ಸೋದರತ್ವದ, ಭ್ರಾತೃತ್ವದ ಪ್ರತೀಕವಾದ ಸುಂದರ ಹಬ್ಬವೇ ರಕ್ಷಾ ಬಂಧನ. ದೇಶದ ಉದ್ದಗಲಕ್ಕೂ ಸಂಭ್ರಮದಿಂದ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲ್ಪಡುವ ಹಬ್ಬವಿದು.
ಆಧುನಿಕತೆಯ ಜಗತ್ತಿನ ಆಡಂಬರದಲ್ಲೂ ತನ್ನ ಸಡಗರ ಮತ್ತು ಪ್ರಾಮುಖ್ಯತೆಯನ್ನು ಈ ಹಬ್ಬ ಇಂದಿಗೂ ಉಳಿಸಿಕೊಂಡಿರುವುದೇ ಇದರ ಪ್ರಾಮುಖ್ಯತೆಯನ್ನು ಸಾರುತ್ತದೆ. ರಕ್ಷಾ ಬಂಧನವೆಂಬ ಹಬ್ಬವು ನೂರಾರು ವರ್ಷಗಳ ಇತಿಹಾಸವನ್ನೂ ಹೊಂದಿರುವುದು ವಿಶೇಷ. ಐತಿಹಾಸಿಕ ಕಥೆಗಳ ಪ್ರಕಾರ ಮಹಾಭಾರತದಲ್ಲಿ ದ್ರೌಪದಿಯು ಶ್ರೀಕೃಷ್ಣನಿಗೂ, ಪಾರ್ವತಿಯು ವಿಷ್ಣುವಿಗೂ ರಕ್ಷೆಯನ್ನು ಕಟ್ಟುವ ಮೂಲಕ ಸೋದರತ್ವದ ಬಂಧವನ್ನು ಹೊಂದಿದ್ದರು. ಸೋದರತ್ವದ ಭಾವನೆಗಳೊಂದಿದೆ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಾತ್ವಿಕ ಹಬ್ಬವೂ ಇದಾಗಿದೆ.
ರಕ್ಷಾ ಬಂಧನದ ಪ್ರಮುಖ ಉದ್ದೇಶವೇ ರಕ್ಷಣೆ. ತನ್ನ ಸಹೋದರನಿಗೆ ಯಾವುದೇ ಅಪಾಯ ಅಥವಾ ತೊಂದರೆ ಬಾರದಿರಲಿ ಎಂದು ಸಹೋದರಿ ರಕ್ಷೆಯನ್ನು ಕಟ್ಟಿದರೆ, ತನ್ನ ಸಹೋದರಿಯನ್ನು ಎಲ್ಲಾ ತೊಂದರೆಗಳಿಂದಲೂ ರಕ್ಷಿಸುವುದಾಗಿ ಸಹೋದರ ಭರವಸೆಯನ್ನು ನೀಡುತ್ತಾನೆ..ಆದ್ದರಿಂದಲೇ ರಕ್ಷಣೆಯ ಭರವಸೆಯ ಹಬ್ಬವೇ ರಕ್ಷಾ ಬಂಧನ.
ರಕ್ಷಾ ಬಂಧನದಂದು ನಾವು ಈ ಹಬ್ಬವನ್ನು ಇನ್ನೂ ವಿಸ್ತರವಾಗಿ ಮತ್ತು ಆಳವಾಗಿ ಅರ್ಥೈಸಿ ಕೊಳ್ಳಲು ಮತ್ತು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. ಇಂದಿನ ದಿನಗಳಲ್ಲಿ ಆಫಘಾನಿಸ್ಥಾನದಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ “ನಾನು ಎಂಬುದು ಬರಿಯ ಶಬ್ದ, ನಾವು ಎಂಬುದು ಪ್ರಮುಖ” ಎಂಬುದು ಖಂಡಿತವಾಗಿಯೂ ಅರ್ಥವಾಗುತ್ತದೆ. ದೇಶವೊಂದು ಬಲಿಷ್ಠವಾಗಿಯೂ, ಸುರಕ್ಷಿತವಾಗಿಯೂ ಇದ್ದಾಗ ಮಾತ್ರವೇ “ನಾನು” ಸುರಕ್ಷಿತವಾಗಿರಲು ಸಾಧ್ಯ. ಹಲವಾರು ದಶಕಗಳಿಂದ ಪಾಕಿಸ್ತಾನ ಮತ್ತು ಚೈನಾ ಪ್ರೇರಿತ ಭಯೋತ್ಪಾದಕರು, ನಕ್ಸಲರು ಪ್ರಯತ್ನಿಸಿದರೂ ನಾವು ಸುರಕ್ಷಿತರಾಗಿರುವುದು “ಭಾರತೀಯ ಯೋಧರ” ಸಾಹಸ ಮತ್ತು ತ್ಯಾಗಗಳಿಂದ ಎಂಬುದು ನೆನಪಿರಲಿ. ಸರಹದ್ದಿನಲ್ಲಿ ರಕ್ಷಿಸುವ ಯೋಧರದ್ದು ಮಾತ್ರವಲ್ಲ, ದೇಶದ ರಕ್ಷಣೆಯಲ್ಲಿ ನಮ್ಮೆಲ್ಲರಿಗೂ ಪಾತ್ರವಿದೆ, ಆಂತರಿಕ ಶತ್ರುಗಳ ವಿರುದ್ದದ ಹೋರಾಟದಲ್ಲಿ ಮಾತ್ರವಲ್ಲ, ಸರಹದ್ದಿನಲ್ಲಿ ರಕ್ಷಿಸುವ ಯೋಧರದ್ದು ಮಾತ್ರವಲ್ಲ, ದೇಶದ ರಕ್ಷಣೆಯಲ್ಲಿ ನಮ್ಮೆಲ್ಲರಿಗೂ ಪಾತ್ರವಿದೆ. ಆಂತರಿಕ ಶತ್ರುಗಳ ವಿರುದ್ದದ ಹೋರಾಟದಲ್ಲಿ ಮಾತ್ರವಲ್ಲ, ಪ್ರತಿಯೊಂದು ಸಂದರ್ಭದಲ್ಲೂ, ದೇಶದ ಹಿತ ರಕ್ಷಣೆಯ ಉದ್ದೇಶದಿಂದ ತೆಗೆದುಕೊಂಡ ನಿರ್ಧಾರಗಳನ್ನು ಬೆಂಬಲಿಸುವುದೂ, ಸಮರ್ಥಿಸುವುದೂ ನಮ್ಮ ಕರ್ತವ್ಯವೇ ಹೌದು.
ದೇಶದ ಪ್ರಜೆಯಾಗಿ, ಸ್ವಸ್ಥ ದೇಶವನ್ನು ನಿರ್ಮಿಸುವಲ್ಲೂ ನಮ್ಮ ಪಾತ್ರವಿದೆ. ನಮ್ಮ ಶರೀರವನ್ನು ರೋಗಗಳಿಂದ ರಕ್ಷಿಸಬೇಕಾದದ್ದು ನಮ್ಮ ಆದ್ಯತೆಯಾಗಬೇಕು. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಮಾತ್ರವಲ್ಲದೆ ಅನಾರೋಗ್ಯದಿಂದ ನಮ್ಮ ಶರೀರ ಮತ್ತು ಮನಸ್ಸಿನ ರಕ್ಷಣೆಗಾಗಿ ಉತ್ತಮ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕಾದ ಕರ್ತವ್ಯ ನಮ್ಮದೇ ಅಲ್ಲವೇ? ನಮ್ಮ ದೇಹವನ್ನೂ ಪರಿಸರವನ್ನೂ ಸ್ವಚ್ಛವಾಗಿ ಇರಿಸಬೇಕು ಎಂಬುದು ನಮ್ಮ ಆದ್ಯತೆಯಾಗಬೇಕು.
ಜಗತ್ತಿನಲ್ಲಿ ನೂರಕ್ಕೂ ಮಿಕ್ಕಿ ದೇಶಗಳಿದ್ದರೂ ನಮ್ಮ ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾವು ಭಾರತದಲ್ಲಿ ಜನಿಸಿದ್ದೇವೆ ಎಂಬುದು ಸುಳ್ಳಲ್ಲ. ಅತ್ಯಂತ ಉತ್ಕೃಷ್ಟ ಸಂಸ್ಕೃತಿಯು ನಮ್ಮದು ಎಂಬುದು ಹೆಮ್ಮೆಯ ವಿಚಾರ. ಆದರೆ ಮುಂದಿನ ಜನಾಂಗಕ್ಕೆ ಈ ಸಂಸ್ಕೃತಿಯನ್ನುರಕ್ಷಿಸುವುದು ನಮ್ಮ ಕರ್ತವ್ಯ. ನಾವು ಉತ್ತಮ ಸಂಸ್ಕಾರವನ್ನು ಹೊಂದಿದ್ದಾಗ ಮಾತ್ರ ಸಂಸ್ಕೃತಿಯ ರಕ್ಷಣೆ ಸಾಧ್ಯ. ಆಧುನಿಕತೆ ಮತ್ತು ಪಾಶ್ಚತ್ಯ ಅಂಧಾನುಕರಣೆಯು ನಮ್ಮನ್ನು ಎತ್ತ ಕರೆದೋಯ್ಯುತ್ತದೆ ಎಂದು ನಾವು ಎಂದಾದರೂ ಆಲೋಚಿಸುತ್ತೇವೆಯೇ? ಯಾವುದೇ ಆಚರಣೆಯಲ್ಲಿನ ಒಳ್ಳೆಯತನವನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ, ಆದರೆ ಅಂಧಾನುಕರಣೆ ತಪ್ಪು. ನಮ್ಮ ಹಬ್ಬ, ಆಚರಣೆ, ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಿ ಆಚರಿಸುವ ಮೂಲಕ ಸಾವಿರಾರುವರ್ಷಗಳ ಪರಂಪರೆ ಇರುವ ನಮ್ಮ ಸಂಸ್ಕೃತಿಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡೋಣ.
ಭಾರತವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ನಮ್ಮ ಇತಿಹಾಸವು ಕಾಗದಗಳಲ್ಲಿ ಮಾತ್ರ ಬರೆಯಲ್ಪಟ್ಟಿಲ್ಲ, ಬದಲಿಗೆ ಕಲ್ಲುಗಳಲ್ಲೂ ಕೆತ್ತಲ್ಪತ್ತಿವೆ. ನಮ್ಮ ಇತಿಹಾಸವನ್ನು ನಾವೇ ಪೌರಾಣಿಕ ದಂತ ಕಥೆಗಳು ಎನ್ನುವುದು ಸರಿಯೇ? ನಮ್ಮ ಎಲ್ಲಾ ಇತಿಹಾಸಗಳಿಗೂ ಆಧಾರಗಳಿವೆ, ಸಾಕ್ಷ್ಯಗಳಿವೆ. ಸುಳ್ಳನ್ನು 100 ಬಾರಿ ಹೇಳಿದರೆ ಸತ್ಯವಾಗುತ್ತದೆ ಎಂಬ ಮಾತಿನಂತೆ, ನಮ್ಮ ಇತಿಹಾಸದಲ್ಲಿ ಬಹಳಷ್ಟು ಸುಳ್ಳುಗಳಿವೆ, ನಾವು ತಿರುಚಲ್ಪಟ್ಟ ಇತಿಹಾಸವನ್ನೇ ಉರು ಹೊಡೆಯುತ್ತೇವೆ. ನಮ್ಮ ನೈಜ ಇತಿಹಾಸದ ರಕ್ಷಣೆಯ ಹೊಣೆಯೂ ನಮ್ಮದೇ ಅಲ್ಲವೇ? ಅದೆಷ್ಟು ವೀರರು ಇತಿಹಾಸದ ಪುಟಗಳಿಂದ ಕಳೆದು ಹೋಗಿದ್ದಾರೆ. ನೈಜ ಇತಿಹಾಸದ ಅನಾವರಣ ಮಾಡುವ ಮೂಲಕ ಇತಿಹಾಸವನ್ನೂ ರಕ್ಷಿಸಬೇಕಿದೆ. ಯಾಕೆಂದರೆ ಹೆಮ್ಮೆಯಿಂದ ತಲೆಯೆತ್ತಿ ನಡೆಯುವ ಇತಿಹಾಸ ನಮ್ಮದು. ಹೆಣ್ಣಿನ ಮಾನದ ರಕ್ಷಣೆಗಾಗಿ, ಮಾತೃಭೂಮಿಯ ನೆಲದ ರಕ್ಷಣೆಗಾಗಿ ಕೊನೆಯ ಉಸಿರಿನ ವರೆಗೂ ಹೋರಾಡಿ ಹುತಾತ್ಮರಾದ ವೀರರ ನೆಲ ನಮ್ಮದು.
ಈ ರಕ್ಷಾ ಬಂಧನದಂದು ನಮ್ಮ ದೇಶದ ಗೌರವ, ಸಂಸ್ಕೃತಿ ಮತ್ತು ಇತಿಹಾಸದ ರಕ್ಷಣೆಗಾಗಿ ಪಣ ತೋಡುತ್ತೇವೆ ಎಂಬ ಪ್ರತಿಜ್ಞೆ ಮಾಡೋಣ. ದೇಶವನ್ನು ರಕ್ಷಿಸುವ ಪ್ರತಿಯೊಬ್ಬ ವೀರನನ್ನೂ ರಕ್ಷಾ ಬಂಧನದಂದು ಸ್ಮರಿಸೋಣ. ವೀರರನ್ನು ಮಾತ್ರವಲ್ಲದೆ ಅವರ ಕುಟುಂಬವನ್ನೂ ಸ್ಮರಿಸೋಣ. ಯಾಕೆಂದರೆ ನಮ್ಮ ಸ್ವಾತಂತ್ರ್ಯಕ್ಕಾಗಿ ಅವರು ಬೆಲೆ ತೆರುತ್ತಿದ್ದಾರೆ ಎಂಬುದು ನೆನಪಿರಲಿ. ದೇಶ ರಕ್ಷಿಸುವ ಯೋಧನ ಕುಟುಂಬಕ್ಕೆ ರಕ್ಷಣೆ ಇಲ್ಲದ ಪರಿಸ್ಥಿತಿ ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಬರಬಾರದು. ದೇಶದ ರಕ್ಷಕನಿಗೆ, ತನ್ನ ಕುಟುಂಬದ ರಕ್ಷಣೆಯ ಚಿಂತೆ ಕಾಡಬಾರದು. ಅಂತಹ ಸ್ವಸ್ಥ, ಸುಂದರ ದೇಶದ ನಿರ್ಮಾಣದತ್ತ ಭರವಸೆಯೊಂದಿಗೆ, ರಕ್ಷಾ ಬಂಧನದ ಶುಭಾಶಯಗಳು.
ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.