ಸಂಸ್ಕೃತದಲ್ಲಿ ಒಂದು ಮಾತಿದೆ, “ವೈದ್ಯೋ ನಾರಾಯಣೋ ಹರಿಃ” ಎಂದು. ಅರ್ಥಾತ್ ವೈದ್ಯರು ದೇವರಿಗೆ ಸಮಾನರೆಂದು. ಈ ಮಾತು ಇಂದಿನ ಪರಿಸ್ಥಿತಿಯಲ್ಲಂತೂ ನೂರಕ್ಕೆ ನೂರು ನಿಜ. ಅವರು ಸಾವಿರಾರು ಜನರನ್ನು ಉಳಿಸೋ ಸಂಜೀವಿನಿಗಳು. ಅದೆಷ್ಟೇ ಚಿಂತೆ-ನೋವುಗಳಿರಲಿ, ಯಾವತ್ತೂ ಅದನ್ನು ತೋರ್ಪಡಿಸದೆ, ನಗುತ್ತಾ ನಗಿಸುತ್ತಾ ರೋಗಗಳನ್ನು ನಿವಾರಿಸುವವರು. ರೋಗಿಗೆ ಧೈರ್ಯ ನೀಡಿ ಬದುಕಲು ಪ್ರೇರೇಪಿಸುವವರು. ಇಡೀ ದೇಶದ ಜನತೆ ಕೊರೋನಾಕ್ಕೆ ಹೆದರಿ ಮನೆಯೊಳಗೇ ಇದ್ದರೆ, ಅವರು ಮಾತ್ರ ಹಗಲಿರುಳು ನಿಸ್ವಾರ್ಥ ಸೇವೆ ಮಾಡುವ ಸಮಾಜ ಸೇವಕರು.
ಬಿರು ಬೇಸಿಗೆ ಕಾಲದಲ್ಲೂ ನಾಲ್ಕಾರು ಕೈಗವಸು, ಮಾಸ್ಕ್ ಧರಿಸಿ ದಿನಪೂರ್ತಿ ಕರ್ತವ್ಯ ನಿಭಾಯಿಸುತ್ತಾರೆ. ಕೊರೊನಾ ಪ್ರಾರಂಭವಾದ ಮೇಲಂತೂ ಅವರಿಗೆ ವಿಶ್ರಾಂತಿಯೇ ಇಲ್ಲ. ಮನೆಗೂ ಹೋಗಲಾರದೆ, ಆಸ್ಪತ್ರೆಯಲ್ಲೋ ಅಥವಾ ಹೊರಗೆಲ್ಲಾದರೂ ಕಳೆಯಬೇಕಾದ ಅನಿವಾರ್ಯತೆ ಅವರಿಗುಂಟಾಗಿದೆ. ತಮ್ಮ ಮನೆಯವರನ್ನು ನೋಡುವ ಬದಲು, ಉಳಿದ ರೋಗಿಗಳನ್ನು ನೋಡುವ ಪರಿಸ್ಥಿತಿ ಅವರದ್ದು. ಆದರೂ ಧೃತಿಗೆಡದೆ, ರೋಗಿಗಳಿಗೆ ಮನೋಸ್ಥೆರ್ಯ ನೀಡೋ ಅವರನ್ನು ಮೆಚ್ಚಲೇಬೇಕು. ಅದೆಷ್ಟೇ ನೋವಿರಲಿ, ಎಂದಿನ0ತೆ ಅವರು ಕರ್ತವ್ಯಕ್ಕೆ ಹಾಜರ್. ನೋವನ್ನೆಲ್ಲಾ ನುಂಗಿ ರೋಗಿಗಳನ್ನು ನಗಿಸೋ ಪ್ರಯತ್ನ ಅವರದು. ಇವರನ್ನು ದೇವರೆಂದೇ ಹೇಳಬೇಕು.
ಇಂತಹ ಸೇವೆ, ವೈದ್ಯರುಗಳ ಪ್ರಾಮುಖ್ಯತೆಗಳನ್ನು ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ. ಈ ಉದ್ದೇಶದಿಂದಲೇ ಭಾರತದಲ್ಲಿ ಪ್ರತಿರ್ಷ ಜುಲೈ 1 ರಂದು “ವೈದ್ಯರ ದಿನ”ವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ವೈದ್ಯ ಸಮುದಾಯಕ್ಕೆ ಧನ್ಯವಾದ ಹೇಳುವ ಸುಸಂದರ್ಭದ ದಿನ. ಹಿರಿಯ ವೈದ್ಯ ಹಾಗು ಪ.ಬಂಗಾಳ ದ ಎರಡನೇ ಮುಖ್ಯಮಂತ್ರಿ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮ ಹಾಗು ಮರಣ ವಾರ್ಷಿಕೋತ್ಸವ ಒಂದೇ ದಿನವಾಗಿದೆ. ಅವರ ಸ್ಮರಣಾರ್ಥವಾಗಿ ರಾಷ್ಟಿಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಈ ದಿನವನ್ನು ಹೊಸ ಹೊಸ ವಿಷಯದೊಂದಿಗೆ ಆಚರಣೆ ಮಾಡಲಾಗುತ್ತದೆ. ಕಳೆದ ವರ್ಷ “ವೈದ್ಯರ ಮತ್ತು ಕ್ಲಿನಿಕಲ್ ಸ್ಥಾಪನೆಗಳ ಮೇಲಿನ ದೌರ್ಜನ್ಯದ ಬಗ್ಗೆ ಶೂನ್ಯ ಸಹಿಷ್ಣುತೆ” ಆಗಿತ್ತು. ಈ ಬಾರಿಯ ಥೀಮ್ “ಕುಟುಂಬ ವೈದ್ಯರೊಂದಿಗೆ ಭವಿಷ್ಯವನ್ನು ನಿರ್ಮಿಸುವುದು” ಆಗಿದೆ.
ವೈದ್ಯರು ನಿಜವಾಗಿಯೂ ನಮ್ಮನ್ನು ರಕ್ಷಿಸುವ ದೇವರು ಅಂದರೆ ಅದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ದಿನೇ ದಿನೇ ಹೆಚ್ಚುತ್ತಿರುವ ಕೊರೊ ನ ಹಾಗೂ ಹೊಸ ಹೊಸ ಪ್ರಬೇಧಗಳು, ಸರ್ಕಾರದ ನಿಯಮಗಳು ಹಾಗೂ ಇನ್ನೂ ಮುನ್ನೆಚ್ಚರಿಕೆ ವಹಿಸದ ಜನ , ಬಿಡುವಿಲ್ಲದ ಕೆಲಸ ಇವೆಲ್ಲ ನಡುವೆ ಅವರು ಬಳಲಿದ್ದಾರೆ.
ಇದರ ಜೊತೆಗೆ ವೈದ್ಯರ ಮೇಲಿನ ಹಲ್ಲೆಯು ದಿನೇ ದಿನೇ ಹೆಚ್ಚುತ್ತಿದೆ. ಎಲ್ಲೋ ಒಂದೆಡೆ ವೈದ್ಯರು ಮಾಡಿದ ತಪ್ಪಿಗೆ ಇನ್ನೆಲ್ಲೋ ವೈದ್ಯರ ಮೇಲೆ ದಾಳಿ ಮಾಡುವುದು ಸರಿಯಲ್ಲ. ಅದೆಷ್ಟೋ ಮಂದಿ ತೆರೆ ಮರೆಯಲ್ಲಿ ಉಚಿತವಾಗಿ ಚಿಕಿತ್ಸೆ, ಆಹಾರ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದ್ದಾರೆ. ಜನರ ಜೀವ ರಕ್ಷಿಸುವ ಮಧ್ಯೆ ತಮ್ಮದೇ ಕುಟುಂಬದ ಸದಸ್ಯರ ಕಡೆ ಗಮನ ಕೊಡಲಾಗದೆ ಪ್ರೀತಿ ಪಾತ್ರರನ್ನು ಕಳೆದುಕೊಂಡವರು ಅನೇಕ ಮಂದಿ ನಮ್ಮ ಸುತ್ತ ಮುತ್ತ ಇದ್ದಾರೆ.
ನಿಜ ಹೇಳಬೇಕೆಂದರೆ ಅವರಿಗೆ ಬೇಕಾಗಿರುವುದು, ಸಂತಾಪದ ಬದಲು ಜನರ ಸಹಕಾರ. ಆದರೆ ಜನರು ಇನ್ನೂ ಪರಿಸ್ಥಿತಿಯ ಗಂಭೀರತೆಯನ್ನು ತಿಳಿದಿಲ್ಲ. ತಿಳಿ ಹೇಳುವ ವೈದ್ಯರ ಮೇಲೇ ತಮ್ಮ ಪರಾಕ್ರಮ ಪ್ರದರ್ಶಿಸುತ್ತಾರೆ. ಅವರಿಗೆ ಘಾಸಿಗೊಳಿಸಿ ಗೆಲುವಿನ ನಗೆ ಬೀರುತ್ತಾರೆ. ಆದರೆ ಒಂದು ವಿಷಯವನ್ನು ಎಲ್ಲರೂ ನೆನಪಿಡಲೇಬೇಕು, ಈ ಕೊರೋನಾ ಮಹಾಮಾರಿಯನ್ನು ಹತೋಟಿಗೆ ತರುವಲ್ಲಿ ಮುಖ್ಯ ಪಾತ್ರ ವೈದ್ಯರದು ಹಾಗು ದಾದಿಯರದು. ಇವೆಲ್ಲ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಅವರಿಗೆ ಹಲ್ಲೆ ಮಾಡುವುದನ್ನು ನಿಲ್ಲಿಸಬೇಕು. ಯಾರೋ ಮಾಡಿದ ತಪ್ಪಿಗೆ ಇಡೀ ವೈದ್ಯರ ಮೇಲೆ ಹಲ್ಲೆ ಮಾಡುವುದು ಅತಿ ದೊಡ್ಡ ತಪ್ಪು. ನಮ್ಮನ್ನು ರಕ್ಷಿಸುವ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸಹಾಯ ಮಾಡೋಣ. ಅವರು ನಮಗೆ ನೆರವಾದಂತೆ ನಾವು ಅವರಿಗೆ ನಮ್ಮ ಕೈಲಾದ ಮಟ್ಟಿಗೆ ಸಹಾಯ ಹಸ್ತ ಚಾಚೋಣ.
ದಿನನಿತ್ಯ, ಅದರಲ್ಲೂ ಸುಮಾರು ಒಂದೂವರೆ ವರ್ಷದಿಂದ ಬಿಡುವಿಲ್ಲದಂತೆ ಕೆಲಸ ನಿರ್ವಹಿಸಿ ಹಲವಾರು ಜನರ ಜೀವ ಉಳಿಸಿದ ಎಲ್ಲ ವೈದ್ಯ ರುಗಳಿಗೂ ವೈದ್ಯರ ದಿನಾಚರಣೆ ಶುಭಾಶಯಗಳು.
ತೇಜಸ್ವಿನಿ ಆರ್ ಕೆ
ಕಾಸರಗೋಡು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.