ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತೆ ಪ್ರಕೃತಿಯತ್ತ ಹೊರಳುತ್ತಿದ್ದಾನೆ. ಪ್ರಾಕೃತಿಕವಾಗಿ ಸಿಗುವ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸುವ ವಸ್ತುಗಳ ಅವಲಂಬನೆಯನ್ನು ಹೆಚ್ಚಿಸುವ ಮೂಲಕ, ನೈಸರ್ಗಿಕ ಸಂಪತ್ತಿಗೆ ಹಾನಿಯಾಗುವ ವಿಚಾರಗಳ ಮೇಲಿನ ತನ್ನ ಗಮನವನ್ನು ಕಡಿಮೆ ಮಾಡುತ್ತಿದ್ದಾನೆ. ಇದು ಹಲವು ಜನರಿಗೆ ಪ್ರಕೃತಿ ಸ್ನೇಹಿ ಉತ್ಪಾದನೆಗಳನ್ನು ಹೆಚ್ಚಿಸುವಲ್ಲಿ ಪ್ರೇರೇಪಣೆ ನೀಡಿದೆ ಎಂದರದು ಅತಿಶಯವಲ್ಲ.
ಇದಕ್ಕೆ ತಾಜಾ ಉದಾಹರಣೆಯಾಗಿ ಅಸ್ಸಾಂನ ಗುವಾಹಟಿಯ ಡೀಪರ್ ಬಿಲ್ ತಟದಲ್ಲಿರುವ ಆರು ಮಂದಿ ಮೀನುಗಾರ ಯುವತಿಯರು ಕಾಣ ಸಿಗುತ್ತಾರೆ. ಇವರು ಮಣ್ಣಿನಲ್ಲಿ ಸುಲಭವಾಗಿ ಕರಗುವ, ಮಿಶ್ರಗೊಬ್ಬರವಾಗಿಯೂ ಬಳಕೆಗೆ ಯೋಗ್ಯವಾಗುವ ಯೋಗ ಚಾಪೆ ತಯಾರಿಸುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ.
ಈ ಹಳ್ಳಿಗಳಲ್ಲಿ ವಾಸಿಸುವ ಮೀನುಗಾರ ಕುಟುಂಬಗಳಿಗೆ ಹಿಂದಿನಿಂದ ಇಂದಿನ ವರೆಗೂ ಮೀನುಗಾರಿಕೆಯೇ ಪ್ರಮುಖ ಆದಾಯ. ಆದರೆ ಈ ಭಾಗದ ಜಲಮೂಲಗಳಲ್ಲಿ ಇತ್ತೀಚೆಗೆ ವಾಟರ್ ಹಯಸಿಂಥ್ ಗಿಡಗಳು ಬೆಳೆಯುತ್ತಿದ್ದು, ಇದು ಮೀನುಗಾರಿಕೆ ಮೇಲೆ ಕೊಂಚ ಪ್ರಮಾಣದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಸಮಸ್ಯೆ ನಿವಾರಣೆಗೆ ಇಲ್ಲಿನ 6 ಮಂದಿ ಮೀನುಗಾರ ಯುವತಿಯರು ಪ್ರಯತ್ನ ನಡೆಸಿದ್ದು, ಸದ್ಯ ಅದರಲ್ಲಿ ಸಫಲರಾಗಿದ್ದಾರೆ. ಈ ಹಯಸಿಂಥ್ ಗಿಡಗಳನ್ನು ಬಳಸಿ ಅವುಗಳಿಂದ ಯೋಗ ಮ್ಯಾಟ್ಗಳನ್ನು ತಯಾರಿಸುವ ಮೂಲಕ ಅದನ್ನು ಸ್ವ ಉದ್ಯಮವಾಗಿ ತೊಡಗಿಸಿಕೊಂಡಿದ್ದಾರೆ. ಇದನ್ನು ಜೀವನೋಪಾಯದ ಮಾರ್ಗವಾಗಿಯೂ ಕಂಡುಕೊಂಡಿರುವ ಈ ಯುವತಿಯರು ಸದ್ಯದಲ್ಲೇ ಇದನ್ನು ವಿಶ್ವ ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ.
ಎನ್.ಇ.ಸಿ.ಟಿ.ಎ.ಆರ್. ಎಂಬ ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಡಿ ಈ ಆರು ಮಂದಿ ಯುವತಿಯರು ಈ ಪ್ರಕೃತಿ ಸ್ನೇಹಿ ಯೋಗಾ ಮ್ಯಾಟ್ ತಯಾರಿಸುತ್ತಿದ್ದಾರೆ. ಮಹಿಳೆಯರನ್ನೇ ಒಳಗೊಂಡಿರುವ ಈ ತಂಡ ‘ಸಿಮಂಗ್’ ಎಂಬ ಹೆಸರಿನಲ್ಲಿ ಪರಿಸರ ಸ್ನೇಹಿ ಚಾಪೆಗಳ ತಯಾರಿ ಮಾಡುತ್ತಿದೆ.
ಈ ಚಾಪೆಗಳು 100% ಗಳಷ್ಟು ಪ್ರಾಕೃತಿಕವಾಗಿದೆ. ನೇಯ್ಗೆಯ ಮೂಲಕ ಈ ಮ್ಯಾಟ್ಗಳನ್ನು ತಯಾರಿಸಲಾಗಿದೆ. ಈ ಮ್ಯಾಟ್ಗಳು ಸುಲಭವಾಗಿ ಮಣ್ಣಿನಲ್ಲಿ ಕರಗುವ ಗುಣವನ್ನೂ ಹೊಂದಿದೆ. ಜೊತೆಗೆ 100% ಸಾವಯವವೂ ಹೌದು. ಪ್ರಯೋಜನಕಾರಿಯೂ ಹೌದು. ಜೊತೆಗೆ ನೀರಿನ ಮೂಲಗಳ ನಡುವೆ ಬೆಳೆಯುವ ಕಳೆ ನಿವಾರಿಸುವಲ್ಲಿಯೂ ಈ ಯುವತಿಯರ ಈ ಚಿಂತನೆ ಪೂರಕವೇ ಹೌದು. ಮುಖ್ಯವಾಗಿ ಹೇಳುವುದಾದರೆ ಜನರನ್ನು ‘ಆತ್ಮನಿರ್ಭರ’ ಮಾಡುವಲ್ಲಿಯೂ ಈ ಪ್ರಕ್ರಿಯೆ ಸಹಕಾರಿಯಾಗಿದೆ.
ಇನ್ನು ಈ ಚಾಪೆಗಳ ತಯಾರಿಕೆಗೆ ಹಯಸಿಂಥ್ ಗಿಡಗಳ ಎಲೆಗಳನ್ನು ಸಂಗ್ರಹಿಸಿ, ಅದನ್ನು ಒಣಗಿಸುವ ಮೂಲಕ ಚಾಪೆಗಳನ್ನು ತಯಾರಿಸಲಾಗುತ್ತಿದೆ. ಇವುಗಳನ್ನು ಒಣಗಿಸಲು ‘ಸೋಲಾರ್ ಡ್ರೈಯರ್’ ಗಳನ್ನು ಬಳಕೆ ಮಾಡಲಾಗುತ್ತದೆ. ಸದ್ಯ ಇದರ ತಯಾರಿಕೆಯಲ್ಲಿ ಈ ಭಾಗದ 38 ಕ್ಕೂ ಹೆಚ್ಚು ಮಹಿಳೆಯರು ಕೈಜೋಡಿಸಿದ್ದು, ಆ ಮೂಲಕ ಸ್ವಾವಲಂಬಿ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.