ಮನಸ್ಸು ಎಂದೆಂದೂ ಶುದ್ಧವಾಗಿರಬೇಕು. ಏಕೆಂದರೆ ಒಬ್ಬ ಮನುಷ್ಯ ಒಂದು ಒಳ್ಳೆಯ ಮನಸ್ಸಿಲ್ಲದೆ ಏನನ್ನು ಸಾಧಿಸಲಾರ. ಮನಸ್ಸು ಎಂಬುದು ಮರ್ಕಟ, ಆ ಮರ್ಕಟವನ್ನು ನಿಯಂತ್ರಿಸುವ ಪರಿ ನಮಗೆ ತಿಳಿದಿರಬೇಕು ಅಷ್ಟೇ. ದೊಡ್ಡವರು ಹೇಳಿದ ಹಾಗೆ ಮನಸ್ಸಿದ್ದರೆ ಮಾತ್ರ ಮಾರ್ಗ ಸಿಗಲು ಸಾಧ್ಯ. ಇಲ್ಲವಾದರೆ ನಾವು ಏನೆ ಕೆಲಸ ಮಾಡಲು ಹೋದರು ಅದು ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.
ಮನುಷ್ಯ ಆದವನು ಪರಿಶುದ್ಧವಾದ ಮನಸ್ಸಿಲ್ಲದೆ ಯಾವುದೇ ಕೆಲಸಕ್ಕೆ ಹೊರಟರು, ಏನೇ ಮಾಡಿದರೂ ಅದರಲ್ಲಿ ಅವನಿಗೆ ತೃಪ್ತಿಯೆನ್ನುವುದು ಸಿಗಲು ಸಾಧ್ಯವಿಲ್ಲ. ಮನಸ್ಸು ಎನ್ನುವುದು ನಾವು ಜೀವನದಲ್ಲಿ ಕಳೆಯುವ ಪ್ರತಿ ಕ್ಷಣದಲ್ಲಿಯೂ ನಮ್ಮ ಒಟ್ಟಿಗೆ ಇದ್ದು ನಮಗೆ ಸಾಹಾಯ ಮಾಡುತ್ತಾ ಬರುವ ಮೂಲ ಶಕ್ತಿ. ಆ ಮೂಲ ಶಕ್ತಿಯೇ ಹೊಳಪನ್ನು ಕಳೆದುಕೊಂಡರೆ ಯಾವ ಯಶಸ್ಸಿನ ಮೆಟ್ಟಿಲನ್ನು ಹತ್ತಿ ಸಾಗಲು ಸಾಧ್ಯವಿಲ್ಲ .
ಒಬ್ಬ ಯಶಸ್ವಿ ಮನುಷ್ಯ ತನ್ನ ಸಾಧನೆಯ ಹಿಂದೆ ತುಂಬಾ ಪರಿಶ್ರಮ ಪಟ್ಟಿರಬಹುದು. ಆದರೆ ಆ ಪರಿಶ್ರಮ ಪಡಲು ಅವನಿಗೆ ಮನಸ್ಸು ಎನ್ನುವುದು ಬೇಕೇ ಬೇಕು. ಒಂದು ಕಡೆ ಶ್ರೀ ಮಾತೆ ಶಾರದಾದೇವಿ ಮನಸ್ಸಿನ ಬಗ್ಗೆ ಒಂದು ಮಾತನ್ನು ಹೇಳುತ್ತಾರೆ “ಸಾಧಕನು ಗುರುವಿನ, ದೇವರ ಮತ್ತು ಭಕ್ತರ ಕೃಪೆಯನ್ನು ಪಡೆದಿರಬಹುದು. ಆದರೆ ‘ಒಂದರ ‘ ಕೃಪೆ ಇಲ್ಲದಿದ್ದರೆ ಅವನು ದುಃಖಕ್ಕೆ ಗುರಿಯಾಗುತ್ತಾನೆ. ಆ ‘ಒಂದು ಎಂಬುದು ‘ಮನಸ್ಸು. ಸಾಧಕನಿಗೆ ತನ್ನ ಮನಸ್ಸಿನ ಕೃಪೆಯೂ ಅವಶ್ಯಕ ” ಎಂದು. ಹಾಗಾಗಿ ಮನಸ್ಸನ್ನು ಆದಷ್ಟು ನಿಯಂತ್ರಣದಲ್ಲಿ ಹಾಗೂ ಎಲ್ಲಾ ಕೆಲಸ ಕಾರ್ಯವನ್ನು ಮಾಡುವಾಗ ಸಹಾಯ ಮಾಡುವ ರೀತಿಯಲ್ಲಿ ಇರಿಸಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ.
ಮನಸ್ಸು ಎನ್ನುವುದು ನಮ್ಮ ನಿಯಂತ್ರಣದಲ್ಲಿ ಇರಬೇಕಾದರೆ ನಾವು ತುಂಬಾ ಕಷ್ಟ ಪಡಬೇಕಾಗುತ್ತದೆ. ಈ ಮನಸ್ಸೆಂಬ ಮರ್ಕಟವನ್ನು ನಿಯಂತ್ರಿಸುವ ಬಗೆ ನಮಗೆ ತಿಳಿಯದೆ ಇದ್ದರೆ ನಮಗೆ ನಾವು ಮಾಡಿದ್ದೆಲ್ಲಾ ಸರಿ ಎಂಬ ಭಾವನೆಯೇ ಬರುತ್ತದೆ. ಅದಕ್ಕೆ ಡಿ. ವಿ. ಗುಂಡಪ್ಪನವರ ತಮ್ಮ ಕಗ್ಗದಲ್ಲಿ ಮನಸ್ಸನ್ನು ನಿಯಂತ್ರಿಸುವ ಪರಿಯ ಬಗ್ಗೆ ತಿಳಿಸುತ್ತಾರೆ .
ಮನವನಾಳ್ವುದು ಹಟದ ಮಗುವನಾಳುವ ನಯದೆ ।
ಇನಿತಿನಿತು ಸವಿಯುಣಿಸುಸವಿಕಥೆಗಳಿಂದೆ ॥
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು ।
ಇನಿತಿತ್ತು ಮರಸಿನಿತ – ಮಂಕುತಿಮ್ಮ
ನಮ್ಮ ಮನಸ್ಸಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ನಮಗೆ ತಿಳಿಯುವುದಿಲ್ಲ. ಹಾಗಾಗಿ ಅದನ್ನು ಚಿಕ್ಕ ಮಗುವಿನಂತೆ ನೋಡಿಕೊಂಡು ಅದಕ್ಕೆ ಎಲ್ಲವನ್ನೂ ಸರಿಯಾಗಿ ತಿಳಿಸಬೇಕು ಎಂದು ಅವರು ಹೇಳುತ್ತಾರೆ. ಹಾಗಾಗಿ ಈ ಮನಸ್ಸು ಎಂಬ ಮೂಲ ಶಕ್ತಿಯನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು, ನಮ್ಮ ಯಶಸ್ಸಿನ ದಾರಿಗೆ ಸರಿಯಾಗಿ ಬಳಸಿಕೊಳ್ಳೋಣ.
ಮಧುರಾ ಎಲ್ ಭಟ್ಟ
ಎಸ್. ಡಿ.ಎಮ್. ಕಾಲೇಜು ಉಜಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.