ಜಗತ್ತು ಸಂಕಟದ ಕೂಪಕ್ಕೆ ತಳ್ಳಲ್ಪಟ್ಟು ಬಿಡುಗಡೆಗಾಗಿ ಆರ್ತನಾದವನ್ನು ಮಾಡಿದಾಗಲೆಲ್ಲಾ ಇಲ್ಲಿ ಅನೇಕ ಮಹಾಪುರುಷರು ಜನ್ಮವೆತ್ತಿ ಬಂದು ಕಾಲದ ಸಂಕಟವನ್ನು ನಿವಾರಿಸಿದ್ದಾರೆ. ಜಗತ್ತು ಹಿಂಸೆಯಿಂದ ತತ್ತರಿಸಿದಾಗ, ಭೋಗದಲ್ಲಿ ಮುಳುಗಿ ಹೋದಾಗ ಈ ವಿಪ್ಲವದಿಂದ ಲೋಕವನ್ನು ಪಾರುಮಾಡಿದ ಶ್ರೇಷ್ಠ ಸಂತರು, ಶರಣರು ಈ ನಾಡಿನಲ್ಲಿ ಕಾಣಸಿಗುತ್ತಾರೆ. ಇಂದಿಗೆ ಸರಿಯಾಗಿ 125 ವರ್ಷಗಳ ಹಿಂದೆ ಹುಟ್ಟಿದ ಓರ್ವ ಕಂದನಿಂದ ಈ ಜಗತ್ತು ಆಶಾಂತಿಯನ್ನು ನಿವಾರಿಸಿಕೊಂಡು, ಶಾಂತಿಯ ಪಥದತ್ತ ಸಾಗುವಂತಾಯಿತು. ಅವರು ಈ ಶತಮಾನದ ಭಕ್ತಿಯ ಸಂದೇಶದ ಪಥ ಪ್ರವರ್ತಕರಾದರು. ಭಕ್ತಿ ಸಂದೇಶವನ್ನು ಜಗದಗಲ ಪಸರಿಸಿದವರು ಭಕ್ತಿವೇದಾಂತ ಶ್ರೀಲ ಪ್ರಭುಪಾದರು.
ಮಹಾನ್ ಸಂತನ ಉದಯ :
1896 ರಲ್ಲಿ ಕಲ್ಕತ್ತಾದಲ್ಲಿ ಜನಿಸಿದ ‘ಅಭಯಚರಣ’ ತನ್ನ ಬಾಲ್ಯದಿಂದಲೇ ದೈವಭಕ್ತನಾಗಿ ಬೆಳೆದವರು. ಅವರ ಆಧ್ಯಾತ್ಮಿಕ ಒಲವು ಮುಂದೆ ಅವರನ್ನು ಮಹಾ ಸಾಧಕನನ್ನಾಗಿ ಮಾಡುತ್ತದೆ. ವೇದ, ಉಪನಿಷತ್, ಭಗವದ್ಗೀತೆ, ಭಾಗವತಗಳನ್ನು ಅಧ್ಯಯನ ನಡೆಸಿದ ಅಭಯಚರಣರಿಗೆ ಭಕ್ತಿ ಸಿದ್ಧಾಂತ ಸರಸ್ವತಿಗಳು ಗುರುಗಳಾಗಿ ಒದಗಿ ಬರುತ್ತಾರೆ. ಚೈತನ್ಯ ಮಹಾಪ್ರಭುಗಳಿಂದ ಹದವಾಗಿದ್ದ ಬಂಗಾಳದ ನೆಲದಲ್ಲಿ ಮತ್ತೊಮ್ಮೆ ಭಕ್ತಿಯ ಸಂದೇಶವನ್ನು ಜಗತ್ತಿಗೆ ಬಿತ್ತುವ ಮಹಾನ್ ಸಂತನ ಉಯವಾದಂತಾಯಿತು. ತನ್ನ ತಾರುಣ್ಯದ ದಿನಗಳಲ್ಲಿ ಮಹಾತ್ಮಾ ಗಾಂಧಿಯವರಿಂದ ಪ್ರೇರಿತರಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಮಹಾನ್ ಸಂಗ್ರಾಮದ ಭಾಗವಾಗಿ ಅಸಹಕಾರ ಚಳವಳಿಯಲ್ಲಿಯೂ ಭಾಗವಹಿಸುತ್ತಾರೆ. ಅವರು ಪಡೆದ ಇಂಗ್ಲಿಷ್ ಶಿಕ್ಷಣ ಮುಂದೆ ಅವರನ್ನು ಪಶ್ಚಿಮದ ನೆಲದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಂತೆ ಕೆಲಸ ಮಾಡಲು ಅನುಕೂಲವಾದುದು ಮಾತ್ರವಲ್ಲ, ಭಾರತದ ಆಧ್ಯಾತ್ಮಿಕ ಜ್ಞಾನ ಭಂಡಾರದಂತಿದ್ದ ಭಗವದ್ಗೀತೆ, ಭಾಗವತಾದಿಗಳನ್ನು ಇಂಗ್ಲಿಷ್ಗೆ ಅನುವಾದಿಸಿ ವ್ಯಾಖ್ಯಾನಿಸಿ ಜಗತ್ತಿನ ಜನರ ಮುಂದಿಡಲು ಅನುಕೂಲವಾಯಿತು.
ಭಕ್ತಿ ಮಾರ್ಗದ ಚಳವಳಿ :
ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ್ದ ಅಭಯಚರಣರ ಜೀವನದ ಮಹಾನ್ ತಿರುವು ಸಂಭವಿಸಿದ್ದು ಅವರ ಜೀವನದ ಆರವತ್ತೊಂಬತ್ತನೆಯ ವಯಸ್ಸಿನಲ್ಲಿ ! ಯಾವುದು ಸಾಮಾನ್ಯ ಮನುಷ್ಯರ ನಿವೃತ್ತಿಯ ನಂತರದ ಸುಖ ವಿಹಾರದ ವಯೋಮಾನವೋ ಆ ವಯಸ್ಸಿನಲ್ಲಿ ಭಕ್ತಿವೇದಾಂತ ಶ್ರೀಲ ಪ್ರಭುಪಾದರಾಗಿ ಅವರ ವಿಶ್ವಪರ್ಯಟನೆ ಆರಂಭಾಗಿತ್ತು. ಮನೋಬಲ ಒಂದೇ ಅವರ ಬಳಿ ಇದ್ದುದು. ಅಕ್ಷರಶಃ ಅವರು ಬರಿಗೈಯಲ್ಲಿದ್ದರು. ಅವರ ಬಳಿಯಿದ್ದ ಬಿಡಿಗಾಸಿನಿಂದ ಅವರು ಹೊರಟಿದ್ದ ಅಮೇರಿಕಾದಲ್ಲಿ ಕೆಲವು ದಿನಗಳ ಕಾಲ ಕೂಡ ಜೀವಿಸಲು ಸಾಧ್ಯವಿರಲಿಲ್ಲ. ಆದರೆ ಅವರು ಅಮೇರಿಕಾದಲ್ಲಿ ಭವ್ಯವಾದ ಶ್ರೀಕೃಷ್ಣನ ಮಂದಿರಗಳು ತಲೆ ಎತ್ತಿ ನಿಲ್ಲುವುದಕ್ಕೆ ಕಾರಣರಾಗುತ್ತಾರೆ. ಶ್ರೀಲ ಪ್ರಭುಪಾದರು ಭಾರತದಿಂದ ಪಶ್ಚಿಮದ ಭೋಗವಾದಿ ನೆಲಕ್ಕೆ ತೆಗೆದುಕೊಂಡು ಹೋದುದು ಈ ನೆಲದ ಅತ್ಯಂತ ಸರಳ ಸೂತ್ರದಂತಿದ್ದ ಭಕ್ತಿಯನ್ನು. ಇದು ಸರಳ ಸೂತ್ರವೇ ಆದರೂ ಪರಿಣಾಮಕಾರಿ ಸೂತ್ರವೇ ಆಗಿತ್ತು. ಭಾರತವನ್ನೂ ಮಧ್ಯಯುಗದ ಅತ್ಯಂತ ಸಂಕಟದ ಕಾಲದಲ್ಲಿ ಪಾರುಮಾಡಿದ್ದು ಇದೇ ಭಕ್ತಿ ಮಾರ್ಗವೇ. ಅಂತಹ ಭಕ್ತಿಯ ಬೆಳಕನ್ನು ಹಿಡಿದುಕೊಂಡು ಅಪರಿಚಿತ ನೆಲ ಅಮೇರಿಕಾದಲ್ಲಿ ಇಳಿದಾಗ ಅಮೇರಿಕಾ ಅಕ್ಷರಶಃ ಕತ್ತಲಿನಲ್ಲಿ ತೊಳಲಾಡುತ್ತಲಿತ್ತು. ಅಮೇರಿಕಾದಲ್ಲಿ ಭೋಗವಾದವು ಹಿಪ್ಪಿಗಳ ಹೆಸರಿನಲ್ಲಿ ಮೇರೆ ಮೀರುತ್ತಿದ್ದ ಕಾಲವದು. ಅಮೇರಿಕಾದ ಸರ್ಕಾರಕ್ಕೂ ನಿಯಂತ್ರಣ ಕೈತಪ್ಪುವ ಭೀತಿ ಬಾಧಿಸುತ್ತಿದ್ದ ಸಂದರ್ಭದಲ್ಲಿ ಭಾರತದ ಓರ್ವ ಸಂತ ಅಪರಿಚಿತನಾಗಿಯೇ ಆ ನೆಲಕ್ಕೆ ಕಾಲಿಟ್ಟರು. ಆದರೆ ಅವರು ಕಾಲಿಟ್ಟದ್ದು ದೊಡ್ಡ ಕನಸಿನೊಂದಿಗೆ. ತನ್ನ ಗುರುವಿನ ಕನಸಿನ ಸಾಕಾರಕ್ಕಾಗಿ.
ಇಸ್ಕಾನ್ ಸಂಸ್ಥೆಯ ಸ್ಥಾಪಕ :
ಗಾಂಜಾದ ನಶೆಯಲ್ಲಿ ತಮ್ಮನ್ನು ತಾವು ಮರೆತಿದ್ದ ಜನರ ನಡುವೆ, ಬ್ರಾಮಕ ಸ್ಥಿತಿಯಲ್ಲಿ ಬಳಲುತ್ತಿದ್ದ ಜನರಿಗೆ ಭಾರತದಿಂದ ಹೋದ ಸಂತ ಶ್ರೀಲ ಪ್ರಭುಪಾದರು ನೀಡಿದ ಸಂದೇಶವಾದರೂ ಎಂತಹದು? ಅದು ಭಕ್ತಿಯ ಸಂದೇಶವಾಗಿತ್ತು. ಅದು ಧ್ಯಾನದ ಮಾರ್ಗವಾಗಿತ್ತು. ಯಾರು ಅಮಲಿನಲ್ಲಿ ತೇಲಾಡುತ್ತಿದ್ದರೋ ಅಂಥವರಿಗೆ ಕೃಷ್ಣ ನಾಮದ ಮೂಲಕ ಬಿಡುಗಡೆಯ ದಾರಿಯನ್ನು ತೋರಲು ಮುಂದಾಗಿದ್ದರು. ಮುಂದೆ ನಡೆದದ್ದು ಪವಾಡವೇ ಇರಬೇಕು.
ಹತ್ತೊಂಬತ್ತು ಇಪ್ಪತ್ತನೇ ಶತಮಾನದಲ್ಲಿ ಜಗತ್ತಿನಾದ್ಯಂತ ಅನೇಕ ವಿಪ್ಲವಗಳಾಗಿವೆ. ನಾಗರಿಕತೆಗಳು ಪತನದ ಕಡೆಗೆ ಸಾಗಿದ್ದೂ ಇದೆ. ಇಂತಹ ಸಂದರ್ಭದಲ್ಲಿ ಜಗತ್ತಿನಾದ್ಯಂತ ಪರಿವರ್ತನೆಯ ಹೊಸಗಾಳಿಯೂ ಬೀಸಿದೆ. ಭಕ್ತಿ ಎನ್ನುವುದು ವ್ಯಕ್ತಿಯನ್ನು , ಸಮಾಜವನ್ನು ಸಂಕಟಗಳಿಂದ ಪಾರುಮಾಡಿದ ಸಂಗತಿಗಳಲ್ಲೊಂದು. ಹೀಗಾಗಿ ಭಕ್ತಿ ಲೋಕೋತ್ತರ ಪರಿಹಾರವಾಗಿ ಬೇರೆ ಬೇರೆ ಕಾಲದಲ್ಲಿ ಕಾಣಿಸಿಕೊಂಡಿದೆ. ಶ್ರೀಲ ಪ್ರಭುಪಾದರ ಮೂಲಕ ಭಾರತೀಯರ ಈ ಭಕ್ತಿಯ ಪ್ರಜ್ಞೆ ಕೃಷ್ಣ ಪ್ರಜ್ಞೆಯಾಗಿ ಜಗದಗಲ ಪಸರಿಸಿತು. ಅವರು ಕಟ್ಟಿದ ಇಸ್ಕಾನ್ ಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ಭಕ್ತಿಯು ಮತ್ತೊಮ್ಮೆ ಸಾಮೂಹಿಕ ಆಂದೋಲನದ ರೂಪವನ್ನು ಪಡೆದುಕೊಂಡಿತು. ಜಗತ್ತು ಭೌತಿವಾದದಿಂದ ಪತನಮುಖಿಯಾಗುತ್ತಿದ್ದ ಕಾಲಕ್ಕೆ ಭಾರತೀಯ ಆಧ್ಯಾತ್ಮಿಕ ಜ್ಞಾನದ ಪ್ರಸರಣಕ್ಕಾಗಿ ಮುಂದಡಿಯಿಟ್ಟವರು ಶ್ರೀ ಪ್ರಭುಪಾದರು.
ಕೃಷ್ಣಪ್ರಜ್ಞೆಯಿಂದ ಜಗತ್ತಿನ ಕಲ್ಯಾಣವಿದೆ ಎನ್ನುವುದನ್ನು ಸಾರಿ ಹೇಳಿದರು. ಅವರ ಸಂಕಲ್ಪವಾಗಿ ರೂಪುಗೊಂಡ ಇಸ್ಕಾನ್ ಇಂದು ಜಗತ್ತಿನಾದ್ಯಂತ ಕೆಲಸಮಾಡುತ್ತಿದೆ, ಜಗತ್ತಿನ ಜನರ ಸಂಕಟದ ಪರಿಹಾರಕ್ಕಾಗಿ ಕೆಲಸಮಾಡುತ್ತಿದೆ. ಹಸಿದವರಿಗೆ ಅನ್ನವನ್ನೂ, ಕುಸಿದವರಿಗೆ ಮಾನಸಿಕ ಸ್ಥೈರ್ಯವನ್ನೂ ನೀಡುವ ಮೂಲಕ ಸಂಕಟದಿಂದ ಪಾರುಮಾಡುತ್ತಿದೆ. ಆ ಮೂಲಕ ಕೃಷ್ಣ ಪ್ರಜ್ಞೆ ಜಗತ್ತಿನಾದ್ಯಂತ ಪ್ರಸರಣವಾಗುತ್ತಿದೆ. ಹಾಗೆಂದು ಇದು ಮತ ವಿಸ್ತರಣೆಯ ಕೆಲಸವಲ್ಲ, ಇದು ಮತಿ ವಿಕಸನದ ಕೆಲಸ. ಹಾಗಾಗಿ ಕೃಷ್ಣ ಪ್ರಜ್ಞೆಯ ವಿಸ್ತರಣೆಗಾಗಿ ಎಲ್ಲೂ ಸಂಘರ್ಷ ನಡೆದಿಲ್ಲ, ಶ್ರೀಲ ಪ್ರಭುಪಾದರ ಮೂಲಕ ಭಾರತದ ಶ್ರೇಷ್ಟವಾದ ಆಧ್ಯಾತ್ಮಿಕ ಪರಂಪರೆಯು ಮತ್ತೊಮ್ಮೆ ವಿಶ್ವದಾದ್ಯಂತ ತಲುಪುತ್ತಿದೆ.
ಸಾಂಸ್ಕೃತಿಕ ರಾಯಭಾರಿ :
ಚೈತನ್ಯರು, ವಿವೇಕಾನಂದರು, ಶ್ರೀ ಅರವಿಂದರು, ನಾರಾಯಣ ಗುರುಗಳು ಮೊದಲಾದ ಆಧ್ಯಾತ್ಮಿಕ ಸಾಧಕರನ್ನು ವಿಶ್ವಕ್ಕೆ ನೀಡಿದ ಭಾರತ ಇಪ್ಪತ್ತನೇ ಶತಮಾನದಲ್ಲಿ ಶ್ರೀಲ ಪ್ರಭುಪಾದರ ಮೂಲಕ ಆ ಪರಂಪರೆಯನ್ನು ಮುಂದುವರಿಸಿತು. ಜಗತ್ತಿಗೆ ಭಾರತ ಭೂಮಿಯ ಸಾಂಸ್ಕೃತಿಕ ರಾಯಬಾರಿಯಾದರು. “ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ” ಎನ್ನುವುದು ಕೇವಲ ಮಂತ್ರವಾಗಲಿಲ್ಲ. ಸಾಧಕರ ಸಾಧನೆಯ ದಾರಿ ದೀಪವಾಯಿತು, ಭೌತಿಕ ಬಂಧನಕ್ಕೆ ಅತಿಯಾಗಿ ಅಂಟಿಕೊಂಡು ಭೋಗವಾದಿಗಳಾಗುತ್ತಿದ್ದ ಜನರಿಗೆ ಬಿಡುಗಡೆಯ ಯೋಗತತ್ವದ ಮೂಲ ಮಂತ್ರವಾಯಿತು. ಬಹುದೊಡ್ಡ ಆಧ್ಯಾತ್ಮಿಕ ಸಂಕ್ರಾಂತಿಗೆ ಮುನ್ನುಡಿ ಬರೆಯಿತು. ವಿಶ್ವದ ಎಲ್ಲಾ ಮತ ಪಂಥಗಳ ಜನರೂ ಕೃಷ್ಣ ಪ್ರಜ್ಞೆಯ ಪಥದ ಪಥಿಕರಾದರು. ಭಗವದ್ಗೀತೆ, ಭಾಗವತಗಳನ್ನು ಇಂಗ್ಲಿಷ್ಗೆ ಅನುವಾದಿಸಿ ವ್ಯಾಖ್ಯಾನಿಸಿ ರಚಿಸಿದ ಕೃತಿಗಳು ಜಗತ್ತಿನಾದ್ಯಂತ ಸುಮಾರು ಐವತ್ತಕ್ಕಿಂತ ಹೆಚ್ಚು ಭಾಷೆಗಳಿಗೆ ಅನುವಾದವಾಗುವ ಮೂಲಕ ಕೃಷ್ಣನ ಸಂದೇಶ ಜಗತ್ತಿನ ಬೇರೆ ಬೇರೆ ದೇಶಗಳ ಜನರಿಗೆ ತಲುಪಲು ಸಾಧ್ಯವಾಯಿತು.
ಬದುಕಿನ ಮಹಾಯಾನ :
ಪ್ರಭುಪಾದರು ಅಮೇರಿಕೆಗೆ ಕಾಲಿಟ್ಟಾಗ ಅಲ್ಲಿ ಪರಿಚಿತರು ಎನ್ನುವವರು ಯಾರೂ ಇರಲಿಲ್ಲ. ಉಳಿದುಕೊಳ್ಳುವುದಕ್ಕೆ ಅನುಕೂಲಕರವಾದ ವ್ಯವಸ್ಥೆಗಳಿರಲಿಲ್ಲ. 69ರ ಹರೆಯದ ಈ ವೃದ್ದನ ಕನಸುಗಳನ್ನು ಅಪನಂಬಿಕೆಯಿಂದಲೇ ನೋಡುವ ಸ್ಥಿತಿ ಅಲ್ಲಿತ್ತು. ಅಂತಹ ನೆಲದಲ್ಲಿ ಶುದ್ಧ ಕೃಷ್ಣ ಭಕ್ತಿಯ ಚಳವಳಿಯನ್ನು ಕಟ್ಟುವುದು ಸುಲಭ ಸಾಧ್ಯವಾಗಿರಲಿಲ್ಲ. ಆದರೆ ಇಂದು ಅವರು ನಿರ್ವಹಿಸಿದ ಸಾಧನೆಯನ್ನು ಒಮ್ಮೆ ತಿರುಗಿ ನೋಡಿದರೆ, ಸಂತ ಶ್ರೀಲ ಪ್ರಭುಪಾದರ ಬದುಕಿನ ಮಹಾಯಾನವು, ಅವರು ಕತ್ತಲ ಜಗತ್ತಿನ ಮುಂದೆ ಹಚ್ಚಿದ ಬೆಳಕಿನ ಮಹಾಗಾಥೆಯ ಕಥನವು ರೋಚಕ ಅನುಭವವನ್ನು ಉಂಟುಮಾಡುತ್ತದೆ.
ಪಶ್ಚಿಮದ ನೆಲದ ಭೋಗ ಪರಂಪರೆಗೆ ಉತ್ತರವಾಗಿ ಸನಾತನ ಸಂಸ್ಕೃತಿಯ ತ್ಯಾಗ ಪರಂಪರೆಯನ್ನು ಮುಂದಿಟ್ಟರು. ಬಹುಶಃ ಭೋಗವಾದದಿಂದ ನಿರಸನಗೊಳ್ಳಲೇ ಬೇಕಾಗಿದ್ದ ಜಗತ್ತಿಗೆ ಅವರು ತೋರಿದ ದಾರಿ ಬಿಡುಗಡೆಯ ಬೆಳಕಾಯಿತು.ಜಗತ್ತಿನ ಜನರ ಬಿಡುಗಡೆ ಕೃಷ್ಣ ಪ್ರಜ್ಞೆಯಲ್ಲಿದೆ. ಅಂದರೆ ಅದು ತ್ಯಾಗದ, ಭಕ್ತಿಯ, ಶುದ್ಧ ಆಧ್ಯಾತ್ಮದ ದಾರಿಯಲ್ಲಿದೆ ಎನ್ನುವುದು ಜಗತ್ತಿಗೆ ಮನವರಿಕೆಯಾಗುತ್ತಿದೆ. 1965, ಸೆಪ್ಟೆಂಬರ್ 17 ರಂದು ಅಮೇರಿಕೆಯ ಹಡಗು ಹತ್ತಿದಾಗ ಕೈಯಲ್ಲಿ ಇದ್ದುದು ಬಿಡಿಗಾಸು ಮಾತ್ರ. ಅಮೇರಿಕಾ ತಲುಪಿ ಭಕ್ತಿಯ ಪ್ರಸರಣದ ಕೆಲಸ ಆರಂಭವಾಗುತ್ತಿದ್ದಂತೆ ನ್ಯೂಯಾರ್ಕ್ ನಗರದಲ್ಲಿ ಕೃಷ್ಣ ಮಂದಿರವೊಂದನ್ನು ಕಟ್ಟುವ ಕನಸು ಕಾಣುತ್ತಾರೆ. ಅಲ್ಲಿಂದ ಮುಂದೆ ಸ್ಯಾನ್ಪ್ರಾನ್ಸಿಸ್ಕೋ, ಲಾಸ್ ಏಂಜಲೀಸ್, ಲಂಡನ್ , ನೈರೋಬಿಯ, ಫ್ರಾಂಕ್ ಫರ್ಟ್ , ಬರ್ಕ್ಲಿ ಹೀಗೆ ಜಗತ್ತಿನ ಅನೇಕ ದೇಶಗಳಲ್ಲಿ ಸುಂದರವಾದ ಕೃಷ್ಣ ಮಂದಿರಗಳನ್ನು ನಿರ್ಮಿಸುತ್ತಾರೆ. ಇವೆಲ್ಲವೂ ಅತ್ಯಂತ ಸಾಹಸಮಯ ಕೆಲಸಗಳೇ.
ಈ ಎಲ್ಲಾ ಸಾಹಸದ ಜತೆಗೆ ಅನೇಕರ ಅನುಮಾನಗಳಿಗೆ , ಪ್ರಶ್ನೆಗಳಿಗೂ ಉತ್ತರಿಸಬೇಕಾಗಿತ್ತು. ಆದರೆ ಪ್ರಭುಪಾದರು ಇದೆಲ್ಲವನ್ನೂ ತಮ್ಮ ಶಿಷ್ಯರ ಜತೆಗೂಡಿ ಸವಾಲಾಗಿಯೇ ಸ್ವೀಕರಿಸಿ ಗೆಲ್ಲುತ್ತಾರೆ. ಅವರ ಪ್ರೇರಣೆಯಿಂದ ಸಾವಿರಾರು ಜನರ ಬದುಕು ಕೃಷ್ಣ ಕೇಂದ್ರಿತವಾಗಿ ಬದಲಾಗುವುದು. ಭಾಗವತ, ಭಗವದ್ಗೀತೆಯ ತಿರುಳ ಬೆಳಕು ಅವರೆಲ್ಲರ ದಾರಿಯ ದೀವಟಿಕೆಯಾಗುತ್ತದೆ. ಈ ದೀವಟಿಕೆಯೇ ಸಾವಿರ ಮೈಲುಗಳಾಚೆಗಿನ ಪಶ್ಚಿಮ ನೆಲದಲ್ಲಿ ನಿಜಸುಖವನ್ನು ಅರಸಿಬಂದವರ ದಾರಿಗೆ ಬೆಳಕಾಗುತ್ತದೆ.
ಭೋಗನೆಲದಲ್ಲಿ ಕೃಷ್ಣ ಪ್ರಜ್ಞೆಯ ಫಸಲು ಬೆಳೆದ ಮಹಾನ್ ಸಾಧಕರಾಗುತ್ತಾರೆ. ಪ್ರಭುಪಾದರು ಬಿತ್ತಿದ್ದು ಮಾನವ ಪ್ರೀತಿಯ ಸಂದೇಶವಾಯಿತು. ಅವರು ವಿಶ್ವದ ವಾತ್ಸಲ್ಯದ ಮೂರ್ತಿಯಾದರು. ಭಕ್ತಿಯ ಪಥಕ್ಕೆ ಮತ ಪಂಥ ರಾಷ್ಟ್ರಗಳ ಗಡಿ ಇಲ್ಲ ಎನ್ನುವುದನ್ನು ಸಾಧಿಸಿ ತೋರುತ್ತಾರೆ. ಅಂತಹ ಮಹಾನ್ ಸಾಧಕನ 125 ನೇ ಜನ್ಮವರ್ಷಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅವರು ಲೋಕಕ್ಕೆ ಬಿತ್ತಿದ ಭಕ್ತಿಯ ಸಂದೇಶ ಲೋಕದ ಸಕಲ ಸಂಕಟಗಳನ್ನೂ ದೂರಮಾಡಲಿ. ಜಗತ್ತು ಭಕ್ತಿಯ ಕಡಲಿನಲ್ಲಿ ವಿಹರಿಸುವಂತಾಗಲಿ.
✍️ ಡಾ.ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ, ಕರ್ನಾಟಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.