಶ್ರೀಕೃಷ್ಣನ ಜನ್ಮ ಸಂದೇಶವನ್ನು ಸಾರುವ ಮುದ್ದುಕೃಷ್ಣ ವೇಷ ಸ್ಪರ್ಧೆ ಕರಾವಳಿಯ ವಿವಿಧೆಡೆ ನಡೆಯುತ್ತಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ ಶ್ರೀಕೃಷ್ಣಮಠದಲ್ಲಿ ಸ್ಪರ್ಧೆ ಆರಂಭಗೊಳ್ಳಲಿದ್ದು, ಸುಮಾರು ೫೦೦ ಸ್ಪರ್ಧಿಗಳು ಹೆಸರು ದಾಖಲಿಸಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಶನಿವಾರ, ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ರವಿವಾರ ನಡೆಯಲಿದೆ. ಶ್ರೀಕೃಷ್ಣ ಮಠ ಸೇರಿದಂತೆ ನಾಡಿನ ವಿವಿಧ ಶ್ರೀಕೃಷ್ಣ -ವಿಷ್ಣು -ವೆಂಕಟರಮಣ ದೇವಸ್ಥಾನಾಧಿಗಳಲ್ಲಿ ವಿಶೇಷ ಪೂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ವಿವಿಧ ಪೂಜೆಗಳು, ಮಹಾಪೂಜೆ ನಡೆಯುತ್ತದೆ. ಬಳಿಕ ಪರ್ಯಾಯ ಶ್ರೀ ಕಾಣಿಯೂರು ಶ್ರೀಪಾದರು ಭೋಜನ ಶಾಲೆಯಲ್ಲಿ ಸ್ವತಃ ಉಂಡೆಗಳನ್ನು ಕಟ್ಟಲು ಮುಹೂರ್ತ ಮಾಡುತ್ತಾರೆ. ಇದನ್ನೇ ರಾತ್ರಿ ಮಹಾಪೂಜೆಯಲ್ಲಿ ಶ್ರೀಕೃಷ್ಣ ದೇವರಿಗೆ ಸಮರ್ಪಣೆ ಮಾಡುವರು. ಹಗಲಿಡೀ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ಹೆಸರಾಂತ ತಂಡಗಳಿಂದ ನಿರಂತರ ಭಜನೆ ನಡೆಯಲಿದೆ.
ಸಂಜೆ ಎಂದಿನಂತೆ ಚಾಮರಪೂಜೆಯ ಬಳಿಕ ಪರ್ಯಾಯ ಶ್ರೀಪಾದರು ಮತ್ತೆ ಮಹಾಪೂಜೆಯನ್ನು ನಡೆಸುತ್ತಾರೆ. ಏಕಾದಶಿ ರೀತಿಯಲ್ಲಿ ನಿರ್ಜಲ ಉಪವಾಸವಿರುವುದರಿಂದ ರಾತ್ರಿಯೂ ಮಹಾಧಿಪೂಜೆಗೆ ಅವಕಾಶವಿದೆ. ಇದೆಲ್ಲವೂ ಮುಗಿದ ಬಳಿಕ ರಾತ್ರಿ 12-14 ಗಂಟೆಗೆ ಚಂದ್ರೋದಯದ ವೇಳೆ ಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಇದೇ ಹೊತ್ತಿನಲ್ಲಿ ನಾಡಿನ ವಿವಿಧ ದೇವಸ್ಥಾನಗಳಲ್ಲಿಯೂ, ಅರ್ಘ್ಯ ಪ್ರದಾನ ನಡೆಯುತ್ತದೆ.
ರವಿವಾರ ಬೆಳಗ್ಗೆ ದ್ವಾದಶಿಯಂತೆ ಮಹಾಪೂಜೆ ನಡೆಯುತ್ತದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಸೇವಾ ಸಮಿತಿಯಿಂದ ಭೋಜನ ಪ್ರಸಾದದ ವ್ಯವಸ್ಥೆ ಇದೆ. 3 ಗಂಟೆಗೆ ಶ್ರೀಕೃಷ್ಣಲೀಲೋತ್ಸವದ ಭವ್ಯ ಮೆರವಣಿಗೆ ಹೊರಡಲಿದೆ. ಚಾತುರ್ಮಾಸ್ಯದ ಅವಧಿಯಲ್ಲಿ ಉತ್ಸವ ನಡೆಯದೆ ಇರುವ ಕಾರಣ, ಉತ್ಸವ ಮೂರ್ತಿಯನ್ನು ಹೊರಗೆ ತಾರದೆ ಇರುವ ಕಾರಣ ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ಉತ್ಸವದ ಮೆರವಣಿಗೆಯಲ್ಲಿ ತರಲಾಗುವುದು.
ಬಳಿಕ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಇದೇ ವೇಳೆ ನಾನಾ ವೇಷಧಾರಿಗಳ ಕುಣಿತ ನಗರಾದ್ಯಂತ ನಡೆಯುತ್ತದೆ. ಕೃಷ್ಣಮಠದ ಪರಿಸರದಲ್ಲಿ ವೇಷಗಳ ಸ್ಪರ್ಧೆ ನಡೆಯುತ್ತದೆ. ಸೆ. ೧ರಂದು ಆರಂಭಗೊಂಡ ಅಷ್ಟದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಸೆ. 8 ರಂದು ಸಮಾಪನಗೊಳ್ಳುತ್ತದೆ.
ಕೃಷ್ಣನ ತವರೂರು, ಪೊಡವಿಗೊಡೆಯನ ಕ್ಷೇತ್ರವಾದ ಉಡುಪಿಯಲ್ಲಿ ಕೃಷ್ಣನ ಜನ್ಮೋತ್ಸವವನ್ನು ಎದುರುಗೊಳ್ಳಲು ಭರದ ಸಿದ್ದತೆ ನಡೆಯುತ್ತಿದೆ. ರೋಹಿಣಿ ನಕ್ಷತ್ರ, ಕೃಷ್ಣ ಪಕ್ಷದ ಚಂದ್ರೋಯದದ ಕಾಲದಲ್ಲಿ ಶ್ರೀ ಕೃಷ್ಣ ಜನ್ಮತಾಳಿದ ಹಿನ್ನಲೆಯಲ್ಲಿ ಕೃಷ್ಣ ಮಠದ ಒಳಗೂ ಹಾಗೂ ಹೊರಗೂ ಎಲ್ಲಾ ಸಿದ್ದತೆಗೆ ಸಿಬ್ಬಂದಿಗಳು ಮುಂದಾಗಿದ್ದಾರೆ. ಕೃಷ್ಣ ಜನ್ಮಾಷ್ಟಮಿಯ ಮರುದಿನ ಅಂದರೆ ವಿಟ್ಲಪಿಂಡಿಯಂದು ಭಕ್ತರಿಗೆ ಪ್ರಸಾದವನ್ನು ವಿತರಿಸಲು ಹಾಗೂ ಚಿಣ್ಣರ ಶಾಲೆಗಳ ಮಕ್ಕಳಿಗೆ ನೀಡಲು ಕೃಷ್ಣ ಮಠದ ಒಳಗಡೆ ಬಾಣಸಿಗರು ಲಡ್ಡು, ಚಕ್ಕುಲಿಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಒಂದು ಲಕ್ಷ ಚಕ್ಕುಲಿ ಹಾಗೂ ಎಂಟು ಬಗೆಯ ವಿವಿಧ ಲಡ್ಡು ತಲಾ ಒಂದು ಲಕ್ಷದಂತೆ ತಯಾರಿಸಲಾಗಿದ್ದು ಇದಕ್ಕಾಗಿ ೪೦ ನುರಿತ ಬಾಣಸಿಗರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.