ಇಂದು ವಿಶ್ವ ವನ್ಯಜೀವಿ ದಿನ. ಪ್ರಪಂಚದ ಕಾಡು ಪ್ರಾಣಿಗಳು ಮತ್ತು ಸಸ್ಯಗಳ ಮಹತ್ವವನ್ನು ಸಾರಲು ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಡಿಸೆಂಬರ್ 20, 2013 ರಂದು, ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಮಾರ್ಚ್ 3 ಅನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಘೋಷಿಸಿತು.
ವನ್ಯಜೀವಿಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಇಡೀ ಜಗತ್ತು ವಿಶ್ವ ವನ್ಯಜೀವಿ ದಿನವನ್ನು ಆಚರಿಸುತ್ತದೆ. ಭೂಮಿಯು ಅಸಂಖ್ಯಾತ ಜೀವಿಗಳಿಗೆ ನೆಲೆಯಾಗಿದೆ, ಮತ್ತು ಅವುಗಳಲ್ಲಿ ಪ್ರತಿಯೊಂದೂ ಜೀವಿ ಕೂಡ ಪರಿಸರವನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಲ್ಲಾ ಪರಿಸರ ವ್ಯವಸ್ಥೆಗಳು, ಮರುಭೂಮಿಗಳು, ಕಾಡುಗಳು, ಬಯಲು ಪ್ರದೇಶಗಳು ಮತ್ತು ಇತರ ಪ್ರದೇಶಗಳಲ್ಲಿ ಪ್ರತಿಯೊಂದು ಜೀವಿಯ ಪಾತ್ರವನ್ನು ನಾವು ಕಾಣಬಹುದು.
“ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಗಾಗಿ ಪ್ರಮುಖ ಪ್ರಭೇದಗಳನ್ನು ಮರಳಿಪಡೆಯುವುದು” ಎಂಬ ವಿಷಯದೊಂದಿಗೆ ಈ ವರ್ಷದ ವನ್ಯಜೀವಿ ದಿನವನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ನಿರ್ಣಾಯಕವಾಗಿ ಅಳಿವಿನಂಚಿನಲ್ಲಿರುವ ಕೆಲವು ಜಾತಿಯ ಕಾಡು ಪ್ರಾಣಿ ಮತ್ತು ಸಸ್ಯಗಳ ಸಂರಕ್ಷಣೆಯತ್ತ ಗಮನ ಸೆಳೆಯಲು ಪ್ರಯತ್ನಿಸಲಿದೆ ಮತ್ತು ಇದರ ಅನುಷ್ಠಾನದ ಕಡೆಗೆ ಚರ್ಚೆಗಳನ್ನು ಹುಟ್ಟು ಹಾಕಲಿದೆ
ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳನ್ನು ಸಂರಕ್ಷಿಸಿ ಅವುಗಳ ಸಂಖ್ಯೆಯನ್ನು ವೃದ್ಧಿಸಿ ಪರಿಸರ ವ್ಯವಸ್ಥೆಯನ್ನು ಕಾಪಾಡುವುದು ಈ ವರ್ಷದ ವನ್ಯಜೀವಿ ದಿನಾಚರಣೆಯ ಗುರಿಯಾಗಿದೆ. ಇದು ಅರಣ್ಯ ಆಧಾರಿತ ಜೀವನೋಪಾಯವನ್ನು ಉತ್ತೇಜಿಸುತ್ತದೆ ಮತ್ತು ಅರಣ್ಯ ಮತ್ತು ಅರಣ್ಯ ವನ್ಯಜೀವಿ ನಿರ್ವಹಣೆ ಮಾದರಿಗಳು ಮತ್ತು ಅಭ್ಯಾಸಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಇದರಿಂದ ಮಾನವರ ಮತ್ತು ಪ್ರಾಣಿಗಳು ಸಹ-ಅಸ್ತಿತ್ವ ಸಂತೋಷಕರವಾಗಿರಲಿದೆ. ವನ್ಯಜೀವಿ ಪ್ರಭೇದಗಳ ನೈಸರ್ಗಿಕ ಆವಾಸಸ್ಥಾನವನ್ನು ನಾಶಪಡಿಸದೆಯೇ ಮಾನವ ಉಳಿವಿನ ಸುಸ್ಥಿರ ಮಾರ್ಗಗಳನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ನ ದತ್ತಾಂಶದ ಪ್ರಕಾರ, 8,400 ಕ್ಕೂ ಹೆಚ್ಚು ಜಾತಿಯ ಕಾಡು ಪ್ರಾಣಿಗಳು ಮತ್ತು ಸಸ್ಯಗಳು ಅಳಿವಿನಂಚಿನಲ್ಲಿವೆ, ಆದರೆ 30,000 ಹೆಚ್ಚು ಅಳಿವಿನಂಚಿನತ್ತ ಸಾಗುತ್ತಿವೆ. ಈ ಅಂದಾಜುಗಳ ಆಧಾರದ ಮೇಲೆ, ಒಂದು ಮಿಲಿಯನ್ಗಿಂತಲೂ ಹೆಚ್ಚು ಜಾತಿಗಳು ಅಳಿವಿನಂಚಿನಲ್ಲಿವೆ ಎಂಬುದು ತಿಳಿದು ಬರುತ್ತದೆ.
ಅಳಿವಿನಂಚಿನ ಪ್ರಾಣಿ ಪ್ರಭೇದಗಳನ್ನು ಜತನದಿಂದ ಕಾಪಾಡಿಕೊಂಡು ಬರುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಆಗ ಮಾತ್ರ ನಾವು ವಾಸಿಸುವ ಪ್ರಕೃತಿ ಸಮತೋಲನದಿಂದ ಇರುತ್ತದೆ ಮತ್ತು ನಮ್ಮ ಜೀವನ ಸುರಕ್ಷಿತವಾಗಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.