ಗೆಲುವಿನ ಪಯಣ ಹೂವಿನ ಹಾಸಿಗೆಯಲ್ಲ, ಹಾಗೆಯೇ ಮುಳ್ಳಿನ ಹಾದಿಯೂ ಅಲ್ಲ. ಹೇಗೆ ಜೇನು ಮುರಿಯುವ ವ್ಯಕ್ತಿ, ಹೊಗೆ ಹಾಕಿ ಕಂಬಳಿ ಹೊದ್ದು ಜಾಗ್ರತೆಯಿಂದ ಜೇನಿನ ಗೂಡಿಗೆ ಕೈ ಹಾಕುತ್ತಾನೆ, ಆ ವ್ಯಕ್ತಿ ಏಕಾಗ್ರತೆಯಿಂದ ಆ ಕೆಲಸ ನಿರ್ವಹಿಸದೇ ಹೋದರೆ, ಜೇನು ನೋಣಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗೆಯೇ ಎಚ್ಚರ ವಹಿಸಿ ಹುಟ್ಟು ಬಿಡಿಸಿದಾಗ, ಸವಿಯಾದ ಜೇನಿನ ತುಪ್ಪ ಅವನದ್ದಾಗಿರುತ್ತದೆ. ಗೆಲುವಿನ ಹಾಗೂ ಯಶಸ್ಸಿನ ಬದುಕು ಅಷ್ಟೇ ಆಗಿದೆ. ಇದೇ ರೀತಿಯಾದ ಅನೇಕ ಕಟ್ಟುಪಾಡುಗಳ ನಡುವೆ ಮುಳ್ಳಿನ ಹಾದಿಯಲ್ಲಿ ಎಚ್ಚರಿಕೆಯಿಂದ, ಏಕಾಗ್ರತೆಯಿಂದ ತನ್ನ ಜೀವನದ ಗುರಿ ತಲುಪಿ, ತನ್ಮೂಲಕ ಅನೇಕ ಭಾರತಿಯರಿಗೆ ತನ್ನ ಸ್ಪೂರ್ತಿದಾಯಕ ಬದುಕನ್ನು ಧಾರೆ ಎರೆದ ಮಹಿಳಾಮಣಿಯೇ ಆನಂದಿಬಾಯಿ ಜೋಷಿ.
ಆನಂದಿಬಾಯಿ ಅವರ ಮೊದಲ ಹೆಸರು ಯಮುನಾ. ಇವರು ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಮ್ಮ ಒಂಬತ್ತನೇಯ ವಯಸ್ಸಿನಲ್ಲಿ ತಮಗಿಂತಲೂ ಇಪ್ಪತ್ತು ವರ್ಷ ದೊಡ್ಡವರಾದ ಗೋಪಾಲ ರಾವ್ ಅವರನ್ನು ವಿವಾಹವಾದರು. ಮದುವೆಯ ನಂತರ ಇವರ ಹೆಸರನ್ನು ಆನಂದಿಬಾಯಿ ಎಂದು ಬದಲಾಯಿಸಲಾಯಿತು. ಗೋಪಾಲರಾವ್ ಅವರು ಕಲ್ಯಾಣದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು ಮತ್ತು ಇವರು ಆ ಕಾಲದಲ್ಲಿಯೇ ಸಮಾಜದ ಕಟ್ಟುಪಾಡುಗಳ ಮಧ್ಯೆಯೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಮಹದಾಸೆಯ ಮನೋಭಾವ ಹೊಂದಿದ್ದರು.
ಆನಂದಿಬಾಯಿಯವರು ತಮ್ಮ ಹದಿನಾಲ್ಕನೇಯ ವಯಸ್ಸಿನಲ್ಲಿ ಗಂಡುಮಗುವಿಗೆ ಜನ್ಮ ನೀಡಿದರು. ಆದರೆ ಉತ್ತಮವಾದ ಚಿಕಿತ್ಸಾ ಸೌಲಭ್ಯಗಳಿಲ್ಲದ ಕಾರಣವಾಗಿ ಕೇವಲ ಹತ್ತೇ ದಿನಗಳಲ್ಲಿ ಆ ಮಗು ಕೊನೆಯುಸಿರೆಳೆಯಿತು. ಇದರಿಂದ ತೀವ್ರವಾಗಿ ಮನನೊಂದ ಆನಂದಿಬಾಯಿಯವರು ದೇಶದ ಜನರಿಗೆ ಉತ್ತಮ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿ, ವೈದ್ಯರಾಗಬೇಕೆಂಬ ಪಣ ತೊಟ್ಟರು. ಆನಂದಿಬಾಯಿಯವರ ಚುರುಕುತನವನ್ನು ಅರಿತಿದ್ದ ಅವರ ಪತಿ, ಸಕಲ ಅನುಕೂಲಗಳನ್ನು ಒದಗಿಸಿ ಅವರ ಶಿಕ್ಷಣಕ್ಕೆ ನಾಂದಿ ಹಾಡಿದರು.
ಉತ್ತಮ ವೈದ್ಯಕೀಯ ಶಿಕ್ಷಣಕ್ಕಾಗಿ ಅವರು ಪಾಶ್ಚಾತ್ಯಕ್ಕೆ ತೆರಳಲು ನಿರ್ಧರಿಸಿದರು. ಅದಕ್ಕಾಗಿ ಅವರ ಪತಿ 1181 ರಲ್ಲಿ ಅಮೇರಿಕಾದ ಮಿಷಿನರಿ ರಾಯಲ್ ವೆಲ್ಡರಿಗೆ ಪತ್ರ ಬರೆದರು. ಆದರೆ ಧರ್ಮದ/ಜಾತಿಯ ಕಟ್ಟುಪಾಡುಗಳನ್ನು ಮೀರಿ ವಿದೇಶಕ್ಕೆ ತೆರಳುವುದನ್ನು ಅವರ ಸಮಾಜ ವಿರೋಧಿಸಿತು. ಇದರಿಂದಾಗಿ ಮಾನಸಿಕವಾಗಿ ಘಾಸಿಗೊಳಿಸಿಕೊಂಡ ಆನಂದಿಬಾಯಿಯವರಿಗೆ ಪತಿಯ ನಿರಂತರ ಬೆಂಬಲ ದೊರೆತು, ಅವರ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿತು. ಅದೇ ಛಲದಿಂದ 1882ರಲ್ಲಿ ಕೊನೆಗೂ ಅವರು ಅಮೇರಿಕಾಗೆ ತೆರಳಿ ಆಲ್ಲಿನ ಫಿಲಿಡೆಲ್ಪಿಯಾದ ಪೆನ್ಸಿಲ್ವೆನಿಯ ಮಹಿಳಾ ವೈದ್ಯಕೀಯ ಕಾಲೇಜು ಸೇರಿಕೊಂಡರು. ಅಮೇರಿಕಾದ ಶೀತ ವಾತಾವರಣ ಅವರ ಆರೋಗ್ಯಕ್ಕೆ ಇರಿಸು-ಮುರಿಸಾಗಿತ್ತು. ಯಾವಾಗಲೂ ನಿಶಕ್ತಿ, ತಲೆನೋವು, ಶಿತಜ್ವರದಿಂದ ಬಳಲುತ್ತಿದ್ದರು. ಆರೋಗ್ಯ ಪದೇ-ಪದೇ ಕೆಡುತ್ತಿದ್ದರೂ, ಧೃತಿಗೆಡದೆ ವೈದ್ಯಕೀಯ ಪದವಿ ಪಡೆಯುವ ಛಲದಿಂದ ಓದಿನತ್ತ ಗಮನ ಹರಿಸಿದರು. ಎಲ್ಲಾ ಕಷ್ಟ-ಕಾರ್ಪಣ್ಯಗಳ ನಡುವೆಯೂ 1886ರಲ್ಲಿ ವೈದ್ಯಕೀಯ ಪದವಿ ಪಡೆದರು. ಆ ಮೂಲಕ ವಿದೇಶಿ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದ ಮೊದಲ ಭಾರತೀಯ ಮಹಿಳೆಯಾದರು. ಇವರ ಈ ಸಾಧನೆಯನ್ನು ಬ್ರೀಟಿಷ್ ರಾಣಿ ವಿಕ್ಟೋರಿಯಾ ಸಹ ಹೊಗಳಿದರು.
1886ರಲ್ಲಿ ಭಾರತಕ್ಕೆ ವಾಪಸ್ಸಾದ ಸಂದರ್ಭದಲ್ಲಿ ಇವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ನಂತರ ಕೊಲ್ಹಾಪುರದ ಸಿ.ಪಿ.ಆರ್. ಆಸ್ಪತ್ರೆಯ ಮಹಿಳಾ ವಿಭಾಗದ ಮುಖ್ಯಸ್ಥೆಯನ್ನಾಗಿ ನೇಮಿಸಲಾಯಿತು. ಜೊತೆಗೆ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯ ಮಾಹಿಳಾ ವಾರ್ಡನ್ ಉಸ್ತುವಾರಿಯನ್ನು ಇವರಿಗೆ ವಹಿಸಲಾಯಿತು.
ಚಿಕ್ಕ ವಯಸ್ಸಿನಲ್ಲಿಯೇ ಛಲ ಬಿಡದೆ ಇಷ್ಟೇಲ್ಲ ಎತ್ತರದ ಮೆಟ್ಟಿಲೇರಿದ ಆನಂದಿಬಾಯಿಯವರಿಗೆ ಅನಾರೋಗ್ಯದ ಸಮಸ್ಯೆಗಳು ಉಲ್ಬಣಗೊಂಡು ದುರಾದೃಷ್ಟವಷಾತ್ ತಮ್ಮ 22ನೇಯ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಇವರ ಸಾವಿಗೆ ಇಡಿ ದೇಶವೇ ಕಂಬನಿ ಮಿಡಿಯಿತು. ಜುಲೈ 1 ರಂದು ಭಾರತ ವೈದ್ಯರ ದಿನವನ್ನಾಗಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ “ವಿದ್ಯೆ ಸಾಧಕನ ಸ್ವತ್ತೆ ಹೊರತು, ಸೋಮಾರಿಯ ಸ್ವತ್ತಲ್ಲ” ಎಂಬ ಜೀವನದ ಸಂದೇಶವನ್ನು ಕೊಡುಗೆಯಾಗಿ ನೀಡಿದ, ವಿದೇಶಿ ವೈದ್ಯಕೀಯ ಪದ್ದತಿಯಲ್ಲಿ ಪದವಿ ಪಡೆದ ಭಾರತದ ಮೊದಲ ಮಹಿಳಾ ವೈದ್ಯೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆನಿಸುತ್ತದೆ.
ವಿಜಯಲಕ್ಷ್ಮಿ ಜೈನರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.