
ಬೆಂಗಳೂರು: ಕಾಂಗ್ರೆಸ್ನವರು ಏಕಾಏಕಿ ಕುತಂತ್ರ, ಷಡ್ಯಂತ್ರ ಮಾಡಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಮೀಸಲಾತಿ ಪ್ರಮಾಣ ಇಳಿಸುವ ಮೂಲಕ ವಂಚನೆ, ದ್ರೋಹವೆಸಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ಷೇಪಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರವು ಎಸ್ಸಿ ಮೀಸಲಾತಿಯನ್ನು ಶೇ 15ರಿಂದ 17ಕ್ಕೆ ಏರಿಸಿತ್ತು. ಎಸ್ಟಿ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹೆಚ್ಚಿಸಿತ್ತು. ಎಸ್ಟಿ ಸಮುದಾಯಕ್ಕೆ ನ್ಯಾಯಯುತ ಬೇಡಿಕೆಯನ್ನು ನಾವು ಈಡೇರಿಸಿದ್ದೆವು ಎಂದು ಗಮನ ಸೆಳೆದರು. ಮಾಧುಸ್ವಾಮಿ ವರದಿ, ಸದಾಶಿವ ಆಯೋಗವನ್ನು ಗಮನದಲ್ಲಿ ಇಟ್ಟುಕೊಂಡು ನಾವು ಮೀಸಲಾತಿಯನ್ನು ಹೆಚ್ಚಿಸಿದ್ದೆವು. ಇದು ಸುಮಾರು 30 ವರ್ಷಗಳ ಹೋರಾಟದ ಪ್ರತಿಫಲ ಎಂದು ವಿವರಿಸಿದರು.
ಕಾಂಗ್ರೆಸ್ ಸರಕಾರದ ಕ್ರಮದಿಂದ ಎಸ್ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ. ಮೀಸಲಾತಿ ಕಡಿಮೆ ಮಾಡಲು ಮತ್ತು ಘನಂದಾರಿ ಕೆಲಸಕ್ಕೆ ಸಿದ್ದರಾಮಯ್ಯನವರ ಸರಕಾರವೇ ಬೇಕಿತ್ತೇ? ಇದೇನಾ ನಿಮ್ಮ ದಲಿತಪರ ನೀತಿ ಎಂದು ಪ್ರಶ್ನಿಸಿದರು. ಹಿಂದೆ 10 ವರ್ಷ ಮನಮೋಹನ್ ಸಿಂಗ್ ಸರಕಾರ ಇದ್ದಾಗ ಮೀಸಲಾತಿ ಪ್ರಮಾಣ ಹೆಚ್ಚಿಸಿಲ್ಲವೇಕೆ ಎಂದು ಕೇಳಿದರು. ಎಸ್ಟಿ ಸಮುದಾಯ ನ್ಯಾಯ ಕೇಳುತ್ತಿದೆ. ಅದಕ್ಕೆ ನಿಮ್ಮ ಉತ್ತರವೇನು ಎಂದು ಪ್ರಶ್ನೆಯನ್ನು ಮುಂದಿಟ್ಟರು. 7ರಿಂದ ಶೇ 3ಕ್ಕೆ ಇಳಿಸಲಾಗಿದೆ. ಇನ್ನೆಷ್ಟು ವರ್ಷ ಹೋರಾಟ ಮಾಡಬೇಕಾದೀತು ಎಂದರು.
ಮೀಸಲಾತಿ ಪ್ರಮಾಣ ಕಡಿತ ಮಾಡಿ ಎಸ್ಟಿಗಳಿಗೆ ಅವಮಾನ ಮಾಡಿದ್ದಾರೆ. ದಲಿತರ ಬೆನ್ನಿಗೆ ಇವರು ಚೂರಿ ಹಾಕಿದ್ದಾರೆ. ಇದು ಇವರ ದ್ವಂದ್ವ ನೀತಿ ಎಂದು ಆಕ್ಷೇಪಿಸಿದರು. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಇದನ್ನು ಸರಿಪಡಿಸದೇ ಇದ್ದರೆ ಹೋರಾಟವು ದೊಡ್ಡ ಜ್ವಾಲೆಯಾಗಿ ರಾಜ್ಯ ಸರಕಾರವನ್ನು ಕಿತ್ತೆಸೆಯುವಂಥ ತೀರ್ಮಾನವನ್ನು ಆ ಸಮುದಾಯದವರು ಮಾಡಲಿದ್ದಾರೆ. ನಾವು ಕೂಡ ಅವರ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಎಂದು ತಿಳಿಸಿದರು.
ದಲಿತರ ಕಣ್ಣಿಗೆ ಮಣ್ಣೆರಚುವ ಕೆಲಸ ಸರಿಯೇ- ರಾಜುಗೌಡ ನಾಯಕ್
ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜುಗೌಡ ನಾಯಕ್ ಅವರು ಹೋರಾಟದ ಕುರಿತು ವಿವರ ನೀಡಿದರು. ಕಾಂಗ್ರೆಸ್ ಸರಕಾರವು ಕೋರ್ಟಿಗೆ ಸಮರ್ಪಕ ಮಾಹಿತಿ ಕೊಟ್ಟಿಲ್ಲ; ಒಳ್ಳೆಯ ವಕೀಲರನ್ನು ನೇಮಿಸಿಲ್ಲ. ವಕೀಲರು ಕೋರ್ಟಿಗೆ ಹಾಜರಾಗಿಲ್ಲ. ಇದರಿಂದ ಕೋರ್ಟಿನಲ್ಲಿ ತಡೆಯಾಜ್ಞೆ ಸಿಗುವಂತಾಗಿದೆ ಎಂದು ಆರೋಪಿಸಿದರು. ಸ್ಟೇ ತೆರವು ಮಾಡಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರೇ, ದಲಿತರ ಕಣ್ಣಿಗೆ ಮಣ್ಣೆರಚುವ ಕೆಲಸ ಸರಿಯೇ ಎಂದು ಕೇಳಿದರು.
ಛತ್ತೀಸಗಡದಲ್ಲಿ ಎಸ್ಟಿಗೆ ಶೇ 32, ಎಸ್ಸಿ 10, ಒಬಿಸಿ 16 ಸೇರಿ ಒಟ್ಟು ಶೇ 58 ಮೀಸಲಾತಿ ಕೊಡಲಾಗಿದೆ. ಅಲ್ಲಿ ಎಸ್ಸಿ, ಎಸ್ಟಿಗೆ ಜನಸಂಖ್ಯೆ ಆಧಾರದಲ್ಲಿ ಶೇ 50ಕ್ಕಿಂತ ಹೆಚ್ಚಾದರೂ ಕೊಡಿ ಎಂದಿದ್ದಾರೆ. ಹಾಗಿದ್ದರೆ ಕರ್ನಾಟಕದಲ್ಲಿ ಯಾಕೆ ಕೊಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜುಗೌಡ ನಾಯಕ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸದಾಸ ಕರಿಯಪ್ಪ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


