ರಕ್ತ ಎಂಬ ಎರಡಕ್ಷರದ ಕೆಂಪು ದ್ರವ ನಮ್ಮೆಲ್ಲರ ದೇಹದ ಅತ್ಯಮೂಲ್ಯ ಅಂಶ. ಪ್ರತಿ ಹನಿ ರಕ್ತಕ್ಕೂ ಬಹಳ ಮೌಲ್ಯವಿದೆ. ನಾವು ಬದಕಲು ಕೆಂಪು ದ್ರವವೇ ಆಧಾರ.
ಅಪಘಾತಕ್ಕೀಡಾದಾಗ, ಅನಾರೋಗ್ಯ ಪೀಡಿತರಾದಾಗ ಅಥವಾ ತೀವ್ರ ತರನಾದ ಅನಾರೋಗ್ಯಕ್ಕೆ ಒಳಗಾದಾಗ ರಕ್ತದ ಅಗತ್ಯ ಬೀಳುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಕಂಡುಬರುತ್ತದೆ. ಹೀಗಿರುವಾಗ, ಜನರಲ್ಲಿ “ರಕ್ತದಾನ” ದ ಅರಿವು ಮೂಡಿಸುವ ಹಾಗೂ ರಕ್ತದಾನ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವ ಪರವಾಗಿ ಜೂನ್ 14 ರಂದು “ರಕ್ತದಾನ ದಿನ” ವನ್ನು ಆಚರಿಸಲಾಗುತ್ತದೆ.
ವಿಶ್ವದ ವಿವಿಧೆಡೆ ರಕ್ತದಾನದ ಅರಿವು ಮೂಡಿಸುವ ಮೂಲಕ ಹಾಗೂ ರಕ್ತದಾನ ಶಿಬಿರಗಳನ್ನು ಏರ್ಪಡಿಸುವ ಮೂಲಕ ಈ ದಿನವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ದಿನಾಚರಣೆ ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ 2004 ರಲ್ಲಿ ಆರಂಭವಾಯಿತು. ರಕ್ತವನ್ನು ಎ, ಎಬಿ, ಬಿ ಹಾಗೂ ಒ ಎಂದು ವಿಂಗಡಿಸುವ ರೀತಿಯನ್ನು ಕಂಡುಹಿಡಿದ ವಿಜ್ಯಾನಿ ಕಾರ್ಲ ಲ್ಯಾಂಡ್ ಸ್ಟೀರ್ನ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ.
ಬಹುತೇಕರಿಗೆ ರಕ್ತದಾನ ಮಾಡಬೇಕೆಂಬ ಆಸೆ ಇರುತ್ತದೆ. ಅಂಥವರು ಕೆಲವು ಅಂಶಗಳನ್ನು ಗಮನದಲ್ಲಿರಿಸಬೇಕು. ಈ ಕೊರೋನಾ ಕಾಲದಲ್ಲಂತೂ ರಕ್ತ ನೀಡುವವರು ಹಾಗೂ ಪಡೆದುಕೊಳ್ಳುವವರು ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಒಂದು ಯುನಿಟ್ ರಕ್ತದಿಂದ ಕೆಂಪು ರಕ್ತ ಕಣ, ಬಿಳಿ ರಕ್ತ ಕಣ, ಪ್ಲೇಟ್ಲೆಟ್ ಗಳನ್ನು ಪ್ರತ್ಯೇಕಿಸಲಾಗುತ್ತದೆ. ಇದು ಹಲವರ ಜೀವ ಉಳಿಸಲು ನೆರವಾಗುತ್ತದೆ ಎನ್ನುತ್ತಾರೆ ವೈದ್ಯರು.
ಯಾರೆಲ್ಲಾ ರಕ್ತದಾನ ಮಾಡಬಹುದು ಮಾಡಬಹುದು?
• 18 ವರ್ಷ ಮೇಲ್ಪಟ್ಟ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು.
• ಕನಿಷ್ಟ 45-50 ಕೆ.ಜಿ ತೂಕ ಹೊಂದಿರಬೇಕು.
• ಮದ್ಯ, ಸಿಗರೇಟ್ ಅಥವಾ ಇನ್ಯಾವುದೇ ಮಾದಕ ಪದಾರ್ಥಗಳನ್ನು ರಕ್ತದಾನಕ್ಕೆ ಮೊದಲು ಹಾಗೂ ನಂತರದ ಕೆಲವು ಗಂಟೆಗಳ ವರೆಗೆ ಸೇವಿಸಬಾರದು.
• ಎಚ್ ಐವಿ, ಡಯಾಬಿಡಿಸ್ ಅಥವಾ ಇನ್ಯಾವುದೇ ರೋಗಗಳಿದ್ದವರು ರಕ್ತದಾನ ಮಾಡಕೂಡದು.
• ಯಾವದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ, ಪುರುಷರು 3 ತಿಂಗಳಿಗೊಮ್ಮೆ ಹಾಗೂ ಸ್ತ್ರೀಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
• ಹಿಮೋಗ್ಲೋಬಿನ್ ಪ್ರಮಾಣ 12.5 ಕ್ಕಿಂತ ಹೆಚ್ಚಿರಬೇಕು.
ಕೊರೋನಾ ಬಂದ ಮೇಲಂತೂ ರಕ್ತದಾನಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಅದೆಷ್ಟೋ ರೋಗಿಗಳೂ ಸಾವನ್ನಪ್ಪಿದ ಘಟನೆ ನಾವು ದಿನನಿತ್ಯ ಕೇಳುತ್ತೇವೆ. ಇದೀಗ ಲಾಕ್ ಡೌನ್ ನಿಂದಾಗಿ ರಕ್ತದಾನ ಶಿಬಿರಗಳನ್ನೂ ಏರ್ಪಡಿಸುವುದು ಸಾಧ್ಯವಾಗುತ್ತಿಲ್ಲ. ಸರಕಾರ ವಿವಿಧ ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಲೇ ಇದೆ. ಒಂದಿಷ್ಟು ಸೆಲೆಬ್ರಿಟಿಗಳೂ #ಡೊನೇಟ್ಬ್ಲಡ್ಸೇವ್ಲಿವ್ಸ್ ಎಂಬ ಹ್ಯಾಶ್ಟ್ಯಾಗ್ ಬಳಸಿ ಜನರಲ್ಲಿ ರಕ್ತದಾನ ಮಾಡುವಂತೆ ಹೇಳುತ್ತಾರೆ. ಇನ್ನು ಕೆಲವು ಅಭಿಮಾನಿಗಳು, ತಮ್ಮ ನೆಚ್ಚಿನ ನಟ-ನಟಿಯರ ಹುಟುಹಬ್ಬದಂದು ಇಲ್ಲವೇ ಸಿನೆಮಾ ಯಶಸ್ಸನ್ನು ಆಚರಿಸುವ ಸಲುವಾಗಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾರೆ. ಇವೆಲ್ಲವನ್ನು ನಾವು ಗಮನಿಸುತ್ತಲೇ ಇರುತ್ತೇವೆ.
ಜಗತ್ತಿನ ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ತಿಳಿದು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು. ಏಕೆಂದರೆ, ರಕ್ತದಾನ ಶ್ರೇಷ್ಠದಾನ. ಅದರಿಂದಲೂ ಸಾಧ್ಯ ಜೀವದಾನ. ಬನ್ನಿ ರಕ್ತ ನೀಡುವ ಮೂಲಕ, ಜೀವ ಉಳಿಸುವ ನಿಟ್ಟಿನಲ್ಲಿ ಶಪಥ ಮಾಡೋಣ.
ತೇಜಸ್ವಿನಿ ಆರ್ ಕೆ
ಎಸ್ ಡಿ ಎಂ ಕಾಲೇಜು, ಉಜಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.