ಬೆಂಗಳೂರು: ನಾಲ್ಕು ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಹಿಜಾಬ್ ಗೆ ಅವಕಾಶ ನೀಡಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲಾ ಕಾಲೇಜುಗಳಲ್ಲಿ ಸಹೋದರತ್ವ ಇಲ್ಲದೆ ಇದ್ದರೆ ಸಮಾಜ ಉತ್ತಮವಾಗಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ನಾಲ್ಕು ವರ್ಷದ ಹಿಂದೆ ಶಾಲಾ ಕಾಲೇಜುಗಳಲ್ಲಿ ತಲೆದೋರಿದ್ದ ಧಾರ್ಮಿಕ ಭಾವನೆ ಕೆರಳಿಸುವ ಹಿಜಾಬ್ ಅನ್ನು ನಿಷೇಧ ಮಾಡಲಾಗಿತ್ತು. ಸಮವಸ್ತ್ರ ಬಿಟ್ಟು ಬಹಿರಂಗವಾಗಿ ಮೇಲೆ ಕಾಣುವ ವಸ್ತ್ರ ಧರಿಸಬಾರದು ಎಂದು ತೀರ್ಮಾನ ಮಾಡಲಾಗಿತ್ತು ಎಂದರು.
ಹಿಜಾಬ್ ನಿಷೇಧ ಪ್ರಶ್ನಿಸಿ ಕೇಸ್ ಹಾಕಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಇರುವಾಗಲೇ ಇವರು ತಕ್ಷಣಕ್ಕೆ ಒಂದು ಸಮುದಾಯ ಓಲೈಸಲು ಮತ್ತೆ ಹಿಜಾಬ್ ಹಾಕಲು ಆದೇಶ ಮಾಡಿದ್ದಾರೆ. ಇದು ದೊಡ್ಡ ತಪ್ಪು. ಕೋರ್ಟ್ನಲ್ಲಿ ಇರುವಾಗಲೇ ಆದೇಶ ಮಾಡಿರುವುದು ಕೋರ್ಟ್ ಗೆ ಅಪಚಾರ ಮಾಡಿದಂತೆ ಎಂದು ತಿಳಿಸಿದರು.
ಹಿಜಾಬ್ ಗೆ ಅವಕಾಶ ನೀಡಿದರೆ ಮುಸ್ಲಿಮರು ನಮ್ಮ ಜೊತೆಯಾಗುತ್ತಾರೆ ಅಂತ ಸರ್ಕಾರ ತಿಳಿದಿದೆ. ಮುಸ್ಲಿಮರಿಗೆ ಹಣ ನೀಡಿದರೆ, ಮನೆ ಕೊಟ್ಟರೆ ಅವರೆಲ್ಲ ನಮ್ಮ ಜೊತೆಗೆ ನಿಲ್ಲುತ್ತಾರೆ ಅಂತ ಕಾಂಗ್ರೆಸ್ ಭಾವಿಸಿದೆ. ಇವೆಲ್ಲ ಬಹುಸಂಖ್ಯಾತರನ್ನು ಮುಸ್ಲಿಮರ ವಿರುದ್ಧವಾಗಿ ಎತ್ತಿಕಟ್ಟುವ ಕೆಲಸ. ಈ ರೀತಿ ಮಾಡಿ ಮುಸ್ಲಿಮರಿಗೆ ತೊಂದರೆ ಕೊಡುತ್ತಿದ್ದೀರಿ ಅಂತಾನೆ ನನ್ನ ಭಾವನೆ. ಏಕೆಂದರೆ ಅಲ್ಪಸಂಖ್ಯಾತರನ್ನು ಓಲೈಸಲು ಹೋಗಿ ಬಹುಸಂಖ್ಯಾತರು ವಿರೋಧಿಗಳಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಮುಸ್ಲಿಮರ ಓಲೈಕೆ ಮಾಡಿದರೆ ಯಾವ ರೀತಿ ಅದನ್ನು ಅವರು ತಗೋತಾರೆ ಎಂಬುದು ಮುಖ್ಯ. ಕಾಂಗ್ರೆಸ್ ನಿಮ್ಮ ಪರವಾಗಿ ಇಲ್ಲ. ಎಲ್ಲರ ನಡುವೆ ನಿಮ್ಮನ್ನು ನಿಂದಿಸುವ ಕೆಲಸ ಮಾಡುತ್ತಿದೆ ಎಂದು ತಿಳಿದುಕೊಳ್ಳಿ ಎಂದು ಹೇಳಿದರು. ಕಾಂಗ್ರೆಸ್ ನಂಬಿದರೆ ದ್ರೋಹ ಅಗುತ್ತದೆ; ಒಳ್ಳೆಯದು ಅಗಲ್ಲ. ಯಾಕೆಂದರೆ ದೇಶದ ಕಾನೂನು ಎಲ್ಲರಿಗೂ ಒಂದೇ. ಸಂವಿಧಾನದ ಅಡಿಯಲ್ಲಿ ಮುಸ್ಲಿಂ, ಕ್ರೈಸ್ತ, ಬೌದ್ಧ ಒಂದೇ. ಪ್ರಧಾನಿ ಮೋದಿ ಅವರು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳಿದ್ದು ಇದನ್ನೇ. ಸಂವಿಧಾನದ ಅಡಿ ಯಾರನ್ನೂ ಬೇರೆ ಮಾಡಬಾರದು ಎಂದರು.
ಕಾಂಗ್ರೆಸ್, ಬಿಜೆಪಿಯನ್ನು ಸನಾತನಿ ಅಂತ ಹೇಳುತ್ತದೆ. ಆದರೆ ನಾವು ದೇಶ ಒಡೆಯುವ ಯಾವುದೇ ಧಾರ್ಮಿಕ ವಿಚಾರ ಹೇಳಿಲ್ಲ. ನಮ್ಮದು ಯಾವಾಗಲೂ ಕೂಡ ಹಿಂದೂ ಅಸ್ಮಿತೆ ಎಂದರು. ಹಿಜಾಬ್ ನಂತಹ ತೀರ್ಮಾನ ಕೈಗೊಂಡು ನೀವೇ ರಾಜ್ಯಕ್ಕೇ ಬೆಂಕಿ ಹಚ್ಚುತ್ತ ಇದ್ದೀರಿ. ಇಲ್ಲಿ ಅಹಿತಕರ ಘಟನೆ, ಗದ್ದಲ ಆದರೆ ಕಾಂಗ್ರೆಸ್ ಹೊಣೆ. ಮುಸ್ಲಿಮರು ಕಾಂಗ್ರೆಸ್ ಬಂಧುವಲ್ಲ. ಸರ್ವರನ್ನು ನಿಮ್ಮ ವಿರುದ್ಧವಾಗಿ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


