ರಷ್ಯಾ ಈ ಹಿಂದೆ ಉಕ್ರೇನ್ ಭಾಗವಾಗಿದ್ದ ಕ್ರಿಮಿಯಾವನ್ನು ಯಾವುದೇ ಪ್ರತಿರೋಧವೂ ಇಲ್ಲದೆ ತನ್ನ ತೆಕ್ಕೆಗೆ ಪಡೆದಿತ್ತು. 2014 ರಲ್ಲಿ ರಷ್ಯಾ ಪಡೆಗಳು ಕ್ರಿಮಿಯಾವನ್ನು ವಶಪಡಿಸಿದ್ದವು. ಎಂಟು ವರ್ಷಗಳ ನಂತರ ಯುರೋಪಿಯನ್ ಯೂನಿಯನ್ ಶಕ್ತಿ ಕುಂದಿದಂತೆ ರಷ್ಯಾ ತನ್ನ ಶಕ್ತಿ ಏನು ಎಂಬುದನ್ನು ಸಾಬೀತುಪಡಿಸಲು ಹೊರಟಿದೆ. ಉಕ್ರೇನ್ ಮೇಲೆ ಯುದ್ಧ ಸಾರುವ ಮೂಲಕ ತನ್ನ ಆರ್ಥಿಕ, ರಾಜತಾಂತ್ರಿಕ ಮತ್ತು ಸೇನಾ ಸಾಮರ್ಥ್ಯವನ್ನು ಯುದ್ಧದ ಮೂಲಕ ಪ್ರಕಟಿಸುತ್ತಿದೆ. ಯುಎಸ್ಎಸ್ಆರ್ ಪತನದ ನಂತರ ರಷ್ಯಾದ ಭಾಗವಾಗಿದ್ದ ಹಲವು ಪ್ರದೇಶಗಳು ಸ್ವಾತಂತ್ರ್ಯ ದೇಶಗಳೆಂದು ಘೋಷಿಸಿಕೊಂಡು ದಶಕಗಳೇ ಸಂದಿವೆ, ಆದರೆ ರಷ್ಯಾದ ಸಾಮ್ರಾಜ್ಯಶಾಹಿ ಮಾನಸಿಕತೆ ಮತ್ತು ಆ ಧೋರಣೆ ಇನ್ನೂ ಕಡಿಮೆಯಾದಂತಿಲ್ಲ. ಇದಕ್ಕೆ ಬಲವಾದ ಕಾರಣಗಳೂ ಇವೆ. ವಿಶ್ವದ ಹಲವು ಯುದ್ಧಗಳು ಹೊಸ ಭೂ ರಾಜಕೀಯ ನೆಲೆಗಟ್ಟನ್ನು ಸೃಷ್ಠಿಸುತ್ತವೆ. ಉಕ್ರೇನ್ ಮೇಲಿನ ರಷ್ಯಾದ ದಾಂಗುಡಿಯೂ ವಿಶ್ವ ರಾಜಕಾರಣಕ್ಕೆ ಹೊಸ ಭಾಷ್ಯ ಬರೆಯಲೂ ಬಹುದು. ಉಕ್ರೇನ್ ಪಶ್ಚಿಮದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಎರಡು ಪ್ರದೇಶಗಳು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತನ್ನದು ಎಂಬ ವಾದ ರಷ್ಯಾದ್ದಾಗಿದ್ದು, ಉಕ್ರೇನಿನ ಖನಿಜ ಸಂಪತ್ತಿನ ಆಗರ ಎನಿಸಿರುವ ಡೊಂಬಾಸ್ ಪ್ರದೇಶಗಳನ್ನು ತನ್ನದಾಗಿಸಿಕೊಳ್ಳಬೇಕು ಎಂಬ ತವಕವೂ ರಷ್ಯಾದ್ದಾಗಿದೆ. 2014 ರಲ್ಲಿ ಕ್ರಿಮಿಯಾ ವಶಪಡಿಸಿಕೊಳ್ಳುವ ರಷ್ಯಾದ ನೀತಿಯು ಇಂತಹ ವಿಸ್ತರಣಾವಾದವನ್ನೇ ಮುಂದಿಟ್ಟಿತ್ತು. ವಶಪಡಿಸಿಕೊಳ್ಳುವ ಮುನ್ನ ಉಕ್ರೇನ್ ಅಧೀನದಲ್ಲಿದ್ದ ಸ್ವಾಯತ್ತ ಪ್ರಾಂತ್ಯವಾದರೂ, ಕ್ರಿಮಿಯಾವೆಂಬ ದ್ವೀಪದಲ್ಲಿ ರಷ್ಯಾದ ನೌಕಾನೆಲೆಯೂ ಇತ್ತು.
ಪ್ರಸ್ತುತ ಯುದ್ಧ ಘೋಷಣೆಗೂ ಮುನ್ನ ಅಮೇರಿಕಾ ಸಹಿತ ಕೆಲ ಯುರೋಪಿಯನ್ ರಾಷ್ಟ್ರಗಳು ರಷ್ಯಾದ ನಡೆಯನ್ನು ಗಮನಿಸಿ ಆರ್ಥಿಕ ದಿಗ್ಭಂಧನ ವಿಧಿಸಿದ್ದು ಮಾತ್ರವಲ್ಲದೆ ತಕ್ಕ ಪರಿಣಾಮವನ್ನು ಎದುರಿಸಬೇಕಾದೀತು ಎಂಬ ಸಂದೇಶವನ್ನು ರವಾನಿಸಿದ್ದವು. ಆದರೆ ಈ ನಿರ್ಭಂಧಗಳಾವುವು ರಷ್ಯಾವನ್ನು ಬಾಧಿಸದಾಗಿವೆ. ಆದರೆ ಈ ಯುದ್ಧದ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮವನ್ನು ಯುರೋಪ್ ಮತ್ತು ರಷ್ಯಾ ಅನುಭವಿಸಲಿದೆ ಎನ್ನುವುದಂತೂ ಖಾತರಿಯಾಗಿದೆ. ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪಾದಕ ರಾಷ್ಟ್ರವಾಗಿರುವ ರಷ್ಯಾ ಅತಿ ಹೆಚ್ಚಿನ ಇಂಧನವನ್ನು ಯುರೋಪಿಯನ್ ರಾಷ್ಟ್ರಗಳಿಗೆ ಪೂರೈಸುತ್ತದೆ. ಜರ್ಮನಿ ಅತಿ ಹೆಚ್ಚಿನ ಅನಿಲವನ್ನು ಆಮದಾಗಿಸುತ್ತದೆ. ಇಂತಹ ವ್ಯಾಪಾರ ಸಂಬಂಧಗಳಿಗೆ ದೊಡ್ಡ ಹೊಡೆತ ಬೀಳುವುದಷ್ಟೇ ಅಲ್ಲದೆ ಪೆಟ್ರೋಲ್ ಡಿಸೆಲ್ ಸಹಿತ ಗ್ಯಾಸ್ ಬೆಲೆ ಗಗನಕ್ಕೇರುವ ಸಾಧ್ಯತೆಗಳು ನಿಚ್ಚಳವಾಗಿದೆ. ರಷ್ಯಾ-ಜರ್ಮನಿ ಮಧ್ಯೆ ಇರುವ ನಾರ್ಡ್ ಪೈಪ್ ಲೈನ್ ಯೋಜನೆ ಬಹುಕೋಟಿ ಡಾಲರ್ ಒಪ್ಪಂದವಾಗಿದ್ದು ಯುದ್ಧದ ಪರಿಣಾಮದಿಂದ ನೆಲಕ್ಕಚ್ಚಲೂಬಹುದು.
ರಷ್ಯಾದ ವಿಸ್ತರಣಾ ನೀತಿಯ ಹಿಂದೆ ಆರ್ಥಿಕ ಲಕ್ಷ್ಯ ಮಾತ್ರವಲ್ಲದೆ ಯುರೋಪ್ ಮತ್ತು ಅಮೇರಿಕಾ ರಾಷ್ಟ್ರಗಳ ಆರ್ಥಿಕ, ರಾಜಕೀಯ ಮತ್ತು ಸೇನಾ ಸಾಮರ್ಥ್ಯದ ಪರೋಕ್ಷ ಪರೀಕ್ಷೆಯೂ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ತನ್ನ ಸಮೀಪವರ್ತಿ ರಾಷ್ಟ್ರವಾದ ಉಕ್ರೇನ್ ನ್ಯಾಟೋ ಸಮರ್ಥನೆಯ ರಾಷ್ಟ್ರವಾಗಬಾರದು, ಸ್ವಾತಂತ್ರ್ಯ ಪ್ರಭಾಪ್ರಭುತ್ವ ರಾಷ್ಟ್ರವಾಗಿದ್ದರೂ ತನ್ನನ್ನು ಆದರಿಸಿ ಗೌರವಿಸುತ್ತಿರಬೇಕು ಎಂಬ ನಿಲುವು ರಷ್ಯಾದ್ದಾಗಿದೆ. ಪೂರ್ವ ಉಕ್ರೇನಿನ ಹಲವು ಮಂದಿ ರಷ್ಯಾಕ್ಕೆ ಭೌಗೋಳಿಕ, ಸಾಂಸ್ಕೃತಿಕವಾಗಿ ಸಾಮೀಪ್ಯ ಹೊಂದಿದ್ದು, ರಷ್ಯಾದ ನಡೆಯನ್ನು ಸಮರ್ಥಿಸುವವರೇ ಆಗಿದ್ದಾರೆ. ರಾಜಧಾನಿ ಕೈವ್ ಸಹಿತ ಪಶ್ಚಿಮ ಉಕ್ರೇನ್ ಮಂದಿ ಯುರೋಪ್ ನಿಂದ ಪ್ರಭಾವಿತರು. ಈ ಹಿಂದೆ ಉಕ್ರೇನ್ ಅಧ್ಯಕ್ಷರಾಗಿದ್ದ ವಿಕ್ಟರ್ ಯನುಕೊವಿಚ್ ರಷ್ಯಾದ ಸಮರ್ಥನೆ ಮಾಡುತ್ತಿದ್ದ ಕಾರಣ ಉಕ್ರೇನ್ ದಂಗೆಗೆ ಕಾರಣರಾಗಿ ಉಚ್ಚಾಟಿಸಲ್ಪಟ್ಟರು, ಮಾತ್ರವಲ್ಲ ರಷ್ಯಾಗೆ ತೆರಳಿ ಅಲ್ಲೇ ನೆಲೆಸಿದರು. ಪ್ರ
ಸ್ತುತ ಉಕ್ರೇನ್ ಮತ್ತು ರಷ್ಯಾದ ಚುಕ್ಕಾಣಿ ಹಿಡಿದಿರುವ ವ್ಲಾದಿಮೀರರು ಪರಸ್ಪರ ಪ್ರತಿಷ್ಠೆಗೆ ಇಳಿದಿದ್ದಾರೆ. ಉಕ್ರೇನಿನ ವಿಕ್ಟರ್ ಪತನದ ನಂತರ ರಾಷ್ಟ್ರೀಯಪರ ಹೋರಾಟಗಳ ಮುಖಾಂತರ ಅಧ್ಯಕ್ಷ ಗಾದಿ ಅಲಂಕರಿಸಿದ ವೋಲ್ದಿಮಿರ್ ಝೆಲ್ಯಂಸ್ಕಿ ರಷ್ಯಾದ ಕಟು ವಿರೋಧಿಯಾಗಿದ್ದು, ರಷ್ಯಾದ ವಿಸ್ತರಣಾವಾದದ ವಿರುದ್ಧ ದನಿಯೆತ್ತಿದ್ದಾರೆ. ಇತ್ತ ಕಡೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನಿನ ಡೊಂಬಾಸ್ ಪ್ರಾಂತ್ಯದಲ್ಲಿ ನರಮೇಧ ಮಾಡಲಾಗಿದ್ದು, ಅಮಾನುಷ ನಾಗರಿಕರ ಹತ್ಯೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಉಕ್ರೇನ್ ಮೇಲೆ ಯುದ್ಧ ಸಾರಿಯಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ವಿಸ್ತರಣಾವಾದ,ಇದು ಕೇವಲ ಒಂದು ಭೂಭಾಗದ ವಿಸ್ತರಣೆಯಲ್ಲ, ಅಲ್ಲಿನ ನಾಗರಿಕರು, ಸಮಾಜ, ಆಡಳಿತೆ ತಾನು ಹೇಳಿದ್ದನ್ನು ಕೇಳಬೇಕು, ತನ್ನ ನೀತಿಗೆ ಒಮ್ಮತ ಸೂಚಿಸಬೇಕು ಎಂಬ ಅಂಶ. ಈ ನೀತಿಯನ್ನು ವಿಶ್ವದ ಹಲವು ಸೋ ಕಾಲ್ಡ್ ರಾಷ್ಟ್ರಗಳು ಈಗಾಗಲೇ ತೋರ್ಪಡಿಸಿವೆ. ಅಮೇರಿಕಾದ ನೀತಿಯೂ ಇದೆ ಆಗಿತ್ತು, ಆಗಿದೆ. ಚೀನಾ ದಕ್ಷಿಣಾ ಏಷ್ಯಾ ರಾಷ್ಟ್ರಗಳ ಮೇಲಿನ ಪರೋಕ್ಷ ನೀತಿಗಳು ಇದನ್ನೇ ಸೂಚಿಸುತ್ತದೆ. ತೈವಾನ್ ಮೇಲಣ ಚೀನಾದ ಹತೋಟಿ, ಹಾಂಕಾಂಗ್ ಮೇಲಣ ಚೀನಾ ಸಾಧಿಸುತ್ತಿರುವ ನೀತಿಗಳು ಇಂತಹವೆ. 2014 ರಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರ ಮಿನ್ಸ್ಕ್ ಸಭೆ ನಡೆಯುತ್ತದೆ, ಮಾತ್ರವಲ್ಲ ರಷ್ಯಾ ತಾನು ಶಾಂತಿಯನ್ನು ಬಯಸುತ್ತೇನೆ ಎಂದಿತ್ತು. ಆದರೆ ಹಾಗಾಗಲಿಲ್ಲ ರಷ್ಯಾದ ಎರಡು ಲಕ್ಷ ಸೈನಿಕರು ಡೊಂಬಾಸ್ ಪ್ರದೇಶದುದ್ದಕ್ಕೂ ಇದ್ದಾರೆ. ಡೊನೆಟ್ಸ್ಕ್ ಮತ್ತು ಲುಹಾರ್ಸಕ್ ಪ್ರದೇಶಗಳಲ್ಲಿ ರಷ್ಯಾ ಬೆಂಬಲಿತ ಬಂಡುಕೋರರ ನೆಲೆಯಾಗಿದೆ. ಈಗಾಗಲೇ ಕಾರ್ಕಿವ್ ಮೇಲೆ ವೈಮಾನಿಕ ದಾಳಿಯಾಗಿದೆ. ರಾಜಧಾನಿ ಕೈವ್ ಮೇಲೂ ದಾಳಿಯಾಗಿದ್ದು ಪ್ರಾಣಹಾನಿಯಾಗಿದೆ. ಉಕ್ರೇನ್ ಸೈನಿಕರು ಮಾತ್ರವಲ್ಲದೆ ನಾಗರಿಕರು ಮಡಿದಿದ್ದಾರೆ. ಉಕ್ರೇನ್ ರಾಜಧಾನಿ ಕೈವ್ ನಲ್ಲಿ ಜನರು ಭಯಭೀತರಾಗಿದ್ದು, ಆಶ್ರಯ ರಕ್ಷಣೆಗಾಗಿ ಹವಣಿಸುತ್ತಿದ್ದಾರೆ. ಈ ಯುದ್ಧ ಭೀತಿ ಭಾರತದಲ್ಲೂ ಪರೋಕ್ಷ ಪರಿಣಾಮ ಬೀರಲೂಬಹುದು. ತೈಲ ಬೆಲೆ ಹೆಚ್ಚಳ ಇದರಲ್ಲೊಂದು! ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ರಾಯಭಾರ ಕಚೇರಿಯ ವಿನಂತಿಯಂತೆ ರಷ್ಯಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದು, ಯುದ್ಧದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ, ನಾಗರಿಕರ ಪ್ರಾಣಹಾನಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಆಗಿದೆ. ಈ ಮಧ್ಯೆ ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೆನಿಯೊ ಗುಟೇರಸ್ ರಷ್ಯಾ ಯುದ್ಧದಿಂದ ಹಿಂದೆ ಸರಿಯಬೇಕು ಎನ್ನಲ್ಲಷ್ಟೇ ಶಕ್ತರಾಗಿದ್ದಾರೆ. ಹಲವು ದಶಕಗಳಿಂದ ಬದಲಾವಣೆಯ ಗಾಳಿಯನ್ನು ಕಾಣದ ವಿಶ್ವಸಂಸ್ಥೆ ವರ್ಷದಿಂದ ವರ್ಷಕ್ಕೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದು, ಅಂತಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಕೆಲವೇ ಸೀಮಿತ ರಾಷ್ಟ್ರಗಳಿಗೆ ವಿಟೋ ಅಧಿಕಾರ ನೀಡಿ ಜಗತ್ತನ್ನು ವಿಷಮತೆಗೆ ಎಳೆದ ವಿಶ್ವಸಂಸ್ಥೆ ಇಂದು ಹಲ್ಲಿಲ್ಲದ ಹುಲಿಯಂತಾಗಿದೆ.
ನ್ಯಾಟೋ ರಾಷ್ಟ್ರಗಳಿಂದ ಹೊರಗಿರುವ ಉಕ್ರೇನ್ ಬೆಂಬಲಕ್ಕೆ ಯಾರಿದ್ದಾರೆ ಎಂಬ ಪ್ರಶ್ನೆ ವರ್ತಮಾನದ್ದು. ಬದಲಾವಣೆಯ ಹೊಸ್ತಿಲಲ್ಲಿ ಪುಟಿನ್ ಅಧ್ಯಕ್ಷಗಿರಿಯ ರಷ್ಯಾ ಒಂದು ಯುದ್ಧದಿಂದ ತನ್ನ ಪಾರಮ್ಯ ಪರಾಕಾಷ್ಠೆ ಬೆಳೆಸಿಕೊಂಡಿತೇ ಅಥವಾ ಕೆಲ ದಿನಗಳಿಗಷ್ಟೇ ಯುದ್ಧ ಸೀಮಿತವಾಗಿ, ರಷ್ಯಾದ ಅಣತಿಯಂತೆ ಉಕ್ರೇನ್ ಅಧ್ಯಕ್ಷಗಾದಿ ಬದಲಾವಣೆಯಾಗಿ ಶಾಂತಿ ನೆಲೆಸೀತೆ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚಿನ ಮಾಹಿತಿ ಪ್ರಕಾರ ರಷ್ಯಾ ವಾಯು, ಭೂ ಸಮರ ಮಾತ್ರವಲ್ಲದೆ ಉಕ್ರೇನ್ ವಿರುದ್ಧ ನೌಕಾಸಮರಕ್ಕೂ ಇಳಿದಿದ್ದು, ಚರ್ನೋಬೈಲ್ ಅಣು ಸ್ಥಾವರ ಪ್ರದೇಶದ ಮೇಲೆ ಹತೋಟಿ ಸಾಧಿಸಿದೆ. ವರ್ತಮಾನದ ಯುದ್ಧ ಸನ್ನಿವೇಶಗಳು ಜಗತ್ತಿನ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡದಿರಲಿ. ಶಾಂತಿ ನೆಲೆಸಲಿ.
✍️ ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.