ಅದು 1962ರ ಭಾರತ- ಚೀನಾ ಯುದ್ಧ. ಭಾರತವನ್ನು ಅತಿಕ್ರಮಿಸಲು ಹೊರಟ ಚೀನಾ ಸೈನ್ಯಕ್ಕೆ ಸಿಂಹಸ್ವಪ್ನದಂತೆ ಕಾಡಿದ್ದ ಓರ್ವ ಯುವಕ ತನ್ನ ವಯಸ್ಸಿಗೂ ಮೀರಿದ ಸಾಧನೆಯನ್ನು ಅದಾಗಲೇ ಮಾಡಿದ್ದ. ಮಾತೃಭೂಮಿಗೆ ಕಂಟಕವೆಸಗುತ್ತಿದ್ದ ಶತ್ರು ಸೈನ್ಯಕ್ಕೆ ದಿಟ್ಟ ಉತ್ತರವನ್ನಿತ್ತು ವೀರತ್ವ ಪಡೆದ 21 ರ ಯುವಕನ ಹೆಸರು ಜಸ್ವಂತ್ ಸಿಂಗ್ ರಾವತ್.
1941ರ ಆಗಸ್ಟ್ 19ರಂದು ಉತ್ತರಾಖಂಡದ ಘರ್ವಾಲ್ ಜಿಲ್ಲೆಯಲ್ಲಿ ಹುಟ್ಟಿದ ಜಸ್ವಂತನಿಗೆ ಸೇನೆ ಮತ್ತು ಅದರ ಕಾರ್ಯಚಟುವಟಿಕೆಗಳೆಂದರೆ ಅಚ್ಚುಮೆಚ್ಚು. ಬೆಳೆಯುತ್ತಿದ್ದಂತೆ ಸೇನೆಯ ಮೇಲೆ ಹಾಗೂ ರಾಷ್ಟ್ರದ ಮೇಲೆ ಹೆಚ್ಚಿದ ಪ್ರೀತಿ, ಆತನನ್ನು ಸೇನೆಗೆ ಸೇರಲು ಪ್ರೇರೇಪಿಸಿತು. ನಾಲ್ಕನೇ ಘರ್ವಲ್ ರೈಫಲ್ ನಲ್ಲಿ ರೈಫಲ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಭಾರತ-ಚೀನಾ ಮಧ್ಯೆ ಘೋರ ಯುದ್ಧವೊಂದು ಏರ್ಪಟ್ಟಿತು. ತವಾಂಗ್ ಜಿಲ್ಲೆಯ ನುರಾನಂಗ್ ಎಂಬ ಪ್ರದೇಶಕ್ಕೆ ಕಾಲಿಟ್ಟ ಚೀನಾ ಸೇನೆ, ತನ್ನ ಅಧಿಕಾರವನ್ನು ಅಲ್ಲಿ ಸ್ಥಾಪಿಸಲು ಇಲ್ಲಸಲ್ಲದ ಪ್ರಯತ್ನವನ್ನು ಮಾಡಿತು. ಅಲ್ಲಿದ್ದ ಭಾರತೀಯ ಯೋಧರ ಮೇಲೆ ಗುಂಡು ಗ್ರೆನೇಡ್ ದಾಳಿಗಳನ್ನು ಮಾಡುತ್ತಲೇ ಇದ್ದಿದ್ದರಿಂದ ನಾಲ್ಕನೇ ಬೆಟಾಲಿಯನ್ ಹಿಂದೆ ಸರಿಯಬೇಕೆಂದು ಮೇಲಧಿಕಾರಿಯ ಆದೇಶವಾಯಿತು. ಆದೇಶವನ್ನು ಲೆಕ್ಕಿಸದೆ ಮುನ್ನುಗ್ಗಿದ ಜಸ್ವಂತ್ ಸಿಂಗ್, ಬರೋಬ್ಬರಿ 300 ಸೈನಿಕರನ್ನು ಹೊಡೆದುರುಳಿಸಿದ.
ಜಸ್ವಂತ್ ಸಿಂಗ್ನ ಜೊತೆ ತ್ರಿಲೋಕ್ ಸಿಂಗ್ ನಾಗಿ ಮತ್ತು ಗೋಪಾಲ್ ಸಿಂಗ್ ಎಂಬ ಇಬ್ಬರು ಸೈನಿಕರೂ ವೀರಾವೇಶದಿಂದ ಹೋರಾಡಿ ಪ್ರಾಣತ್ಯಾಗ ಮಾಡಿದರು. ಈ ಮೂವರಿಗೂ ಮಾನ್ಪ ಬುಡಕಟ್ಟು ಜನಾಂಗದ ಸೆಲಾ ಮತ್ತು ನೂರಾ ಎಂಬ ಹೆಣ್ಣುಮಕ್ಕಳು ಸಹಾಯ ಮಾಡಿದ ರು. ಅವರಿಗೆ ಊಟ ಉಪಚಾರ, ಅವಿತಿರಲು ಸ್ಥಳಗಳನ್ನು ವ್ಯವಸ್ಥೆ ಮಾಡಿ ಕೊಡುತ್ತಿದ್ದರು. ಸೆಲಾಳಿಗೆ ಜಸ್ವಂತನ ಮೇಲೆ ಅದೇನೋ ಪ್ರೀತಿ. ಜಸ್ವಂತನಿಗೂ ಆಕೆ ಎಂದರೆ ಪ್ರೀತಿ. ನಡುವಿರುವ ಪ್ರೀತಿ ಪರಸ್ಪರ ಸಹಾಯಗಳ ಮೂಲಕ ಬೆಳೆಯಿತು.
ನೂರಾನಂಗ್ ಪ್ರದೇಶದಲ್ಲಿ ಚೀನಾ ಪಡೆ ದೊಡ್ಡ ಸಂಖ್ಯೆಯಲ್ಲೇ ಇತ್ತು. ಆದರೆ ಭಾರತೀಯ ಪಡೆಯಲ್ಲಿ ಮಾತ್ರ ಕೇವಲ ಮೂವರು. ಸೇಲಾ ಮತ್ತು ನೂರಾ, ಮೂವರು ಸೈನಿಕರೊಂದಿಗೆ ಸೇರಿ ಅಲ್ಲಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಇಟ್ಟು ಭಾರತೀಯ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವರೆಂದು ನಂಬಿಸುವ ಪ್ರಯತ್ನವನ್ನು ಮಾಡಿದರು. ಈ ಐವರೂ ಅಲ್ಲಲ್ಲಿ ಓಡಾಡಿ, ಶತ್ರು ಸೇನೆಯ ಮೇಲೆ ಎರಗಿ,300 ಶವಗಳು ಬೀಳಿಸುವಲ್ಲಿ ಸಫಲರಾದರು. ದೈತ್ಯ ಚೀನಿ ಪಡೆಯ ವಿರುದ್ಧ ಸೆಟೆದು ನಿಂತ ಜಸ್ವಂತರಿಗಾಗಿ ಶತ್ರು ಸೈನ್ಯ ಅಲ್ಲಲ್ಲಿ ಹೊಂಚು ಹಾಕುತ್ತಿತ್ತು. ಅವರಿಗೆ ಅನ್ನ ಆಹಾರವನ್ನು ಒದಗಿಸುತ್ತಿದ್ದ ಓರ್ವನ ಬಂಧನವಾಗುತ್ತಿದ್ದಂತೆ ಭಾರತೀಯ ಪಡೆಯಲ್ಲಿ ಕೇವಲ ಮೂವರಿದ್ದು, 300 ಜನರನ್ನು ಆ ಮೂವರೇ ಕೊಂದರೆಂಬ ವಿಷಯ ತಿಳಿದು ಚೀನೀಸೈನ್ಯ ತಬ್ಬಿಬ್ಬಾಯಿತು.
ಹುಡುಕಾಟ ತೀವ್ರವಾಯಿತು. ಅಲ್ಲಲ್ಲಿ ಅವಿತು ಪ್ರತಿರೋಧ ವ್ಯಕ್ತಪಡಿಸಿದರು. ನೂರಾ ಅವಿತ ಸ್ಥಳಕ್ಕೇ ನುಗ್ಗಿ ಬಂದ ಗ್ರೆನೇಡ್ ಆಕೆಯನ್ನು ಬಲಿ ತೆಗೆಯಿತು. ಬೆನ್ನಟ್ಟಿ ಬಂದ ಚೀನಿ ಸೈನಿಕರ ಕೈಗೆ ಸಿಕ್ಕಿ, ತನ್ನ ಪ್ರಾಣ ಹೋಗುವುದಕ್ಕಿಂತ, ತಾನೇ ಆತ್ಮಹತ್ಯೆ ಮಾಡಿಕೊಳ್ಳುವುದು ಒಳಿತೆಂದು ಸೆಲಾ ಪ್ರಪಾತಕ್ಕೆ ಹಾರಿ ಪ್ರಾಣತ್ಯಾಗ ಮಾಡಿದಳು. ಅಲ್ಲಿಗೆ ಜಸ್ವಂತ್ ಮತ್ತು ಸೆಲಾಳ ಗುಪ್ತವಾದ ಪ್ರೇಮವು ಸುಪ್ತವಾಗಿಯೇ ಹೋಯಿತು. ಮತ್ತಿಬ್ಬರು ಒಡನಾಡಿಗಳ ಹತ್ಯೆ ಶತ್ರು ಸೈನ್ಯದಿಂದ ಆಗಿದ್ದೇ ತಡ ತನ್ನ ಬಂಧನ ಸನ್ನಿಹಿತವಾಗಿದೆ ಎಂದು ಅರಿತ ಜಸ್ವಂತ್ ಸಿಂಗ್ ಘೋರ ಹೋರಾಟವನ್ನು ಮಾಡಿದನು. ಒಮ್ಮಿಂದೊಮ್ಮೆಲೆ ನುಗ್ಗಿ ಬಂದ ಶತ್ರು ಸೈನ್ಯವು ಅವರ ಮೇಲೆ ಇನ್ನೇನು ಎರಗುವುದೋ, ತನ್ನ ಸಾವು ಶತ್ರುವಿನ ಕೈಯಿಂದ ಅಲ್ಲ ಎಂದು ತನಗೆ ತಾನೇ ಗುಂಡಿಟ್ಟು ಭಾರತಾಂಬೆಗೆ ಪ್ರಾಣಾರ್ಪಣೆಗೈದ.
ಜನ್ಮಭೂಮಿಗಾಗಿ ಪ್ರಾಣತ್ಯಾಗ ಮಾಡಿದ ಜಸ್ವಂತರ ಆತ್ಮ ಇಂದಿಗೂ ನುರಾನಂಗ್ ಅನ್ನು ರಕ್ಷಿಸುತ್ತಿದೆ ಎಂಬುದು ಜನರ ನಂಬಿಕೆಯಾಗಿದೆ. ಅದು ಕೇವಲ ನಂಬಿಕೆಯಲ್ಲ, ಅದರ ಅನುಭವವೂ ಹಲವಾರು ಸಲ ಆ ಪ್ರದೇಶದಲ್ಲಿ ಆಗಿದೆ. 59 ವರ್ಷಗಳು ಕಳೆದಿವೆ. ಇಂದಿಗೂ ಜಸ್ವಂತನ ಕೋಣೆಯಲ್ಲಿ ಆತನ ಬಟ್ಟೆ ಮತ್ತು ಇತರ ವಸ್ತುಗಳನ್ನು ಸಂರಕ್ಷಿಸಿ ಇಡಲಾಗಿದೆ. 5 ಜನ ಸೈನಿಕರು ಅದರ ಎಲ್ಲಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಜಸ್ವಂತ್ ಸಿಂಗ್ ನನ್ನು ಬಾಬಾ ಎಂದು ಕರೆದು ಅವರ ಕೋಣೆಯನ್ನು ಮಂದಿರದಂತೆ ನೋಡಿಕೊಳ್ಳುತ್ತಿದ್ದಾರೆ. ಬೆಳಗಿನ ಜಾವ 4: 30ಕ್ಕೆ ಚಹಾ 9 ಗಂಟೆಗೆ ಉಪಹಾರ ರಾತ್ರಿ 7 ಗಂಟೆಗೆ ಭೋಜನವನ್ನು ಇಡುತ್ತಾರೆ. ಅವರು ಜೀವಂತವಾಗಿ ತಮ್ಮೊಡನೆ ಇರುವರೆಂಬ ಭಾವನೆ ಅಲ್ಲಿನ ಜನರಿಗೆ ಹಾಗೂ ಸೇನೆಗೆ.
ಒಬ್ಬ ರೈಫಲ್ ಮ್ಯಾನ್, ಮೇಜರ್ ಜನರಲ್ ಆಗಿರುವುದು ಇತಿಹಾಸದಲ್ಲಿ ಒಂದೇ ಸಲ. ಆ ವ್ಯಕ್ತಿ ಜಸ್ವಂತ್ ಸಿಂಗ್. ಇಂದಿಗೂ ಅತನಿಗೆ ತಿಂಗಳ ವೇತನ ಮತ್ತು ಅಧಿಕೃತ ರಜೆಗಳನ್ನು ಸೇನೆಯಿಂದ ಮಂಜೂರು ಮಾಡಲಾಗುತ್ತಿದೆ.
ನಿಸ್ವಾರ್ಥ, ಅಪ್ರತಿಮ,ಶೌರ್ಯ,ಧೈರ್ಯ ಮೆರೆದ ಈ ಅಮರ ಸೇನಾನಿಗೆ ಮರಣೋತ್ತರವಾಗಿ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ. ಬರೋಬ್ಬರಿ 300 ಜನರ ಸಾವಿಗೆ ಕಾರಣನಾದ, ತಾಯ್ನಾಡಿಗಾಗಿ ಅಮರತ್ವ ಹೊಂದಿದ ಈ ವೀರಮಣಿಗೆ ಇಂದಿಗೂ ಪರಮವೀರಚಕ್ರವನ್ನು ನೀಡದೇ ಇರುವುದು ಬೇಸರದ ಸಂಗತಿ. ಈತನ ಜೊತೆ ಸೇರಿ ಭಾರತಾಂಬೆಯ ಪಾದಗಳಿಗೆ ಪುಷ್ಪವಾಗಿ ಅರ್ಪಿತವಾದ ಸೆಲಾ ಮತ್ತು ನೂರಾ ಎಂಬ ಬಡ ಬುಡಕಟ್ಟು ಹೆಣ್ಣುಮಕ್ಕಳನ್ನು ಗುರುತಿಸುವಲ್ಲಿಯೂ ನಾವು ವಿಮುಖರಾಗಿದ್ದೇವೆ.
ನಮ್ಮ ಶಿಕ್ಷಣ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಅಮೇರಿಕಾ, ಐರೋಪ್ಯ ರಾಷ್ಟ್ರಗಳು ಮತ್ತು ಅದರ ನಾಯಕರುಗಳ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಕೊಡುತ್ತದೇನೋ..!! ಆದರೆ, ನಮ್ಮದೇ ನಾಡಿನಲ್ಲಿ ಹುಟ್ಟಿ, ನಮಗಾಗಿಯೇ ಪ್ರಾಣತೆತ್ತ ಅಸಂಖ್ಯ ಜ್ಯೋತಿಗಳನ್ನು ಗುರುತಿಸದೇ ಇರುವುದು ನಮ್ಮ ದುರಂತವೇ ಸರಿ. ಭವಿಷ್ಯ ನಮ್ಮ ಕೈಯಲ್ಲಿದೆ. ನಮ್ಮ ಹೆಮ್ಮೆಯ ರತ್ನಗಳನ್ನು ನಾವು ಗುರುತಿಸಿ ಗೌರವಿಸೋಣ. ಭವ್ಯ ಭಾರತದ ಪ್ರಬುದ್ಧ ಪ್ರಜೆಗಳಾಗೋಣ. #knowyourheroes.
ಶ್ರೀಲಕ್ಷ್ಮೀ ಮಠದಮೂಲೆ
ವಿ ವಿ ಕಾಲೇಜು ಮಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.