ವ್ಯಕ್ತಿ ಮತ್ತು ಸಮಾಜದ ನಡುವೆ ಬಿಡಿಸಲಾಗದ ಬಾಂಧವ್ಯ ಇದೆ. ಅವು ಒಂದೇ ನಾಣ್ಯದ ಎರಡು ಮುಖಗಳು. ವ್ಯಕ್ತಿಗಳಿಲ್ಲದೆ ಸಮಾಜವಿಲ್ಲ, ಸಮಾಜವಿಲ್ಲದ ಬದುಕು ಊಹಿಸಲು ಸಾಧ್ಯವಿಲ್ಲ. ಸಮಾಜವೆಂದರೆ, ಮಾನವನ ಸಾಮಾಜಿಕ ಸಂಬಂಧಗಳ ಬಲೆ ಎಂದು ಅರ್ಥೈಸಲಾಗಿದೆ. ಸಮಾಜದ ಅಸ್ತಿತ್ವ, ಉಗಮ ಹಾಗೂ ರಚನೆಯ ಕುರಿತು ಅನೇಕ ವಾದ-ವಿವಾದಗಳಿವೆ.
ಮಾನವ ದಿನಕ್ಕೊಂದು ಅನ್ವೇಷಣೆ ಹಾಗೂ ಹೊಸತನ್ನು ಹುಡುಕುತ್ತಾ ಹೋಗುವವ. ಹಿಂದಿನ ಕಾಲದ ಮಕ್ಕಳಿಗೆ ಯಾವುದು ಗೊತ್ತಿಲ್ಲ ಎಂದಲ್ಲ. ಏಕೆಂದರೆ ತಂತ್ರಜ್ಞಾನ ಅಷ್ಟು ವೇಗವಾಗಿ ಮುಂದುವರಿದಿದೆ ಸ್ಮಾರ್ಟ್ ಫೋನ್ ಗಳಿಂದ ಎಲ್ಲೇ ಇದ್ದರೂ ಹೇಗೆ ಇದ್ದರೂ ತಕ್ಷಣವೇ ಮಾಹಿತಿಯನ್ನು ಸಂಗ್ರಹಿಸುವವರೆಗೆ ನಾವು ಬಂದು ತಲುಪಿದ್ದೇವೆ.
ಆಧುನಿಕತೆ ಒಳ್ಳೆಯದೇ. ಆದರೆ ಅದನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದು ಗೊತ್ತಿರಬೇಕು. ಇತ್ತೀಚಿನ ದಿನಗಳಲ್ಲಿ ಎಡಿಟಿಂಗ್ ನಿಂದ ಒಂದು ಚಿತ್ರಕ್ಕೆ ಒಬ್ಬರ ಮುಖವನ್ನು ತೆಗೆದು ಇನ್ನೊಬ್ಬರ ಮುಖವನ್ನು ಜೋಡಿಸುವ ತಂತ್ರಜ್ಞಾನ ಇದೆ. ಇದರಿಂದ ಎಷ್ಟೋ ಜನರು ಅನ್ಯಾಯಕ್ಕೆ, ಅಪಮಾನಕ್ಕೆ ಒಳಗಾದ ಸನ್ನಿವೇಶಗಳನ್ನೂ ನಾವು ಒಪ್ಪಿಕೊಳ್ಳಲೇಬೇಕಾಗಿದೆ. ಇದು ತಾಂತ್ರಿಕತೆಯ ಮಾಯೆ. ಇದರಲ್ಲಿ ಎಷ್ಟು ಪ್ರಮಾಣದಲ್ಲಿ ಉಪಯೋಗವಿದೆಯೋ, ಅಷ್ಟೇ ಪ್ರಮಾಣದಲ್ಲಿ ಅಪಾಯವೂ ಇರುವುದನ್ನು ನಾವು ಒಪ್ಪಲೇಬೇಕು. ಆದ್ದರಿಂದ ತಂತ್ರಜ್ಞಾನವನ್ನು ಹೇಗೆ ಬಳಸಬೇಕು, ಹೇಗೆ ಬಳಸಬಾರದು ಎಂಬ ಬಗ್ಗೆ ಒಂದು ಪ್ರಜ್ಞೆ ಅದನ್ನು ಬಳಕೆ ಮಾಡುವವರಲ್ಲಿ ಮೂಡುವ ಅಗತ್ಯ, ಅನಿವಾರ್ಯತೆ ಇದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ.
ಪ್ರಸ್ತುತ ಸಮಾಜವನ್ನು ನಾವು ಆಧುನಿಕ ಸಮಾಜವೆಂದು ಗುರುತಿಸಿದ್ದೇವೆ. ಏಕೆಂದರೆ ವಿಜ್ಞಾನ, ತಂತ್ರಜ್ಞಾನಗಳು ಮೈದಳೆದು, ಹೊಸ-ಹೊಸ ಆವಿಷ್ಕಾರಗಳು ನಡೆದು ಜೌದ್ಯೋಗಿಕರಣದಿಂದ ನಾಗರೀಕರಣವಾಗಿ ಆಧುನೀಕರಣವಾಗಿದೆ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳು ತಮ್ಮ ಉತ್ತುಂಗ ಸ್ಥಿತಿಯನ್ನು ತಲುಪಿದೆ. ಮಾನವ ಇಂದು ಸಾಧಿಸದೇ ಇರುವುದು ಯಾವುದೂ ಇಲ್ಲ ಎನ್ನುವ ಮಟ್ಟಿಗೆ ಬೆಳೆದಿವೆ. ಇಂದು ಮಾನವ ಹಕ್ಕಿಯಂತೆ ಹಾರಬಲ್ಲ, ಮೀನಿನಂತೆ ನೀರಿನಲ್ಲಿ ಈಜಬಲ್ಲ. ಅಷ್ಟೇ ಅಲ್ಲ ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಜಿಗಿಯಬಲ್ಲ. ಇಂಥ ಅನೇಕ ವಿಸ್ಮಯಕಾರಿ ಆವಿಷ್ಕಾರಗಳು ನಡೆದಿವೆ, ಇನ್ನೂ ನಡೆಯುತ್ತಿವೆ.
ತಂತ್ರಜ್ಞಾನ ವೇಗದಲ್ಲಿ ಬೆಳೆಯುತ್ತಿದೆ. ಮನುಷ್ಯನ ಬುದ್ಧಿಶಕ್ತಿ ಮತ್ತು ಯಂತ್ರಗಳ ಶಕ್ತಿಯಿಂದ ದಿನಕ್ಕೊಂದು ಹೊಸತು ಸೃಷ್ಟಿಯಾಗುತ್ತಲೇ ಇದೆ. ಇದು ನಿರಂತರ ಪ್ರಕ್ರಿಯೆ. ಆದರೆ ಇಂತಹ ಆಧುನಿಕ ಸಮಾಜದಲ್ಲಿ ನಮ್ಮನ್ನು ನಾವು ರೂಪಿಸಿಕೊಳ್ಳುವುದೇ ಇಂದಿನ ದೊಡ್ಡ ಸವಾಲು ಎನ್ನಬಹುದೇನೋ. ಆಧುನಿಕ ಸಮಾಜ ಬೆಳೆಯುತ್ತಿರುವ ವೇಗಕ್ಕೆ ನಮ್ಮನ್ನು ನಾವು ಹೊಂದಿಸಿಕೊಳ್ಳಬೇಕಾದ ತುರ್ತಿನ ನಡುವೆ ಅದೆಷ್ಟೋ ಸವಾಲುಗಳನ್ನು ಸಹ ನಾವು ಎದುರಿಸಬೇಕಾಗುತ್ತದೆ. ಇದರಿಂದ ಯಾರೂ ಹೊರತಾಗಿಲ್ಲ ಎಂಬ ಅರಿವೂ ನಮ್ಮಲ್ಲಿ ಇರಲೇ ಬೇಕಾಗುತ್ತದೆ.
ಸಮಸ್ಯೆಗಳು ಬಂದವೆಂದು ಆಧುನಿಕತೆ, ತಾಂತ್ರಿಕತೆಗಳನ್ನು ಒಪ್ಪಿಕೊಳ್ಳದೇ ಹೋದಲ್ಲಿ ಅಥವಾ ನಾವು ಈಗಿದ್ದ ಹಾಗೆಯೇ ಇದ್ದುಬಿಡುತ್ತೇವೆ ಎಂದಲ್ಲಿ ಬದುಕು ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಆದ್ದರಿಂದ ಆಧುನಿಕತೆಯ ಸಮಾಜದಲ್ಲಿ ಹೇಗೆ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಅರಿತುಕೊಂಡು, ಅದರೊಂದಿಗೆ ನಮ್ಮ ಬದುಕಿನ ಹೆಜ್ಜೆಗಳನ್ನು ನೆಟ್ಟಲ್ಲಿ ಮಾತ್ರ ಉತ್ತಮ ನಾಳೆಗಳು ನಮ್ಮದಾಗಲು ಸಾಧ್ಯ.
ಆಕರ್ಷ ಆರಿಗ
ಎಸ್ ಡಿ ಎಮ್ ಪ್ರಥಮ ವರ್ಷದ ಸ್ನಾತಕೋತ್ತರ ಕಾಲೇಜು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.