ಅಹ್ಮದಾಬಾದ್: 30 ವರ್ಷಗಳ ಹಿಂದೆ ದಲಿತರಿಗೆ, ಆದಿವಾಸಿಗಳಿಗೆ ಸೇರಿದಂತೆ ಇತರ ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ವಿರೋಧಿಸಿ ಗುಜರಾತಿನಲ್ಲಿ ತೀವ್ರ ತರನಾದ ಹೋರಾಟವನ್ನು ನಡೆಸಿದ್ದ ಪಟೇಲ್ ಸಮುದಾಯ ಇದೀಗ ತಮಗೆ ಮೀಸಲಾತಿಯನ್ನು ನೀಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿದೆ. ಇವರ ಹೋರಾಟಕ್ಕೆ ಗುಜರಾತ್ ಹೊತ್ತಿ ಉರಿಯುತ್ತಿದೆ. ಅಲ್ಲಿನ ಜನಜೀವನ ಅಸ್ತವ್ಯಸ್ಥವಾಗಿದೆ.
ಪಟೇಲರ ಈ ಪ್ರತಿಭಟನೆಯ ರುವಾರಿ 21 ವರ್ಷದ ಹಾರ್ದಿಕ್ ಪಟೇಲ್, ಈತನ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿನಿಂದ ಅಟಿಡರ್ ಅನಮಾತ್ ಆಂದೋಲನ್ ಸಮಿತಿ ನಗರಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ಬೃಹತ್ ಸಮಾವೇಶಗಳನ್ನು ನಡೆಸುತ್ತಿದೆ. ಗುಜರಾತ್ ಸರ್ಕಾರವನ್ನು ಸ್ಥಾಪಿಸುವ, ಬೀಳಿಸುವ ಶಕ್ತಿ ನಮಗಿದೆ ಎಂಬ ಎಚ್ಚರಿಕೆಯನ್ನು ರವಾನಿಸುತ್ತಿದೆ.
ಗುಜರಾತಿನಲ್ಲಿ ಶೇ.15ರಷ್ಟು ಪಟೇಲ್ ಸಮುದಾಯದವರಿದ್ದಾರೆ. 1960ರಲ್ಲಿ ಗುಜರಾತ್ ರಚನೆಯಾದಾಗಿನಿಂದ ಈ ಸಮುದಾಯ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತಿ ಪ್ರಬಲ ಸಮುದಾಯವಾಗಿ ಗುರುತಿಸಿಕೊಂಡಿದೆ. ಹೀಗಾಗಿ ಈಗ ಇವರು ನಮನ್ನು ಹಿಂದುಳಿದ ಕೆಟಗರಿಗೆ ಸೇರಿಸಿ ಎಂದು ಆಗ್ರಹಿಸುತ್ತಿರುವ ಆಶ್ಚರ್ಯವೆನಿಸುತ್ತದೆ.
ಮೂಲತಃ ಪಟೇಲ್ ಸಮುದಾಯದವರು ಕೃಷಿಕರು, ಆದರೆ ಇವರಿಗೆ ಟೆಕ್ಸ್ಟೈಲ್, ಡೈಮಂಡ್, ಔಷಧ ಉದ್ಯಮಗಳಲ್ಲಿ ವಿಶೇಷ ಆಸಕ್ತಿಯಿದೆ. ಈ ಸಮುದಾಯದ ಹೆಚ್ಚಿನವರು ದೊಡ್ಡ ದೊಡ್ಡ ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಎರಡು ದಶಕಗಳಿಂದ ಇವರು ಪ್ರಧಾನಿ ನರೇಂದ್ರ ಮೋದಿಯ ಕಟ್ಟಾ ಅಭಿಮಾನಿಗಳು ಹಾಗೂ ಬಿಜೆಪಿಯ ಬೆಂಬಲಿಗರು. 1970ಕ್ಕೂ ಮುನ್ನ ಕಾಂಗ್ರೆಸ್ ಪರವಾಗಿದ್ದ ಇವರು, ಕಾಂಗ್ರೆಸ್ನ ದಲಿತ, ಅಲ್ಪಸಂಖ್ಯಾತ ಓಲೈಕೆಯಿಂದ ಬೇಸತ್ತು ಬಿಜೆಪಿಯತ್ತ ವಾಲಿದ್ದರು. 1981, 1985ರಲ್ಲಿ ಈ ಸಮುದಾಯ ಮೀಸಲಾತಿಯನ್ನು ವಿರೋಧಿಸಿ ಬೃಹತ್ ಆಂದೋಲನವನ್ನೇ ನಡೆಸಿತ್ತು. ಆ ವೇಳೆಯೂ ಹಿಂಸಾಚಾರಗಳು ನಡೆದಿದ್ದವು. ಆದಿವಾಸಿಗಳನ್ನು ಮತ್ತು ದಲಿತರನ್ನು ಟಾರ್ಗೆಟ್ ಮಾಡಲಾಗಿತ್ತು.
ವಿಪರ್ಯಾಸವೆಂದರೆ ಅಂದು ಮೀಸಲಾತಿ ವಿರೋಧಿಸಿ ಹೋರಾಟ ನಡೆಸಿದ್ದವರು, ಈಗ ಮೀಸಲಾತಿ ಕೊಡಿ ಎಂದು ಹೋರಾಡುತ್ತಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿ, ಕಾಲೇಜುಗಳಲ್ಲಿ ನಮಗೂ ಮೀಸಲಾತಿ ನೀಡಬೇಕೆಂಬುದು ಇವರ ಆಗ್ರಹವಾಗಿದೆ. ಉನ್ನತ ವ್ಯಾಸಂಗ ಮಾಡಲು ಪಟೇಲ್ ಯುವ ಸಮುದಾಯ ತೋರಿಸುತ್ತಿರುವ ಆಸಕ್ತಿ ಮತ್ತು ಡೈಮಂಡ್ ಸೇರಿದಂತೆ ಇತರ ಉದ್ಯಮಗಳು ನಷ್ಟದತ್ತ ಸಾಗುತ್ತಿರುವುದು ಇವರ ಈ ಆಗ್ರಹಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಉದ್ಯಮದಲ್ಲೇ ಹೆಚ್ಚು ಆಸಕ್ತಿಯನ್ನು ಹೊಂದಿದ್ದ ಈ ಸಮುದಾಯ ಈಗ ಮೆಡಿಕಲ್, ಎಂಜಿನಿಯರಿಂಗ್ ಸೇರಿದಂತೆ ಉನ್ನತ ವ್ಯಾಸಂಗದತ್ತ ಮುಖ ಮಾಡುತ್ತಿದೆ. ಹೀಗಾಗೀ ಇಲ್ಲಿ ನಮಗೆ ಮೀಸಲಾತಿಯನ್ನು ನೀಡಿ ಎಂಬುದು ಇವರ ಆಗ್ರಹ.
ಇನ್ನೊಂದೆಡೆ ಡೈಮಂಡ್ ಉದ್ಯಮಕ್ಕೆ ಹೆಸರಾಗಿದ್ದ ಸೂರತ್ನಲ್ಲಿ 150 ಡೈಮಂಡ್ ಯುನಿಟ್ಗಳು ಬಾಗಿಲು ಮುಚ್ಚಿವೆ. ಇದರಿಂದ 10 ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇನ್ನುಳಿದ ಡೈಮಂಡ್ ಯುನಿಟ್ಗಳೂ ನಷ್ಟದಿಂದ ಸಾಗುತ್ತಿದೆ. ಇದು ಪಟೇಲ್ ಸಮುದಾಯವನ್ನು ಆತಂಕಕ್ಕೆ ದೂಡಿದೆ ಎನ್ನಲಾಗಿದೆ.
ಎಲ್ಲದಕ್ಕಿಂತಲೂ ಮಿಗಿಲಾಗಿ ಪಟೇಲ್ ಸಮುದಾಯದ ಈ ಬೃಹತ್ ಹೋರಾಟದ ಹಿಂದೆ ರಾಜಕೀಯವೂ ಅಡಗಿರುವ ಶಂಕೆ ಇದೆ. ಪಟೇಲ್ ಸಮುದಾಯವನ್ನು ಪ್ರತಿಭಟನೆಯತ್ತ ಹೊರಳುವಂತೆ ಮಾಡಿದ ಹಾರ್ದಿಕ್ ಪಟೇಲ್ ಉದ್ದೇಶದ ಬಗ್ಗೆ ಹಲವಾರು ಅನುಮಾನಗಳಿವೆ. ಇದಕ್ಕೆ ಕಾರಣ ಹಾರ್ದಿಕ್ ಪಟೇಲ್ ಮತ್ತು ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ನಡುವಣ ಸಂಬಂಧ. ಕೇಜ್ರಿವಾಲ್ಗೂ ನನಗೂ ಸಂಬಂಧವಿಲ್ಲ ಎಂದು ಆತ ಹೇಳುತ್ತಾ ಬರುತ್ತಿದ್ದನಾದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅವರಿಬ್ಬರು ಒಟ್ಟಿಗೆ ಇರುವ ಫೋಟೋಗಳು ಎಲ್ಲವನ್ನೂ ವಿವರಿಸುತ್ತದೆ. ಬಿಜೆಪಿಯ ನಿಷ್ಠಾವಂತ ಪಟೇಲರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟಿ ಆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆಯೂ ಈ ಪ್ರತಿಭಟನೆಯ ಹಿಂದಿರುವ ಸಾಧ್ಯತೆ ಇದೆ.
ಅದೇನೆಯಿದ್ದರೂ ಪ್ರಭಾವಿ ಪಟೇಲ್ ಸಮುದಾಯಕ್ಕೆ ಮೀಸಲಾತಿಯನ್ನು ನೀಡುವುದು ಸರ್ಕಾರಕ್ಕೆ ಕಷ್ಟದ ಕೆಲಸ, ಈಗಾಗಲೇ ಗುಜರಾತಿನಲ್ಲಿ ಶೇ.50ರಷ್ಟು ಮೀಸಲಾತಿ ಇದೆ. ಹೀಗಾಗಿ ಮತ್ತೆ ಮೀಸಲಾತಿಯನ್ನು ಒದಗಿಸಲು ಸಾಧ್ಯವಿಲ್ಲದ ಮಾತು. ಹಾಗೊಂದು ವೇಳೆ ಒದಗಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನಿತರ ಸಮುದಾಯಗಳೂ ತಮಗೆ ಮೀಸಲಾತಿ ನೀಡಬೇಕೆಂದು ಬೀದಿಗಿಳಿಯುವ ಅಪಾಯವಿದೆ. ಹೀಗಾಗಿ ಈ ವಿಷಯದಲ್ಲಿ ಅಲ್ಲಿನ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಮುಂದುವರೆಯಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.