ಅಂತರ್ಯಾನ ಎಂದರೆ ಆಂತರಿಕ ಪಯಣ, ನಮ್ಮನ್ನು ನಾವು ಅರಿಯುವ ಪರಿ. ಆ ಮೂಲಕ ಹೊಸ ಚೈತನ್ಯದೊಂದಿಗೆ ಸಾಧನೆಯ ಶಿಖರ ಏರುವ ದಾರ್ಶನಿಕ ತತ್ವಬೋಧೆಯನ್ನು ಭಾರತೀಯ ಸಂಸ್ಕೃತಿ ಕಲಿಸಿಕೊಡುತ್ತದೆ. ಹಿಂದೂಸ್ಥಾನ ಹಲವು ರೀತಿಯಲ್ಲಿ ಸಮೃದ್ಧ. ಭೌಗೋಳಿಕ, ಸಾಂಸ್ಕೃತಿಕ, ಸಾಹಿತಿಕ, ಪ್ರಾಕೃತಿಕವಾಗಿ ಸಮೃದ್ಧಿ ಒಂದೆಡೆಯಾದರೆ, ಧಾರ್ಮಿಕವಾಗಿ ಸಮಾಜವನ್ನು ಬೆಸೆದ ತತ್ವಾದರ್ಶಗಳು ಅನೇಕವಿದ್ದು ಅವುಗಳು ದೇಶವನ್ನು ಮತ್ತಷ್ಟೂ ಸಮೃದ್ಧಗೊಳಿಸಿವೆ. ಬೌದ್ಧಿಕ ಸುವಿಚಾರಗಳಿಂದ ಸಾಹಿತ್ಯವನ್ನು ಪ್ರಾಚೀನ ಕಾಲದಿಂದಲೂ ಬಹಳ ಶ್ರೀಮಂತವಾಗಿಸಿದ ಕೀರ್ತೀಯು ಈ ಪುಣ್ಯ ಭುವಿಗಿದೆ.
ಭಾರತೀಯ ಸಂಸ್ಕೃತಿಯ ಸುಗಂಧವೇ ಈ ದೇಶಕ್ಕೆ ಹಲವರನ್ನು ಆಕರ್ಷಿಸಿದೆ. ಇಲ್ಲಿನ ತತ್ವಗಳನ್ನು ಅರಿಯುವಂತೆ, ಮಥಿಸುವಂತೆ ಮಾಡಿವೆ. ನಮ್ಮ ಪರಂಪರೆ ವೈಶಿಷ್ಟ್ಯಪೂರ್ಣವಾದ, ಅಭಿವ್ಯಕ್ತಿಯನ್ನು ಪೂರ್ಣವಾಗಿ ಹೊರಹಾಕುವ ಸ್ವಾತಂತ್ರ್ಯವನ್ನೂ ಕೂಡಾ ನೀಡಿದೆ. ಸತ್ಯಶೋಧನೆ, ಆಧ್ಯಾತ್ಮ ಅದೇ ರೀತಿ ಬಹು ವಿಶಾಲವಾದ ಇಲ್ಲಿನ ದಾರ್ಶನಿಕತೆ ಪ್ರಪಂಚದ ಆಗುಹೋಗುಗಳಿಗೆ ಇಂದಿಗೂ ಉತ್ತರ ನೀಡಬಲ್ಲದು. ಹಿಂದೂ ಎಂಬ ಮಹತ್ತರ ಸಂಸ್ಕೃತಿಯ ಬೃಹತ್ ಆಲದ ಮರದ ಕೆಳಗೆ ಹಲವು ಧರ್ಮಗಳು, ಮತಗಳು,ಪಂಥಗಳು, ತತ್ವಾದರ್ಶಗಳು ಮೇಳೈಸಿವೆ, ಇಂದಿಗೂ ಉದಾತ್ತ ಆದರ್ಶಗಳನ್ನು ಹೊತ್ತು ನಡೆಯುವ ನಮ್ಮ ಸಂಸ್ಕೃತಿ ಎಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿವೆ. ಶಾಂತಿ, ಸತ್ಯ, ಸುವಿಚಾರ ಸಹಿತ ಆತ್ಮವಿಮರ್ಶೆಗೆ ದಾರಿ ಮಾಡಿಕೊಟ್ಟ ಪ್ರಾಚೀನ ಮತಪರಂಪರೆಗಳಲ್ಲೊಂದು ಬೌದ್ಧ ಮತ.
ಆರಂಭದ ಹೀಣಯಾನದಿಂದ ಹಿಡಿದು ೨೦ ನೇ ಶತಮಾನದ ನವಯಾನ ಧಮ್ಮ ತತ್ವ ಪಯಣದ ತನಕ ಬೌದ್ಧ ತಾತ್ವಿಕತೆ ಹಲವು ಏರಿಳಿತಗಳನ್ನು ಕಂಡಿದೆ. ಭಾರತ ಉಪಖಂಡದುದ್ದಕ್ಕೂ ಹರಿದಾಡಿ, ನಲಿದಾಡಿ ಸ್ಪೂರ್ತಿಯಾದ ತತ್ವವು ತನ್ನ ಆದರ್ಶಗಳ ಮೂಲಕ ಜನಮಾನಸವನ್ನು ಬೆಸೆದಿತ್ತು ಎಂಬುದು ಇತಿಹಾಸದ ಪುಟಗಳಿಂದ ಸಾದೃಶವಾಗುತ್ತದೆ. ಭಾರತ ದೇಶದ ಪ್ರಗತಿ ಪಥದಲ್ಲಿ, ಸಾಮಾಜಿಕ, ಧಾರ್ಮಿಕ, ರಾಜಕೀಯ ಸತ್ಪಥಕ್ಕೂ ಭೌದ್ಧ ತತ್ವಗಳ ಪ್ರಭೆಯಿದೆ. ಹಿಂದೂ ಸಂಸ್ಕೃತಿಯೆಂಬ ಬೃಹತ್ ಮರದಡಿ ಬೌದ್ಧ, ಶೈವ, ಶಾಕ್ತ ಮೊದಲಾದ ತತ್ವ ದರ್ಶನಗಳು ಇಂದಿಗೂ ಆಸರೆ ಪಡೆದಿವೆ. ದೇಶದ ಪ್ರತಿಯೋರ್ವನ ಮೈಮನಗಳಲ್ಲಿ ಹೆಮ್ಮೆ ಮೂಡಿಸುವ ದೇಶದ ಪ್ರತಿಷ್ಠಿತ ಲಾಂಛನಗಳ ಮೂಲರೂಪ ಚಕ್ರವರ್ತಿ ಅಶೋಕ ಮಹಾರಾಜನಿಗೆ ಸ್ಪೂರ್ತಿಯಾದ ಶಾಂತಿಪಥದ ತತ್ವ ಬಿಂಬಗಳೇ ಎಂಬುದು ಉಲ್ಲೇಖನೀಯ. ಅಶೋಕ ಚಕ್ರವೂ ದೇಶದ ನಿರಂತರ ಪ್ರಗತಿಯನ್ನು ಬಿಂಬಿಸುತ್ತದೆ. ಸಹನೆ, ಸಹಿಷ್ಣುತೆ, ಶಾಂತಿ, ಜ್ಞಾನ, ಪರಹಿತ, ಪರೋಪಕಾರ ಮೊದಲಾದ ಉದಾತ್ತ ಗುಣದಾರ್ಶಗಳ ಬೇರು ಇದೇ ಶಾಖೆಯಲ್ಲಿ ಅನುರಣಿಸಿ ಬೆಳೆದದ್ದು ಎನ್ನಬಹುದು. ಹೀಗೆ ಧರ್ಮಾನುಸಂಧಾನದ ಪ್ರತೀಕವಾದ ಧಮ್ಮೋಕ್ತಿ ಇಂದು ಜನಮಾನಸದಲ್ಲಿ ಅಂತರ್ಯಾನಿಯಾಗಿ ಹರಿದಾಡುತ್ತಿದೆ ಎಂದರೆ ತಪ್ಪಾಗಲಾರದು.
ಪ್ರಾಚೀನ ಬೌದ್ಧ ಶಾಖೆಗಳು, ಬೌದ್ಧರ ಆರಾಧನ ಕೇಂದ್ರಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ದೇಶದ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ಪ್ರಾಚ್ಯವಸ್ತು ಇಲಾಖೆ(ಎ.ಎಸ್.ಐ) ಮೂಲಕ ಬೌದ್ಧ ಉಳಿಕೆಗಳ ಉತ್ಖನನ, ಅಧ್ಯಯನದಲ್ಲೂ ಹಲವು ಮಂದಿ ಚರಿತ್ರಕಾರರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಸಂಬಂಧ ಪಟ್ಟಂತೆ ಪ್ರಾಚೀನ ಬನವಾಸಿಯ ಬೌದ್ಧರ ಆಗರಗಳು, ಕಲಬುರಗಿ ಸನಿಹದ ಸನ್ನತ್ತಿ ಎಂಬಲ್ಲಿ ಗ್ರಾಮದಲ್ಲಿ ಕಂಡ ಪ್ರಾಚೀನ ಬೌದ್ಧ ಉಳಿಕೆಗಳ ಅಧ್ಯಯನ ಮತ್ತು ಸಂರಕ್ಷಣೆಯ ಕಾರ್ಯವೂ ನಡೆಯುತ್ತಿದೆ. ಡಾ.ತಾಳ್ತಜೆ ವಸಂತಕುಮಾರ್ ಅವರ ಬೌದ್ಧಾಯಣ ಕೃತಿ ಸೇರಿದಂತೆ, ಹಲವು ಸಾಹಿತಿ, ಸಂಶೋಧಕರು, ವಿದ್ವಾಂಸರ ಅಧ್ಯಯನ ಗ್ರಂಥಗಳು ಕರ್ನಾಟಕದಲ್ಲಿದ್ದ ಬೌದ್ಧ ಪ್ರಾಚೀನತೆಯ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಬೌದ್ಧ ತತ್ವಗಳೊಂದಿಗೆ ಪಾಲಿ, ಸಂಸ್ಕೃತ ಭಾಷಾ ಶಿಕ್ಷಣ ಇಂದು ಉನ್ನತ ಶಿಕ್ಷಣದ ಭಾಗವಾಗಿಯೂ ಕೆಲ ವಿಶ್ವವಿದ್ಯಾನಿಲಯಗಳಲ್ಲಿ ಪಠಿಸಲ್ಪಡುತ್ತಿದೆ.
ಮಹಾಯಾನ ಬೌದ್ಧ ಪರಂಪರೆ ಸಂಸ್ಕೃತ ಸಾಹಿತ್ಯಕ್ಕೆ ಮೆರುಗನ್ನು ನೀಡಿದೆ. ಬೌದ್ಧ ಸಾಹಿತ್ಯದ ಮಹತ್ತರ ಕಾಲಘಟ್ಟ ಮಹಾಯಾನ – ಇದನ್ನು ಗ್ರೇಟ್ ಟ್ರಾವೆಲ್ ಎನ್ನುತ್ತಾರೆ. ಈ ಪಯಣದಲ್ಲಿ ಹಲವು ಮೇರು ಸಾಹಿತಿಗಳು ಸಂಸ್ಕೃತ ಸಾಹಿತ್ಯ ಕೃತಿ ರಚನೆ ಮತ್ತು ಅಧ್ಯಾಪನದಲ್ಲಿ ತೊಡಗಿದ್ದರು. ಶೂನ್ಯವಾದ ತತ್ವದ ಮೇರು ದಾರ್ಶನಿಕ ನಾಗಾರ್ಜುನ ಕೂಡಾ ಇದೇ ಮಹಾಯಾನ ಪರಂಪರೆಯವನಾಗಿದ್ದ. ನಳಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾನಿಲಯಗಳಲ್ಲಿ ತತ್ವಶಾಸ್ತ್ರವನ್ನು ಕಲಿಸುವ ಪ್ರಾಧ್ಯಾಪಕ, ಪಂಡಿತನಾಗಿ ಈತ ಹಲವು ಸಂಸ್ಕೃತ ಕೃತಿಗಳ ರಚನೆಯನ್ನು ಮಾಡಿದ್ದ ಎನ್ನಲಾಗುತ್ತದೆ. ಶೂನ್ಯವಾದ ತತ್ವವು ಈತನಿಂದಲೇ ಹೆಚ್ಚಿನ ಪ್ರಸಾರ, ಪ್ರಚಾರ ಗಿಟ್ಟಿಸಿಕೊಂಡಿತ್ತು. ಇಂದಿಗೂ ಮಹಾಯಾನ ಪರಂಪರೆಯ ಸಾಹಿತ್ಯವನ್ನು ಕಲಿಯುವ ಆಸಕ್ತಿಯುಳ್ಳ ಹಲವು ಮಂದಿ ಇದ್ದಾರೆ. ಸಂಸ್ಕೃತ ಗ್ರಂಥಗಳು ಅಂದಿನ ದಿನಗಳಲ್ಲಿ ಭಾಷೆಯ ಪೋಷಣೆಗೆ ಸಹಕಾರಿಯಾಗಿತ್ತು ಮಾತ್ರವನ್ನು ಈ ತತ್ವಕ್ಕೂ ಹೆಚ್ಚಿನ ಮೆರುಗು ನೀಡಿತ್ತು ಎನ್ನಬಹುದಾಗಿದೆ. ಪ್ರಜ್ಞಾಪಾರಮಿತ, ಲಂಕಾವತಾರ ಸೂತ್ರ, ಲಲಿತಾವಿಸ್ತರ ಕೃತಿಗಳು ಭಾರತದ ಪ್ರಾಚೀನ ಬೌದ್ಧ ಸಂಸ್ಕೃತ ಕೃತಿಗಳಾಗಿವೆ. ಸಹಜಯಾನದ ದೋಹೆಗಳು, ವಜ್ರಯಾನದ ದೈವಿಕ ಆರಾಧನಾ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದ ಕೃತಿಗಳು ಹಲವಿವೆ. ಶತಮಾನಗಳವರೆಗೆ ಧಮ್ಮವನ್ನು ಅಪ್ಪಿಕೊಂಡ ಜನಮಾನಸ ನಂತರದಲ್ಲಿ ಧರ್ಮದ ಸಾರವನ್ನು ಆಂತರ್ಯದಲ್ಲಿ ಹುದುಗಿಸಿಕೊಂಡು, ಉಳಿಸಿಕೊಂಡು ಪೋಷಿಸಿತು. ಭಾರತೀಯ ಸಮಾಜ ಕಂಡ ಹಲವು ಪಿಡುಗುಗಳಿಗೆ ಉತ್ತರವಾಗಿದ್ದ ಧಮ್ಮದ ಸಾರ ಏಷ್ಯಾದ ಉದ್ದಗಲಕ್ಕೂ ವ್ಯಾಪಿಸಲು ಮಹಾಯಾನ ಎಂಬ ಬೃಹತ್ಪಯಣವೂ ಕಾರಣವಾಗಿದೆ. ಕಾಶ್ಮೀರ, ಗಾಂಧಾರ ಸಹಿತ ರೇಶ್ಮೇ ಹಾದಿಯ ಮೂಲಕ ಚೀಣಾವನ್ನು ಮಂಗೋಲಿಯಾ, ಜಪಾನ್ನಲ್ಲಿ ಧಮ್ಮ ಬೇರೂರಲು ಈ ಪಯಣ ಕಾರಣವಾಯಿತು.
ಅಂದು ಎಲ್ಲರೊಳಗೊಂದಾಗುವ ಮಹತ್ತರ ಗುಣದಿಂದ ಬೌದ್ಧ ತತ್ವ ಸಾರವು ಸರಸ್ವತಿ ನದಿಯಂತೆ ಒಡಲಲ್ಲಿ ಪ್ರವಹಿಸಲಾರಂಭಿಸಿತ್ತು. ಇದಕ್ಕೊಂದು ಉತ್ತಮ ಉದಾಹರಣೆ ನಾಥ ಪಂಥ. ದೇಶದಲ್ಲಿ ಬೌದ್ಧ ಸಿದ್ಧ ಪ್ರಭೆಯು ಶೈವ ಪಥದಲ್ಲಿ ಒಂದಾಗಿ ನಾಥ ಪಂಥ ಹುಟ್ಟಿತು ಎಂದು ಇತಿಹಾಸಕಾರರು ಹೇಳುತ್ತಾರೆ. ೧೯ ನೇ ಶತಮಾನ ಮತ್ತು ಇಪ್ಪತ್ತನೇ ಶತಮಾನದಲ್ಲಿ ನಡೆದ ಹಲವು ಚಾರಿತ್ರಿಕ ಅಧ್ಯಯನ, ಹುಡುಕಾಟದಿಂದ ಬೌದ್ಧರ ಇತಿಹಾಸದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುವಂತೆ ಆಯಿತು. ಈ ಸಂದರ್ಭ ಅನ್ಯರ ಆಕ್ರಮಣಗಳಿಂದ ಅಳಿದ ವಿಹಾರ, ಸಂಘರಾಮ, ಚೈತ್ಯಗಳ ಬಗ್ಗೆ ಮಾಹಿತಿ ಕ್ರೋಢೀಕರಣ ಕಾರ್ಯಗಳು ನಿರಂತರವಾಗಿ ನಡೆದಿವೆ. ಉಪಖಂಡದ ಉದ್ದಗಲಗಳಲ್ಲೂ ಇಂತಹ ಕೇಂದ್ರಗಳಲ್ಲಿ ಉತ್ಖನನ, ಮಾಹಿತಿ ಕ್ರೋಢಿಕರಣ ಮುಖಾಂತರ ಪ್ರಾಚೀನ ಇತಿಹಾಸವನ್ನು ನೆನಪಿಸುವಂತೆ ಮಾಡಿತು. ಗೌತಮ ಬುದ್ಧ ಜನಿಸಿದ ನೇಪಾಳದ ಲುಂಬಿನಿ, ಶ್ರಾವಸ್ತಿ, ಕುಶೀನರ, ಬೌದ್ಧಗಯಾ ಮೊದಲಾದೆಡೆಗಳಲ್ಲಿರುವ ಕುರುಹುಗಳನ್ನು ಆಧರಿಸಿ, ಸಂಶೋಧನೆಗಳು ನಡೆದವು. ಇದರೊಂದಿಗೆ ದೇಶದಲ್ಲಿದ್ದ ಮಹತ್ತರ ಪಳೆಯುಳಿಕೆಗಳು ಸಂಶೋಧನೆಯ ನೆಪದಲ್ಲಿ ಬ್ರಿಟಿಷರೇ ದೋಚಿದ ಉದಾಹರಣೆಗಳು ಇವೆ. ಇಂದು ಯುನೆಸ್ಕೋ ಸ್ಮಾರಕವಾಗಿರುವ ಪಶ್ಚಿಮದ ಅಜಂತಾ, ಎಲ್ಲೋರ ಗುಹಾಲಯಗಳ ಶೋಧನೆ, ಮಧ್ಯಪ್ರದೇಶದ ಸಾಂಚಿ,ಶಿಕ್ಷಣ ಕೇಂದ್ರಗಳಾದ ನಲಂದಾ, ವಿಕ್ರಮಶಿಲಾ, ಉದಯಗಿರಿ ಮೊದಲಾದ ಕೇಂದ್ರಗಳು ಬೌದ್ಧ ಇತಿಹಾಸದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿವೆ.
ಭಾರತ ದೇಶದ ಬೌದ್ಧ ಪಯಣದ ಐತಿಹಾಸಿಕತೆ ಹಲವು ಮಜಲುಗಳಿಂದ ಕೂಡಿದೆ. ಆರಂಭದಲ್ಲಿ ಶಾಕ್ಯಮುನಿ ಬುದ್ಧನ ವಾಣಿ, ಬೌದ್ಧ ಧಾರ್ಮಿಕ ಸಾಹಿತ್ಯ ಮತ್ತು ವೈಚಾರಿಕತೆಗಷ್ಟೇ ಮೀಸಲಾಗಿದ್ದ ಧಾರ್ಮಿಕ ಯಾನವನ್ನು ಹೀಣಯಾನ ಎನ್ನಲಾಗುತ್ತದೆ. ಈ ಹೀಣಯಾನ ಪರಂಪರೆಯು ಇಂದಿಗೂ ಶ್ರೀಲಂಕಾದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದೆ. ಬುದ್ಧನ ಬೋಧೆಗೆ ಒತ್ತು ನೀಡುವ ಮೊತ್ತ ಮೊದಲ ಧಾರ್ಮಿಕ ಪಯಣವನ್ನು ಹೀಣಯಾನ ಅಥವಾ ಥೇರವಾಡ ಎಂದು ಕರೆಯಲಾಗುತ್ತದೆ. ಇಂತಹ ಪ್ರಾಚೀನ ಆರಾಧನಾಲಯಗಳಾದ ಗೊಂಪಾ, ವಿಹಾರಗಳು, ಚೈತ್ಯಾಲಯಗಳು ಶ್ರೀಲಂಕಾದಲ್ಲಿರುವುದು ವಿಶೇಷ. ೨೫೦೦ ವರ್ಷಗಳ ಬೌದ್ಧ ಪ್ರಾಚೀನತೆಯನ್ನು ಕಿಂಚಿತ್ತೂ ಬದಲಾಯಿಸದೆ ಉಳಿಸಿಕೊಂಡಿರುವ ಬೌದ್ಧರ ಪಠಣ ಕೇಂದ್ರಗಳು ಸಿಂಹಳಲ್ಲಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ನಂತರದಲ್ಲಿ ಕೊಂಚ ಬದಲಾವಣೆಯನ್ನು ಹೊಂದುತ್ತಾ ಸಾಗಿದ ಬೌದ್ಧಮತ ಪರಂಪರೆಯು ಮಹಾಯಾನ, ವಜ್ರಯಾನ, ಸಹಜಯಾನ, ತಂತ್ರಯಾನ ಹೀಗೆ ಹಲವು ಕವಲುಗಳ ಮೂಲಕ ಸಾಗಿತು ಎಂದು ಹೇಳಲಾಗುತ್ತದೆ. ಮೌರ್ಯ, ಗುಪ್ತರು ಆರಂಭದಲ್ಲಿ ಬುದ್ಧ ಮತಕ್ಕೆ ಆಶ್ರಯ ನೀಡಿ ಬೆಳೆಸಿದರೆ ನಂತರದಲ್ಲಿ ಬಂಗಾಳದ ಪಾಲರು, ಆಂಧ್ರದ ಶಾತವಾಹನರು, ಚಾಲುಕ್ಯರು, ಪಾಲರು, ಕೇರ ನಾಡಿನ ಚೇರ ಸಹಿತ ಮೂಷಕ ರಾಜವಂಶಜರು ಆಶ್ರಯ ನೀಡಿದರು. ದೇಶದ ಉದ್ದಗಲಕ್ಕೂ ವಿಸ್ತರವಾಗಿದ್ದ ಬೌದ್ಧ ಪಯಣದಲ್ಲಿ ಬೃಹತ್ ವಿಹಾರಗಳು, ಚೈತ್ಯಾಲಯ, ಗುಹಾಲಯಗಳು ನಿರ್ಮಾಣವಾದ ಹಲವು ಉದಾಹರಣೆಗಳಿವೆ. ಮಹಾರಾಷ್ಟ್ರದ ಕನ್ಹೇರಿ, ಅಜಂತಾ, ಎಲಿಫೆಂಟಾ ಗುಹಾಲಯಗಳಲ್ಲಿ ಬೌದ್ಧ, ಶೈವ ಮತ್ತು ಜೈನರ ಆದ್ಯಾತ್ಮ ಸಾಧನೆಯ ಕೇಂದ್ರಗಳೆಂದು ಬಿಂಬಿತವಾಗಿವೆ. ವರ್ತಮಾನದಲ್ಲಿ ಅಜಂತಾ ಗುಹಾಲಯಗಳು ಯುನೆಸ್ಕೋ ವಿಶ್ವ ಸ್ಮಾರಕವಾಗಿಯೂ ಹೆಸರುಗಳಿಸಿದೆ. ಗುಹಾಲಯಗಳೊಳಗಿನ ಬೋಧಿಸತ್ವ ಕಥಾನಕವನ್ನು ಬಿಂಬಿಸುವ ಕಲಾಕೃತಿಗಳು ಇಂದಿಗೂ ವಿಶ್ವಮಾನ್ಯ. ದೈವಾಂಶಗಳಾಗಿ ಆರಾಧಿಸಲ್ಪಡುತ್ತಿದ್ದ ಅವಲೋಕಿತೇಶ್ವರ, ತಾರಾ ಶಿಲ್ಪ ಕಲಾಕೃತಿಗಳು ಪ್ರಾಚೀನ ಭಾರತದ ಧಾರ್ಮಿಕ ಸಮೃದ್ಧತೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಆಂಧ್ರಪ್ರದೇಶದ ಅಮರಾವತಿಯೂ ಇಂತಹ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರಾಚೀನ ಬೌದ್ಧ ಕಲಿಕೆಯ ಕೇಂದ್ರವಾಗಿತ್ತು, ನಾಗಾರ್ಜುನಕೊಂಡದಲ್ಲಿ ಲಭ್ಯವಾದ ಪಳಯುಳಿಕೆಗಳು ಬೃಹತ್ ಮಾಧ್ಯಮಕ ವಿಹಾರ ಇತ್ತೆಂಬುದರ ಬಗ್ಗೆ ಮಾಹಿತಿ ನೀಡುತ್ತದೆ. ಕರ್ನಾಟಕದ ಕಲಬುರುಗಿಯ ಸನ್ನತ್ತಿಯು ಪ್ರಾಚೀನ ಉಳಿಕೆಗಳಲ್ಲಿ ಒಂದಾಗಿದ್ದು, ಇತಿಹಾಸಕ್ತರ ಆಕರ್ಷಣೆಯ ಕೇಂದ್ರ. ತಮಿಳುನಾಡಿನ ನಾಗಪಟ್ಟನ, ಕಾಂಚಿಯಲ್ಲೂ ವಿವಿಧ ಭಾರತೀಯ ಧರ್ಮ ಪರಂಪರೆಗಳ ಧಾರ್ಮಿಕ ಸಮನ್ವತೆಯ ಕೇಂದ್ರ ಎಂಬಂತೆ ಬಿಂಬಿತವಾಗುತ್ತದೆ. ಪಾಂಡ್ಯ, ಚೋಳ, ಪಲ್ಲವ ವಂಶಜರು ಎಲ್ಲ ಭಾರತೀಯ ತತ್ವಗಳನ್ನು ಪ್ರೋತ್ಸಾಹಿಸಿ ಆಶ್ರಯ ನೀಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಕಾಂಚಿಯಲ್ಲಿ ಇಂದಿಗೂ ಶೈವ ಕಾಂಚಿ, ವಿಷ್ಣು ಕಾಂಚಿ ಹಾಗೆಯೇ ಜೈನ ಕಾಂಚಿ ಎಂಬ ಹೆಸರುಗಳಿಂದ ಉಲ್ಲೇಖಿಸಲಾಗುತ್ತದೆ. ಕೇರಳದಲ್ಲೂ ಶ್ರಮಣ ಕೇಂದ್ರಿತ ಇತಿಹಾಸ ಅಧ್ಯಯನಗಳು ನಡೆದಿದೆ. ಸಮುದ್ರದ ಭೀಕರ ಹೊಡೆತಕ್ಕೆ ತುತ್ತಾಗಿ ನಾಶವಾಗಿದೆ ಎನ್ನಲಾಗುವ ಶ್ರೀಮೂಲವಾಸ ಎಂಬ ಬೌದ್ಧ ಕೇಂದ್ರ, ಆಲಪ್ಪುಳ ಜಿಲ್ಲೆಯ ಕರುಮಾಡಿ ಎಂಬಲ್ಲಿ ಕಂಡ ಬುದ್ಧನ ಪ್ರಾಚೀನ ವಿಗ್ರಹವೂ ಇದಕ್ಕೆ ಸಾಕ್ಷಿ. ಪ್ರಸ್ತುತ ಕರುಮಾಡಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಬುದ್ಧನ ಮೂರ್ತಿ ಇರುವ ಪುಟ್ಟ ವಿಹಾರವು ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿದ್ದು, ಹಲವು ಮಂದಿ ಯಾತ್ರಿಕ ಪ್ರವಾಸಿಗರು ಆಕರ್ಷಿಸುತ್ತಿದೆ. ಪ್ರತಿವರ್ಷ ಬೌದ್ಧ ಪೂರ್ಣಿಮಾದಂದು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.
ಆಧುನಿಕ ಭಾರತದಲ್ಲಿ ಬೌದ್ಧ ಉಳಿಕೆಗಳ ಹುಡುಕುವಿಕೆ, ಅವುಗಳ ಅಧ್ಯಯನ, ಪಾಳುಬಿದ್ದ ವಿಹಾರಗಳ ಸಂರಕ್ಷಣೆ ಸಾಕಷ್ಟು ನಡೆದಿದೆ. ಇವುಗಳಲ್ಲಿ ಹಲವು ವಿಹಾರ ಚೈತ್ಯಾಲಯಗಳ ಪತ್ತೆ ಉತ್ತರ ಭಾರತದಲ್ಲಿ ನಡೆದಿದ್ದು, ಪ್ರಾಚೀನ ಬೌದ್ಧ ದರ್ಶನದ ಅನೂಹ್ಯತೆ, ಅಗಾಧತೆಯನ್ನು ಬಿಂಬಿಸುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಶ್ರೀಲಂಕಾದ ಬೌದ್ದ ಬಿಕ್ಷು ಅನಗಾರಿಕ ಧರ್ಮಪಾಲ ಕಲ್ಕತ್ತೆಯಲ್ಲಿ ಸ್ಥಾಪಿಸಿದ ಮಹಾಬೋಧಿ ಸೊಸೈಟಿಯ ಮೂಲಕ ಬೋಧಗಯಾದ ಪುನರುತ್ಥಾನವೂ ನಡೆದಿತ್ತು. ಇತ್ತೀಚೆಗೆ ಜಾರ್ಖಂಡ ಮತ್ತು ಬಿಹಾರ ರಾಜ್ಯಗಳಲ್ಲಿ ಪತ್ತೆಯಾದ ವಿಹಾರಗಳು, ಬೋದಿಸತ್ವ ವಿಗ್ರಹಗಳು ಇನ್ನಷ್ಟೂ ಅಧ್ಯಯನ ಮಾಹಿತಿ ಕ್ರೋಢಿಕರಣಕ್ಕೆ ದಾರಿ ಮಾಡಿಕೊಟ್ಟಿದೆ. ಇಂತಹ ಪ್ರಾಚೀನ ಬೌದ್ಧ ಕೇಂದ್ರಗಳ ಪತ್ತೆ ಕಾರ್ಯ ಭಾರತೀಯ ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿ ನಡೆದಿದ್ದು, ಭಾರತದ ಇತಿಹಾಸ ಮತ್ತು ಧರ್ಮ ಕೇಂದ್ರೀತ ಅಧ್ಯಯನಕ್ಕೆ ಪೂರಕವಾಗಿದೆ.
ದೇಶದ ಜನಮಾನಸದಲ್ಲಿ ಅಂತರ್ಯಾನವಾಗಿರುವ ದಾರ್ಶನಿಕ ಗುಣಗಳ ಧಮ್ಮದ ಅಧ್ಯಯನದಿಂದ ದೇಶದ ಬಗ್ಗೆ ಹೆಮ್ಮೆ ಪಡೋಣ.
ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.