ಬೆಂಗಳೂರು: ಚುನಾವಣಾ ಅಕ್ರಮದ ವಿಷಯದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವೇ ಅಧಿಕಾರ ದುರುಪಯೋಗ ಮಾಡಿರಬೇಕು ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 2014ಕ್ಕೆ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ 2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ನಮ್ಮ ರಾಜ್ಯದಲ್ಲಿ 2013ರಿಂದ 2025ರ ವರೆಗೆ ಮಧ್ಯದ 4 ವರ್ಷಗಳನ್ನು ಹೊರತುಪಡಿಸಿ ಉಳಿದೆಲ್ಲ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. 2014ರ ಲೋಕಸಭಾ ಚುನಾವಣೆ ನಡೆದಾಗಲೂ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. 2019ರಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಪಕ್ಷ ಅಧಿಕಾರದಲ್ಲಿತ್ತು. 2024ರಲ್ಲಿ ಲೋಕಸಭಾ ಚುನಾವಣೆ ಆದಾಗಲೂ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ ಎಂದು ಗಮನ ಸೆಳೆದರು.
ಶಿಕ್ಷಕರು, ತಹಸೀಲ್ದಾರ್, ಜಿಲ್ಲಾಧಿಕಾರಿ, ಬಿಬಿಎಂಪಿ ಕಮೀಷನರ್ ರನ್ನು ವರ್ಗಾವಣೆ ಮಾಡುವ ಅಧಿಕಾರ ನಿಮ್ಮ ಕೈಯಲ್ಲೇ ಇದೆ. ಚುನಾವಣಾ ಆಯೋಗವು ಚುನಾವಣಾ ದಿನಾಂಕ ನಿಗದಿ ಮಾಡುತ್ತದೆಯೇ ಹೊರತು ಪ್ರಭಾವ ಬೀರುವ ಸಾಮಥ್ರ್ಯ ಅದಕ್ಕಿಲ್ಲ ಎಂದು ವಿಶ್ಲೇಷಿಸಿದರು. ಆಡಳಿತ ನಡೆಸುವವರು ಬೆದರಿಕೆ ಹಾಕಬಹುದು; ಚುನಾವಣಾ ಆಯೋಗವು ಬೆದರಿಕೆ ಹಾಕುವುದಿಲ್ಲ ಎಂದು ವಿವರಿಸಿದರು.
ಕಾಂಗ್ರೆಸ್ಸಿಗರೇ ಚುನಾವಣಾ ಅಕ್ರಮ ಎಸಗಿರುವ ಸಂಶಯ ನಮಗಿದೆ. ಕಾಂಗ್ರೆಸ್ ಪಕ್ಷದ ಚುನಾವಣಾ ಅಕ್ರಮದ ಇತಿಹಾಸ ಸಾಬೀತಾಗಿದೆ. 1975ರಲ್ಲಿ ಜೂನ್ನಲ್ಲಿ ಅಲಹಾಬಾದ್ ಹೈಕೋರ್ಟ್ ಜಸ್ಟಿಸ್ ಜಗಮೋಹನ್ ಲಾಲ್ ಸಿನ್ಹ ಅವರು ಶ್ರೀಮತಿ ಇಂದಿರಾ ಗಾಂಧಿಯವರ ವಿರುದ್ಧ ತೀರ್ಪು ಕೊಟ್ಟಿದ್ದರಲ್ಲವೇ? ಅದನ್ನು ಸ್ವಲ್ಪ ನೆನಪಿಸಿಕೊಳ್ಳಿ ಎಂದು ಹಿಂದೆ ವಕೀಲರಾಗಿದ್ದ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು. ಶ್ರೀಮತಿ ಇಂದಿರಾ ಗಾಂಧಿಯವರು ರಾಯಬರೇಲಿ ಕ್ಷೇತ್ರದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು, ಅಕ್ರಮ ನಡೆಸಿ ಚುನಾವಣೆ ಗೆದ್ದಿದ್ದಾರೆಂದು ತೀರ್ಪು ಕೊಡಲಾಗಿತ್ತು. ಕಾಂಗ್ರೆಸ್ಸಿನದು ಅಧಿಕಾರ ದುರುಪಯೋಗ, ಚುನಾವಣಾ ಅಕ್ರಮದ ಇತಿಹಾಸ ಎಂದು ಗಮನಕ್ಕೆ ತಂದರು.
ಶ್ರೀಮತಿ ಇಂದಿರಾ ಗಾಂಧಿಯವರ ಮೊಮ್ಮಗ ರಾಹುಲ್ ಗಾಂಧಿಯವರು ತಾನು ಕಳ್ಳ, ಪರರ ನಂಬ ಎಂಬಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ್, ರಾಜ್ಯ ಸಭಾ ಸದಸ್ಯ ಲೆಹರ್ ಸಿಂಗ್, ಸಂಸದ ಪಿ.ಸಿ. ಮೋಹನ್ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.